ADVERTISEMENT

ಬಸವಣ್ಣನನ್ನು ಪಡೆಯೋಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST

ಬಹುತೇಕ ಮಠಗಳು, ಆಶ್ರಮಗಳು, ಮಂಟಪ, ಪ್ರತಿಷ್ಠಾನಗಳು ಇಂದು ವ್ಯಾಪಾರಿ ಕೇಂದ್ರಗಳಾಗಿವೆ. ಬಸವಣ್ಣನನ್ನು ಬಂಡವಾಳ ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಧರ್ಮವೆಂಬ ಹುಸಿ ಮಾದಕ ನಶೆ ಕೊಟ್ಟು ಅವರನ್ನು ಪೊಳ್ಳು ಆಚರಣೆಗೆ ಹಚ್ಚಿ, ಲಿಂಗಾಯತ ಧರ್ಮದ ನಿಜ ಸತ್ವವನ್ನು ವಿರೂಪಗೊಳಿಸಲಾಗುತ್ತಿದೆ.

ತಮ್ಮ ಪಾರುಪತ್ಯ ಮೆರೆಯಲು ಮುಗ್ಧ ಭಕ್ತರು, ಕಾಳಧನಿಕರನ್ನು ಏಕಕಾಲಕ್ಕೆ ಬಳಸಿಕೊಂಡು ಭ್ರಮೆ, ಭ್ರಾಂತಿ ಹುಟ್ಟಿಸುವ ವ್ಯವಹಾರವೇ ಮೇಳ, ಉತ್ಸವಾದಿಗಳಾಗಿವೆ. ಹೀಗೆ ಜನರಿಂದ ಹಣ ಸುಲಿಗೆ ಮಾಡಿ, ಅತ್ಯಂತ ಸರಳವಾದ ಶರಣ ಧರ್ಮವನ್ನು ಕಠಿಣ ಮಾಡಿ ಆಚರಣೆಯ ನೆಪದಲ್ಲಿ ಶೋಷಿಸುವ, ನವ ಪೌರೋಹಿತ್ಯ ಪೋಷಿಸುವ ಕಾರ್ಯ ನಡೆಯುತ್ತಿದೆ.

ಕೆಲವು ಮಠಗಳು ಸ್ವಾರ್ಥ, ಸ್ವಜಾತಿ ಮೋಹ, ಗುಂಪುಗಾರಿಕೆ, ವ್ಯಕ್ತಿ ಪ್ರತಿಷ್ಠೆ ಮಧ್ಯೆ ಪುರಾಣ ಪ್ರವಚನ ಮಾಡಿ ಜನರ ಮುಗ್ಧ ಭಾವನೆಗಳ ಜೊತೆ ಆಟ ಆಡುತ್ತಿವೆ.
ಇಂತಹವರ ಸಹವಾಸದಲ್ಲಿ ಶತಮಾನಗಳೇ ಕಳೆದು ಹೋಗಿವೆ. ಹೀಗಾಗಿಯೇ ಪಾಶ್ಚಿಮಾತ್ಯರಿಗೆ ಅರ್ಥವಾದ ಬಸವಣ್ಣ ನಮಗೆ ಇನ್ನೂ ಗುಡಿಯೊಳಗಿನ ವಿಗ್ರಹ ಅಥವಾ ಮಠದೊಳಗಿನ ಬಂದಿಯಷ್ಟೇ ಆಗಿದ್ದಾನೆ.

ಸಮಾನ ಮನಸ್ಕರು ನಿಷ್ಠುರವಾಗಿ ಶರಣ ತತ್ವ ಸಿದ್ಧಾಂತಗಳನ್ನು ರಕ್ಷಿಸದೇ ಹೋದರೆ ಮುಂದೊಂದು ದಿನ ಬಸವಣ್ಣ ಕೇವಲ ಪಠ್ಯಕ್ಕೆ, ಚರ್ಚೆಗೆ, ಭಾಷಣಕ್ಕೆ, ಲೇಖನಕ್ಕೆ ಸೀಮಿತವಾಗುತ್ತಾನೆ. ಬಸವಣ್ಣ ಕಂಡ ಸಾರ್ವಕಾಲಿಕ ಸಮತೆ, ಕಾಯಕ ದಾಸೋಹ, ಲಿಂಗ ತತ್ವವನ್ನರಿತು ಬಸವಾದಿ ಪ್ರಮಥರು ಕಟ್ಟಿದ ಕಲ್ಯಾಣ ರಾಜ್ಯವನ್ನು ಮತ್ತೆ ಪಡೆಯಬೇಕಾಗಿದೆ.
-ಡಾ. ಶಶಿಕಾಂತ ಪಟ್ಟಣ, ರಾಮದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.