ADVERTISEMENT

ಬೆಂಬಲ ಏಕಿಲ್ಲ?

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಭಾಷಾವಾರು ರಾಜ್ಯಗಳ ರಚನೆಯಾಗುತ್ತಿದ್ದಾಗ ಕನ್ನಡ ನಾಡಿನೊಳಗಿನ ನಾಯಕರು ಇನ್ನೂ ಸ್ವಲ್ಪ ಜೋರಾಗಿ ಕೂಗು ಹಾಕಿದ್ದರೆ ಕಾಸರಗೋಡು ಕರ್ನಾಟಕದ ಭಾಗವಾಗುತ್ತಿತ್ತು.
 
ರಾಜ್ಯಗಳ ರಚನೆಯ ಬಳಿಕವೂ ಕಾಸರಗೋಡಿನಲ್ಲಿ ಭಾಷಾ ಬೆಳವಣಿಗೆ ಮತ್ತು ಕನ್ನಡದ ಉಳಿವಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರೂ ಸಾಕಿತ್ತು, ಕನ್ನಡ ಇಲ್ಲಿ ತಲೆ ಎತ್ತಿ ನಿಲ್ಲುತ್ತಿತ್ತು. ಕಾಸರಗೋಡಿನ ಕನ್ನಡ ಭಾಷಿಕರಿಗೆ ಇಂದು ಬಂದೊದಗಿರುವ ಸ್ಥಿತಿಗೆ ಒಳನಾಡಿನವರೂ ಸಮಾನ ಹೊಣೆಗಾರರು.
 
ಶಾಲೆಗಳಲ್ಲಿ ಮಲಯಾಳ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿ ಕೇರಳದ ಎಡರಂಗ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ. ಇಲ್ಲಿನ  ಕನ್ನಡಿಗರನ್ನು ಯಾರೂ ಕೇಳುವವರಿಲ್ಲ ಎಂಬ ಧೈರ್ಯದಿಂದಲೇ ಸರ್ಕಾರ ಈ ಆದೇಶ ಹೊರಡಿಸಿದೆ. ಈಗ ಅಸ್ತಿತ್ವಕ್ಕಾಗಿ ಹೋರಾಟ ನಡೆಸಲೇಬೇಕಾದ ಪರಿಸ್ಥಿತಿ ಇಲ್ಲಿನ ಕನ್ನಡಿಗರದ್ದು. 
 
ಇಂದಿನ ಸಂದರ್ಭದಲ್ಲಿ ಇಲ್ಲಿನ ಕನ್ನಡಿಗರ ಹೋರಾಟಕ್ಕೆ ಒಳನಾಡಿನಿಂದ ಬೆಂಬಲ ನಿರೀಕ್ಷಿಸುವುದು ತಪ್ಪೇ ಎಂಬ ಪ್ರಶ್ನೆ ಹೋರಾಟಗಾರರನ್ನು ಕಾಡುತ್ತಿದೆ. ಒಳನಾಡ ಸಾಹಿತಿಗಳು, ಹೋರಾಟಗಾರರು ಭಾಷೆ, ಸಂಸ್ಕೃತಿಗಳಿಗಿಂತಲೂ ರಾಜಕೀಯ ಚಟುವಟಿಕೆಗಳಲ್ಲೇ ನಿರತರಾಗಿರುವಾಗ ಹೊರನಾಡಿನ ಕನ್ನಡಿಗರನ್ನು ಕೇಳುವವರು ಯಾರು? ಚಿತ್ರನಟರಿಗೂ ಇಲ್ಲಿಂದ ಅಂಥ ಲಾಭವೇನೂ ಇಲ್ಲ.
 
ಎಡಪಂಥೀಯ ಚಿಂತನೆಗಳ ಜಪ ಮಾಡುವ ಲೇಖಕರಾದರೂ ತಮ್ಮದೇ ಎಡರಂಗ ಸರ್ಕಾರಕ್ಕೆ ಬುದ್ಧಿ ಹೇಳಿ ಸಮಸ್ಯೆ ಬಗಹರಿಸಲು ಪ್ರಯತ್ನಿಸುತ್ತಾರೆ ಎಂದು ನಿರೀಕ್ಷಿಸಬಹುದೇ?
 
ಯಾರ ಬೆಂಬಲವೂ ಇಲ್ಲದೆಯೂ ಕಾಸರಗೋಡಿನ ಕನ್ನಡಿಗರು ಹೋರಾಟವನ್ನಂತೂ ಆರಂಭಿಸಿದ್ದಾರೆ. ಈ ಭಾಷೆ ನಮ್ಮದು ಎಂಬ ಅಭಿಮಾನ ಒಂದೇ ಜನರನ್ನು ಹೋರಾಟಕ್ಕೆ ಸಿದ್ಧಗೊಳಿಸಿದೆ. 
ಶಶಾಂಕ್ ಬಜೆ, ಕಾಸರಗೋಡು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.