ADVERTISEMENT

ಬ್ಯಾಂಕುಗಳಲ್ಲಿ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ನಾನು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿದ್ದು ನಿವೃತ್ತಿಯಾಗಿದ್ದೇನೆ. ಬ್ಯಾಂಕುಗಳ ಗುಮಾಸ್ತ ಹುದ್ದೆಗಳು ಕನ್ನಡಿಗರಿಗೆ ಲಭ್ಯವಾಗದಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವ್ಯಕ್ತಪಡಿಸಿರುವ ಆಕ್ಷೇಪ ಸರಿಯಾಗಿದೆ. ಈ ಸಮಸ್ಯೆ ಹೊಸದೇನಲ್ಲ. ನನ್ನ ಅಧಿಕಾರಾವಧಿಯಲ್ಲಿ ಕೆಲವು ಕಾಲ ಕರ್ನಾಟಕದ ಬ್ಯಾಂಕಿಂಗ್‌ ರೆಕ್ರೂಟ್‌ಮೆಂಟ್‌ ಬೋರ್ಡಿನಲ್ಲಿ ಗುಮಾಸ್ತ ಹುದ್ದೆಯ ಅಭ್ಯರ್ಥಿಗಳನ್ನು ಸಂದರ್ಶಿಸಿ ಆಯ್ಕೆ ಮಾಡುವ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದೇನೆ.

ಇದು 25–30 ವರ್ಷಗಳ ಹಿಂದಿನ ಮಾತು. ಆಗ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುಮಾಸ್ತ ಹುದ್ದೆಗಾಗಿ ಬರುತ್ತಿದ್ದ ಅಭ್ಯರ್ಥಿಗಳನ್ನು ಸಮಿತಿಯಲ್ಲಿದ್ದವರೆಲ್ಲರೂ ಇಂಗ್ಲಿಷ್‌ನಲ್ಲೇ ಸಂದರ್ಶನ ನಡೆಸುವುದಿತ್ತು. ನಾನು ಬ್ಯಾಂಕಿನ ಪರವಾಗಿ ನೇಮಕಾತಿ ಸಮಿತಿಯಲ್ಲಿದ್ದು, ಕರ್ನಾಟಕದಲ್ಲಿ ನೌಕರಿ ಮಾಡುವವರಿಗೆ ಸ್ಥಳೀಯ ಭಾಷೆಯ ತಿಳಿವಳಿಕೆ ಅವಶ್ಯವೆಂದು ಸಮಿತಿಯ ಇತರ ಸದಸ್ಯರೊಂದಿಗೆ ಬಿರುಸಾಗಿ ಚರ್ಚಿಸಿದ್ದೆ. 

ನನ್ನ ಅಭಿಪ್ರಾಯವನ್ನು ಅವರು ಒಪ್ಪದಿದ್ದಾಗಲೂ ನಾನು ಮಾತ್ರ ಅಭ್ಯರ್ಥಿಗಳನ್ನು ಕನ್ನಡದಲ್ಲೇ ಮಾತನಾಡಿಸಿ ನನ್ನ ಅಂಕಗಳನ್ನು ಕೊಡುತ್ತಿದ್ದೆ.
ಗ್ರಾಮಾಂತರ ಪ್ರದೇಶದಲ್ಲಿ ನೌಕರಿ ಮಾಡುವವರಿಗೆ ಸ್ಥಳೀಯ ಭಾಷೆ ಗೊತ್ತಿರಬೇಕು,  ಅದರಿಂದ ಗ್ರಾಹಕರ ಜೊತೆ ಸುಲಭವಾಗಿ ವ್ಯವಹರಿಸಬಹುದೆಂಬ ನನ್ನ ವಾದವನ್ನು ಮಂಡಿಸುತ್ತಲೇ ಬಂದೆನಾದರೂ ಈ ಅಭಿಪ್ರಾಯವನ್ನು ವಿರೋಧಿಸಿ ನನ್ನ ಬಗ್ಗೆ ದೂರು ಕೊಡಲಾಯಿತು. ಆದರೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳ ಅಧ್ಯಕ್ಷರು ನನ್ನ ಪರವಾಗಿದ್ದು ಮೆಚ್ಚುಗೆ ಸೂಚಿಸಿದ್ದರು.

ಅಷ್ಟೇ ಅಲ್ಲ, ನನ್ನ ಆಯ್ಕೆಯ ಅನೇಕ ಕನ್ನಡಿಗರು ಮುಂದೆ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಮಾಡಿ, ಬಡ್ತಿ ಪಡೆದು ಹೆಸರು ಮಾಡಿದರೆಂಬುದು ಈಗಲೂ ನನಗೆ ಅತ್ಯಂತ ಸಮಾಧಾನದ ಸಂಗತಿ.

ಅಧಿಕಾರಿಗಳ ನೇಮಕದಲ್ಲಿ ಹಲವು ಸಮಸ್ಯೆಗಳಿರುವುದರ ಅರಿವು ನನಗಿದೆಯಾದರೂ, ಗುಮಾಸ್ತ ಹುದ್ದೆಗೆ ಸ್ಥಳೀಯ ಭಾಷೆಯ ಜ್ಞಾನವನ್ನು ಕಡ್ಡಾಯ ಮಾಡುವಲ್ಲಿ ಯಾವ ಸಮಸ್ಯೆಯನ್ನೂ ಮುಂದಿಡಲಾಗದು. ಅಧಿಕಾರಿಗಳ ವರ್ಗಾವಣೆ ರಾಷ್ಟ್ರದ ಉದ್ದಗಲಕ್ಕೂ ಅನ್ವಯವಾಗುವುದಾದರೂ ಅಲ್ಲಿಯೂ ಸ್ಥಳೀಯ ಭಾಷೆಯ ಪರಿಚಯವಿರುವವರನ್ನು ನೇಮಿಸುವಲ್ಲಿ ಬ್ಯಾಂಕುಗಳು ಹೊಂದಾಣಿಕೆ ಮಾಡಿಕೊಳ್ಳುವ ವ್ಯವಸ್ಥೆ ಸಾಧ್ಯವಿದೆ.

ಇದು ನನ್ನ 35 ವರ್ಷದ ಬ್ಯಾಂಕಿಂಗ್ ಅನುಭವದ ಆಧಾರದ ಮೇಲೆ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ. ಈ ನಿಟ್ಟಿನಲ್ಲಿ ವಿತ್ತ ಸಚಿವಾಲಯ ಸ್ಪಷ್ಟ ಆದೇಶ ಕೊಡಬೇಕಾದುದು ಹಾಗೂ ನೇಮಕಾತಿ ನಿಯಮಗಳನ್ನು ಬದಲಿಸಬೇಕಾದುದು ಅಗತ್ಯ.
-ಎಚ್‌.ಜಿ.ಸೋಮಶೇಖರ ರಾವ್‌,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.