ADVERTISEMENT

ಭಂಗ ಬಾರದಿರಲಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST

ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯು ಸಮಸ್ತ ಕನ್ನಡಿಗರ ಕನಸು– ಕನವರಿಕೆಯಾಗಿತ್ತು. 25 ವರ್ಷಗಳಿಂದ ಈ ವಿ.ವಿ. ಕನ್ನಡದಲ್ಲಿ ಜ್ಞಾನ ಶಾಖೆಗಳನ್ನು ವಿಸ್ತರಿಸುತ್ತಾ ಮುನ್ನಡೆದಿದೆ.

ವಿಶ್ವವಿದ್ಯಾಲಯಗಳ ಹೊಸ ಮಸೂದೆಯು ಅದರ ದಾಪುಗಾಲಿಗೆ ಕಾಲುಕೊಟ್ಟು ಬೀಳಿಸಿ ನೆಲಕಚ್ಚಿಸುವ, ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಆಡಳಿತ ಸ್ವಾಯತ್ತತೆಗಳನ್ನು ನಾಶಮಾಡುವ ಹುನ್ನಾರವಾಗಿದೆ. ಕನ್ನಡ ಅಧ್ಯಯನದ ಗಂಧಗಾಳಿಯೇ ಇಲ್ಲದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಮಸ್ತ ಅಧಿಕಾರವನ್ನು ಕೊಡುವುದರ ಮೂಲಕ ಕನ್ನಡ ವಿಶ್ವವಿದ್ಯಾಲಯದ ರೆಕ್ಕೆ–ಪುಕ್ಕ, ಕೊಕ್ಕುಗಳನ್ನೆಲ್ಲಾ ಕತ್ತರಿಸುವ ಷಡ್ಯಂತ್ರವಾಗಿದೆ.

ವಿಷಯತಜ್ಞರು ಮತ್ತು ಪರಿಣತರ ಜೊತೆ ಚರ್ಚಿಸದೆ ಹೊಸ ಮಸೂದೆಯನ್ನು ರೂಪಿಸಿರುವುದು ಪ್ರಜಾತಂತ್ರಕ್ಕೆ ವಿರೋಧಿಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಬಹುತ್ವನೆಲೆಯ ಅಧ್ಯಯನ ಆಕರಗಳ ಸೃಷ್ಟಿ ಮತ್ತಷ್ಟು ಆಗಬೇಕಿದೆ. ಇದಕ್ಕೆ ಸರ್ಕಾರವೂ ಸಹಕರಿಸಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಜಿಗಿತ ಶಕ್ತಿಯನ್ನು ಈ ಮಸೂದೆ ಮೊಟಕುಗೊಳಿಸ ಹೊರಟಿದೆ.

ADVERTISEMENT

ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಮತ್ತು ಪ್ರಸ್ತುತ ಅಗತ್ಯಗಳ ಬಗ್ಗೆ ನಿರಂತರ ಸಂಶೋಧನೆಗಳು ಸಾಗುತ್ತಿರಬೇಕಾದರೆ ವಿ.ವಿ.ಯ ಸ್ವಾಯತ್ತತೆಗೆ ಧಕ್ಕೆಯಾಗದಂತೆ ಸರ್ಕಾರ, ಸಮಾಜ ಎಚ್ಚರವಹಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರವು ಉದ್ದೇಶಿತ ತಿದ್ದುಪಡಿ ಮಸೂದೆಯಿಂದ ಈ ವಿ.ವಿ.ಯನ್ನು ಹೊರಗಿಡಬೇಕು. ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಇಂದಿನ ಕಾಲದ ಅಗತ್ಯವೂ ಹೌದು, ಕನ್ನಡಿಗರ ಅಗತ್ಯವೂ ಹೌದು.

ಕನ್ನಡ ವಿಶ್ವವಿದ್ಯಾಲಯ ‘ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ, ವಿದ್ಯೆಯನ್ನು ಸೃಷ್ಟಿಸುವ ಸಂಸ್ಥೆ’. ಇದು ಅದರ ವೈಶಿಷ್ಟ್ಯವೂ ಹೌದು.
–ಚ. ಸರ್ವಮಂಗಳಾ, ವೈ.ಸಿ. ಭಾನುಮತಿ, ಶಿವರಾಮು ಕಾಡನಕುಪ್ಪೆ, ವಿಜಯಾ ಸಿಂಧುವಳ್ಳಿ, ಮೀರಾ ಮೂರ್ತಿ, ಬಿ. ಹರ್ಷವರ್ಧನ, ಮೀನಾ ಮೈಸೂರು, ಸುಧೀಂದ್ರ, ಅಭಿರುಚಿ ಗಣೇಶ್‌, ನಾಗಲಕ್ಷ್ಮೀಹರಿಹರೇಶ್ವರ, ಮೈಸೂರು ಚಂದನ್‌ ಕುಮಾರ್‌, ಬಿ.ಎಸ್‌. ಪ್ರೇಮಕುಮಾರಿ, ಎಂ.ಎಸ್‌. ಪದ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.