ADVERTISEMENT

ಮತ್ತೆ ಗಾಂಧಿ ಕಗ್ಗೊಲೆ?

ಹಡವನಹಳ್ಳಿ ವೀರಣ್ಣಗೌಡ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಇತ್ತೀಚೆಗೆ ಪತ್ರಿಕೆ,  ಟಿ.ವಿ., ಫೇಸ್‌ಬುಕ್‌ಗಳಲ್ಲಿ ಕೆಲವರು, ದೇಶಕ್ಕಾಗಿ ಬದುಕನ್ನೇ ಅರ್ಪಿಸಿಕೊಂಡ ಮಹನೀಯರನ್ನು ಬೈಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಗ್ಗತ್ತಲಲ್ಲಿ ಸೆರೆಯಾಗಿದ್ದ ಶೋಷಿತರನ್ನು ಬೆಳಕಿನೆಡೆಗೆ ಕರೆತಂದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡು, ಮನುಷ್ಯಪರ ಸಿದ್ಧಾಂತಗಳನ್ನು ನೆಲೆಗೊಳಿಸಿದ ಮತ್ತೊಬ್ಬ ಮಹಾನ್‌ ವ್ಯಕ್ತಿ ಮಹಾತ್ಮ ಗಾಂಧಿ ಅವರನ್ನು ವಾಚಾಮಗೋಚರವಾಗಿ ಹೀಯಾಳಿಸುತ್ತಿರುವ ಒಂದು ವರ್ಗವೇ ಸೃಷ್ಟಿಯಾಗಿದೆ. 

ನಿಸ್ವಾರ್ಥವಾಗಿ ದೇಶಕ್ಕಾಗಿ ಅವಿರತವಾಗಿ ದುಡಿದ, ಮಡಿದ ಎಲ್ಲ ಮಹನೀಯರು ಮತ್ತು ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಗುರುತಿಸುವ, ಗಮನಿಸುವ, ಸಾಧ್ಯವಾದರೆ ಅನುಸರಿಸುವ ನಮ್ಮಂತಹ ಲಕ್ಷಾಂತರ ಜನಕ್ಕೆ ನಿಜಕ್ಕೂ ಇದು ಆತಂಕ ಹುಟ್ಟಿಸುತ್ತದೆ. ಅಂಬೇಡ್ಕರ್ ಮತ್ತು ಗಾಂಧಿ ಮಾರ್ಗಗಳು ವಿಭಿನ್ನವಾಗಿದ್ದರೂ ಅವರ ನಿಸ್ವಾರ್ಥ ಹೋರಾಟದಲ್ಲಿ ಹುಳುಕು ಹುಡುಕದೆ ಜೊತೆಜೊತೆಯಲ್ಲಿಯೇ ಪರಿಚಯಿಸಿಕೊಂಡವರು ನಾವು. ಇಬ್ಬರ ಹಾದಿ, ಚಿಂತನೆ, ತತ್ವಗಳನ್ನು ಅವರವರ ನೆಲೆಗಟ್ಟಿನಲ್ಲಿಯೇ ಅರ್ಥೈಸಿಕೊಂಡು, ಅಭಿಮಾನಿಸಿದ ನಮ್ಮಂತಹವರ ನಂಬಿಕೆಗಳಿಗೆ ಧಕ್ಕೆ ತರುವ ಯತ್ನ ನಡೆಯುತ್ತಿದೆ.

ಇಂತಹ ಚರ್ಚೆಗಳು ಈ ಇಬ್ಬರು ಮಹಾನ್‌ ನಾಯಕರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ಮಟ್ಟಕ್ಕಿಳಿಸಿ ವಿಕೃತಿಗಳ ಅನಾವರಣಕ್ಕೆ ದಾರಿ ಮಾಡಿಕೊಡುತ್ತಿವೆ. ಜೊತೆಗೆ ಗಾಂಧಿ ತತ್ವಗಳನ್ನು ಅಪ್ರಸ್ತುತಗೊಳಿಸುವ ಅಪಾಯಕಾರಿ ಸನ್ನಿವೇಶ ಸೃಷ್ಟಿಗೆ ಕಾರಣವಾಗುತ್ತವೆ. ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿದ ವ್ಯಕ್ತಿಗಳನ್ನು ಸೀಮಿತಗೊಳಿಸಲು ಪ್ರಯತ್ನಿಸುವುದು ನೈತಿಕವಾದುದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.