ADVERTISEMENT

ಮರ್ಯಾದೆ ಎಂದರೇನು?

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST

‘ಪ್ರಜಾವಾಣಿ’ಯಲ್ಲಿ ಜುಲೈ 21ರಂದು ಪ್ರಕಟವಾದ ‘ಮರ್ಯಾದೆ ಬೇಡವೆ?’ ಎಂಬ ಪತ್ರಕ್ಕೆ ನಮ್ಮ ಪ್ರತಿಕ್ರಿಯೆ. ಒಂದೆಡೆ ಮಹಿಳೋದ್ಧಾರಕ್ಕೆ ಬದ್ಧತೆ ಘೋಷಿಸುತ್ತಾ ಮಹಿಳಾ ವಿಶ್ವವಿದ್ಯಾಲಯ, ಮಹಿಳಾ ಕಾಲೇಜುಗಳು, ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಥರಥರಾವರಿ ಯೋಜನೆಗಳನ್ನು ಹೆಣೆಯುವ ಆಡಳಿತ ವ್ಯವಸ್ಥೆಯ ಅಂಗವಾದ ಕಾಲೇಜು ಶಿಕ್ಷಣ ಇಲಾಖೆ ಆಗಾಗ್ಗೆ ಮಹಿಳಾ ಅಧ್ಯಾಪಕರಿಗೆ ‘ನೀತಿ ಬೋಧನೆ’ ಮಾಡುವಂಥ ಅವೈಚಾರಿಕ ಕೆಲಸಕ್ಕೆ ಕೈಹಾಕಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿರುವ ಕೃತ್ರಿಮ-ಕಪಟ ಮೌಲ್ಯಾಚರಣೆಗಳಿಗೆ ಒಂದು ನಿದರ್ಶನವಷ್ಟೆ.

‘ಮಾರ್ಯಾದೆ’ಗೂ ವಸ್ತ್ರಸಂಹಿತೆಗೂ ಇರುವ ಸಂಬಂಧವೇನು ಎನ್ನುವುದು ನಮ್ಮ ಮೊದಲ ಪ್ರಶ್ನೆ. ಶತಮಾನಗಳಿಂದ ಮರ್ಯಾದೆ ಎಂಬ ಸಂಕೋಲೆಯಲ್ಲಿ ಸ್ತ್ರೀಯರನ್ನು ಮಾತ್ರ ಬಂಧಿಸಿ, ಅವರ ದೇಹವನ್ನೇ ಈ ಮರ್ಯಾದೆಯ ಸಂಕೇತವಾಗಿ ಬಳಸುತ್ತಾ ಬಂದಿರುವ ಪುರುಷಪ್ರಧಾನ ವ್ಯವಸ್ಥೆ ಸ್ತ್ರೀ-ಪುರುಷರ ಉಡುಪು, ವರ್ತನೆ, ಒಟ್ಟಾರೆ ಜೀವನ ವಿಧಾನದ ಬಗ್ಗೆಯೇ ದ್ವಂದ್ವ ನೀತಿಗಳನ್ನು ಅನುಸರಿಸುತ್ತಿದ್ದು ಮಹಿಳೆಯರನ್ನು ‘ಬೇಕು’ ‘ಬೇಡ’ಗಳ ಬಂಧನದಲ್ಲಿ ಸಿಲುಕಿಸುತ್ತಾ ಬಂದಿದೆ.

ಇಂಥ ವಿಚಾರಗಳ ಬಗ್ಗೆ ‘ಪ್ರಶ್ನೆ’ಗಳನ್ನೆತ್ತಿ ಹೊಸ ಚಿಂತನೆಗಳಿಗೆ ದಾರಿ ಮಾಡಬೇಕಾದ ಶಿಕ್ಷಣ ವ್ಯವಸ್ಥೆಯಲ್ಲೇ ಇಂಥ ಅನಗತ್ಯ, ಅವೈಚಾರಿಕ, ಅಸಹನೀಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಭವಿಷ್ಯದಲ್ಲಿ ಈ ವ್ಯವಸ್ಥೆ ಎತ್ತ ಸಾಗಬಹುದು ಎಂಬುದನ್ನು ಸೂಚಿಸುತ್ತದೆ. ಈ ವಿಚಾರದ ಬಗ್ಗೆ ಗಂಭೀರ ಚಿಂತನೆಗಳಾಗಿ, ಗುಣಮಟ್ಟದ ಶಿಕ್ಷಣವನ್ನು ನೀಡುವುದರತ್ತ ಕಾಲೇಜು ಶಿಕ್ಷಣ ಇಲಾಖೆ ಗಮನಹರಿಸಲಿ.

ADVERTISEMENT

ಮತ್ತೊಂದು ವಿಷಯ. ಮಹಿಳಾ ಉಪನ್ಯಾಸಕರು ಸೀರೆಯನ್ನುಟ್ಟೇ ಕಾಲೇಜುಗಳಿಗೆ ಹಾಜರಾಗಬೇಕು ಎನ್ನುವ ಆದೇಶಕ್ಕೆ ಕಾರಣವಾದ ಪತ್ರದಲ್ಲಿ ‘ಮಹಿಳಾ ಉಪನ್ಯಾಸಕಿಯರು ಕಚಡ ಚೂಡಿದಾರ್’ ಹಾಕಿಕೊಂಡು ಬರುತ್ತಾರೆ, ವಿದ್ಯಾರ್ಥಿಗಳ ಮಾರ್ಗದರ್ಶನ ಮಾಡಬೇಕಾದ ಉಪನ್ಯಾಸಕರೇ ಈ ರೀತಿ ಅಸಭ್ಯ ರೀತಿಯಲ್ಲಿ ಪಾಠಮಾಡುವುದು, ಬಟ್ಟೆ ಧರಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಹೇಳುತ್ತಾ ‘ಭಾರತೀಯ ನಾರಿಯಂತೆ ಸೀರೆಯನ್ನು ಧರಿಸಿಕೊಂಡು ಬರುವಂತೆ ಮಾಡಬೇಕೆಂದು’ ಬರೆದಿರುತ್ತಾರೆ.

ಮರ್ಯಾದಾ ಸಂಸ್ಕೃತಿಯ ಬಗ್ಗೆ ಕಾಳಜಿ ಇದೆ ಎಂದು ಹೇಳಿಕೊಳ್ಳುವವರು ಬಳಸುವ ಭಾಷೆಯ ಪರಿ ಇದೇ? ಚೂಡಿದಾರ್ ಕಚಡ, ಅಸಹ್ಯಕರ ಎಂದು ಅರ್ಥೈಸಿರುವುದೇ ಮೊದಲ ತಪ್ಪು. ಪಾಠ ಮಾಡುವುದಕ್ಕೂ ಚೂಡಿದಾರಗೂ ಸಂಬಂಧ ಸೃಷ್ಟಿಸಿರುವುದು ತೀರಾ ಅಸಂಗತವಾದ ಧೋರಣೆ. ಮೇಲಾಗಿ ಭಾರತೀಯ ನಾರಿಯಂತೆ ಸೀರೆ ಧರಿಸುವುದು ಎಂದರೇನು? ಭಾರತೀಯ ನಾರಿ ಎನ್ನುವುದು ಸಮರೂಪದ ವರ್ಗವೇ? ವಸ್ತ್ರ ವೈವಿಧ್ಯ ಈ ದೇಶದ ವೈಶಿಷ್ಟ್ಯವಾದ ಬಹುಸಾಂಸ್ಕೃತಿಕವಾದದ ಸಂಕೇತವಲ್ಲವೇ? ಒಂದು ಪ್ರದೇಶದ ಉಡುಪಿನ ಶೈಲಿ ಮತ್ತೊಂದಕ್ಕಿಂತ ಭಿನ್ನವಾಗಿರುವಂಥ ತೀರಾ ಸರಳ ಸಂಗತಿ ಇವರಿಗೆ ಗೊತ್ತಿರಬೇಕಲ್ಲವೇ?

ಉಪನ್ಯಾಸಕರ ಕಾರ್ಯ ವೈಖರಿ, ಬೋಧನಾ ಸಾಮಥ್ರ್ಯ, ವಿದ್ಯಾರ್ಥಿಗಳ ಬದುಕಿನ ಮೇಲೆ ಅವರು ಬೀರುವ ಪ್ರಭಾವ, ಅವರ ಶೈಕ್ಷಣಿಕ ಸಾಧನೆಗಳು - ಇವುಗಳನ್ನೆಲ್ಲ ಅಳೆಯಲು ವೈಚಾರಿಕ ಸೂಚಿಗಳನ್ನು ಅನುಸರಿಸುವ ಕ್ರಮವನ್ನು ಅಳವಡಿಸಬೇಕೇ ಹೊರತು ಧರಿಸುವ ಬಟ್ಟೆಗಳ ಆಧಾರದ ಮೇಲೆ ಅವರಿಗೆ ‘ಮರ್ಯಾದೆ ಇದೆಯೋ’ ‘ಇಲ್ಲವೋ’ ಎಂದು ನಿರ್ಧರಿಸುವಂಥ ದುಸ್ಸಾಹಸಗಳಿಂದ ಕಾಲೇಜು ಶಿಕ್ಷಣ ಇಲಾಖೆ ದೂರವಿರಲಿ.

- ಪ್ರೊ.ಆರ್. ಇಂದಿರಾ, ಪ್ರೊ.ರಾಮೇಶ್ವರಿ ವರ್ಮ, ಡಾ.ಶಾಂತಿ, ಡಾ.ಜಿ.ಸುಧಾ, ಗಿರಿಜಾ, ಪರಿಮಳ, ಅನಿತಾ, ಉಮಾದೇವಿ.ಎಮ್, ಮಂಜುಳಾ.ಕೆ , ಮಂಜುಳಾ, ಡಾ. ಸುಧಾ ಶೆನಾಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.