ADVERTISEMENT

ರಾಜ್ಯದಲ್ಲೇ ತಯಾರಿಸಿ

ಉಡುಪಿ ಅನಂತೇಶ ರಾವ್
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ‘ಭಾರತದಲ್ಲೇ ತಯಾರಿಸಿ’ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಎಲ್ಲಿಂದ ಈ ಯೋಜನೆ ಆರಂಭಿಸಲಾಗುತ್ತದೆ ಎಂದು ಹೇಳುತ್ತಿಲ್ಲ. ‘ಇಡೀ ರಾಷ್ಟ್ರದಲ್ಲೇ ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಉತ್ತಮವಾದ ಸ್ಥಳ. ಆದ್ದರಿಂದ, ಕರ್ನಾಟಕದಲ್ಲೇ ತಯಾರಿಸಿ’ ಎಂದು ವಿದೇಶಿ ಕಂಪೆನಿಗಳಿಗೆ ಆಹ್ವಾನ ನೀಡಿರುವ ಬೃಹತ್ ಕೈಗಾರಿಕಾ ಸಚಿವ ದೇಶಪಾಂಡೆಯವರೂ  (ಪ್ರ.ವಾ. ಅ. 8) ಕರ್ನಾಟಕದಲ್ಲಿ ಎಲ್ಲಿಂದ ಆರಂಭಿಸಬೇಕು ಎಂದು ಹೇಳಿಲ್ಲ.

ಭಾರತ ಎಂದರೆ ಬೆಂಗಳೂರು ಎನ್ನುವಷ್ಟರ ಮಟ್ಟಿಗೆ ವಿದೇಶಿ ಉದ್ದಿಮೆದಾರರಲ್ಲಿ ಛಾಪು ಮೂಡಿಸಿರುವ ಬೆಂಗಳೂರು ಕರ್ನಾಟಕದ ಪಾಲಿಗೆ ಆಲದ ಮರವಿದ್ದಂತೆ. ಭೂಮಿಯನ್ನು ಕಬಳಿಸುತ್ತಾ, ವಿಶಾಲವಾಗಿ ಬೆಳೆಯುವ ಆಲದ ಮರವು, ತನ್ನ ಸುತ್ತಲಿನ ಸ್ಥಳದಲ್ಲಿ ಯಾವುದೇ ಸಸ್ಯವನ್ನೂ ಬೆಳೆಯಗೊಡುವುದಿಲ್ಲ. ಹಾಗೆಯೇ, ಬೆಂಗಳೂರನ್ನು ಬಿಟ್ಟರೆ ಕರ್ನಾಟಕದಲ್ಲಿ ಬೇರಾವ ಊರೂ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ದೂರದೃಷ್ಟಿ ರಹಿತವಾದ ನಮ್ಮ ಸರ್ಕಾರವೇ ಕಾರಣ ಎನ್ನಬಹುದು.

ಈಗಾಗಲೇ ಸಮಸ್ಯೆಗಳ ಆಗರವಾಗಿರುವ, ಅವ್ಯವಸ್ಥೆಗಳ ನೆಲೆವೀಡಾಗಿರುವ ಬೆಂಗಳೂರು ಇನ್ನೂ ಇನ್ನೂ ಬೆಳೆಯುತ್ತಾ ನಮ್ಮ ಪಾಲಿಗೆ ನರಕವಾಗಿ ಪರಿಣಮಿಸಬಾರದು. ಆದ್ದರಿಂದ, ನಾಡಿನ ಇತರ ಸ್ಥಳಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾಸನ, ಕಲಬುರ್ಗಿ, ಶಿವಮೊಗ್ಗ, ದಾವಣಗೆರೆ, ರಾಯಚೂರು ಮುಂತಾದ ಊರುಗಳಲ್ಲಿ ವಿದೇಶಿ ಉದ್ದಿಮೆದಾರರು ತಮ್ಮ ಉದ್ಯಮವನ್ನು ಸ್ಥಾಪಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಹಾಗೆಯೇ ವಿದೇಶಿ ಬಂಡವಾಳ ಹೂಡಿಕೆದಾರರು ಈ ಊರುಗಳಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಲು ಬೇಕಾದ ಅಗತ್ಯಗಳನ್ನು ಪೂರೈಸಲು, ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖವಾಗಬೇಕಾದುದೂ ಅಷ್ಟೇ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.