ADVERTISEMENT

ವಚನ ಸಂಪುಟಗಳು ಬೇಗ ಹೊರಬರಲಿ

ಎಸ್‌.ವಿದ್ಯಾಶಂಕರ, ಬೆಂಗಳೂರು
Published 6 ಜುಲೈ 2014, 19:30 IST
Last Updated 6 ಜುಲೈ 2014, 19:30 IST

ಕನ್ನಡ ಪುಸ್ತಕ ಪ್ರಾಧಿಕಾರದ ಈಗಿನ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಅವರು   ಸರ್ಕಾರದಿಂದ ಹಣ ಬಿಡುಗಡೆಯಾಗಿರುವುದು ‘ಬೈಬಲ್‌ ಮಾದರಿ ವಚನ ಸಂಪುಟ’ಗಳ ಮುದ್ರಣಕ್ಕೆ ಎಂದು ಹೇಳಿ ಹೊಸದಾಗಿ ಸಮಸ್ಯೆ ಸೃಷ್ಟಿ ಮಾಡಿರುವರು (ವಾ.ವಾ.ಜುಲೈ 2). ಪ್ರಾಧಿಕಾರದ ಹಿಂದಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವರ್ಷದ ಹಿಂದೆ ನಡೆದಿದ್ದ ವಚನ ಸಂಪುಟಗಳ ಸಂಪಾದಕರ ಸಭೆಯಲ್ಲಿ ಡಾ. ಎಂ.ಎಂ. ಕಲಬುರ್ಗಿ ಬೈಬಲ್‌ ಮಾದರಿಯಲ್ಲಿ ವಚನ ಸಂಪುಟಗಳ ಮುದ್ರಣವಾಗಬೇಕು ಎನ್ನುವ ಅಭಿಪ್ರಾಯ ಮಂಡಿಸಿದ್ದರು. ಅದರ ಸಾಧಕ ಬಾಧಕಗಳ ವಿಸ್ತೃತ ಚರ್ಚೆಯಾಗಿ ವಚನ ಸಂಪುಟಗಳು ಮೊದಲೆರಡು ಮುದ್ರಣಗಳ ರೀತಿಯಲ್ಲೇ ಮುದ್ರಣವಾಗಬೇಕೆನ್ನುವ  ನಿರ್ಣಯವಾಗಿದೆ. ಇದನ್ನು ಬಂಜಗೆರೆಯವರು ಗಮನಿಸಿದಂತೆ ತೋರುತ್ತಿಲ್ಲ.

ಬೈಬಲ್‌ ರೀತಿಯಲ್ಲಿ ವಚನ ಸಂಪುಟಗಳು ಮುದ್ರಣವಾಗಬೇಕೆಂದು ಬಂಜಗೆರೆಯವರು ಸರ್ಕಾರಕ್ಕೆ ಯಾವುದಾದರೂ ಪ್ರಸ್ತಾವ ಕಳುಹಿಸಿದ್ದರೆ?ಸರ್ಕಾರ ಅದನ್ನು ಒಪ್ಪಿ ಹಣ ಮಂಜೂರು ಮಾಡಿದೆಯೆ? ಸಂಪಾದಕ ಮಂಡಲಿಯಲ್ಲಿ ಹಿರಿಯ ವಿದ್ವಾಂಸರಾದ ಡಾ. ಎಂ. ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ, ಡಾ. ಸಿ.ಪಿ. ಕೃಷ್ಣಕುಮಾರ್‌, ಡಾ. ಎಸ್‌. ವಿದ್ಯಾಶಂಕರ ಅವರು ಇರುವರು.

ಹಿಂದಿನ ಸಂಪಾದಕ ಮಂಡಲಿಯ ತೀರ್ಮಾನವನ್ನು ಧಿಕ್ಕರಿಸಿ ಸರ್ಕಾರಕ್ಕೆ ಬೈಬಲ್‌ ಮಾದರಿಯಲ್ಲಿ ವಚನ ಸಂಪುಟಗಳು ಮುದ್ರಣವಾಗಬೇಕೆಂದು ಪ್ರಸ್ತಾವ ಸಲ್ಲಿಸುವುದು ಸಂಪಾದಕ ಮಂಡಲಿಗೆ ಮಾಡುವ ಅವಮಾನವಲ್ಲವೆ? ಹೀಗೆ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡು, ಕನ್ನಡ ಪುಸ್ತಕ ಪ್ರಾಧಿಕಾರದ ಸ್ಥಾಯಿ ಸಮಿತಿಯಲ್ಲಿ ಚರ್ಚೆಗೆ ಈ ವಿಷಯವನ್ನು 17.5.2014 ರಲ್ಲಿ ಇಟ್ಟಿದ್ದುದು ಬಂಜಗೆರೆಯವರ ವಾ.ವಾ. ಪತ್ರದಿಂದಲೇ ತಿಳಿಯುತ್ತದೆ.

ಇದು ಸಂಪಾದಕ ಮಂಡಲಿಯ ತೀರ್ಮಾನಕ್ಕೆ ವಿರುದ್ಧವಾಗಿ ನಡೆದ ಚರ್ಚೆ. ಅವರು  ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಬೈಬಲ್‌ ಮಾದರಿಯ ಸಂಪುಟ ಪ್ರಕಟಿಸಲು ಪುಸ್ತಕ ಪ್ರಾಧಿಕಾರವು ಕಾರ್ಯೋನ್ಮುಖವಾಗಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿರುವರು. ಇದರ ಅರ್ಥ: ‘ಹಿಂದಿನ ಸಂಪಾದಕ ಮಂಡಲಿಯನ್ನು ರದ್ದುಗೊಳಿಸಿ ಹೊಸದಾಗಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ’ ಎಂದೆ? ಈ ರೀತಿಯ ತೀರ್ಮಾನ ತೆಗೆದುಕೊಳ್ಳಲು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಗೆ ಅಧಿಕಾರವಿದೆಯೆ?

ಹಾಗಿ­ದ್ದರೆ ಅಧಿಕಾರ ಕೊಟ್ಟವರು ಯಾರು? ಈ ರೀತಿಯ ತೀರ್ಮಾನ ವೈಯಕ್ತಿಕವೆಂದು ತೋರುತ್ತದೆ.
ಅವರ ‘ಆನು ದೇವಾ ಹೊರಗಣವನು...’ ಪುಸ್ತಕವನ್ನು ಉಗ್ರವಾಗಿ ನಾನು ಖಂಡಿಸಿದ್ದಕ್ಕೆ ಇದು ಅವರು ನನಗೆ ಕೊಟ್ಟ ಬಳುವಳಿಯೆ? ಹಳೆಯ ಸಂಪಾದಕ ಮಂಡಲಿಯ
ಸದಸ್ಯರು ವಿಶ್ವಾಸಕ್ಕೆ ಅರ್ಹರಲ್ಲವೆ? ಇದನ್ನು ಕನ್ನಡ ಸಾಹಿತ್ಯಲೋಕ ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.