ADVERTISEMENT

ವಿಶ್ಲೇಷಣೆ ನಿಯಂತ್ರಿಸಿ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಚುನಾವಣೆ ಬಂತೆಂದರೆ ಮಾಧ್ಯಮಗಳು ಕ್ಷೇತ್ರವಾರು ಜನಸಂಖ್ಯೆ ಎಷ್ಟಿದೆ, ಯಾವ ಯಾವ ಜಾತಿಯವರು ಎಷ್ಟು ಮಂದಿ ಇದ್ದಾರೆ ಎಂಬುದನ್ನೆಲ್ಲ ವಿವರವಾಗಿ ಪ್ರಕಟಿಸುತ್ತವೆ.
 
ಜೊತೆಗೆ ಚುನಾವಣಾ ವಿಶ್ಲೇಷಣೆಗಳಲ್ಲಿ ಅಭ್ಯರ್ಥಿಯ ಜಾತಿ, ಅವರಿಗೆ ಯಾವ ಜಾತಿಯಿಂದ ಎಷ್ಟೆಷ್ಟು ಮತಗಳು ಸಿಗಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತದೆ. ಒಟ್ಟಾರೆ, ಅಭ್ಯರ್ಥಿ ಆಯ್ಕೆಗೆ ಜಾತಿಯೇ ಮಾನದಂಡ ಎಂದು ನಿರ್ಧರಿಸಲಾಗುತ್ತದೆ. ಇದು ನಮ್ಮ ಮತದಾರರನ್ನು ಮತ ಚಲಾಯಿಸಲು ಮಾನಸಿಕವಾಗಿ ಸಿದ್ಧಗೊಳಿಸುತ್ತದೆ.
 
ವಸ್ತುಸ್ಥಿತಿ ಬೇರೆಯೇ ಆಗಿರಬಹುದಾದ ಸಾಧ್ಯತೆ ಇದ್ದರೂ ಮತ ಸೆಳೆಯಲು ಇಂತಹ ವಿಶ್ಲೇಷಣೆಗಳು ಒಂದು ರೀತಿ ಜಾಹೀರಾತಿನಂತೆಯೇ ಪ್ರಭಾವ ಬೀರುತ್ತವೆ. ಜಾತಿವಾರು ಸಂಖ್ಯಾ ಬಲದ ಮಾಹಿತಿ ಸುಲಭವಾಗಿ ಲಭ್ಯವಾಗಲು ಜಾತಿವಾರು ಸಮೀಕ್ಷೆಗಳು ನೆರವಾಗುತ್ತವೆ.
 
ಮಾಧ್ಯಮಗಳಲ್ಲಿ ಈ ಬಗೆಯ ಮಾಹಿತಿ ಪ್ರಕಟವಾಗದೇ ಇದ್ದರೆ ಆಯಾ ಕ್ಷೇತ್ರದ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಜಾತಿ, ಆ ಜಾತಿಯ ಮತದಾರರ ಸಂಖ್ಯೆ ಇತ್ಯಾದಿ ವಿವರ ಕರಾರುವಾಕ್ಕಾಗಿ ತಿಳಿಯುವುದೇ ಇಲ್ಲ.  ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಮತ ಯಾಚನೆ ಮಾಡಬಾರದು ಎಂದು ಈಗ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದರಿಂದ, ರಾಜಕಾರಣಿಗಳು ವೇದಿಕೆಯಲ್ಲಿ ಈ ಬಗ್ಗೆ ನೇರವಾಗಿ ಮಾತನಾಡದೆ ಮಾಧ್ಯಮಗಳ ವಿಶ್ಲೇಷಣೆಯ ರೂಪದಲ್ಲಿ ಜನರಲ್ಲಿ ಜಾತಿ ಪ್ರಜ್ಞೆ ಬೆಳೆಸುವ ಸಾಧ್ಯತೆ ಇದ್ದೇ ಇರುತ್ತದೆ.
 
ಹೀಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹುಯಿಲೆಬ್ಬಿಸಲು ಸಾಧ್ಯವಾಗದಂತೆ ಕೋರ್ಟ್‌ ಎಚ್ಚರಿಕೆಯ ನಡೆಯಿಂದ ಇಂತಹ ವಿಶ್ಲೇಷಣೆಗಳನ್ನು ನಿಯಂತ್ರಿಸಬೇಕು. ಈ ಮೂಲಕ ಚುನಾವಣೆಯಲ್ಲಿ ಯಥಾಪ್ರಕಾರ ಜಾತೀಯತೆ ವಿಜೃಂಭಿಸದಂತೆ ಕ್ರಮ ಜರುಗಿಸಬೇಕು.
-ಸತ್ಯಬೋಧ, ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.