ADVERTISEMENT

ಸ್ವಾಗತಾರ್ಹ ನಿರ್ಧಾರ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಚಿಕ್ಕಮಗಳೂರು ಅರಣ್ಯ ವೃತ್ತದ ವ್ಯಾಪ್ತಿಯಲ್ಲಿ ಪಾರಿಸರಿಕ ಅಂಶಗಳ ಕುರಿತು ಪ್ರಾಥಮಿಕ ಕಾಳಜಿಯೂ ಇಲ್ಲದೆ ಅವೈಜ್ಞಾನಿಕವಾಗಿ ಮರ ಕಡಿಯಲು  ಹೊರಟಿದ್ದ ಅರಣ್ಯ ಇಲಾಖೆಯು ಇದೀಗ ಇದನ್ನು ನಿಲ್ಲಿಸಲು ನಿರ್ಧಾರ ತೆಗೆದುಕೊಂಡಿರುವುದು (ಪ್ರ.ವಾ., ಜ. 20) ಸ್ವಾಗತಾರ್ಹ ಸಂಗತಿ. ಅಷ್ಟರಮಟ್ಟಿಗೆ ಕಾಡು ಉಳಿದದ್ದು ನಿಟ್ಟುಸಿರು ಬಿಡುವಂತಾಯಿತು. 
 
ಈ ಸುದ್ದಿಯನ್ನು ಗ್ರಹಿಸಿ, ಆಮೂಲಾಗ್ರ ವಿವರಗಳೊಂದಿಗೆ ಆದ್ಯತೆಯ ಮೇಲೆ  ಮುಖಪುಟದಲ್ಲೇ ಪ್ರಕಟಿಸಿ, ಈ ಪ್ರಕರಣಕ್ಕೆ, ಅಂತಿಮವಾಗಿ ಪರಿಸರ ಸಂರಕ್ಷಣೆಗೆ ಪೂರಕವಾದ ಸುಖಾಂತ್ಯ ದೊರಕಲು ಕಾರಣವಾದ ‘ಪ್ರಜಾವಾಣಿ’ ಬಳಗಕ್ಕೆ  ಅಭಿನಂದನೆಗಳು. ನಮ್ಮ ನೆಲ-ಜಲ-ಕಾಡುಗಳ ಸಂರಕ್ಷಣೆಯ ಆಯಾಮಗಳಿಗೆ ಜಾಗೃತ ಮಾಧ್ಯಮ ನೀಡಬಹುದಾದ ಅಮೂಲ್ಯ ಕೊಡುಗೆಗೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇನ್ನೇನು ಬೇಕು? 
 
ರಾಜ್ಯದ ಅರಣ್ಯ ಇಲಾಖೆಯ ಉನ್ನತ ಸ್ಥಾನದಲ್ಲಿರುವವರು ಕನಿಷ್ಠ ಕರ್ತವ್ಯಪ್ರಜ್ಞೆ ಮತ್ತು ಪ್ರಾಮಾಣಿಕತೆಯನ್ನಾದರೂ ತೋರಬೇಕಾದ ಜರೂರತ್ತಿದೆ. ಚಿಕ್ಕಮಗಳೂರಿನಲ್ಲಿ ನಡೆದಂತಹ ವಿದ್ಯಮಾನಗಳು  ಮಲೆನಾಡಿನ ಉಳಿದ ಭಾಗಗಳಲ್ಲೂ ಜರುಗುತ್ತಲೇ ಇರುತ್ತವೆ! ಕಳೆದ ವರ್ಷ ಉತ್ತರ ಕನ್ನಡ  ಜಿಲ್ಲೆಯ ಯಲ್ಲಾಪುರದ ಕಾಳಿನದಿ ಕಣಿವೆಯಲ್ಲಿ ಅಸಂಖ್ಯ ತೇಗದ ಮರಗಳನ್ನು ಇದೇ ತೆರನಲ್ಲಿ ಬಲಿಕೊಡಲಾಗಿತ್ತು.
 
ತೀರ ಇತ್ತೀಚೆಗೆ, ಶಿರಸಿ ಬಳಿ ತೇಗದ ಮರಗಳನ್ನು ಕಡಿದದ್ದು ಮಾಧ್ಯಮಗಳಲ್ಲಿ ಸಾಕ್ಷಿಸಮೇತ ಬಹಿರಂಗಗೊಂಡು, ನಾಗರಿಕರು ಪ್ರತಿಭಟಿಸಿದ್ದೂ ಆಯಿತು! ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳಲ್ಲಂತೂ ಅರಣ್ಯ ಇಲಾಖೆಯ ಮೂಗಿನಡಿಯೇ ವ್ಯಾಪಕ ಅರಣ್ಯ ಅತಿಕ್ರಮಣ ನಡೆದಿದೆ! ಬೆಂಗಳೂರಿನ ‘ಅರಣ್ಯಭವನ’ವನ್ನು ಪರಿಸರಕ್ಕೆ ರಕ್ಷೆ ಒದಗಿಸುವ ಶಕ್ತಿಕೇಂದ್ರ ಎಂದೇ ಜನ ಭಾವಿಸುತ್ತಾರೆ.  ಆದರೆ, ತಳಮಟ್ಟದಲ್ಲಿ ಅರಣ್ಯ ಸಂರಕ್ಷಿಸುವಲ್ಲಿ ಇಲಾಖೆ ಇಂದು ಪ್ರಾಮಾಣಿಕವಾಗಿ  ಕಾರ್ಯಶೀಲವಾಗಿದೆಯೇ? ಇಲಾಖೆಯೇ ಉತ್ತರದಾಯಿತ್ವ ತೋರಬೇಕು.
-ಕೇಶವ ಎಚ್. ಕೊರ್ಸೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.