ADVERTISEMENT

ಹಾಗೇಕೆ ಭಾವಿಸುವಿರಿ?

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು. ನಂತರ ಅದರ ಕುರಿತು ವಾಗ್ವಾದ ನಡೆಯಿತು. ಪತ್ರಿಕಾ ವರದಿಯ ಪ್ರಕಾರ ಶಾಸಕರು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳಲ್ಲಿ ಮುಖ್ಯವಾದುದು, ‘ಹಿಂದಿ ದೇಶದ ರಾಷ್ಟ್ರಭಾಷೆ’ ಎಂಬುದು.
 
‘ಹಿಂದಿ ಭಾರತದ ರಾಷ್ಟ್ರಭಾಷೆ’ ಎಂಬುದು ಗೊತ್ತಿದ್ದೂ ಗೊತ್ತಿದ್ದೂ ಅನಾಯಾಸ ಹರಡುತ್ತಿರುವ ಆಧುನಿಕ ಮೂಢನಂಬಿಕೆಗಳಲ್ಲಿ ಒಂದು. ಸಂವಿಧಾನ ರಚನೆಯ ಹೊತ್ತಿನಲ್ಲಿ ರಾಷ್ಟ್ರ-ಲಾಂಛನ-ಧ್ವಜ-ಗೀತೆ-ಪ್ರಾಣಿ-ಪಕ್ಷಿಗಳ  ಕುರಿತು ಒಮ್ಮತ ಬಂದ ಹಾಗೆ ರಾಷ್ಟ್ರಭಾಷೆಯ ಕುರಿತು ಒಮ್ಮತ ಮೂಡಲಿಲ್ಲ. ಆದ್ದರಿಂದ  ಸಂವಿಧಾನದ ಅನುಚ್ಛೇದ 343 ಪ್ರಕಾರ ‘ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿ’  ಭಾಷೆಯನ್ನು ಭಾರತದ ‘ರಾಜಭಾಷೆ’ (ಆಡಳಿತ ಭಾಷೆ- ಅಫಿಷಿಯಲ್ ಲ್ಯಾಂಗ್ವೇಜ್) ಎಂದಿದೆಯೇ ವಿನಾ ಎಲ್ಲೂ ಹಿಂದಿ ರಾಷ್ಟ್ರಭಾಷೆ ಎಂದಿಲ್ಲ. ಭಾರತಕ್ಕೆ ಒಂದು ರಾಷ್ಟ್ರಭಾಷೆ ಇಲ್ಲ.
 
ಭಾರತ ಸಂವಿಧಾನದ ಅನುಚ್ಛೇದ 120ರಲ್ಲಿ ಸಂಸತ್ತಿನ ವ್ಯವಹಾರವು ಹಿಂದಿಯಲ್ಲಿ ಅಥವಾ ಇಂಗ್ಲಿಷಿನಲ್ಲಿ ನಡೆಯತಕ್ಕದ್ದು; ಈ ಭಾಷೆಗಳಲ್ಲಿ ಸಾಕಷ್ಟು ಅಭಿವ್ಯಕ್ತಿ ಸಾಮರ್ಥ್ಯ ಇಲ್ಲದ ಪಕ್ಷದಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿಯೇ ಮಾತಾಡಬಹುದು ಎಂಬ ಅನುಮತಿಯೂ ಇದೆ. ಇಲ್ಲಿ ಭಾಷೆ ಮುಖ್ಯವಲ್ಲ, ಸಂಸತ್ ಸದಸ್ಯರು ತಮ್ಮ ಅಭಿಪ್ರಾಯವನ್ನು ಸಮರ್ಥವಾಗಿ ಮಂಡಿಸುವಂತಾಗಬೇಕು ಎಂಬ ಉದ್ದೇಶವಿದೆ. ಆ ಭಾಷೆ ಅರ್ಥವಾಗದ ಇತರರಿಗೆ ಅನುವಾದದ  ವ್ಯವಸ್ಥೆ ಮಾಡಬೇಕು. ಇದೇ ಮಾತು ರಾಜ್ಯದ ವಿಧಾನ ಮಂಡಲಗಳಿಗೂ ಅನ್ವಯಿಸುತ್ತದೆ. 
 
ಬೇರೆ ರಾಜ್ಯದಿಂದ ಬಂದ ಕನ್ನಡೇತರ ರಾಜ್ಯಪಾಲರು ಅವರಿರುವಷ್ಟು ಅವಧಿಯಲ್ಲಿ ಅಧಿಕಾರಯುತವಾಗಿ ಭಾಷಣ ಮಾಡುವಷ್ಟು ಕನ್ನಡ ಕಲಿಯುತ್ತಾರೆ ಎಂದರೆ ಸ್ವಲ್ಪ ಉತ್ಪ್ರೇಕ್ಷೆಯೇ ಸರಿ. ಇನ್ನು ಒಬ್ಬ ಶಾಸಕರು ಹೇಳಿದ ಹಾಗೆ ‘ಕನ್ನಡ ಭಾಷಣವನ್ನು ಹಿಂದಿ ಲಿಪಿಯಲ್ಲಿ ಬರೆದುಕೊಂಡು ಓದಿದರೆ ಆಗಬಹುದು’ ಎಂಬ ಸಲಹೆಯೂ ಸರಿಯಿಲ್ಲ. ಇಂಥ ಹಿಂದಿ ಉಡುಪು ತೊಟ್ಟ ಕನ್ನಡ ಇನ್ನೂ ಅಧ್ವಾನವಾಗಿರುತ್ತದೆ. ಬದಲಿಗೆ ರಾಜ್ಯಪಾಲರು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತಾಡುವುದು ಒಳ್ಳೆಯದು. 
 
ಒಬ್ಬ ಶಾಸಕರು ಹೇಳಿದ ಹಾಗೆ ಅನೇಕ ಕಾರಣಗಳಿಂದ ಇಂಗ್ಲಿಷಿಗಿಂತ ಹಿಂದಿ ಭಾಷೆ ಹೆಚ್ಚು ಭಾರತೀಯರಿಗೆ ಬರುತ್ತದೆ ಎಂಬುದೂ ಸತ್ಯ. ಇಂಗ್ಲಿಷಿಗೆ ಹೋಲಿಸಿದರೆ (ಭಾರತೀಯ ಭಾಷೆಯಾದ, ವರ್ಣಲಿಪಿ ಇರುವ) ಹಿಂದಿಯನ್ನು ಕಲಿಯುವುದೂ ಸುಲಭ. ಸಂವಿಧಾನದಲ್ಲಿಯೂ, ಇಂಗ್ಲಿಷಿಗೆ ಹೋಲಿಸಿದರೆ ಹಿಂದಿಗೇ ಹೆಚ್ಚಿನ ಪ್ರಾಶಸ್ತ್ಯ ಮತ್ತು ಅದನ್ನು ಅಖಿಲ ಭಾರತದ (ರಾಷ್ಟ್ರಭಾಷೆಯನ್ನಾಗಿ ಅಲ್ಲ) ಸಂಪರ್ಕ ಭಾಷೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಆಶಯವೂ ಇದೆ. ರಾಜ್ಯದಲ್ಲಿ ಅನೇಕ ಮಾತೃಭಾಷೆಗಳು ಇರುವ ಹೊರತಾಗಿಯೂ ಬಹುಸಂಖ್ಯಾತರಿಗೆ ಸುಲಭವಾದ, ಆಡಳಿತಭಾಷೆಯ ಸ್ಥಾನವನ್ನು ಪಡೆದಿರುವ ಕನ್ನಡವನ್ನು ಅಭಿವೃದ್ಧಿ ಪಡಿಸುವ ಹಾಗೆ ಇದೂ ಕೂಡ. ಆದರೆ, ಹಿಂದಿ ಭಾಷೆಯ ಅಭಿವೃದ್ಧಿ ಕೆಲವು ಶಾಸಕರಿಗೆ ಮತ್ತು ಕೆಲವು ಸಾರ್ವಜನಿಕರಿಗೆ ‘ಹೇರಿಕೆ’ ಎಂದು ಏಕೆ ಅನ್ನಿಸುತ್ತದೆಯೋ ಅರ್ಥವಾಗುವುದಿಲ್ಲ. 
-ಎಂ.ಅಬ್ದುಲ್ ರೆಹಮಾನ್ ಪಾಷ,  ಬೆಂಗಳೂರು 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.