ADVERTISEMENT

ಹಾಸ್ಯಪ್ರಜ್ಞೆ ಚಿತ್ರಕ್ಕೆ ಸೀಮಿತವಲ್ಲ!

ಸಿ.ರುದ್ರಪ್ಪ, ಬೆಂಗಳೂರು
Published 27 ಜನವರಿ 2015, 19:30 IST
Last Updated 27 ಜನವರಿ 2015, 19:30 IST

ವಿಡಂಬನೆ, ತಮಾಷೆಗಳು ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ನಿಜಜೀವನದಲ್ಲಿಯೂ ಹಾಸ್ಯಪ್ರಜ್ಞೆ, ತುಂಟತನವನ್ನು ಮೈಗೂಡಿಸಿಕೊಂಡಿದ್ದರು. ೧೯೮೬ರಲ್ಲಿ ಮುಂಬೈನಲ್ಲಿ ಒಂದು ಪ್ರಸಂಗ. ನಾನು ಆಗ ಅಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿ.

ಮುಂಬೈ ಕನ್ನಡ ಸಂಘದವರು ಶಿವರಾಮ ಕಾರಂತ, ಆರ್.ಕೆ.ಲಕ್ಷ್ಮಣ್, ಅಣು ವಿಜ್ಞಾನಿ ಪಿ.ಕೆ.ಅಯ್ಯಂಗಾರ್ ಸೇರಿದಂತೆ ೬ ಮಂದಿ ಪ್ರಖ್ಯಾತ ಕನ್ನಡಿಗರಿಗೆ ಸನ್ಮಾನ ಏರ್ಪಡಿಸಿದ್ದರು. ಆರ್.ಕೆ.ಲಕ್ಷ್ಮಣ್ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಅನೇಕ ಮಂದಿ ಅವರ ಆಟೊಗ್ರಾಫ್ ಹಾಕಿಸಿಕೊಂಡರು. ನನಗೂ ಆಟೊಗ್ರಾಫ್ ಬುಕ್‌ನಲ್ಲಿ ಹಸ್ತಾಕ್ಷರ ಹಾಕಿದರು. ಆಗ ಯಾರೋ ಒಬ್ಬರು ‘ಸಾರ್, ಲಕ್ಷಣ ಅಂತ ಬರೆದಿದ್ದೀರಿ. ತಾವು ಒತ್ತು ಹಾಕಿಲ್ಲ...’ ಎಂದು ಆಟೊಗ್ರಾಫ್‌ ಬುಕ್‌  ತೋರಿಸಿದರು. ಆಗ ಎಲ್ಲರೂ ತಮ್ಮ ಆಟೊಗ್ರಾಫ್‌ ಬುಕ್‌ಗಳತ್ತ ನೋಟ ಹರಿಸಿದರು. ಅಲ್ಲಿಯೂ  ಲಕ್ಷಣ..  ಲಕ್ಷಣ.. ಎಂದೇ ಹಸ್ತಾಕ್ಷರ ಇತ್ತು. ಆಗ ಲಕ್ಷ್ಮಣ್ ಕಣ್ಣು ಮಿಟುಕಿಸಿ, ತುಂಟ ನಗೆ ಬೀರಿ ಎಲ್ಲರ ಆಟೊಗ್ರಾಫ್ ಬುಕ್‌ಗಳಲ್ಲಿಯೂ ಒತ್ತು ಹಾಕಿ ಲಕ್ಷ್ಮಣ ಎಂದು ಸರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.