ADVERTISEMENT

ಹಿಮ್ಮುಖ ಚಲನೆ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

‘ಬಡತನ ನಿಜಕ್ಕೂ ನಿರ್ಮೂಲನ ಆದೀತೆ’ ಎಂಬ ಲೇಖನದಲ್ಲಿ (ಪ್ರ.ವಾ., ಜೂನ್‌ 25) ಪ್ರಸನ್ನ ಅವರು ಹಿಮ್ಮುಖ ಅಥವಾ ನಿಧಾನಗತಿಯ ಸಿದ್ಧಾಂತದ ಬಗ್ಗೆ ಹೇಳಿದ್ದಾರೆ. ಈ ಸಿದ್ಧಾಂತ ಅಳವಡಿಕೆಯಿಂದ ಜನರ ಆಯಸ್ಸು ಮತ್ತು ಆರೋಗ್ಯ ಹೆಚ್ಚಾಗಬಹುದು. ಆದರೆ ಇಂದಿನ ವೇಗದ ಬದುಕಿನಲ್ಲಿ ಇದು ಸಾಧ್ಯವಿಲ್ಲದ ಕೆಲಸ.

‘ನೀನು ಚಪ್ಪಲಿ ಹಾಕಿಕೊಂಡು ನಿಂತಾಗ ನಿನ್ನ ಮುಂದೆ ಬರಿಗಾಲಲ್ಲಿ ನಿಂತವನ ನೋಡಿ ಚಪ್ಪಲಿ ಹಾಕುವುದನ್ನು ಬಿಡಬೇಕು’ ಎಂದು ಲೇಖಕರು ಹೇಳುತ್ತಾರೆ.  ಇಲ್ಲದವರ ಮುಂದೆ ಉಳ್ಳವರು ಬರಿದಾಗುವ ಮಾತು ಅಸಾಧ್ಯವೇ ಸರಿ. ‘ನಿಮ್ಮ ಭಿಕ್ಷೆಯಿಂದಾಗಿ ನಿಮ್ಮೆದುರು ನಿಂತಿರುವ ವ್ಯಕ್ತಿಯ ಕೀಳರಿಮೆ ಜಾಸ್ತಿ ಮಾಡದಿರಿ’ ಎಂದಿದ್ದಾರೆ.

ಇಲ್ಲಿ ಭಿಕ್ಷೆಯ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ನಾಡಿನ ಸಂಪನ್ಮೂಲ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವುದು ಇಲ್ಲಿನ ನೀತಿ. ಅದರಲ್ಲೂ ಬಡವರಿಗೆ ಸರ್ಕಾರದ ಯೋಜನೆಗಳು ತಲುಪಬೇಕು; ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದಿರುವಾಗ, ಇದು ದಕ್ಕದೇ ಹೋದಾಗ ಹೋರಾಟದ ಮೂಲಕ ಪಡೆಯಬೇಕು ಎನ್ನುವುದು ಸರಿಯಾಗಿದೆ. ಬಹಳಷ್ಟು ಬಡವರು ಚಪ್ಪಲಿ ತೊಡುವವರೆಗೂ ಉಳ್ಳವರು ಚಪ್ಪಲಿ ತೊಡದಿರುವುದೇ ಸರಿ ಎನ್ನುವುದು ಇಂದಿನ ಕಾಲಮಾನದಲ್ಲಿ ಸಾಧ್ಯವೇ? ಇದರ ಬದಲಿಗೆ, ಬಡತನ ನಿರ್ಮೂಲನೆಗೆ ಸರ್ಕಾರ ಇನ್ನೂ ಹೆಚ್ಚಿನ ಸವಲತ್ತು ಮತ್ತು ಯೋಜನೆಗಳನ್ನು ರೂಪಿಸುವುದರ ಜೊತೆಗೆ, ಪ್ರಕೃತಿಯ ನಿಯಮ ಮೀರುತ್ತಿ ರುವ ಉಳ್ಳವರಿಗೆ ಕಡಿವಾಣದ ಅಗತ್ಯ ಇದೆ ಎನ್ನಬಹು ದಿತ್ತು. ಆದರೆ ಈಗ ಅದೂ ಕೈಮೀರಿದೆ.
- ಕವಿ ಉದಂತ ಶಿವಕುಮಾರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.