ADVERTISEMENT

ಹೆಸರಿಗಷ್ಟೇ ‘ಸರ್ಕಾರಿ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST

ಆಯುಷ್‌ ಚಿಕಿತ್ಸಕರಿಗೆ ಅಲೋಪಥಿ ತರಬೇತಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಸಮರ್ಥನೆ ನೋಡಿ (ಸಂಗತ, ಜ. 13) ಆಶ್ಚರ್ಯವಾಯಿತು. ಉಡುಪಿಯ ಹಾಜಿ ಅಬ್ದುಲ್ಲಾ ಸ್ಮಾರಕ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಯಾಗಿದ್ದು ಮುಂದೆಯೂ ಸರ್ಕಾರಿ ಆಸ್ಪತ್ರೆಯಾಗೇ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಆಸ್ಪತ್ರೆ ‘ಸರ್ಕಾರಿ’ ಆಗಿ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ.

ಸರ್ಕಾರಕ್ಕೆ ಹಣಕಾಸಿನ ತೊಂದರೆ ಇರುವುದರಿಂದ ಆಸ್ಪತ್ರೆ ಕಟ್ಟಡ ಕಟ್ಟಲು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ನೋಂದಾಯಿಸಿಲ್ಲದ, ದೃಢೀಕರಿಸಿಲ್ಲದ ಒಡಂಬಡಿಕೆ ಪತ್ರವೊಂದನ್ನು ಇತ್ತೀಚೆಗೆ ನಮಗೆ ನೀಡಲಾಗಿದ್ದು ಆಸ್ಪತ್ರೆಯ ಮೇಲ್ವಿಚಾರಣೆ, ವೈದ್ಯರ ನೇಮಕಾತಿ, ಸಿಬ್ಬಂದಿ ನೇಮಕಾತಿ ಎಲ್ಲವನ್ನೂ ಬಿ.ಆರ್.ಎಸ್. ವೆಂಚರ್ಸ್ ಮಾಡುತ್ತದೆ ಎಂಬ ಉಲ್ಲೇಖ ಅದರಲ್ಲಿದೆ. ಹಾಗಾಗಿ ಸಚಿವರು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಓದಿದ್ದಾರೋ ಅಥವಾ ಐಎಎಸ್ ಅಧಿಕಾರಿಗಳು ಹೇಳಿದ್ದನ್ನು ನಂಬಿದ್ದಾರೋ ಎಂಬ ಸಂಶಯವೇಳುತ್ತದೆ.

ಹಾಗೆಯೇ ಈ ಸಂಬಂಧ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಇದುವರೆಗೂ ಮಾಹಿತಿ ಹಕ್ಕು ಕಾಯ್ದೆಯಡಿ ಬಂದಿರುವ ಹೆಚ್ಚಿನ ಉತ್ತರಗಳು ಯಾವುದೇ ದೃಢೀಕರಣವಿಲ್ಲದೆ ಬಂದಿದ್ದು, ಸರ್ಕಾರದಲ್ಲಿ ಮೊಹರು ಮತ್ತು ಶಾಯಿಯ ಕೊರತೆಯೂ ಇದೆಯೇ ಎಂಬ ಸಂಶಯ ಮೂಡುತ್ತದೆ.

ಸರ್ಕಾರ ಆಸ್ಪತ್ರೆ ನಡೆಸಲು ಆಗದಿದ್ದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಆಸ್ಪತ್ರೆಯನ್ನು ಕೊಂಡುಕೊಳ್ಳಲು ದೊಡ್ಡ ಉದ್ಯಮಿಗಳ ದಂಡನ್ನೇ ಆಹ್ವಾನಿಸಬಹುದು ಅಥವಾ ಸಹಕಾರಿ ಸಂಸ್ಥೆಗಳಿಂದ, ಜನಸಾಮಾನ್ಯರಿಂದ ವಂತಿಗೆ ಪಡೆದುಕೊಂಡು ಆಸ್ಪತ್ರೆ ನಡೆಸಬಹುದು.

ಇದರಿಂದ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರ ಹೆಸರಿನ ಮುಂದೆ ಇನ್ನೂ ಹಲವು ಹೆಸರುಗಳನ್ನು ಸೇರಿಸಿ ಅವರ ಹೆಸರಿಗೆ ಚ್ಯುತಿ ತರುವ ಪ್ರಮಾದವನ್ನು ತಪ್ಪಿಸಬಹುದು.
-ಡಾ. ಪಿ.ವಿ.ಭಂಡಾರಿ, ಸಂಚಾಲಕ, ಸರ್ಕಾರಿ ಆಸ್ಪತ್ರೆಯ ಉಳಿವಿಗಾಗಿ ನಾಗರಿಕರ ಒಕ್ಕೂಟ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.