ADVERTISEMENT

‘ನೆಹರೂ ಅವರದ್ದು ರಷ್ಯಾದ ಮಾದರಿಯಲ್ಲ’

ಕೆ.ಫಣಿರಾಜ್
Published 11 ಆಗಸ್ಟ್ 2014, 19:30 IST
Last Updated 11 ಆಗಸ್ಟ್ 2014, 19:30 IST

ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪನವರ ‘ಸಿದ್ಧಾಂತಗಳು ಅಪ್ರಯೋಜಕ’ ಹೇಳಿಕೆಗೆ ನನ್ನ ಪ್ರತಿಕ್ರಿಯೆ (ಪ್ರ.ವಾ., ಆ.5).

ಜವಾಹರಲಾಲ್‌ ನೆಹರೂ ಕಾಲದ ಅರ್ಥನೀತಿ ರಷ್ಯಾದ ಎಡಪಂಥೀಯ ನೀತಿಯಿಂದ ಪ್ರಭಾವಿತವಾಗಿರದೆ, 2ನೇ ಮಹಾ­ಯುದ್ಧದ ಉತ್ತರ ಕಾಲದ ವಿದ್ಯಮಾನಗಳಿಂದ  ಜರ್ಜರಿತ­ವಾಗಿದ್ದ ಉತ್ತರ ಅಮೆರಿಕ ಹಾಗು ಯೂರೋಪ್‌ ಖಂಡದ ರಾಷ್ಟ್ರ­ಗಳ ಅರ್ಥಸ್ಥಿತಿಗೆ ಒದಗಿ ಬಂದ ‘ಕೆಯ್ನೆಷಿಯನ್‌ ಅರ್ಥ­ಶಾಸ್ತ್ರ’ ಪ್ರಣೀತ ‘ಬ್ರೆಟನ್‌ವುಡ್ ಕಾನ್ಫರೆನ್ಸ್’ನ ಪರಿಕಲ್ಪನೆಯಲ್ಲಿ ರೂಪ ಪಡೆದದ್ದು.

ಬಂಡವಾಳಶಾಹಿ ಉತ್ಪಾದನೆಗೆ ಮಾರಕವಾಗದಂತಹ, ಆದರೆ, ಆ ವ್ಯವಸ್ಥೆಯಿಂದ ಉಂಟಾಗುವ ಸಂಪತ್ತಿನ ಹಂಚಿಕೆ ತೀವ್ರ ಅಸಮತೋಲನದ ಹಂತಕ್ಕೆ ತಲುಪಿ, ನಿರ್ಗತಿಕರು ಬಂಡೇ­ಳ­ದಂತಹ ‘ಕಲ್ಯಾಣ ರಾಜ್ಯ’ದ ವ್ಯವಸ್ಥೆಯದು. 

ಬಂಡ­ವಾಳ­ದಾರ­ರಿಗೆ ಹೋಲಿಸಿದರೆ, ಒಂದು ಹಂತದ ಆದಾಯದ ಮಿತಿಗಿಂತ ಜಾಸ್ತಿ ಆದಾಯ ಪಡೆಯುವ ಬಂಡವಾಳದಾರರ ಹೆಚ್ಚಿನ ಆದಾಯದ ಮೇಲೆ, ಹೆಚ್ಚಿಗೆ ಆದಾಯ ಕರ ವಿಧಿಸಿ (ಇದನ್ನೇ, ಆದಾಯ ತೆರಿಗೆಯ ‘ಸ್ಲ್ಯಾಬ್ ವ್ಯವಸ್ಥೆ’ ಎನ್ನುವುದು), ಅದನ್ನು ದುಡಿಯುವ ಬಡಜನರ ಹೊಟ್ಟೆಗೆ ಅಂಬಲಿಯನ್ನು ಒದಗಿಸುವ ಯೋಜನೆಗಳಿಗೆ ಬಳಸಿ, ಬಡವರ ರೊಚ್ಚನ್ನು ನಿಯಂತ್ರಣ­ದಲ್ಲಿಡುವ ಈ ವ್ಯವಸ್ಥೆಯನ್ನೇ ನೆಹರೂ ಕೂಡ ಅನುಸರಿಸಿದ್ದು. 

ಆ ಕಾಲದ ಬಂಡವಾಳಶಾಹಿ ರಾಷ್ಟ್ರಗಳ ಅರ್ಥನೀತಿಗೆ ಹೋಲಿಸಿ ನೋಡಿದರೆ, ಇದು ವಿದಿತವಾಗುತ್ತದೆ. ಹೀಗಾಗಿ ‘ನ್ಯೂ ಡೀಲ್’ ವ್ಯವಸ್ಥೆಯ ಅಮೆರಿಕದಲ್ಲಿ ಹೇಗೆ ಖಾಸಗಿ ಬಂಡವಾಳದಾರರು ಅಭಿವೃದ್ಧಿ ಹೊಂದಿ­ದರೋ, ಅದೇ ಬಗೆಯಲ್ಲಿ ಭಾರತದ ಖಾಸಗಿ ಬಂಡವಾಳಗಾರರೂ ನೆಹರೂ ಅವರ ಕಾಲದಲ್ಲಿ ಬೆಳೆದರು. 1950-70ರ ಕಾಲದಲ್ಲಿ ಟಾಟಾ, ಬಿರ್ಲಾ, ಸಿಂಘಾನಿಯ, ಜಿಂದಾಲ್‌ಗಳ ಬಂಡವಾಳ ವೃದ್ಧಿ ಹೇಗೆ ಮತ್ತು ಯಾಕೆ ಆಯಿತು ಎಂದು ನೋಡದೆ, ನೆಹರೂ ಅವರು ರಷ್ಯಾದ ಅರ್ಥವ್ಯವಸ್ಥೆ ಮಾದರಿ ಅನುಸರಿಸಿದರು ಎನ್ನುವುದು ಸರಿಯಲ್ಲ.

ಅಲ್ಲದೆ ಪತ್ರಕರ್ತ ಸಾಯಿನಾಥ್ ಅವರು 2005–-2014ರವ­ರೆಗಿನ ಕೇಂದ್ರ ಬಜೆಟ್‌ನಲ್ಲಿ ಅಧಿಕೃತವಾಗಿ ನಮೂದಾಗಿ­ರುವ ಅಂಕಿ ಅಂಶ­ವೊಂದನ್ನು ಇತ್ತೀಚಿನ ತಮ್ಮ ಬರಹದಲ್ಲಿ ವಿವರಿಸಿದ್ದಾರೆ. ಆ ಪ್ರಕಾರ ಈ 9 ವರ್ಷಗಳಲ್ಲಿ, ‘ಕಾರ್ಪೊರೇಟಾ­ಧೀಶ­’ರಿಗೆ ಸರ್ಕಾರ ವಿಧಿಸ­ಬೇಕಾದ ತೆರಿಗೆ ವಿಧಿಸದೆ ‘ಕೈಬಿಟ್ಟು ಹೋದ ವರಮಾನ’­ವೇ 36ರ ಮುಂದೆ 12 ಸೊನ್ನೆಗಳು!- ಎಣಿಸಿಲೂ ಅಸಾಧ್ಯ­ವಾದ ಇಂತಹ ‘ಅಸಾಧ್ಯ ಸಾಧನೆ’ಯೇ, ಭೈರಪ್ಪನವರ ಮುಂದಿ­ರುವ ಆರ್ಥಿಕ ಆದರ್ಶ­ವಾಗುವುದಾದರೆ,  ಅವರು ಹೇಳು­ವಂತೆ ಅವರು ಪ್ರತಿಪಾ­ದಿ­ಸುವ ‘ಸಿದ್ಧಾಂತಗಳು ಅಪ್ರಯೋಜಕ’ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.