ADVERTISEMENT

ಅವಧಿ ಮೀರಿದ ಮಾತ್ರೆ ನೀಡಿದರೆ..?

ಕೆ.ಓಂಕಾರ ಮೂರ್ತಿ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST

ಮೈಸೂರು: ‘ರೈತರಿಗೆ ಅವಧಿ ಮೀರಿದ ಬಿತ್ತನೆ ಬೀಜ ವಿತರಣೆ ಮಾಡಿರುವ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ನಾನು ಎಂಬಿಬಿಎಸ್‌ ಓದಿದ್ದೇನೆ. ಅವಧಿ ಮೀರಿದ ಮಾತ್ರೆ ನೀಡಿದರೆ ಏನಾಗುತ್ತೆ ಗೊತ್ತಾ..?’

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಬರ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಕೇಳಿದ ಪ್ರಶ್ನೆ ಇದು.

ಸಭೆ ಮಧ್ಯೆ ಇದ್ದಕ್ಕಿದ್ದಂತೆ ಗರಂ ಆದ ಅವರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ವಿರುದ್ಧ ಹರಿಹಾಯ್ದರು.
‘ಕೃಷಿ ಜಂಟಿ ನಿರ್ದೇಶಕರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಂಥ ವರ್ತನೆಯಿಂದ ಜಿಲ್ಲೆಗೆ ಕಳಂಕ ಬರುತ್ತೆ. ರೈತರು ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಿಬ್ಬಂದಿಯ ಕಣ್ತಪ್ಪಿನಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸೋಮಸುಂದರ್‌ ಹೇಳಿದಾಗ ‘ನೀವೇನು ಮಾಡುತ್ತಿದ್ದೀರಿ’ ಎಂದು ಗದರಿದರು. ‘ನೋಟಿಸ್‌ ನೀಡಿ ವಿವರಣೆ ಪಡೆಯಿರಿ’ ಎಂದು ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರಿಗೆ ಸೂಚಿಸಿದರು.

2018ರ ಚುನಾವಣೆಗೆ ಈಗಲೇ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತಿರುವ ಅವರು ಡಿಸೆಂಬರ್‌ ಅಂತ್ಯದೊಳಗೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಮೇಲೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.