ADVERTISEMENT

ಆಗಿದ್ದೇನು? ಪೊಲೀಸರು ಮಾಡಿದ್ದೇನು?

ಕಟಕಟೆ–54

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಆಗಿದ್ದೇನು? ಪೊಲೀಸರು ಮಾಡಿದ್ದೇನು?
ಆಗಿದ್ದೇನು? ಪೊಲೀಸರು ಮಾಡಿದ್ದೇನು?   
2004 ಜುಲೈ 29ರಂದು ಬೆಳಿಗ್ಗೆ ಸುಮಾರು 9.45ರ ಸಮಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗಣಗಲು ಗ್ರಾಮದ ಜೆಡಿಎಸ್‌ ಮುಖಂಡ ನಾರಾಯಣ ಸ್ವಾಮಿ ಉಳುಮೆ ಮಾಡುವ ಸಂಬಂಧ ಅಂದು ಕೊತ್ತಂಬರಿ ಬೀಜವನ್ನು ತರಲು ಹೊಸಕೋಟೆಗೆ ಬೈಕ್‌ನಲ್ಲಿ ಹೋಗಿದ್ದರು. ಜೊತೆಯಲ್ಲಿ ಅವರ ಸ್ನೇಹಿತ ದೇವರಾಜ್‌  ಕೂಡ ಇದ್ದರು. ಅವರು ವಾಪಸಾಗುತ್ತಿದ್ದ ವೇಳೆ ಅವರ ಬೈಕ್‌ ಅನ್ನು ಅಡ್ಡಗಟ್ಟಿದ ಕೆಲವರು ಈ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಕೆಳಕ್ಕೆ ಬೀಳಿಸಿದರು. ನಾರಾಯಣ ಸ್ವಾಮಿ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದರು.
 
ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಧಾವಿಸಿದ ದೇವರಾಜ್‌, ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದರು. ‘ನಾರಾಯಣ ಎಂಬುವವನು ಇನ್ನೊಬ್ಬನ ಜೊತೆಗೂಡಿ  ಜೆಡಿಎಸ್‌ ಪಕ್ಷದ ಮುಖಂಡ ನಾರಾಯಣ ಸ್ವಾಮಿ ಅವರ ಕೊಲೆ ಮಾಡಿದ್ದಾನೆ’ ಎಂದು ದೇವರಾಜ್‌ ದೂರಿನಲ್ಲಿ ತಿಳಿಸಿದರು. ಹೇಳಿಕೇಳಿ ರಾಜಕೀಯ ಮುಖಂಡನ ಕೊಲೆ ಪ್ರಕರಣವಿದು. ಪೊಲೀಸರು ಸುಮ್ಮನೆ ಬಿಟ್ಟಾರೆಯೇ? 
 
ತನಿಖೆ ಶುರುವಾಯಿತು. ಸ್ಥಳಕ್ಕೆ ಭೇಟಿ ನೀಡಿದ ಇನ್‌ಸ್ಪೆಕ್ಟರ್‌ ಸಿಕ್ಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿದರು. ಒಂದಿಷ್ಟು ಮಂದಿಯ ಬಾಯಿಯಿಂದ ಹೇಳಿಕೆಗಳನ್ನು ಪಡೆದುಕೊಂಡು ಅದನ್ನೂ ದಾಖಲಿಸಿಕೊಂಡರು. ಠಾಣೆಗೆ ಹೋಗಿ ಪ್ರಥಮ ಮಾಹಿತಿ ವರದಿ  (ಎಫ್‌ಐಆರ್‌) ತಯಾರಿಸಿದರು. ದೇವರಾಜ್‌ ದೂರಿನಲ್ಲಿ ಹೇಳಿದ ನಾರಾಯಣ ಹಾಗೂ ಇನ್ನೊಬ್ಬ ಸೇರಿದಂತೆ ಆರು ಜನರ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ ಕೋರ್ಟ್‌ಗೆ ಸಲ್ಲಿಸಿದರು (ಈ ಆರೂ ಮಂದಿ ಕಾಂಗ್ರೆಸ್‌ ಕಾರ್ಯಕರ್ತರು). ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಆರು ಮಂದಿಗೂ ಜೀವಾವಧಿ ಶಿಕ್ಷೆಯಾಯಿತು. ಇದರ ಜೊತೆಗೆ ತಲಾ ಐದು ಲಕ್ಷ ರೂಪಾಯಿ ದಂಡವೂ ಆಯಿತು.
 
ಅಲ್ಲಿಗೆ ಪ್ರಕರಣದ ಒಂದು ಹಂತ ಮುಗಿಯಿತು. ಪ್ರಾಸಿಕ್ಯೂಷನ್‌ ಪರ ವಕೀಲರು ಮಾಡಿದ್ದ ವಾದಕ್ಕೆ, ಪೊಲೀಸರು ನೀಡಿದ್ದ ದಾಖಲೆಗಳಿಗೆ ಸೆಷನ್ಸ್‌ ಕೋರ್ಟ್‌ ಜಯ ದೊರಕಿಸಿಕೊಟ್ಟಿತ್ತು. ಮುಂದಿನದ್ದು ಮೇಲ್ಮನವಿ. 
 
ತಾವು ಕೊಲೆ ಮಾಡಿಲ್ಲ, ತಮ್ಮನ್ನು ಅನ್ಯಾಯವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿ ಆರೂ ಮಂದಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಆ ಪೈಕಿ ವೆಂಕಟರಾಮಸ್ವಾಮಿ ಅವರ ಪರವಾಗಿ ನಾನು ವಕಾಲತ್ತು ವಹಿಸಿದೆ. ಉಳಿದ ಆರೋಪಿಗಳ ಪರವಾಗಿ ಬೇರೆ ಬೇರೆ ವಕೀಲರು ವಕಾಲತ್ತು ವಹಿಸಿದರು.
 
ಬೇರೆ ಯಾರಿಗೆ ಸುಳ್ಳು ಹೇಳಿದರೂ ತಮ್ಮ ಪರ ವಕೀಲರಿಗೆ ಆರೋಪಿಗಳು ಸುಳ್ಳು ಹೇಳುವುದಿಲ್ಲ ಎಂಬ ಮಾತೇ ಇದೆಯಲ್ಲ. ಹಾಗೆಯೇ ನಡೆದ ವಿಷಯದ ಬಗ್ಗೆ ಸತ್ಯವನ್ನೇ ನುಡಿಯುವಂತೆ ನನ್ನ ಕಕ್ಷಿದಾರ ವೆಂಕಟರಾಮಸ್ವಾಮಿ ಅವರನ್ನು ಕೇಳಿದೆ. ಅವರು ಎಲ್ಲಾ ವಿಷಯವನ್ನು ಎಳೆಎಳೆಯಾಗಿ ಹೇಳಿದರು. ಅದನ್ನು ಕೇಳಿದ ನನಗೆ ಈ ಕೊಲೆ ವೆಂಕಟರಾಮಸ್ವಾಮಿ ಅವರು ಮಾಡಿಲ್ಲ ಎಂಬುದು ಖಚಿತವಾಯಿತು. ಆದರೆ ಇದು ಬಹಳ ಸೂಕ್ಷ್ಮ ವಿಚಾರವಾಗಿತ್ತು. ಏಕೆಂದರೆ ಪ್ರಾಸಿಕ್ಯೂಷನ್‌ ಇವರ ವಿರುದ್ಧ ಚೆನ್ನಾಗಿಯೇ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿತ್ತು. ಸಾಲದು ಎಂಬುದಕ್ಕೆ ಇದೇ ದಾಖಲೆಗಳನ್ನು ಪರಿಶೀಲಿಸಿ, ಎಲ್ಲಾ ಸಾಕ್ಷಿದಾರರ ಹೇಳಿಕೆಗಳನ್ನು ಪಡೆದು ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು. ಈಗ ಏನಿದ್ದರೂ ಸೆಷನ್ಸ್‌ ಕೋರ್ಟ್‌ನ ದಾಖಲೆಗಳ ಆಧಾರದ ಮೇಲೆ ಆರೋಪಿಗಳ ಪರ ವಕೀಲರು ವಾದ ಮಾಡಬೇಕಿತ್ತಷ್ಟೆ.
 
ಈ ದಾಖಲೆಗಳನ್ನು ತಿರುವಿ ಹಾಕುತ್ತಿದ್ದಂತೆಯೇ ಬುಡದಿಂದ ತುದಿಯವರೆಗೂ ‘ಗೋಲ್‌ಮಾಲ್‌’ ನಡೆದಿರುವ ಬಗ್ಗೆ ನನಗೆ ಸಂದೇಹ ಬಂತು. ಎಲ್ಲಾ ‘ಗೋಲ್‌ಮಾಲ್‌’ಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ಎದುರು ಒಂದೊಂದಾಗಿ ಬಿಚ್ಚಿಟ್ಟೆ. ಅದೇ ರೀತಿ ಉಳಿದ ಆರೋಪಿಗಳ ಪರ ವಕೀಲರೂ ವಾದಿಸಿದರು. ನ್ಯಾಯಮೂರ್ತಿಗಳಿಗೆ ನಮ್ಮ ವಾದ ಸರಿ ಎನಿಸಿ, ನನ್ನ ಕಕ್ಷಿದಾರರಾಗಿದ್ದ ವೆಂಕಟರಾಮಸ್ವಾಮಿ ಸೇರಿದಂತೆ ನಾಲ್ವರನ್ನು ಆರೋಪಮುಕ್ತಗೊಳಿಸಿದರು. (ನಾರಾಯಣ ಹಾಗೂ ಇನ್ನೊಬ್ಬನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ಕಾಯಂ ಮಾಡಿದರು).
 
***
ಅಂದು ಬೆಳಿಗ್ಗೆ ಘಟನೆ ನಡೆದಿದ್ದಂತೂ ಸತ್ಯ. ಕೊಲೆ ಆಗಿದ್ದೂ ಸತ್ಯ. ಸೆಷನ್ಸ್‌ ಕೋರ್ಟ್‌ ಕೊಲೆ ಮಾಡಿದ್ದು ಇವರೇ ಅಂದದ್ದೂ ಸತ್ಯ. ಹಾಗಿದ್ದರೆ ಹೈಕೋರ್ಟ್‌ ನಾಲ್ವರನ್ನು ಬಿಡುಗಡೆ ಮಾಡಿದ್ದು ಏಕೆ...?  ಅಲ್ಲೇ ಇರುವುದು ಕುತೂಹಲ.
 
ಇಬ್ಬರು ಬಂದು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ದೇವರಾಜ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡುವವರೆಗೆ ಎಲ್ಲವೂ ಸರಿಯಾಗಿಯೇ ನಡೆದಿದೆ. ಆದರೆ ಈ ಘಟನೆ ಎರಡು ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ಎಂದು ಪೊಲೀಸರಿಗೆ ತಿಳಿದಿದ್ದರಿಂದಲೋ ಅಥವಾ ಕಾನೂನಿನ ತಿಳಿವಳಿಕೆ ಅರ್ಧಂಬರ್ಧ ಇದ್ದಿದ್ದರಿಂದಲೋ  ಏನೋ (!) ಆ ದೂರನ್ನು ಅವರು ಕಾನೂನಿನ ಅನ್ವಯ ‘ಸ್ಟೇಷನ್‌ ಹೌಸ್‌ ಡೈರಿ’ಯಲ್ಲಿ (ಎಸ್‌ಎಚ್‌ಓ) ನಮೂದಿಸಿಕೊಂಡರು ಬಿಟ್ಟರೆ ಇಂಥ ಅಪರಾಧಿಕ ಪ್ರಕರಣಗಳಲ್ಲಿ ಮಾಡಲೇಬೇಕಾದ ಇನ್ನೊಂದು ಕೆಲಸ ಮರೆತೇಬಿಟ್ಟರು. ಅದೇನೆಂದರೆ ಕೂಡಲೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿಕೊಳ್ಳುವುದು. ಈ ನಡುವೆ ಜೆಡಿಎಸ್  ಮುಖಂಡರು ಪೊಲೀಸ್‌ ಠಾಣೆಗೆ ಬಂದು ಅಲ್ಲಿ ಪೊಲೀಸರ ಜೊತೆ ಚರ್ಚೆಯನ್ನೂ ಮಾಡಿದರೆನ್ನಿ. 
 
ಎಫ್‌ಐಆರ್ ದಾಖಲು ಮಾಡುವ ಮುನ್ನವೇ, ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌, ಅಲ್ಲಿ ಮೊದಲು ದೂರು ದಾಖಲಾಗಿದ್ದ ಇಬ್ಬರು ಆರೋಪಿಗಳ ಜೊತೆ ನನ್ನ ಕಕ್ಷಿದಾರರಾದ ವೆಂಕಟರಾಮಸ್ವಾಮಿ ಸೇರಿದಂತೆ ಇನ್ನೂ ಮೂವರು ಕಾಂಗ್ರೆಸ್ಸಿಗರ ಹೆಸರನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಕೊಂಡರು. ಅವರ ಊರಿನಲ್ಲಿ ಹೊಸದಾಗಿ ಬಿಎಂಟಿಸಿ ಬಸ್‌ ಬಿಡಲಾಗಿತ್ತು. ಆ ನೂತನ ಬಸ್ಸಿನ ಉದ್ಘಾಟನೆಗೆ ಸಂಬಂಧಿಸಿದಂತೆ ಈ ಎರಡೂ ಪಕ್ಷಗಳ ಮುಖಂಡರ ನಡುವೆ ಜಗಳವಾಗಿದ್ದೇ ಈ ಕೊಲೆಗೆ ಕಾರಣ ಎಂಬುದನ್ನು ಅಲ್ಲಿಯವರ ಬಾಯಿಯಿಂದ ಕೇಳಿ ತಿಳಿದುಕೊಂಡ ಇನ್‌ಸ್ಪೆಕ್ಟರ್‌ ಅದನ್ನೂ ದಾಖಲಿಸಿಕೊಂಡರು. ಈ ಕೊಲೆಗೆ ಅದೇ ಕಾರಣ ಎಂದು ಅಲ್ಲಿಗೆ ಸಾಬೀತಾಯಿತು.
 
ಮೊದಲು ದಾಖಲಾಗಿದ್ದ ದೂರಿನಲ್ಲಿ ಇದ್ದ ಇಬ್ಬರ ಹೆಸರಿನಲ್ಲಿ ಈ ಮೂವರ ಹೆಸರು ಸೇರಿಸಿಕೊಳ್ಳಲು ಕಾರಣ ಬೇಕಿತ್ತಲ್ಲ! ಪೊಲೀಸರಿಗೆ ಸಾಕ್ಷಿದಾರರನ್ನು ಹುಟ್ಟುಹಾಕುವುದು ಕಷ್ಟದ ಕೆಲಸವೇ? ಅವರು ಈ ಪ್ರಕರಣದಲ್ಲೂ ಹಾಗೆಯೇ ಮಾಡಿದರು. ಕೋರ್ಟ್‌ನಲ್ಲಿ ಸಾಕ್ಷಿ ನುಡಿಯಲು ಇನ್ನಿಬ್ಬರು ಸಾಕ್ಷಿದಾರರನ್ನು ಸೃಷ್ಟಿಸಿದರು. ಆ ಸಾಕ್ಷಿದಾರರ ಪೈಕಿ  ಒಬ್ಬರು ಕೊಲೆಯಾದ ನಾರಾಯಣ ಸ್ವಾಮಿ ಅವರ ಸಹೋದರ ತ್ಯಾಗರಾಜ ಹಾಗೂ ಇನ್ನೊಬ್ಬರು ಕೃಷ್ಣಮೂರ್ತಿ.
 
ಇವರಿಬ್ಬರು ಈ ಕೊಲೆಗೆ  ಪ್ರತ್ಯಕ್ಷದರ್ಶಿಗಳು ಎಂಬುದನ್ನು ಸಾಬೀತು ಮಾಡಲು ಪೊಲೀಸರು ಒಂದು ಕಥೆಯನ್ನು ಹೆಣೆದಿದ್ದರು! ಅದೇನೆಂದರೆ, ಕೊತ್ತಂಬರಿ ಬೀಜ ತರಲು ಪಟ್ಟಣಕ್ಕೆ ಹೋದ ಅಣ್ಣ ತುಂಬಾ ಹೊತ್ತಾದರೂ ಮನೆಗೆ ಬರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಹುಡುಕಿಕೊಂಡು ತ್ಯಾಗರಾಜ ಹೊರಟರು. ದಾರಿಯಲ್ಲಿ ಸಿಕ್ಕ ಸ್ನೇಹಿತ ಕೃಷ್ಣಮೂರ್ತಿ ಅವರನ್ನೂ ಕರೆದುಕೊಂಡು ಹೋದರು. ಆಗ ನಾರಾಯಣಸ್ವಾಮಿ ಅವರನ್ನು ಈ ಆರೂ ಮಂದಿ ಸೇರಿ ಕೊಲೆ ಮಾಡುತ್ತಿದ್ದುದನ್ನು ಅವರು ನೋಡಿದರು. ನೋಡಿದ ಕೂಡಲೇ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದರು ಎಂಬುದು.
 
ಮೊದಲು ಎಫ್‌ಐಆರ್‌ ದಾಖಲು ಮಾಡಿಕೊಳ್ಳದಿದ್ದ ಪೊಲೀಸರು ಆನಂತರ ಅದನ್ನು ದಾಖಲು ಮಾಡಿಕೊಂಡಿದ್ದರು. ಎಲ್ಲರನ್ನೂ ಜೀವಾವಧಿ ಶಿಕ್ಷೆಗೆ ಗುರಿಪಡಿಸುವಲ್ಲಿ ಅವರು ಯಶಸ್ವಿಯೂ ಆಗಿ ತಾವು ಮಾಡಿದ ಕಾರ್ಯಕ್ಕೆ ಹೆಮ್ಮೆ ಪಟ್ಟುಕೊಂಡಿದ್ದರು!
 
ಆದರೆ...? ಕಳ್ಳರು ತಮ್ಮ ಕಳ್ಳತನದ ಬಗ್ಗೆ ಒಂದಲ್ಲ ಒಂದು ಸಾಕ್ಷ್ಯ ಅಥವಾ ಸುಳಿವು ಬಿಟ್ಟಿರುತ್ತಾರೆ ಎನ್ನುತ್ತಾರಲ್ಲ, ಇಲ್ಲೂ ಹಾಗೇ ಆಯಿತು. ಆದರೆ ಇಲ್ಲಿ ಹಾಗೆ ಸುಳಿವು ಬಿಟ್ಟದ್ದು ಕಳ್ಳರಲ್ಲ, ಬದಲಿಗೆ ಪೊಲೀಸರು ಎಂಬುದಷ್ಟೇ ವಿಶೇಷ! ನಮ್ಮ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ  ಪೊಲೀಸರು ಹೆಣೆದಿರುವ ಕಥೆಯ ಬಗ್ಗೆ ತಿಳಿದುಕೊಳ್ಳಲು ಹೆಚ್ಚುಹೊತ್ತು ಬೇಕಾಗಲಿಲ್ಲ. ಅವರು ಹೆಣೆದ ಕಥೆ ಹಾಗೂ ಪ್ರಾಸಿಕ್ಯೂಷನ್‌ ಪರ ವಕೀಲರು ಮಾಡಿದ ವಾದ ಯಾವುದರಲ್ಲೂ ತಿರುಳು ಇಲ್ಲ ಎಂಬುದನ್ನು ತಿಳಿದ ನ್ಯಾಯಮೂರ್ತಿಗಳು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
 
ನ್ಯಾಯಮೂರ್ತಿಗಳು ಗಮನಿಸಿದ ಕೆಲವು ಅಂಶಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದು ಹೀಗೆ... 
 
‘ಪಟ್ಟಣಕ್ಕೆ ಹೋದ ಅಣ್ಣ, ಸ್ವಲ್ಪ ಸಮಯದಲ್ಲಿ ವಾಪಸು ಬರಲಿಲ್ಲ ಎಂದು ಆತಂಕ ಪಟ್ಟು ಅವರನ್ನು ತಮ್ಮ ಹುಡುಕಿ ಹೋಗಲು ಅಣ್ಣನೇನು ಶಾಲೆಗೆ ಹೋಗುವ ಹುಡುಗನೇ? ಅದೂ ಹೋಗಲಿ ಎಂದರೆ ಅಣ್ಣ ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗಿರುವಾಗ ಕರೆ ಮಾಡುವುದನ್ನು ಬಿಟ್ಟು ಯಾರಾದರೂ ಹುಡುಕಿಕೊಂಡು ಹೋಗುತ್ತಾರೆಯೇ...? ಆದರೆ ಇಲ್ಲಿ ಅಣ್ಣ ನಾರಾಯಣ ಸ್ವಾಮಿ ಬರಲಿಲ್ಲ ಎಂದು ತಮ್ಮ ತ್ಯಾಗರಾಜ್‌ ಹುಡುಕಿಕೊಂಡು ಹೋಗಿದ್ದರು ಎಂಬುದಾಗಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ...
 
‘ಅಷ್ಟೇ ಅಲ್ಲ, ಯಾರೇ ಆಗಲಿ ತಮ್ಮ ಸಹೋದರನ ಕೊಲೆ ನಡೆಯುತ್ತಿದೆ ಎಂದಾಗ ಅದನ್ನು ತಪ್ಪಿಸಲು ಹೋಗುತ್ತಾರೋ ಇಲ್ಲವೇ ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಲು ಓಡುತ್ತಾರೋ? ಇಲ್ಲಿ ಅಣ್ಣನನ್ನು ಕಾಪಾಡುವ ಬದಲು ತಮ್ಮ ಪೊಲೀಸ್‌ ಠಾಣೆಗೆ ದೂರು ದಾಖಲಿಸಲು ಹೋಗಿದ್ದಾರೆ ಎಂದರೆ ಇದು ನಿಜ ಎಂದು ನಂಬಬೇಕೆ...?
 
‘ಇನ್ನೊಂದು ಅಂಶವೆಂದರೆ, ದೇವರಾಜ ಅವರು ಆರಂಭದಲ್ಲಿ ದೂರು ದಾಖಲು ಮಾಡಲು ಬಂದಾಗ ಪಿಎಸ್‌ಐ ರಮೇಶ್‌ ಅವರು ಠಾಣೆಯಲ್ಲಿದ್ದರು. ಪ್ರಾಸಿಕ್ಯೂಷನ್‌ ಪರ ವಕೀಲರು ಪ್ರಮುಖ ಸಾಕ್ಷಿಯಾದ ಈ ಪಿಎಸ್‌ಐ ಅವರ ವಿಚಾರಣೆಯನ್ನೇ ಮಾಡಿಲ್ಲ. ಇದಕ್ಕೆ ಕಾರಣ ದೇವರೇ ಬಲ್ಲ...!
 
‘ಬೆಳಿಗ್ಗೆ ದೂರು ದಾಖಲಾದ ತಕ್ಷಣ ಇನ್‌ಸ್ಪೆಕ್ಟರ್‌ ಅವರು ಅದರ ಎಫ್‌ಐಆರ್‌ ದಾಖಲು ಮಾಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ  ಸಲ್ಲಿಸಬೇಕಿತ್ತು. ಆದರೆ ಅದನ್ನು ಅವರು ಸಲ್ಲಿಸಿದ್ದು ರಾತ್ರಿ! ಅದೂ ಠಾಣೆಯ ಪಕ್ಕದಲ್ಲಿಯೇ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಇರುವಾಗ...!’
 
...ಈ ರೀತಿಯಾಗಿ ಪೊಲೀಸರು ಹಾಗೂ ಪ್ರಾಸಿಕ್ಯೂಷನ್‌ ವಿರುದ್ಧವಾದ ಒಂದೊಂದೇ ವಿಷಯವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ‘ಇವನ್ನೆಲ್ಲಾ ನೋಡಿದರೆ ಈ ನಾಲ್ವರು ನಿರಪರಾಧಿಗಳನ್ನು ಪೊಲೀಸರು ಸಿಕ್ಕಿಸಿಹಾಕಿರುವುದು ಕಂಡುಬರುತ್ತದೆ’ ಎಂದು ಹೇಳಿ ಅವರನ್ನು ಬಿಡುಗಡೆ ಮಾಡಿದರು.
 
ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎನ್ನುತ್ತದೆ ನಮ್ಮ ಕಾನೂನು. ಆದರೆ ಪೊಲೀಸರು ಮಾಡುವ (ಹೆಚ್ಚಿನ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ) ಎಡವಟ್ಟುಗಳಿಂದ ನಿರಪರಾಧಿಗಳಿಗೂ ಶಿಕ್ಷೆಯಾಗುತ್ತಿರುವುದು ಶೋಚನೀಯ. ಪ್ರಾಸಿಕ್ಯೂಷನ್‌ ಪರ ವಕೀಲರು ನೀಡುವ ಸುಳ್ಳು ದಾಖಲೆಗಳು, ಅವರು ಹೇಳುವ ಕಟ್ಟುಕಥೆಗಳೇ ಕೆಲವು ಸಂದರ್ಭಗಳಲ್ಲಿ ಕೋರ್ಟ್‌ನಲ್ಲೂ ನಿಜ ಎಂದು ಸಾಬೀತಾಗುವುದು ಇನ್ನೂ ವಿಷಾದಕರವಾದದ್ದು.  ಪೊಲೀಸರು ತಪ್ಪು ಮಾಡಿದರೂ ಅವರಿಗೆ ಹೆಚ್ಚೆಂದರೆ ಕೋರ್ಟ್‌ಗಳು ಛೀಮಾರಿ ಹಾಕುತ್ತವೆ ಅಷ್ಟೆ. ಅದನ್ನು ಬಿಟ್ಟರೆ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದಿಲ್ಲ. 
ಇನ್ನೊಂದೆಡೆ, ಕೆಳಹಂತದ ಕೋರ್ಟ್‌ಗಳು ನೀಡುವ ತೀವ್ರಸ್ವರೂಪದ ಶಿಕ್ಷೆಯನ್ನು ಹೈಕೋರ್ಟ್‌ನಲ್ಲಿ, ನಂತರ ಅಗತ್ಯ ಬಿದ್ದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಹ ವಕೀಲರನ್ನು ನೇಮಕ ಮಾಡಿಕೊಳ್ಳುವ ಶಕ್ತಿ ಎಷ್ಟು ಮಂದಿಗೆ ಇದೆ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಕಾಡುತ್ತದೆ.
 
ಸಾಮಾನ್ಯವಾಗಿ ಎರಡು ರಾಜಕೀಯ ಪಕ್ಷಗಳ ಜಟಾಪಟಿ ತೀವ್ರಸ್ವರೂಪ ಪಡೆದುಕೊಂಡಾಗ ಅದಕ್ಕೆ ಬಲಿಯಾಗುವವರು ಇನ್ನಾರೋ. ಇಂಥ ಪರಿಸ್ಥಿತಿಗಳಲ್ಲಿ ಪ್ರಭಾವಿ ರಾಜಕಾರಣಿಗಳ ಕೈಗೊಂಬೆಯಾಗಿ ಪೊಲೀಸರೂ ವರ್ತಿಸಬೇಕಾಗುತ್ತದೆ! ಪ್ರಕರಣ ಕೋರ್ಟ್‌ ಮೆಟ್ಟಿಲಿಗೆ ಹೋದಾಗ  ‘ಕಲ್ಲಪ್ಪ ಗುಂಡಪ್ಪ ಸೇರಿ ಮೆಣಸಪ್ಪನನ್ನು ಚಟ್ನಿ ಮಾಡಿದರು’ ಎನ್ನುವ ಗಾದೆಯ ಹಾಗೆ ಚಾಣಾಕ್ಷರು ತಪ್ಪಿಸಿಕೊಂಡು ಅಮಾಯಕರು ಬಲಿಯಾಗುತ್ತಾರೆ. ಈ ಪ್ರಕರಣವೂ ಹಾಗೆ ಆಗಲಿಲ್ಲ ಎನ್ನುವುದೇ ಸಮಾಧಾನ.
(ಲೇಖಕ ಹೈಕೋರ್ಟ್‌ ವಕೀಲ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.