ADVERTISEMENT

ಆಲ್ಕೊಹಾಲ್ ಕುಡಿವವರು ಉಳಿದರು!

ಎಂ.ಎನ್.ಯೋಗೇಶ್‌
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ಆಲ್ಕೊಹಾಲ್ ಕುಡಿವವರು ಉಳಿದರು!
ಆಲ್ಕೊಹಾಲ್ ಕುಡಿವವರು ಉಳಿದರು!   

ಮಂಡ್ಯ: ಪಾಂಡವಪುರ ಪಟ್ಟಣದಲ್ಲಿ ಈಚೆಗೆ ರೈತರ ರಾಷ್ಟ್ರಮಟ್ಟದ ಸಮಾವೇಶ ನಡೆಯಿತು. ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿತ್ತು. ಆದರೆ ಸಭೆ ಆರಂಭವಾದಾಗ ಸಂಜೆ 4 ಗಂಟೆಯಾಗಿತ್ತು. ವೇದಿಕೆಯ ಮುಂದೆ ಕುಳಿತಿದ್ದ ಮಹಿಳೆಯರು ‘ಹಾಲು ಕರೆದು ಡೇರಿಗೆ ಹಾಕಬೇಕು. ತಡವಾಗುತ್ತಿದೆ. ಹೋಗಲು ಬಿಡಿ’ ಎಂದು ಸಂಘಟಕರನ್ನು ಒತ್ತಾಯಿಸುತ್ತಿದ್ದರು. ‘ಅರ್ಧ ಗಂಟೆ ಕುಳಿತುಕೊಳ್ಳಿ’ ಎಂದು ಸಂಘಟಕರು ಕೈಮುಗಿದು ಮನವಿ ಮಾಡುತ್ತಿದ್ದರು.

ಸಾಹಿತಿ ದೇವನೂರ ಮಹಾದೇವ ಅವರು ಮಾತು ಮುಗಿಸಿದ ನಂತರ ಸ್ವರಾಜ್ ಇಂಡಿಯಾ ಪಕ್ಷದ ವರಿಷ್ಠ ಯೋಗೇಂದ್ರ ಯಾದವ್ ಮಾತಿಗೆ ಬಂದರು. ಅವರು ಹಿಂದಿಯಲ್ಲಿ ಮಾತು ಆರಂಭಿಸುತ್ತಿದ್ದಂತೆ ಮಹಿಳೆಯರೆಲ್ಲರೂ ಸಂಘಟಕರ ಮನವಿ ಧಿಕ್ಕರಿಸಿ ಹೊರ ನಡೆದರು. ನಂತರ ಮಾತಿಗಿಳಿದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ‘ಹಾಲು ಕರೆಯುವವರೆಲ್ಲ ಹೊರಟು ಹೋದರು. ಪೇಮೆಂಟ್ ಎಣಿಸುವವರು ಮಾತ್ರ ಇಲ್ಲಿ ಕುಳಿತಿದ್ದಾರೆ’ ಎಂದಾಗ ಸಭೆಯಲ್ಲಿ ನಗುವಿನ ಅಲೆ ಉಕ್ಕಿತು.

ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ‘ಹಾಲು ಕರೆಯುವವರು ಹೋದರು, ಅಲ್ಕೋಹಾಲ್ ಕುಡಿಯುವವರು ಇದ್ದಾರೆ’ ಎಂದಾಗ ಜನರು ಶಿಳ್ಳೆ ಹಾಕಿ ನಕ್ಕರು. ‘ಮತದಾನ ಪವಿತ್ರವಾದುದು. ಅದನ್ನು ಮತಧನ ಮಾಡಬೇಡಿ’ ಎಂದು ಪಟ್ಟಣ್ಣಯ್ಯ ಹೇಳಿದಾಗಲೂ ಜನ ಗೊಳ್ ಎಂದರು. ತಮಾಷೆಯಿಂದ ಇಡೀ ಸಭೆ ನಗುವಿನ ಅಲೆಯಲ್ಲಿ ತೇಲುತ್ತಿದ್ದಾಗ ವೇದಿಕೆಯಲ್ಲಿದ್ದ ರಾಷ್ಟ್ರ ಮಟ್ಟದ ಮುಖಂಡರು, ವಿದೇಶಿ ರೈತ ಪ್ರತಿನಿಧಿಗಳು ಮುಖಮುಖ ನೋಡಿಕೊಳ್ಳುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.