ADVERTISEMENT

ಗಾಂಜಾ ಬಿಡಿ, ಮದ್ಯ ಸೇವಿಸಿ!

ಎಚ್‌.ಪ್ರದೀಪ್‌ಕುಮಾರ್‌
Published 30 ಸೆಪ್ಟೆಂಬರ್ 2017, 19:30 IST
Last Updated 30 ಸೆಪ್ಟೆಂಬರ್ 2017, 19:30 IST

ಮಂಗಳೂರು: ‘ಕುಡಿಬೇಡಿ ಅಂತ ಎಲ್ಲಾ ಹೇಳ್ತಾರೆ. ನಾವು ಅದನ್ನೇ ಹೇಳ್ತೀವಿ. ಆದ್ರೆ, ಗಾಂಜಾ ಅಫೀಮು ಸೇವಿಸಿ ಆರೋಗ್ಯ ಹಾನಿ ಮಾಡಿಕೊಳ್ಳುವುದರ ಬದಲು ಮದ್ಯಪಾನ ಮಾಡಿ’ ಹೀಗೊಂದು ಸಲಹೆ ನೀಡಿದವರು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ.

ಮಂಗಳೂರಿನಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುವ ಭರದಲ್ಲಿ ಸಚಿವರು ಈ ರೀತಿ ಹೇಳಿಕೆ ಕೊಟ್ಟರು. ನಂತರ ಸಮರ್ಥಿಸುತ್ತಾ, ‘ಮದ್ಯಪಾನ ಅನ್ನೋದು ಇತ್ತೀಚಿನ ಸಂಸ್ಕೃತಿ ಅಲ್ಲ. ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ದೇವಾನುದೇವತೆಗಳೇ ಮದ್ಯ ಸೇವಿಸುತ್ತಿದ್ದರು. ಹಾಗೆಂದು, ನಕಲಿ ಮಾಲು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ, ಮದ್ಯ ಸೇವಿಸುವವರಿಗೆ ಸರ್ಕಾರ ಉತ್ತಮ ಮದ್ಯ ಒದಗಿಸುತ್ತಿದೆ’ ಎನ್ನುತ್ತಾ ಮುಗುಳ್ನಗೆ ಬೀರಿದರು.

‘ಸರ್ಕಾರದ ಬೊಕ್ಕಸ ತುಂಬಿಸುವ ಖಾತೆ ನಮ್ಮದು. ಅಬಕಾರಿ ಖಾತೆಯಿಂದಲೇ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಈ ಬಾರಿ ಸುಪ್ರೀಂ ಕೋರ್ಟ್‌ನ ಆದೇಶದಿಂದ ಆದಾಯ ಕಮ್ಮಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪತ್ರಿಕಾಗೋಷ್ಠಿ ಮುಗಿದ ಬಳಿಕ ಸಚಿವರು ಪತ್ರಕರ್ತರ ಜತೆಯೇ ಊಟಕ್ಕೆ ಕುಳಿತಿದ್ದರು. ಅಲ್ಲಿದ್ದ ಸುದ್ದಿ ವಾಹಿನಿಯೊಂದರಲ್ಲಿ ಸಚಿವರ ‘ಮದ್ಯದ’ ಹೇಳಿಕೆ ಬ್ರೇಕಿಂಗ್‌ ಸುದ್ದಿಯಾಗಿ ಬರುತ್ತಿತ್ತು. ಅದನ್ನು ನೋಡಿ ಬೆಚ್ಚಿ ಬಿದ್ದ ತಿಮ್ಮಾಪುರ ಅವರು, ‘ನಾನು ಆ ರೀತಿ ಹೇಳಿಕೆ ಕೊಟ್ಟಿಲ್ಲ. ದಯವಿಟ್ಟು, ಆ ಬ್ರೇಕಿಂಗ್‌ ಸುದ್ದಿಯನ್ನು ತೆಗೆಯಲು ಹೇಳಿ. ನನ್ನ ಹೇಳಿಕೆಯ ಒಳಾರ್ಥ ಅದಲ್ಲ. ನಿಜ ಹೇಳಿದರೆ ಇಂದು ಯಾರೂ ನಂಬಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.