ADVERTISEMENT

ಗೇರು–ರಿವರ್ಸ್ ಗೇರು ನಮ್ಗೊತ್ತು..!

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST

–ಡಿ.ಬಿ.ನಾಗರಾಜ

ವಿಜಯಪುರ: ‘ನಮ್‌ ಗಾಡಿ ಹೊಂಟೈತಿ. ಗೇರು–ರಿವರ್ಸ್‌ ಗೇರು ನಮ್ಗೂ ಗೊತ್ತೈತಿ. ಯಾವಾಗ ಎಷ್ಟನೇ ಗೇರ್ ಹಾಕ್ಬೇಕು. ಎಲ್ಲಿ ರಿವರ್ಸ್‌ ಗೇರು ಹಾಕ್ಬೇಕು ಎಂಬುದು ತಿಳಿದೈತಿ. ಎಲ್ಲೂ ರಿವರ್ಸ್ ಗೇರ್‌ ಹಾಕದಂಗ ಗಾಡಿನ ಚಾಲೂ ಮಾಡೋ ಛಾತಿನಾ ನಾವು ಕಲಿಯಕತ್ತೀವಿ...’

ಜೆಡಿಎಸ್‌ ಮುಖಂಡ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿರುವವರಲ್ಲಿ ಪ್ರಮುಖರಲ್ಲೊಬ್ಬರಾಗಿರುವ ಬಸವರಾಜ ಹೊರಟ್ಟಿ ಈಚೆಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ನೀಡಿದ ಖಡಕ್‌ ಉತ್ತರವಿದು.

ADVERTISEMENT

‘ವಿಧಾನಸೌಧದ ರಾಜಕಾರಣ ಮೀರಿಸುವ ರಾಜಕೀಯ ಮಠಗಳಲ್ಲಿ ನಡೆಯುತ್ತೆ. ನಮಗಿಂತ ಸ್ವಾಮೀಜಿಗಳಲ್ಲೇ ರಾಜಕಾರಣ ಹೆಚ್ಚಿದೆ. ಬಿಜೆಪಿ–ಕಾಂಗ್ರೆಸ್‌ನವರಂತೆ ಬಡಿದಾಡುತ್ತಾರೆ. ಅದರಲ್ಲೂ ವಿರಕ್ತರು–ವೀರಶೈವ ಸ್ವಾಮೀಜಿಗಳು ಎಣ್ಣೆ–ಸೀಗೆಕಾಯಿ ಇದ್ದಂತೆ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಲು ಕೆಲವರು ಹುನ್ನಾರ ನಡೆಸ್ತಾರೆ. ಇದಕ್ಕೆ ಹಲ ರಾಜಕಾರಣಿಗಳು ಬೆಂಬಲ ನೀಡಕತ್ತಾರ. ಇವಕ್ಕೆಲ್ಲ ನಾವು ಬಗ್ಗಲ್ಲ. ನಮ್ಗೂ ಸಾಕಾಗೈತಿ. ಈಗ ಇಟ್ಟಿರೋ ಹೆಜ್ಜೆನಾ ಹಿಂದೆ ತೆಗೆಯಲ್ಲ. ಬೇಕಿದ್ದರ ಅವರೇ ನಮ್ ಜತೆ ಹೆಜ್ಜೆ ಹಾಕಲಿ’ ಎಂದು ಹೊರಟ್ಟಿ ಪತ್ರಕರ್ತರ ಪ್ರಶ್ನೆಗಳಿಗೆ ಜವಾರಿ ಭಾಷೆಯಲ್ಲೇ ಉತ್ತರಿಸಿದರು.

***

ಮಿನಿಸ್ಟರ್ ಆದ್ರೆ ಬಿಯರ್ ಕುಡಿಯೋಕೂ ಟೈಮ್ ಸಿಗಲ್ಲ

–ವಿಜಯಕುಮಾರ್‌ ಸಿರಗನಹಳ್ಳಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿತ್ತು. ಸಂಪುಟ ಸೇರಲಿರುವ ಸಂಭವನೀಯ ಶಾಸಕರ ಹೆಸರು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು. ಅದೇ ದಿನ ಬೆಳಿಗ್ಗೆ ಮಾಧ್ಯಮಗೋಷ್ಠಿ ನಡೆಸಿದ ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರೊಬ್ಬರಿಗೆ ‘ನೀವು ಸಚಿವ ಸ್ಥಾನದ ಆಕಾಂಕ್ಷಿಯೇ’ ಎಂಬ ಪ್ರಶ್ನೆ ಮಾಧ್ಯಮ ಪ್ರತಿನಿಧಿಗಳಿಂದ ಎದುರಾಯಿತು. ‘ಇಲ್ಲ’ ಎಂದು ಉತ್ತರಿಸಿದರು. ಗೋಷ್ಠಿ ಮುಗಿದ ಬಳಿಕ ತಾವೇಕೆ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂಬುದನ್ನು ‘ಆಫ್ ದಿ ರೆಕಾರ್ಡ್’ ನಲ್ಲಿ ಅವರು ಬಿಚ್ಚಿಟ್ಟರು.

‘ಮಿನಿಸ್ಟರ್ ಆದ್ರೆ ಏನೇನು ಸಮಸ್ಯೆ ಇವೆ ಅನ್ನೋದನ್ನ ಹೇಳ್ತಿನಿ ಕೇಳಿ. ಹೆಂಡ್ತಿ, ಮಕ್ಕಳ ಜೊತೆ ಕಾಲ ಕಳೆಯೋಕೆ ಆಗಲ್ಲ. ಉಸ್ತುವಾರಿ ಇರೋ ಜಿಲ್ಲೆಯಲ್ಲಿ ಯಾವುದಾದ್ರು ಮಗು ಕೊಳವೆ ಬಾವಿಗೆ ಬಿದ್ರೆ ಇಡೀ ರಾತ್ರಿ ಅಲ್ಲೇ ಇರಬೇಕು. ಕೇಳಿದ ಕೆಲಸ ಮಾಡಿಕೊಡಲಿಲ್ಲ ಅಂದ್ರೆ ಕಾರ್ಯಕರ್ತರಿಂದ ನಿಷ್ಠುರ. ಅದೆಲ್ಲ ಹೇಗೋ ನಿಭಾಯಿಸೋಣ. ರಾತ್ರಿ ಬಿಯರ್ ಕುಡಿದು ನೆಮ್ಮದಿಯಾಗಿ ನಿದ್ರೆ ಮಾಡೋಣ ಅಂದ್ರೆ ಅದಕ್ಕೂ ಟೈಮ್ ಸಿಗಲ್ಲ’ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿದರು.

‘ಚಿಕ್ಕ ವಯಸ್ಸಿನ ಮಗಳಿದ್ದಾಳೆ, ಇನ್ನೊಂದು ಏಳೆಂಟು ವರ್ಷ ಆದ್ಮೇಲೆ ಹೆಂಡ್ತಿ–ಮಕ್ಕಳು ಒಟ್ಟಿಗೆ ಬೈಯೋಕೆ ಶುರು ಮಾಡ್ತಾರೆ. ಮನೇಲಿ ಇರೋದು ಕಷ್ಟ ಆಗುತ್ತೆ. ಆಗ ಮಂತ್ರಿ ಆದ್ರೆ ಟೈಂ ಪಾಸ್ ಆಗುತ್ತೆ’ ಎಂದೂ ನಕ್ಕರು.

‘ಈಗ ಅಬಕಾರಿ ಖಾತೆ ಸಿಕ್ಕಿದ್ರಂತೂ ಏನೂ ಲಾಭ ಇಲ್ಲ. ಈ ವರ್ಷದ ಲೈಸೆನ್ಸ್ ರಿನೀವಲ್ ಟೈಮ್ ಮುಗಿದೋಗಿದೆ. ಮತ್ತೆ ರಿನೀವಲ್ ಟೈಮ್ ಬರೋದ್ರಲ್ಲಿ ಅವ್ರು ಮಂತ್ರಿ ಆಗಿರಲ್ಲ. ಏನ್ ಪ್ರಯೋಜನ ಹೇಳಿ? ಅದ್ಕೆ ಕೊನೆಯ ಆರು ತಿಂಗಳಲ್ಲಿ ಮಂತ್ರಿಗಿರಿ ಸಹವಾಸ ಬೇಡಪ್ಪ’ ಎಂದರು.

‘ಸಚಿವ ಸ್ಥಾನ ಪಡೆಯೋಕೆ ಶಾಸಕರು ಕಷ್ಟ ಪಡ್ತಿದ್ರೆ, ಅದರಿಂದ ಏನೇನ್ ಸಮಸ್ಯೆ ಇದೆ ಅಂತ ಹೇಳ್ತಿರೋದು ನೀವೊಬ್ರೆ. ಬನ್ನಿ ಇದಿಷ್ಟನ್ನೂ ಆನ್ ದಿ ರೆಕಾರ್ಡ್ ಹೇಳಿ’ ಎಂದು ಮಾಧ್ಯಮ ಪ್ರತಿನಿಧಿಗಳು  ಒತ್ತಾಯಿಸಿದಾಗ ‘ಸುಮ್ನೆ ಬಿಟ್ಬಿಡ್ರಪ್ಪ ನನ್ನ’ ಅಂತ ಕೈ ಮುಗಿದು ಅಲ್ಲಿಂದ ಜಾಗ ಖಾಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.