ADVERTISEMENT

ಪ್ರಚೋದಿಸಬ್ಯಾಡ್ರೀ... ಇತ್ತ ಬರ್ರೀ...!

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2016, 19:30 IST
Last Updated 24 ಡಿಸೆಂಬರ್ 2016, 19:30 IST

ವಿಜಯಪುರ: ‘ನಮ್ಮ ಜನ ಸರಿಯಿದ್ದಾರೆ. ನಮಗೂ ಅವ್ರಿಗೂ ಯಾವ ತೊಂದರೇನೂ ಇಲ್ಲ... ಇಲ್ಲಿ ಪ್ರಚೋದಿಸುವವರದ್ದೇ ತೊಂದರೆ... ನೀವು ಮೊದಲು ಇತ್ತ ಬನ್ನಿ. ಅವ್ರೂ ಶಾಂತರಾಗ್ತಾರೆ. ಅವ್ರ ಸಮಸ್ಯೆ ಆಲಿಸೋದು ನಂಗೊತ್ತು...’

ಮುದ್ದೇಬಿಹಾಳ ಪಟ್ಟಣದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೂಹ ಮಾಧ್ಯಮದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ತಮ್ಮದೇ ಶೈಲಿಯಲ್ಲಿ ಗದರಿದ ಪರಿಯಿದು.

ಸಮಾರಂಭದ ಅಂತ್ಯದಲ್ಲಿ ಮುಖ್ಯಮಂತ್ರಿ ಭಾಷಣ ಆರಂಭಿಸಲು ಅನುವಾಗುತ್ತಿದ್ದಂತೆ ಜನಸ್ತೋಮದ ನಡುವಿನಿಂದ ಸಾಲ ಮನ್ನಾ... ಸಾಲ ಮನ್ನಾ... ಎಂಬ ಕೂಗು ಕೇಳಲಾರಂಭಿಸಿತು. ಇದು ಪುನರಾವರ್ತೆಯಾಗುತ್ತಿದ್ದಂತೆ ಮಾಧ್ಯಮದ ವಿಡಿಯೊ ಕ್ಯಾಮೆರಾ, ಫೋಟೊ ಕ್ಯಾಮೆರಾ ಅತ್ತ ತಿರುಗಿದವು. ಕೆಲವರು ಸಮೀಪ ತೆರಳಿ ಛಾಯಾಚಿತ್ರ ತೆಗೆಯಲು, ಚಿತ್ರೀಕರಣ ನಡೆಸಲು ಮುಂದಾಗುತ್ತಿದ್ದಂತೆ ಜನರ ಗದ್ದಲ ಹೆಚ್ಚಿತು.

ಇದು ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಯಾಯಿತು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಮೇಲಿನಂತೆ ಸಮೂಹ ಮಾಧ್ಯಮದವರ ಕಿವಿ ಹಿಂಡಿದರು. ಅವರ  ಮಾತಿಗೆ ಮನ್ನಣೆ ನೀಡಿದ ಕ್ಯಾಮೆರಾಗಳು ಮತ್ತೆ ಅವರತ್ತಲೇ ತಮ್ಮ ನೋಟ ಕೇಂದ್ರೀಕರಿಸಿದವು. ಆದರೂ ಜನರ ಕೂಗು ನಿಲ್ಲಲಿಲ್ಲ. ಇದರಿಂದ ಮುಖ್ಯಮಂತ್ರಿ ಮುಜುಗರಕ್ಕೀಡಾದರು.
-ಡಿ.ಬಿ.ನಾಗರಾಜ

*
ಕೊಳವೆಬಾವಿ ಕೊರೆಸಿ ಬಿಡೋಣ...
ಶಿವಮೊಗ್ಗ:
ಬರ ಪರಿಸ್ಥಿತಿ ಇರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೆ ₹ 60 ಲಕ್ಷ ಬಿಡುಗಡೆ ಮಾಡಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಈ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್‌ ಹರೀಶ್‌ ಕುಮಾರ್ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಕೇಶ್ ಕುಮಾರ್ ಸೂಚಿಸಿದರು. ಹಲವು ಗ್ರಾಮಗಳಲ್ಲಿ ಸಮಸ್ಯೆ ಇದ್ದು, ಎಲ್ಲ ಹಣದಲ್ಲೂ ಕೊಳವೆಬಾವಿ ಕೊರೆಸಲು ಕ್ರಿಯಾ ಯೋಜನೆ ಸಿದ್ಧಪಡಿಸುವುದಾಗಿ ಹರೀಶ್‌ ತಿಳಿಸಿದರು. 

ವರ್ಷಗಳ ಹಿಂದೆಯೇ ಕೊರೆಸಿದ ನೂರಾರು ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡದೆ, ಪೈಪ್‌ಲೈನ್‌ ಅಳವಡಿಸದೆ, ನಿರುಪಯುಕ್ತವಾಗಿರುವ ವಿಚಾರ ತಿಳಿದ ಸಿಇಒ ಕೆಂಡಾಮಂಡಲವಾದರು. ‘ಇರುವ ಕೊಳವೆಬಾವಿ ಉಪಯೋಗಿಸಿಕೊಳ್ಳದೆ ಹೊಸದಾಗಿ ಏಕೆ ಕೊರೆಸುತ್ತೀರಿ?  ಹಣ ಬಳಕೆಗೆ ನೀಡುವ ಆದ್ಯತೆಯನ್ನು ಉದ್ದೇಶ ಸಾಕಾರಕ್ಕೆ ಏಕೆ ನೀಡುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಹರೀಶ್, ‘ಸಾರ್‌, ಕೊಳವೆಬಾವಿ ಕೊರೆಸಿದಾಗ ನೀರು ಬಿದ್ದರೆ ಸಾಕು ಜನರಿಗೆ ಅರ್ಧ ನೆಮ್ಮದಿ ಸಿಗುತ್ತದೆ. ಇಂದಲ್ಲಾ ನಾಳೆ ನೀರು ಬಳಸಬಹುದಲ್ಲ ಅನ್ನೋ ಸಮಾಧಾನ ಮೂಡುತ್ತದೆ. ಹಾಗಾಗಿ, ನೀರು ಕೊಡುವುದಕ್ಕಿಂತ ಕೊಳವೆಬಾವಿ ಕೊರೆಸಲು ಹಣ ಖರ್ಚು ಮಾಡೋಣ’ ಎಂದರು.
ಅವರ ಉತ್ತರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರು, ಸಿಇಒ ತಲೆ ಸುತ್ತಿ ಬೀಳುವುದೊಂದೇ ಬಾಕಿ.
-ಚಂದ್ರಹಾಸ ಹಿರೇಮಳಲಿ

ADVERTISEMENT

*
ಸಾಹಿತಿ ಅಂತ ಯಾರ್ರೀ ಅಂದಿದ್ದು?
ಹಾಸನ:
‘ಸಾಹಿತಿ ಅಂತ ಯಾರ್ರೀ ಅಂದಿದ್ದು ನಿಮ್ಗೆ...’ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ  ಹೋಬಳಿ ಮಟ್ಟದ ಸಮ್ಮೇಳನದಲ್ಲಿ   ಕೇಳಿ ಬಂದ ಮಾತಿದು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಾಹಿತಿಯೊಬ್ಬರು, ‘ಕೊಳಕು ಮನಸ್ಸಿನ ಸಾಹಿತಿಗಳಿಂದ ಸೃಜನಾತ್ಮಕ ಬರಹಗಾರರಿಗೆ ಬೆಲೆಯಿಲ್ಲದಾಗಿದೆ. ಶ್ರವಣಬೆಳಗೊಳದ ಮಹತ್ವವನ್ನು ಸಮ್ಮೇಳನದ ಅಧ್ಯಕ್ಷರು ಸೊಗಸಾಗಿ ಬರೆದಿದ್ದಾರೆ’ ಎಂದು ಹೇಳುತ್ತಿದ್ದಂತೆ, ವೇದಿಕೆ ಹಿಂಭಾಗ ಕುಳಿತಿದ್ದ ಇಬ್ಬರು ಪಾನಮತ್ತರು ಎದ್ದು ನಿಂತು ‘ಶ್ರವಣಬೆಳಗೊಳ ಸುಪರ್ ಕಣ್ರೀ’ ಎಂದರು.

ಇವರ ಉತ್ಸಾಹಕ್ಕೆ ಮರುಳಾದ ಸಾಹಿತಿ ಮುಂದುವರೆದು, ‘ಆದರೆ ಅಧ್ಯಕ್ಷರು ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ಬೆಳೆಯಲು ಬಿಡುತ್ತಿಲ್ಲ. ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲದಾಗಿದೆ’ ಎಂದು ಬಿಟ್ಟರು.

ಈ ಮಾತು ಹೇಳಿದ್ದಷ್ಟೇ ತಡ ಅದೇ ಪಾನಮತ್ತರು ಎದ್ದು ನಿಂತು ‘ನಿಮ್ಮನ್ನ ಸಾಹಿತಿ ಅಂತ ಯಾರ್ರೀ ಅಂದಿದ್ದು, ಮಾನ ಮರ್ಯಾದೆ
ಏನೂ ಇಲ್ವಾ, ಕನ್ನಡದ ಬಗ್ಗೆ ಮಾತಾಡಂದ್ರೆ ಜಾತಿ ತರ್ತೀರಾ ?’ ಎಂದು ಜೋರಾಗಿ ಕೂಗಾಡಿ ಹೊರಟೇಬಿಟ್ಟರು. ಸಮಾರಂಭದಲ್ಲಿ ಆಸೀನರಾಗಿದ್ದ ಕಾಲೇಜು ವಿದ್ಯಾರ್ಥಿಗಳು ಕೂಡ ಅವರನ್ನೇ ಹಿಂಬಾಲಿಸಿದರು. ಕಾರ್ಯಕ್ರಮಕ್ಕೆ ಪತ್ರಕರ್ತರು ಮಾತ್ರ ಸಾಕ್ಷಿಯಾಗಬೇಕಾಯಿತು.
- ಕೆ.ಎಸ್‌.ಸುನಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.