ADVERTISEMENT

ಮೀನಿನ ಊಟ ಮಾಡ್ಸಿಯಪ್ಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

– ಚಿದಂಬರಪ್ರಸಾದ, ಡಿ.ಬಿ.ನಾಗರಾಜ

ಮಂಗಳೂರು: ಮಧ್ಯಾಹ್ನ 3 ಗಂಟೆ. ಮಂಗಳೂರಿನ ಎಕ್ಕೂರು ಹೊರಾಂಗಣ ಕ್ರೀಡಾಂಗಣದ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮುಖದಲ್ಲಿ ಅಂಥ ಉತ್ಸಾಹ ಕಾಣಿಸುತ್ತಿರಲಿಲ್ಲ. ಎಡೆಬಿಡದ ಕಾರ್ಯಕ್ರಮಗಳಿಂದ ಸುಸ್ತಾಗಿರಬಹುದು ಎಂದುಕೊಂಡವರೇ ಬಹಳ ಮಂದಿ.

ದೀಪ ಬೆಳಗಿಸಿ ಮಾತಿಗೆ ನಿಂತ ಪ್ರಮೋದ್‌, ತಮ್ಮ ಸುಸ್ತಿಗೆ ಕಾರಣವನ್ನು ತಿಳಿಸುತ್ತ, ಊಟ ಕೊಡಿಸದೆಯೇ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದ ಶಾಸಕರು ಮತ್ತು ಪಾಲಿಕೆ ಸದಸ್ಯರನ್ನು ಮಾತಿನಲ್ಲಿಯೇ ತಿವಿದರು.

ADVERTISEMENT

‘ಶಾಸಕ ಜೆ.ಆರ್‌. ಲೋಬೊ ಅವರು ಎರಡು ಗಂಟೆಗೆ ಇಲ್ಲಿಗೆ ಬರುವಂತೆ ನನ್ನನ್ನು ಕೇಳಿಕೊಂಡಿದ್ದರು. ಒಳ್ಳೆಯ ಮೀನಿನ ಊಟ ಕೊಡಿಸುವುದಾದರೆ ಬರುವುದಾಗಿ ಹೇಳಿದ್ದೆ. ಆದರೆ, ಇಲ್ಲಿಗೆ ಬಂದರೆ ಪಾಲಿಕೆ ಸದಸ್ಯ ಪ್ರವೀಣಚಂದ್ರ ಆಳ್ವ ಅವರು ಊಟ ಮಾಡುವುದಕ್ಕೂ ಬಿಡದೆ ಕಾರ್ಯಕ್ರಮಕ್ಕೆ ಎಳೆದುಕೊಂಡು ಬಂದಿದ್ದಾರೆ. ಪ್ರವೀಣಚಂದ್ರರನ್ನು ಜನ್ಮದಲ್ಲಿಯೇ ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದಾಗಲೇ ಸಚಿವರ ಮುಖ ಬಾಡಿದ್ದಕ್ಕೆ ನಿಜ ಕಾರಣ ಗೊತ್ತಾದುದು.

‘ಶಿಲಾನ್ಯಾಸ ಆಯ್ತಲ್ಲಪ್ಪ. ಇನ್ನಾದ್ರೂ ಒಳ್ಳೆಯ ಮೀನಿನ ಊಟಾ ಹಾಕಿಸ್ತೀರಾ’ ಎನ್ನುವ ಮೂಲಕ ತಮ್ಮ ಹೊಟ್ಟೆಯು ತಾಳ ಹಾಕುತ್ತಿರುವುದನ್ನು ಸಚಿವರು ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮ ಮುಗಿಯುವುದೇ ತಡ, ಶಾಸಕ ಲೋಬೊ ಅವರು ಸಚಿವರನ್ನು ಪ್ರವಾಸಿ ಮಂದಿರಕ್ಕೆ ಕರೆದೊಯ್ದರು. ಊಟ ಮುಗಿದ ನಂತರವೇ ಉಳಿದ ಕಾರ್ಯಕ್ರಮಗಳಿಗೆ ಸಚಿವ ಪ್ರಮೋದ್‌
ಅಣಿಯಾದದ್ದು.

‘ಹೊಳ್ಳಿ ಮಳ್ಳಿ ಅದ್ನೇ ಕೇಳ್ತೀರಲ್ರಪ್ಪಾ..!’
ವಿಜಯಪುರ:
‘ನೀವ್‌ ಮಾರಿ ಮುಂದ ಮೈಕ್‌ ಹಿಡಿಯಾಕ್‌ ಮೊದ್ಲಾ ವಿಷಯ ಏನ್‌ ಅಂತ ಹೇಳಿದ್ರೆ ಮಾತ್ರ ನಾ ಮಾತಾಡ್ತೀನಿ. ನಡುವೆ ಬೇರೆ ಕೇಳ್ಬಾರ್ದು...!’

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಸುದ್ದಿ ವಾಹಿನಿಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುವುದಕ್ಕೂ ಮುನ್ನ ವಿಧಿಸಿದ ಷರತ್ತಿದು.

ವಿಜಯಪುರದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಸಂತರ ಸಮಾವೇಶ, ಗೋಪ್ಯ ಸಭೆ ಆಯೋಜಿಸಲಾತ್ತು. ಜಿಗಜಿಣಗಿ ಅವರು ಇದರಲ್ಲಿ ಭಾಗಿಯಾಗಿ, ತಮ್ಮ ಬೆಂಬಲಿಗರ ಜತೆ ಸಭಾಂಗಣದಿಂದ ಹೊರ ಬರುತ್ತಿದ್ದಂತೆ ಕೆಲ ಮಾಧ್ಯಮ ಪ್ರತಿನಿಧಿಗಳು ಎದುರಾದರು. ಅವರೊಡನೆ ಮಾತು ಆರಂಭಕ್ಕೂ ಮುನ್ನವೇ ಜಿಗಜಿಣಗಿ ಮೇಲಿನ ಕರಾರು ಹಾಕಿದರು.

ಸಚಿವರ ಷರತ್ತಿಗೆ ಒಪ್ಪಿದ ಮಾಧ್ಯಮದವರು, ‘ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಗೆ ಸೇರ್ಪಡೆಯಾಗುವ ವಿಷಯ ತೀವ್ರ ಚರ್ಚೆಯಾಗುತ್ತಿದೆಯಲ್ಲಾ’ ಎಂದು ಪ್ರಶ್ನಿಸುತ್ತಿದ್ದಂತೆಯೇ, ‘ಯಪ್ಪಾ ಹೊಳ್ಳಿ ಮಳ್ಳಿ ಎಷ್ಟ್‌ ಸಲ ಅಂತ ಅದೇ ಪ್ರಶ್ನೆ ಕೇಳ್ತೀರಿ. ನಂಗೂ ಉತ್ತರ ಹೇಳಿ ಸಾಕಾಗೈತಿ. ಸುಮ್‌ ಸುಮ್ನೆ ನನ್ನನ್ನು ಇಲ್ಲದ ರಗಳೆಗೆ ಕೆಡವ್‌ ಬ್ಯಾಡ್ರಪ್ಪೋ’ ಎಂದು ಮಾಧ್ಯಮದವರಿಂದ ತಪ್ಪಿಸಿಕೊಂಡು ನಡೆದರು. ಸಚಿವರ ಪ್ರತಿಕ್ರಿಯೆಯನ್ನು ಕಂಡು ಅವರ ಜತೆಯಲ್ಲಿದ್ದ ಬೆಂಬಲಿಗರು ನಗೆಗಡಲಲ್ಲಿ ತೇಲಿದರು. ಪತ್ರಕರ್ತರು ಮಾತ್ರ ಬ್ರೇಕಿಂಗ್‌ ಸುದ್ದಿ ಸಿಗದೆ ಜೋಲು ಮೋರೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.