ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2016, 19:30 IST
Last Updated 26 ನವೆಂಬರ್ 2016, 19:30 IST

ಸಂಸಾರಿಯಾದೆ, ಪರೀಕ್ಷೆಗೆ ಕಳಿಸಿದೆ...
ದಾವಣಗೆರೆ:
ಸ್ವಾಮೀಜಿ ನಗುತ್ತಲೇ ಪತ್ರಕರ್ತರಿಗೆ ಕೈಮುಗಿದು ಸುದ್ದಿಗೋಷ್ಠಿಗೆ ಹಾಜರಾದರು. ‘ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳಿವೆ ಎಂಬುದು ನನಗೆ ಗೊತ್ತು. ಅವುಗಳಿಗೆಲ್ಲ ಉತ್ತರ ನೀಡುತ್ತೇನೆ. ಸಾವಕಾಶ ಕಾಯಿರಿ’ ಎಂದು ಕುಳಿತರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರದ ಶರಣ ಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ, ಮದುವೆ ಆದ ಮೇಲೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಕಾಣಿಸಿಕೊಂಡರು.
 
‘ಮದುವೆಯಾಗಿದ್ದರಿಂದ ಮಠದ ಸಂಪ್ರದಾಯಕ್ಕೆ ಧಕ್ಕೆಯಾಗಿಲ್ಲ. ಧರ್ಮ, ಶಾಸ್ತ್ರಕ್ಕೆ ಅನುಗುಣವಾಗಿ ಹಾಗೂ ಧಾರ್ಮಿಕ ಮುಖಂಡರ ಸಲಹೆ ಮೇರೆಗೆ ಮದುವೆಯಾಗಿದ್ದು’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.
 
‘ಸ್ವಾಮೀಜಿ ಸಂಸಾರಿಯಾದ ಮೇಲೆ ಮುಖದಲ್ಲಿ ನಗು ಹೆಚ್ಚಿದೆ. ಆದರೆ, ತಲೆ ಮೇಲಿನ ಪೇಟ ನಾಪತ್ತೆಯಾಗಿದೆ’ ಎಂಬ ಪತ್ರಕರ್ತರ ಕೀಟಲೆಗೆ, ‘ಅಂತಹ ವ್ಯತ್ಯಾಸವೇನೂ ಆಗಿಲ್ಲ. ಪೇಟ ತೊಳೆಯಲು ಹಾಕಿದ್ದೇನೆ ಅಷ್ಟೆ. ನಿಜ ಹೇಳ್ಲಾ, ಮದುವೆ ನಂತರ ಹೆಂಡತಿ ಮುಖ ನೋಡಲು ಆಗಿಲ್ಲ. ಅವರು ಸೀದಾ ಕೇರಳಕ್ಕೆ ಹೋದರು. ಅಲ್ಲಿ ಓದುತ್ತಿದ್ದಾರೆ; ಅವರಿಗೆ ಈಗ ಪರೀಕ್ಷೆ ಬೇರೆ’ ಎಂದು ಮುಖ ಸಪ್ಪಗೆ ಮಾಡಿಕೊಂಡರು.
-ಪ್ರಕಾಶ ಕುಗ್ವೆ
 
**
ಶಂಖದಿಂದಲೇ ಬೀಳಬೇಕು ‘ಮಾರ್ಗದರ್ಶನ’!
ಕಲಬುರ್ಗಿ: ‘ರೈತರ ಸಾಲ ಮನ್ನಾ ಮಾಡುವಂತೆ ಠರಾವು ಅಂಗೀಕರಿಸಿ ರಾಜ್ಯ ಸರ್ಕಾರಕ್ಕೆ ಕಳಿಸಿ’ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಮತ್ತು ಹಲವು ಸದಸ್ಯರು ಆಗ್ರಹಿಸಿದರೂ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಮೌನ ಮುರಿಯಲಿಲ್ಲ. 
 
  ಕೆಲ ಹೊತ್ತಿನ ನಂತರ ಬೇರೆ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯರೊಬ್ಬರು ‘ರೈತರ ಸಾಲ ಮನ್ನಾಕ್ಕೆ ಸರ್ಕಾರವನ್ನು ಕೋರುವ ಠರಾವು ಮಾಡಿ’ ಎಂದ ತಕ್ಷಣವೇ ತಲೆಯಾಡಿಸಿದ ಅಧ್ಯಕ್ಷರು ‘ಹೌದು, ಆ ಠರಾವು ಮಾಡಿ’ ಎಂದುಬಿಟ್ಟರು. ಮೊದಲು ಇದೇ ವಿಷಯ ಕುರಿತು ಒತ್ತಾಯಿಸಿದ್ದ ಅವರ ಪಕ್ಷದ ಸದಸ್ಯರು ‘ನಾವು ಹೇಳಿದ್ದು ಏನು?’ ಎಂಬಂತೆ ಮುಖಮುಖ ನೋಡಿಕೊಳ್ಳಲಾರಂಭಿಸಿದರು!
 
  ‘ಮೀಸಲಾತಿ ಮಹಿಮೆಯಿಂದ ಅವರು ಅಧ್ಯಕ್ಷರಾಗಿದ್ದಾರೆ. ಸಾಮಾನ್ಯ ಸಭೆಯಲ್ಲಿ ‘ಮಾರ್ಗದರ್ಶಕರು’ ಇರುವುದಿಲ್ಲ. ಯಾವ ನಿರ್ಣಯ ಕೈಗೊಳ್ಳಬೇಕು ಎಂಬುದು ಅವರಿಗೆ ಅಷ್ಟಾಗಿ ತಿಳಿಯದು. ಹೀಗಾಗಿ ತಿಳಿವಳಿಕೆ ಇರುವ ತಮ್ಮ ನಂಬಿಗಸ್ಥ ಸದಸ್ಯರೊಬ್ಬರು ಹೀಗೆ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಇದು ಅಲಿಖಿತ ಒಪ್ಪಂದದಂತೆ. ಬಹುತೇಕ ಕಡೆಗಳಲ್ಲಿ ಇದೇ ವ್ಯವಸ್ಥೆ ಇದೆ ಬಿಡಿ’ ಎಂದು ಸದಸ್ಯರೊಬ್ಬರು ಸಭೆಯ ನಂತರ ಗುಟ್ಟು ರಟ್ಟುಮಾಡಿದರು.
-ಗಣೇಶ ಚಂದನಶಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.