ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST

ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು
ಯಾದಗಿರಿ:
‘ಅಂಗವಿಕಲರಿಗೆ ತ್ರಿಚಕ್ರ ಸೈಕಲ್‌ ವಿತರಣೆ ಅದ ಬನ್ನಿ ಸಾರ್...’ ಎಂದು  ಪತ್ರಕರ್ತರಿಗೆ ನಗರಸಭೆ ಅಧ್ಯಕ್ಷರಿಂದಲೇ ಕರೆ ಬಂತು. ಎಂತಹ ಸಭೆ ಇದ್ದರೂ ಖುದ್ದಾಗಿ ಅಧ್ಯಕ್ಷರಿಂದ ಎಂದೂ ಪತ್ರಕರ್ತರಿಗೆ ಕರೆ ಬಂದಿರಲಿಲ್ಲ. ಪತ್ರಕರ್ತರು ದಡಬಡಾಯಿಸಿಕೊಂಡು  ಹರಕಲು ಡಿ.ಸಿ. ರಸ್ತೆ ದಾಟಿ ನಗರಸಭೆ ಅಂಗಳ ಸೇರಿದರು.

ಗರಂ ಆಗಿದ್ದ ಅಧ್ಯಕ್ಷರು ಇದ್ದ ಮೂರೇ ಮೂರು ತ್ರಿಚಕ್ರ ಸೈಕಲ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಛಾಯಾಗ್ರಾಹಕರಿಗೆ ಪೋಸು ನೀಡಿದರು. ‘ನಿಮಗೊಂದು ಮಸ್ತ್ ಸುದ್ದಿ ಅದ’ ಎನ್ನುತ್ತಾ ಸುದ್ದಿಗೋಷ್ಠಿ ಶುರುವಿಟ್ಟುಕೊಂಡರು.

‘ಜಿಲ್ಲಾಧಿಕಾರಿ ಖುಷ್ಬೂ ನಗರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಅಲವತ್ತುಕೊಂಡರು. ‘ಅದ್ಹೆಂಗೆ ಸಾಧ್ಯ?’ ಎಂಬ ಪತ್ರಕರ್ತರ ಪ್ರಶ್ನೆಗೆ ‘ನೋಡ್ರಿ ಸರ... ಡಿ.ಸಿ. ಯಾವುದೇ ಮಾಹಿತಿ ಕೊಡಲ್ಲ. ನಮ್ಮಿಂದಲೂ ಪಡೆಯೋಲ್ಲ. ಎಲ್ಲಿಗೂ ಕರೆಯೋಲ್ಲ. ಎಲ್ಲದಕ್ಕೂ ಪೌರಾಯುಕ್ತರನ್ನೇ ಕರೀತಾರೆ. ಪೌರಾಯುಕ್ತರು ಕೂಡ ನಗರಸಭೆ ಕಚೇರಿ ಬಿಟ್ಟು ಡಿ.ಸಿ. ಕಚೇರಿ ಕಾಯ್ಲಿಕ್ಕತ್ತಿದ್ದಾರೆ’ ಎಂದು ಒಂದೇ ಉಸುರಿಗೆ ದೂರಿದರು.  

‘ನಗರಸಭಾಧ್ಯಕ್ಷರು ಊರಲ್ಲಿಲ್ಲದಾಗ ನೀವು ತ್ರಿಚಕ್ರ ವಾಹನಗಳನ್ನು ವಿತರಿಸಿದ್ದು ಅವರ ಕೋಪಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗೆ ಹೇಳುವವರ್ಯಾರು?, ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು’ ಎಂದುಕೊಂಡು ಪತ್ರಕರ್ತರು ಒಳಗೊಳಗೇ ನಕ್ಕಿದ್ದು ಅಧ್ಯಕ್ಷರಿಗೆ ತಿಳಿಯಲಿಲ್ಲ. 
–ಮಲ್ಲೇಶ್ ನಾಯಕನಹಟ್ಟಿ

***
ಮೇಟಿ ಹೊರ ಮೀಟಿತು ನೋಟು ರದ್ದತಿ...!
ವಿಜಯಪುರ:
‘ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿ ನೋಟು ರದ್ದತಿ ಕಾರಣದಿಂದಲೇ ರಾಜೀನಾಮೆ ನೀಡಬೇಕಾಯ್ತು...’ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಪ್ರತಾಪಸಿಂಹ ಅವರ ಅಭಿಮತವಿದು.

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ‘ನೋಟು ಬದಲು– ದೇಶ ಮೊದಲು’ ಸಮಾರಂಭದಲ್ಲಿ ಬೃಹತ್ ಹೂವಿನ ಹಾರದಿಂದ ಸನ್ಮಾನಿತರಾಗಿ ಖಡ್ಗ ಪ್ರದರ್ಶಿಸಿದ ಬಳಿಕ, ಪ್ರಧಾನಿ ಅವರ ನೋಟು ರದ್ದತಿ ನಿರ್ಧಾರ ಸಮರ್ಥಿಸಿಕೊಳ್ಳಲು ಸಿಂಹ ಅವರು ನೀಡಿದ ಹಲವು ನಿದರ್ಶನಗಳಲ್ಲಿ ಇದೂ ಒಂದು.

‘ನೋಟು ರದ್ದಾಗಿದ್ದರಿಂದಲೇ ಮೇಟಿ ಸಚಿವ ಸ್ಥಾನದಿಂದ ಹೊರ ಮೀಟಿಸಿಕೊಳ್ಳಬೇಕಾಯ್ತು. ಒಂದು ವೇಳೆ ₹ 500, 1000ದ ನೋಟುಗಳು ಚಲಾವಣೆಯಲ್ಲಿದ್ದಿದ್ದರೆ, ಕೇಳಿದಷ್ಟು ಕೋಟಿ, ಕೋಟಿ ನಗದು ನೀಡಿ, ಅಶ್ಲೀಲ ಸಿ.ಡಿ. ಹೊರ ಬಾರದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಸರಿಯಾದ ಸಮಯಕ್ಕೆ ನೋಟ್‌ ಬಂದ್ ಆದವು.

ಮೇಟಿ ಕೇಳಿದಷ್ಟು ಕೋಟಿ ಕೊಡಲಾಗದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು’ ಎಂದು ಅವರು ವ್ಯಂಗ್ಯವಾಗಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದಂತೆ, ನೆರೆದಿದ್ದ ಅಪಾರ ಜನಸ್ತೋಮ ಕರತಾಡನದ ಸುರಿಮಳೆಗರೆಯುವ ಜತೆಯಲ್ಲೇ ನಗೆಗಡಲಲ್ಲಿ ಮುಳುಗಿತು.  
–ಡಿ.ಬಿ.ನಾಗರಾಜ                                                  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.