ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 21 ಮೇ 2016, 19:51 IST
Last Updated 21 ಮೇ 2016, 19:51 IST

ನಿಮ್ಮ ಪರಿಚಯ ಮಾಡ್ಕೊಳ್ಳಿ...!
ಬೆಂಗಳೂರು:
ಇತ್ತೀಚೆಗೆ ಬೆಂಗಳೂರಿನಲ್ಲಿ ‘ಆರ್ಟ್‌ ಆಫ್‌ ಗಿವಿಂಗ್’ ಸಂಘಟನೆಯ 3ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಹಿಸಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ನಿರೂಪಕರು ಸೇರಿದಂತೆ ವೇದಿಕೆ ಮೇಲಿದ್ದ ಅತಿಥಿಗಳು ಹತ್ತಾರು ಬಾರಿ ಸಚಿವರ ಹೆಸರನ್ನು ಉಲ್ಲೇಖಿಸಿ, ಗುಣಗಾನ ಮಾಡಿ ಮಾತನಾಡಿದ್ದರು.

ಕಾರ್ಯಕ್ರಮ ಮುಗಿಯಿತು. ಇನ್ನೇನು ಸಚಿವರು ವೇದಿಕೆ ಇಳಿದು ಹೊರಟರು ಎನ್ನುತ್ತಿದ್ದಂತೆಯೇ, ಕನ್ನಡದ ‘ಪ್ರತಿಷ್ಠಿತ’ ಸುದ್ದಿ ವಾಹಿನಿಯೊಂದರ ವರದಿಗಾರ್ತಿ ಸಚಿವರಿಂದ ಬೈಟ್‌ ಕೇಳಿದರು. ಸಚಿವರು ಪುನಃ ಹೇಳಿದ್ದನ್ನೇ ಹೇಳಿ ಹೊರಡಲು ಅನುವಾದರು. ಆಗ ಆ ವರದಿಗಾರ್ತಿ ‘ಸರ್‌ ನಿಮ್ಮ ಹೆಸರು ಮತ್ತು ಡೆಸಿಗ್ನೇಷನ್‌ ಹೇಳಿ’ ಎಂದುಬಿಟ್ಟರು!

ಆ ಕ್ಷಣ ಸಚಿವರು, ಸಂಘಟಕರು, ಬೆಂಬಲಿಗರಾದಿಯಾಗಿ ಅಲ್ಲಿದ್ದ ಎಲ್ಲರೂ ಅವಾಕ್ಕಾದರು. ಅವರಲ್ಲಿಯೇ ಕೆಲವರು ‘ಇರಲಿ ಹೊರಡಿ ಸರ್‌’ ಎನ್ನುತ್ತ ಮುಜುಗರದ ಸನ್ನಿವೇಶವನ್ನು ತಿಳಿಗೊಳಿಸಿದರು. ಅಲ್ಲಿ ನೆರೆದಿದ್ದ ಪತ್ರಕರ್ತರಲ್ಲಿ ಕೆಲವರು ‘ತಗೊಳ್ಳಪ್ಪಾ, ರಾತ್ರಿಯೆಲ್ಲಾ ರಾಮಾಯಣ ಕೇಳಿ ರಾಮ ಸೀತಾಗ ಏನಾಗಬೇಕು ಅಂದಂಗಾಯ್ತು. ಎಳೆ ನಿಂಬಿಕಾಯಿಯಿಂದ ಜ್ಯೂಸ್‌ ಮಾಡಾಕ್ಕೋದ್ರೆ ಇನ್ನೇನಾಯ್ತದೆ ನಡ್ರಿ’ ಎಂದು ಪಿಸುಗುಟ್ಟಿದರು.

ಬಿಬಿಎಂಪಿಯಲ್ಲಿ ತಬ್ಬಲಿ ಯಾರು?
ಬೆಂಗಳೂರು:
ಬಿಬಿಎಂಪಿಯಲ್ಲಿ ಈಚೆಗೆ ನಡೆದ  ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಗಲಾಟೆ ಮಾಡಿದ ಕಾರಣಕ್ಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ನಾಲ್ವರು ಬಿಜೆಪಿ ಸದಸ್ಯರನ್ನು ಅಮಾನತು ಮಾಡಲಾಗಿತ್ತು.  ಕೆಲ ದಿನಗಳ ಬಳಿಕ ಕೌನ್ಸಿಲ್‌ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು, ನಾಲ್ವರು ಸದಸ್ಯರ  ಅಮಾನತು ರದ್ದುಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು.

‘ನಾಯಕರಿಲ್ಲದೆ ನೀವು ಈಗ ತಬ್ಬಲಿಗಳಾಗಿದ್ದೀರಿ’ ಎಂದು ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ಛೇಡಿಸಿದರು. ಬಿಜೆಪಿ ಸದಸ್ಯರ ಒತ್ತಾಯಕ್ಕೆ ಮಣಿದು ಮೇಯರ್ ಅಮಾನತು ರದ್ದುಪಡಿಸಲು ಒಪ್ಪಿದರು. ಬಳಿಕ ಸಭೆಗೆ ಬಂದ ಪದ್ಮನಾಭ ರೆಡ್ಡಿ, ‘ನಾವು ತಬ್ಬಲಿಗಳಲ್ಲ. ನಮಗೆ ಜನರ ಬೆಂಬಲ ಇದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಇದೆ’ ಎಂದೂ ಹೇಳಿಕೊಂಡರು.

‘ಜೆಡಿಎಸ್‌ ಬೆಂಬಲ ಇಲ್ಲದಿದ್ದರೆ ನೀವು ತಬ್ಬಲಿಗಳಾಗುತ್ತೀರಿ’ ಎಂದು ಚುಚ್ಚಿದರು. ಅದಕ್ಕೆ ಮೇಯರ್, ‘ಯಾರು ತಬ್ಬಲಿಗಳು ಅಂತ ಮುಂದೆ ಗೊತ್ತಾಗುತ್ತೆ ನೋಡೋಣ’ ಎಂದರು. ಅದೇ ಹೊತ್ತಿಗೆ ವಿಧಾನಸೌಧದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ‘ನಗರದ ಹಿತ ಕಾಯುವ ಉದ್ದೇಶದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಈಗ ಮೈತ್ರಿ ಸಂಬಂಧ ಬಿಜೆಪಿ ಜತೆಗೆ ಮಾತುಕತೆ ನಡೆದಿರುವುದು ನಿಜ’ ಎಂದೂ ಒಪ್ಪಿಕೊಂಡರು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.