ADVERTISEMENT

ವೈಯಕ್ತಿಕ ಏನಂತ ಪ್ರಶ್ನಿಸಬೇಡ್ರೀ..!

ಡಿ.ಬಿ, ನಾಗರಾಜ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ವಿಜಯಪುರ: ‘ನಿಮ್ ಪ್ರಶ್ನೆಗೆ ಉತ್ತರ ಕೊಡ್ತೀನಿ,  ಆಮೇಲೆ ‘ವೈಯಕ್ತಿಕ ಕೆಲಸ’ ಏನಂತ ಪ್ರಶ್ನಿಸಬಾರದು...’ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ವಿಜಯಪುರ ನಗರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಿಸಿದ ಷರತ್ತು  ಇದು.
 
ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವ ಮೊದಲೇ ಮೇಲಿನಂತೆ ಷರತ್ತು ವಿಧಿಸಿದ ಪಾಟೀಲರು, ‘ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ವರ್ಷದ ಹಿಂದೆಯೇ ನನ್ನನ್ನು ಕೇಳಿದ್ದರು. ಸರ್ಕಾರ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಪೂರ್ಣಗೊಳ್ಳುವವರೆಗೆ ಹೊಸ ಜವಾಬ್ದಾರಿ ಬೇಡ ಎಂದು ನಾನು ಹೈಕಮಾಂಡ್‌ಗೆ ಹೇಳಿದ್ದೆ. ಆದರೆ ಈಗ ಹುದ್ದೆಗಾಗಿ ಲಾಬಿ ನಡೆಸುತ್ತಿದ್ದೇನೆ ಎಂದರೆ ನನ್ನ ಗೌರವ ಏನಾಗುತ್ತದೆ? ಹೈಕಮಾಂಡ್ ನನ್ನ ಮೇಲಿಟ್ಟಿರುವ ನಂಬಿಕೆ ಏನಾಗುತ್ತದೆ?’
 
‘ನಾನು ನವದೆಹಲಿಗೆ ಹೋಗಿದ್ದು ಒಂದೇ ದಿನ. ಅದೂ ವೈಯಕ್ತಿಕ ಕೆಲಸಕ್ಕಾಗಿ. ಖಾಸಗಿ ಹೋಟೆಲ್‌ನಲ್ಲಿ ಉಳಿದಿದ್ದೆ. ಆದರೆ ಮಾಧ್ಯಮದಲ್ಲಿ ಎಂ.ಬಿ. ಪಾಟೀಲ ಲಾಬಿ, ಮೂರು ದಿನ ನವದೆಹಲಿಯಲ್ಲಿ ಬೀಡು... ಎಂದೆಲ್ಲ ಸುದ್ದಿ ಬಿತ್ತರವಾಯ್ತು.
 
‘ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ, ನಾನು ಲಾಬಿ ನಡೆಸಲು ದೆಹಲಿಗೆ ಹೋಗಿರಲಿಲ್ಲ. ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ, ಈಗ ‘ವೈಯಕ್ತಿಕ ಕೆಲಸ’ ಏನು ಅಂತ ಪ್ರಶ್ನಿಸಬೇಡಿ’ ಎಂದು ಪತ್ರಕರ್ತರಿಗೆ ಟಾಂಗ್ ನೀಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.