ADVERTISEMENT

ಸುಟ್ಟು ಕರಕಲಾದವನ ನೇಣಿಗೆ ಏರಿಸಿದ್ದರು!

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST
ಎಂ.ವಿ.ರಮೇಶ್‌ ಜೋಯಿಸ್‌
ಎಂ.ವಿ.ರಮೇಶ್‌ ಜೋಯಿಸ್‌   

1997-98ರ ಅವಧಿ ಅದು. ವಕೀಲಿ  ವೃತ್ತಿಗೆ ಕಾಲಿಟ್ಟು ಒಂದೂವರೆ ವರ್ಷವಾಗಿತ್ತಷ್ಟೆ. ಆಗಲೇ ನನ್ನ ಸೀನಿಯರ್‌ ಜೊತೆ ಪ್ರಾಕ್ಟೀಸ್ ಬಿಟ್ಟು ಸ್ವತಂತ್ರವಾಗಿ ವೃತ್ತಿ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ನನ್ನ ಸೀನಿಯರ್‌ ನಡೆಸುತ್ತಿದ್ದುದು ಕೇವಲ ಸಿವಿಲ್ ಕೇಸುಗಳು.

ಅಪರಾಧ ಪ್ರಕರಣಗಳಲ್ಲಿ ವಾದಿ, ಪ್ರತಿವಾದಿ ಆಗಿದ್ದವರ ಸಿವಿಲ್ ವ್ಯಾಜ್ಯಗಳನ್ನೂ ಅವರು ಮುಟ್ಟುತ್ತಿರಲಿಲ್ಲ. ಇಂತಹ ಹಿನ್ನೆಲೆಯಲ್ಲಿ ಬಂದ ನಾನು ಅಂತಹ ಮಡಿವಂತಿಕೆ ತೋರದೆ, ಬಂದ ಕೇಸುಗಳನ್ನೆಲ್ಲ ನಡೆಸಲು ತೀರ್ಮಾನಿಸಿದ್ದೆ. 

ನನಗೆ ಗೊತ್ತಿಲ್ಲದಿದ್ದರೆ ಓದಿಕೊಂಡು, ಅನುಭವಸ್ಥರಿಂದ ತಿಳಿದುಕೊಳ್ಳುತ್ತಿದ್ದೆ. ಕೆಲ ವಕೀಲರು ತಮ್ಮ ಕೇಸುಗಳನ್ನು ನೋಡಿಕೊಳ್ಳಲು ಹೇಳುತ್ತಿದ್ದುದರಿಂದ ಕ್ರಿಮಿನಲ್‌ ಪ್ರಕರಣಗಳ ಮರ್ಮವೂ ತಿಳಿಯತೊಡಗಿತು.

ಒಂದು ದಿನ ವಕೀಲ ಮಿತ್ರರೊಬ್ಬರ ಕಚೇರಿಗೆ ಹೋಗಿದ್ದೆ. ಅಲ್ಲಿಗೆ ಬಂದ ತಾಯಿ-ಮಗಳು ತಮ್ಮ ಕೇಸಿನ ವಿಚಾರವಾಗಿ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಳ್ಳುತ್ತಾ ಕೂತೆ.  ಅವರು ಹೋದ ನಂತರ ನನ್ನ ಮಿತ್ರರು- ‘ನೋಡು ಈ ಕೇಸ್ ಓದಿ ನೋಡು... ಮರ್ಡರ್ ಟ್ರಯಲ್’ ಎಂದರು.  ಓದುವುದಕ್ಕೇನಂತೆ? ‘ಹ್ಞೂಂ’ ಅಂದೆ.

ಈ ಪ್ರಕರಣದ ವಿಚಾರಣಾ ದಿನಾಂಕ ನಿಗದಿಯಾದಾಗ ನನ್ನ ಈ ಮಿತ್ರ ಬಂದು ಪ್ರಕರಣದ ಫೈಲ್ ಕೊಟ್ಟು ‘ಈ ಕೇಸಿನ ಸಂಪೂರ್ಣ ಹೊಣೆ ನಿನ್ನದೇ...’ ಎಂದು ಹೇಳಿಬಿಡುವುದೇ? ಕೊಲೆ ಕೇಸು ಬೇರೆ. ‘ಉಸ್ಸಪ್ಪಾ’ ಎಂದು ಆತಂಕಗೊಂಡೆ.

ಆದರೂ ಕೇಸು ನಡೆಸಲು ಒಪ್ಪಿಕೊಂಡೆ. ಆದರೆ ಏಕಾಏಕಿ ಇವರು ನನಗೆ ಈ ಕೇಸನ್ನು ಏಕೆ ಕೊಡುತ್ತಿದ್ದಾರೆ ಎನ್ನುವುದು ತಿಳಿಯಲಿಲ್ಲ. ನಂತರ ತಿಳಿದದ್ದು ಇಷ್ಟೇ... ಅವರೂ ಈ ರೀತಿಯ ಕೊಲೆ ಕೇಸನ್ನು ಹಿಂದೆಂದೂ ನಡೆಸಿರಲಿಲ್ಲವೆಂದು! 

ಏನೋ ಉತ್ಸಾಹದಿಂದ ಒಪ್ಪಿಕೊಂಡಾಗಿಬಿಟ್ಟಿದೆ. ಈಗ ಕೈಚೆಲ್ಲುವಂತಿಲ್ಲ. ಹೀಗೆ ಮಾಡಿದರೆ ಕಕ್ಷಿದಾರರಿಗೆ ಅನ್ಯಾಯವಾಗುತ್ತದೆ ಎಂದು ಎಣಿಸಿ ಹೇಗಾದರೂ ಕೇಸನ್ನು ಗೆಲ್ಲಲೇಬೇಕು ಎಂದು ಪಣತೊಟ್ಟೆ. ಅಲ್ಲಿಂದ ಆರಂಭವಾಯಿತು ನನ್ನ ವೃತ್ತಿ ಜೀವನದ ಮೊದಲ ಕೊಲೆ ಪ್ರಕರಣ... ಅದು ‘ಸುಬ್ಬು ಮರ್ಡರ್‌ ಕೇಸ್‌’.
ಸುಬ್ಬು, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವ.

ಮಡದಿ, ಮಕ್ಕಳ  ಜೊತೆ ಸುಖಮಯ ಜೀವನ ನಡೆಸುತ್ತಿದ್ದವ. ಅದೇನು ಗ್ರಹಚಾರವೋ, ಕಾರ್ಖಾನೆಯಲ್ಲಿನ ನೌಕರರ ಸಂಘದ ಚುನಾವಣೆಗೆ ನಿಂತ. ಸೋತುಹೋದ. ಅವನ ಸಹೋದ್ಯೋಗಿ ಮಿತ್ರರು, ‘ಇದೇನ್ ಮಹಾ ಬಿಡೋ. ಮೊದಲನೆಯ ಬಾರಿ ನಿಂತಿರೋದು.

ಸೋತಿದ್ದೀಯ ಅಷ್ಟೆ,  ಹೆದರಬೇಡ. ಮುಂದಿನ ಬಾರಿ ಗೆದ್ದೇ ಗೆಲ್ತೀಯ’ ಎಂದು ಹುರಿದುಂಬಿಸಿದರು. ಸುಬ್ಬುಗೂ ಹೌದಲ್ವಾ ಎನ್ನಿಸಿತು. ಮತ್ತೆ ನಿಂತ, ಆಗಲೂ ಸೋತ.

‘ಇಲ್ ಸೋತ್ರೆ ಏನಾಯ್ತು. ಪುರಸಭೆಗೆ ನಿಂತ್ಕೊಂಡು ಒಂದು ಕೈ ನೋಡು’– ಕಪಿಗೆ ಹೆಂಡ ಕುಡಿಸಿದರು ಸ್ನೇಹಿತರು! ಸರಿ, ಅಲ್ಲೂ ನಿಂತ. ಜಯ ಒಲಿಯಲಿಲ್ಲ.

ಚುನಾವಣೆ ಹುಚ್ಚು ನೆತ್ತಿಗೇರಿತ್ತು. ಎಲ್ಲಿಯಾದರೂ ಗೆಲ್ಲಲೇಬೇಕೆಂಬ ಹಟ. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಬಂತು. ಅಲ್ಲೂ ಸ್ಪರ್ಧಿಸಿಬಿಟ್ಟ ಸುಬ್ಬು, ಆದರೆ ಅದೇ ಫಲಿತಾಂಶ! ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ. ಊಹ್ಞೂಂ... ಗೆಲುವು ಇವನ ಹತ್ತಿರ ಸುಳಿಯಲೇ ಇಲ್ಲ. ಆಗ ಚುನಾವಣೆಯ ಹುಚ್ಚು ತೀವ್ರವಾಗಿತ್ತು.  ಸ್ಪರ್ಧಿಸಲೇಬೇಕು. ಸ್ಪರ್ಧಿಸುತ್ತಲೇ ಇರಬೇಕು ಎನ್ನುವ ಕಿಚ್ಚು ಹತ್ತಿತು.

ಇದರ ಜೊತೆಗೆ, ಸುಬ್ಬು, ಚುನಾವಣೆ ಇಲ್ಲದ ವೇಳೆ ಇಸ್ಪೀಟ್‌್ ಆಡುವುದನ್ನು ರೂಢಿ ಮಾಡಿಕೊಂಡ. ರಾತ್ರಿ ಹಗಲು ಎನ್ನದೆ ಜಾಗ ಸಿಕ್ಕಲ್ಲಿ, ಎಲ್ಲೂ ಸಿಗದಿದ್ದರೆ ಕೊನೆಗೆ ತನ್ನ ಮನೆಯನ್ನೇ ಇಸ್ಪೀಟ್‌ ಅಡ್ಡ ಮಾಡಿಕೊಂಡ. ಚುನಾವಣೆ ಹಾಗೂ ಇಸ್ಪೀಟ್‌ ಹುಚ್ಚು ಅವನ ಆಸ್ತಿಪಾಸ್ತಿಯನ್ನೆಲ್ಲಾ ಕರಗಿಸಿಬಿಟ್ಟಿದ್ದವು.  ಇವನ ಚಟ ಬಿಡಿಸಲು ಹೆಂಡತಿ, ಮಗಳು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು.

ಇಂತಿಪ್ಪ ಸುಬ್ಬು, ಒಂದು ದಿನ ನಿಗೂಢವಾಗಿ ಸತ್ತುಹೋದ. ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಸುದ್ದಿಯಾಯಿತು. ಈ ಸಾವು ಪೊಲೀಸ್‌ ದಾಖಲೆಯಲ್ಲಿ ‘ನೇಣು ಹಾಕಿಕೊಂಡು ಆತ್ಮಹತ್ಯೆ’ ಎಂದು ಉಲ್ಲೇಖಗೊಂಡಿತು. ಅಲ್ಲಿಗೆ ಸುಬ್ಬುವಿನ ಒಂದು ಅಧ್ಯಾಯ ಮುಗಿಯಿತು.

***
ರಾಮ, ಸೋಮ, ಮಂಜ, ಹನುಮ ಈ ನಾಲ್ವರು ಮಹಾ ಖದೀಮರು. ಊರ ಹೊರವಲಯಗಳಲ್ಲಿ ಸರಕು ತುಂಬಿದ ಲಾರಿಗಳನ್ನು ತಡೆ ಹಾಕಿ ಚಾಲಕನನ್ನು ಥಳಿಸಿ, ಲಾರಿಯನ್ನು ಅಪಹರಿಸುವುದು ಅವರ ಕೆಲಸ. 

ಸುಬ್ಬು ಸತ್ತು ಸುಮಾರು ಆರು ತಿಂಗಳ ನಂತರ ಇವರು ಪೊಲೀಸರ ಕೈಗೆ ಸಿಕ್ಕಿಬಿದ್ದರು.  ಪೊಲೀಸರು ಎಲ್ಲ ‘ಪ್ರಯೋಗಗಳನ್ನು’ ಮಾಡಿ ವಿಚಾರಿಸಿದಾಗ ತಾವು ಲಾರಿ ದರೋಡೆಕೋರರು ಎಂದು ಬಾಯಿಬಿಟ್ಟರಲ್ಲದೆ ಭದ್ರಾವತಿಯಲ್ಲಿ ಕೊಲೆ ಮಾಡಿ ಬಂದಿರುವುದಾಗಿಯೂ ಹೇಳಿದರು.

ಆಗ ಪೊಲೀಸರು ಪೇಚಿಗೆ ಸಿಲುಕಿದರು. ಏಕೆಂದರೆ ಸುಬ್ಬುವಿನ ಸಾವು ಅಲ್ಲಿಯವರೆಗೆ ‘ಆತ್ಮಹತ್ಯೆ’ ಆಗಿತ್ತು. ಆದರೆ ಈ ನಾಲ್ವರು ತಾವು ಕೊಲೆ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದ ಕಾರಣ, ‘ಆತ್ಮಹತ್ಯೆ’ಯನ್ನು ‘ಕೊಲೆ’ ಎಂದು ದಾಖಲಿಸುವ ಅನಿವಾರ್ಯತೆ ಪೊಲೀಸರಿಗೆ ಬಂತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದರು. ‘ಸುಬ್ಬು ಖುದ್ದಾಗಿ ನೇಣು ಹಾಕಿಕೊಂಡಿದ್ದಾನೆ’ ಎಂದು ತೋರಿಸುತ್ತಿದ್ದ ಪೊಲೀಸ್‌ ದಾಖಲೆಯಲ್ಲೀಗ ‘ಸುಬ್ಬುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ನಂತರ ನೇಣು ಹಾಕಲಾಗಿದೆ’ ಎಂದು ತೋರಿಸಲಾಯಿತು.

ಈ ನಾಲ್ವರು ದರೋಡೆಕೋರರ ವಿರುದ್ಧ ಆರೋಪಪಟ್ಟಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದರು.  ಸುಬ್ಬುವಿನ ನಡವಳಿಕೆಯಿಂದ ಬೇಸತ್ತು ಹೋಗಿದ್ದ ಆತನ ಪತ್ನಿ ಹಾಗೂ ಮಗಳು  ಈ ನಾಲ್ವರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಅವರ ಹೆಸರನ್ನೂ ಅದರಲ್ಲಿ ಸೇರಿಸಲಾಯಿತು.

ಇದೇ ಪ್ರಕರಣದ ಫೈಲ್‌ ನನ್ನ ವಕೀಲ ಮಿತ್ರರಿಂದ ನನ್ನ ಬಳಿ ಬಂದಿತ್ತು. ಮೊದಲೇ ಹೇಳಿದ ಹಾಗೆ ಕೊಲೆ ಪ್ರಕರಣದ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲದವ ನಾನು. ಆದರೆ ಈ ಆರೂ ಮಂದಿಯನ್ನು ಕೊಲೆ ಆರೋಪದಿಂದ ಮುಕ್ತಗೊಳಿಸುವ ಜವಾಬ್ದಾರಿ ನನ್ನ ಮೇಲಿತ್ತು. ಆದರೆ ಹೇಗೆ ಅವರನ್ನು ರಕ್ಷಿಸುವುದು ಎಂದು ಆ ಕ್ಷಣದಲ್ಲಿ ಹೊಳೆಯಲಿಲ್ಲ. 

ಪೊಲೀಸರು ತಯಾರಿಸಿದ್ದ ಆರೋಪಪಟ್ಟಿಯ ದಾಖಲೆಗಳ ಪ್ರತಿ ಪುಟದಲ್ಲಿನ ವಿವರ ಪುನಃ ಪುನಃ ಓದಿದೆ. ನನ್ನ ದುರಾದೃಷ್ಟಕ್ಕೆ ಈ ನಾಲ್ವರೂ ಬೇರೊಂದು ಪ್ರಕರಣದಲ್ಲಿ ಬೇರೆ ಬೇರೆ ಊರಿನ ಜೈಲುಗಳಲ್ಲಿದ್ದರು. ಆ ಕ್ಷಣದಲ್ಲಿ ಅವರಿಂದಲೂ ನನಗೆ ಮಾಹಿತಿ ಸಿಗುವಂತಿರಲಿಲ್ಲ.  ನನ್ನಲ್ಲಿರುವ ‘ಪ್ರಾಸಿಕ್ಯೂಷನ್  ದಾಖಲಾತಿ’ಗಳ ಆಧಾರದ ಮೇಲಷ್ಟೇ ಅವರನ್ನು ಬಚಾವ್ ಮಾಡಬೇಕಿತ್ತು.

ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ಎಲ್ಲ ಸಾಕ್ಷಿದಾರರ ವಿಚಾರಣೆ ಮುಗಿದ ಮೇಲೆ ಸುಬ್ಬುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸಾಕ್ಷ್ಯ ನುಡಿಯಲು ಬಂದರು.

ಸುಬ್ಬುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದು ಹೌದು ಎಂಬುದನ್ನು ಪ್ರಾಸಿಕ್ಯೂಷನ್‌ ಪರ ವಕೀಲರು ಈ ವೈದ್ಯರ ಬಾಯಿಯಿಂದ ನುಡಿಸಿಬಿಟ್ಟರೆ ನನ್ನ ಕಕ್ಷಿದಾರರನ್ನು ನಿರಪರಾಧಿಗಳು ಎಂದು ಸಾಬೀತು ಪಡಿಸುವುದು ನನಗೆ ಕಷ್ಟವಾಗುತ್ತದೆ ಎಂದು ತಿಳಿದು ಸ್ವಲ್ಪ ಅಧೀರನಾದೆ. ಅದೇ ಚಿಂತೆಯಲ್ಲಿಯೇ ಮರಣೋತ್ತರ ಪರೀಕ್ಷೆಯ ವರದಿಯನ್ನು ಮತ್ತೆ ಮತ್ತೆ ಓದಿದೆ.

ಅಬ್ಬಾ...! ನನಗೆ ಬೇಕಾಗಿದ್ದು ಸಿಕ್ಕೇ ಬಿಟ್ಟಿತು. ‘ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ನೇಣು ಹಾಕಲಾಗಿದೆ’ ಎಂಬ  ಆರೋಪವನ್ನು ಬ್ರಹ್ಮ ಬಂದರೂ  ಸಾಬೀತು ಮಾಡುವುದು ಪ್ರಾಸಿಕ್ಯೂಷನ್‌ನಿಂದ ಸಾಧ್ಯವೇ ಇಲ್ಲ ಅನ್ನಿಸಿತು. ವೈದ್ಯರನ್ನು ಪಾಟಿಸವಾಲು ಮಾಡುವ ನನ್ನ ಸರದಿ ಬಂತು.

ವೈದ್ಯರು–ನನ್ನ ನಡುವೆ ಹೀಗೆ ಪ್ರಶ್ನೋತ್ತರ ನಡೆಯಿತು.
ನಾನು: ಯಾರನ್ನಾದರೂ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದರೆ ಕೊರಳಿನ ಮಣಿಗಂಟು ಮುರಿಯಬಹುದೇ?
ವೈದ್ಯ: ಇಲ್ಲ, ಸಾಧ್ಯವಿಲ್ಲ.

ನಾನು: ಹೀಗೆ ಸಾಯಿಸಿದ್ದರೆ ತಾವು ವರದಿಯಲ್ಲಿ ಹೇಳಿದಂತೆ ಕೊರಳಲ್ಲಿ ತರಚು ಗಾಯಗಳು ಆಗಬಹುದೇ?
ವೈದ್ಯ: ಇಲ್ಲ... ಅದೂ ಆಗಲ್ಲ.

ಇಷ್ಟರಲ್ಲಿಯೇ ನನಗೆ ಬೇಕಾದದ್ದು ಸಿಕ್ಕಿ ಹಿಗ್ಗಿ ಹೀರೇಕಾಯಿ ಆಗಿದ್ದೆ. ಆದರೆ ಆ ಖುಷಿಯನ್ನು ತೋರಿಸಿಕೊಳ್ಳುವಂತಿರಲಿಲ್ಲವಲ್ಲ. ಪ್ರಶ್ನೆ ಮುಂದುವರಿಸಿದೆ.
ನಾನು: ಯಾವುದೇ ವ್ಯಕ್ತಿ ನೇಣು ಹಾಕಿಕೊಂಡ ಮೇಲೆ ಪ್ರಾಣ ಹೋಗಲು ಎಷ್ಟು ಸಮಯ ಬೇಕಾಗುತ್ತದೆ?
ವೈದ್ಯ: ಎರಡರಿಂದ ಎರಡೂವರೆ ನಿಮಿಷ ಆಗಬಹುದು.

ನಾನು: ಈ ಅವಧಿಯಲ್ಲಿ ಕೊರಳ ಮಣಿಗಂಟು
ಮುರಿಯುವ ಸಾಧ್ಯತೆ ಇದೆಯೇ? ತರಚು ಗಾಯ ಆಗಬಹುದೇ?
ವೈದ್ಯ: ಹೌದು, ಮಣಿಗಂಟು ಮುರಿಯಬಹುದು. ತರಚು ಗಾಯಗಳೂ ಆಗುವ ಸಾಧ್ಯತೆ ಇದೆ. ಅದು ನೇಣು ಹಾಕಿಕೊಳ್ಳಲು ಉಪಯೋಗಿಸಿದ ಹಗ್ಗದ ಮೇಲೆ ಅವಲಂಬಿತವಾಗುತ್ತದೆ.

ಇಷ್ಟಾದ ಮೇಲೆ ನಾನು ‘ಸರಿ. ನೇಣು ಹಾಕಲಾಗಿದೆ ಎಂದಿರುವ ಹಗ್ಗ ಕೊಡಿ’ ಎಂದು ಪ್ರಾಸಿಕ್ಯೂಷನ್ ಪರ ವಕೀಲರನ್ನು ಕೇಳಿದೆ. ಹಗ್ಗ ಪೊಲೀಸರ ಬಳಿ ಇದ್ದರಲ್ಲವೇ ಕೊಡುವುದು! ಕಥೆ ಕಟ್ಟುವ ಭರದಲ್ಲಿ ಹಗ್ಗ ತರಲು ಪೊಲೀಸರು ಮರೆತಿದ್ದರು. ಇದನ್ನು ನಾನು ಕೋರ್ಟ್‌ ಗಮನಕ್ಕೆ ತಂದೆ.

ಪ್ರಶ್ನೆ ಮುಂದುವರಿಸುತ್ತಾ, ‘ಡಾಕ್ಟ್ರೇ, ಸುಬ್ಬುವಿನ ಕೊರಳ ಮಣಿಗಂಟು ಮುರಿದಿರುವುದು ಹಾಗೂ ಕುತ್ತಿಗೆ ಮೇಲಿನ ತರಚು ಗಾಯಗಳು ಸುಬ್ಬು ಜೀವಂತವಿದ್ದಾಗಲೇ ಆಗಿದ್ದಷ್ಟೆ’ ಎಂದೆ. ಅದಕ್ಕೆ ಅವರು ‘ಹೌದು’ ಎನ್ನುತ್ತಿದ್ದಂತೆಯೇ ನನ್ನ ಕಕ್ಷಿದಾರರ ಬಿಡುಗಡೆ ಖಾತ್ರಿಯಾಗಿತ್ತು.

ಏಕೆಂದರೆ ಅವನು ಜೀವಂತ ಇರುವಾಗಲೇ ಇದು ಆಗಿದ್ದರೆ, ಆತನೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ಸಾಬೀತಾಗುವಂತಿತ್ತು, ಅಲ್ಲಿ ಉಸಿರುಗಟ್ಟಿಸಿ ಸಾಯಿಸುವ ಪ್ರಶ್ನೆಯೇ ಇರಲಿಲ್ಲ.

ಇಷ್ಟೇ ಸಾಕಾಯಿತು ನನಗೆ.  ಇದನ್ನೇ ಕೋರ್ಟ್‌ನಲ್ಲಿ ಸಾಬೀತು ಮಾಡಿದೆ. ಆದ್ದರಿಂದ ಎಲ್ಲರನ್ನೂ ಕೊಲೆ ಆರೋಪದಿಂದ ನ್ಯಾಯಾಧೀಶರು ಮುಕ್ತಗೊಳಿಸಿದರು. ಅಲ್ಲಿಗೆ ಪ್ರಕರಣ ಸುಖಾಂತ್ಯವಾಯಿತು.

ನನ್ನ ಕಕ್ಷಿದಾರರನ್ನು ಬಿಡಿಸಿದ ಖುಷಿಯಲ್ಲಿ ತೇಲುತ್ತಿದ್ದೆ ನಾನು. ಆದರೆ ಒಂದು ಪ್ರಶ್ನೆ ಕಾಡುತ್ತಿತ್ತು. ಈ ಕೇಸನ್ನು ಗೆಲ್ಲಲೇಬೇಕು ಎಂಬ ಹಟದಲ್ಲಿ ಸಾಕಷ್ಟು ಅಧ್ಯಯನ ನಡೆಸಿದ್ದ ನನಗೆ ಎಲ್ಲೋ ಎಡವಟ್ಟು ನಡೆದಿದೆ ಎನ್ನುವುದು ತಿಳಿದಿತ್ತು. ಆದರೆ ಕೇಸು ಮುಗಿದಿದ್ದರಿಂದ ಆ ಬಗ್ಗೆ ಅಷ್ಟೆಲ್ಲಾ ತಲೆಕೆಡಿಸಿಕೊಂಡಿರಲಿಲ್ಲ.

ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡ ವರ್ಷಗಳ ನಂತರ ಮರಣೋತ್ತರ ಪರೀಕ್ಷೆ ವರದಿ ನೀಡಿದ್ದ ವೈದ್ಯರು ನನಗೆ ಸಿಕ್ಕರು. ಸುಮ್ಮನೇ ಅವರನ್ನು ಮಾತಿಗೆಳೆದು, ಈ ಕೇಸನ್ನು ನೆನಪಿಸಿದೆ. ‘ಈಗ ಕೇಸು ಮುಗಿದಿದೆ ಬಿಡಿ.

ನೀವು ಏನೇ ಹೇಳಿದರೂ ಅದ್ಯಾವುದೂ ಈ ಕೇಸಿನ ಮೇಲಾಗಲಿ, ನನ್ನ-ನಿಮ್ಮ ಮೇಲಾಗಲಿ ಪರಿಣಾಮ ಬೀರುವುದಿಲ್ಲ. ಸುಮ್ಮನೆ ಸಂದೇಹ ಪರಿಹರಿಸಿಕೊಳ್ಳುತ್ತಿದ್ದೇನೆ ಅಷ್ಟೆ.

ಸುಬ್ಬುವಿನ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂಬಂತೆ ನೀವು ಮರಣೋತ್ತರ ಪರೀಕ್ಷಾ ವರದಿ ಕೊಟ್ಟಿದ್ದಿರಲ್ಲ, ನಿಜವಾಗಿ ನಡೆದದ್ದು ಏನು’ ಎಂದೆ. ಅದಕ್ಕೆ ಅವರು, ‘ನಿಜ ಹೇಳಲಾ? ನಾನು ಸುಬ್ಬುವನ್ನು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನೋಡಿರಲಿಲ್ಲ,

ಬದಲಿಗೆ ನಾನು ಅವನ ಶವ ನೋಡಿದ್ದಾಗ ಅದು ಹಾಸಿಗೆಯ ಮೇಲೆ ಸುಟ್ಟು ಕರಕಲಾಗಿ ಬಿದ್ದಿತ್ತು’ ಎಂದರು! ಅಂದರೆ ಅವನನ್ನು ಕೊಲೆ ಮಾಡಿ ಸುಟ್ಟುಹಾಕಲಾಗಿತ್ತು. ಆದರೆ ನಿಜ ಹೊರಬರುವ ಮುಂಚೆಯೇ ಪೊಲೀಸರು ಅದಕ್ಕೆ ಆತ್ಮಹತ್ಯೆಯ ಲೇಪ ಹಚ್ಚಿಬಿಟ್ಟಿದ್ದರು.

ಇದಾದ ಕೆಲ ತಿಂಗಳ ನಂತರ ನನಗೆ ಗಾಳಿ ಸುದ್ದಿ ಸಿಕ್ಕಿತು. ಅದೇನೆಂದರೆ ಸುಬ್ಬು ಎಲ್ಲ ಆಸ್ತಿಪಾಸ್ತಿಯನ್ನು ತನ್ನ ಚಟಗಳಿಂದಾಗಿ ತಿಂದು ತೇಗಿದ್ದ. ಸಂಸಾರ ಸರಿದೂಗಿಸಲು ಹೆಂಡತಿ ಬೇರೆಯದ್ದೇ ಹಾದಿ ಹಿಡಿಯುವ ಅನಿವಾರ್ಯತೆ ಉಂಟಾಯಿತು. ಅದಕ್ಕೂ ಆತ ಅಡ್ಡಗಾಲು ಹಾಕಿದ. ಇದರಿಂದ ಬೇಸತ್ತು ಹೋದ ಆಕೆ ತನ್ನ ಮಗಳ ಜೊತೆಗೂಡಿ ಈ ನಾಲ್ವರ ಸಹಾಯ ಪಡೆದು ಕೊಲೆ ಮಾಡಿಸಿದ್ದಾಳೆ. ಹೀಗೆ ಏನೇನೋ...

ಆದರೆ ಕೇಸು ಮುಗಿದು ಹೋಗಿದೆಯಲ್ಲ. ಈ ಗಾಳಿಸುದ್ದಿಗಳು ಸುಳ್ಳೋ ನಿಜವೋ ಎಂದು ಪುನಃ ತನಿಖೆ ಮಾಡುವವರಾರು? ಅಂತೂ ವೈದ್ಯರು ನೀಡಿದ್ದ ವರದಿಯಲ್ಲಿನ ಚಿಕ್ಕ ಸುಳಿವಿನ ಆಧಾರದ ಮೇಲೆ ಎಲ್ಲರನ್ನೂ ಬಚಾವ್‌ ಮಾಡಿದ್ದ ಖುಷಿಯಲ್ಲಿ ನಾನಿದ್ದೆ ಅಷ್ಟೆ.
(ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT