ADVERTISEMENT

ಹಿಂದುತ್ವವಾದ ಘಟಸರ್ಪ

ವೈ.ಗ.ಜಗದೀಶ್‌
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST
ಚಿತ್ರ: ಆನಂದ ಬಕ್ಷಿ
ಚಿತ್ರ: ಆನಂದ ಬಕ್ಷಿ   

*ಧರ್ಮಸಂಸತ್‌ ಬಗ್ಗೆ ನಿಮ್ಮ ಅಭಿಪ್ರಾಯ?
ಧರ್ಮ ಸಂಸತ್‌ ವಿಶ್ವ ಹಿಂದೂ ಪರಿಷತ್ತಿನ (ವಿ.ಹಿಂ.ಪ) ಭಾಗ. ಧರ್ಮ ಸಂಸತ್‌ ನಿರ್ಣಯಗಳನ್ನು ಗಮನಿಸಿದರೆ ಸನಾತನ ವಾದದ ವಿಜೃಂಭಣೆಯಷ್ಟೇ ಅಲ್ಲಿನ ಮೊದಲ ಆದ್ಯತೆಯಾಗಿತ್ತು. ರಾಮಮಂದಿರ ನಿರ್ಮಾಣ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದರೆ ಮಾತ್ರ ಧರ್ಮಸಂಸತ್‌ ಸಮಾವೇಶ ಸಾರ್ಥಕವಾದಂತೆ ಎಂದು ಪಾಲ್ಗೊಂಡವರು ಹೇಳಿದ್ದಾರೆ. ಹಿಂದೂ ಭಾವನೆಗಳನ್ನು ಒಗ್ಗೂಡಿಸಿ, ಮತಬ್ಯಾಂಕ್‌ ಕ್ರೋಡೀಕರಣಕ್ಕೆ ಧರ್ಮ ಸಂಸತ್‌ ಕಾರ್ಯನಿರ್ವಹಿಸುತ್ತಿದೆ ಎಂಬ ಮಾತುಗಳನ್ನೂ ಆಡಿದ್ದಾರೆ. ಧರ್ಮಸಂಸತ್‌ ಸೀಮಿತ ನೆಲೆಯಲ್ಲಿ ಚಿಂತಿಸಿರುವುದು ಸ್ಪಷ್ಟ. ಈ ದೇಶದ ಬಹುಸಂಖ್ಯಾತರ ನೋವು, ಸಂಕಷ್ಟಗಳ ವಿಷಯ ಅಲ್ಲಿ ಚರ್ಚಿತವಾಗಲಿಲ್ಲ.

*ರಾಮಮಂದಿರ ನಿರ್ಮಾಣ ಆಗಲೇಬೇಕು ಎಂದು ಹೇಳಿದ್ದಾರಲ್ಲ?
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟದಿರುವುದು ಈ ದೇಶದ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ನಾಯಕರು ಹೇಳಿದ್ದಾರೆ. ದೇಶದಲ್ಲಿ ಸಹಸ್ರಾರು ರಾಮಮಂದಿರಗಳು ಇವೆ. ಒಂದು ರಾಮಮಂದಿರ ಕಡಿಮೆಯಾದರೆ ರಾಮನ ಗೌರವಕ್ಕೆ ಚ್ಯುತಿಬರುವುದಿಲ್ಲ. ಮಂದಿರ ಕಟ್ಟುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದೇ ಜನರನ್ನು ದಾರಿ ತಪ್ಪಿಸುವ ತಂತ್ರ. ರಾಮಮಂದಿರ ಕಟ್ಟುವುದೇ ಆದಲ್ಲಿ ಭ್ರಾತೃತ್ವ, ಸಾಮರಸ್ಯ, ಸಹಬಾಳ್ವೆಯ ಸಂಕೇತವಾಗಿ ಕಟ್ಟಬೇಕು. ದ್ವೇಷ, ಹಿಂಸೆ, ಸೇಡಿನ ನೆಲೆಯಲ್ಲಿ ನಿರ್ಮಾಣವಾಗಬಾರದು.

*ಸಂವಿಧಾನ ಬದಲಾವಣೆ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾದಲ್ಲ?
ಸಂವಿಧಾನದ ಬಗ್ಗೆ ಪೇಜಾವರ ಶ್ರೀಗಳ ಅಪಸ್ವರ ಕುಚೇಷ್ಟೆಯ ಮಾತು ಅಂತ ಲಘುವಾಗಿ ತೆಗೆದುಕೊಳ್ಳಬಾರದು. ಸನಾತನವಾದಿಗಳಿಗೆ ನಮ್ಮ ಸಂವಿಧಾನದ  ಬಗ್ಗೆ ನಂಬಿಕೆ ಇಲ್ಲ. ಸನಾತನ ತತ್ವಗಳ ನೆಲೆಗಟ್ಟಿನಲ್ಲಿ ಸಂವಿಧಾನ ರಚನೆಯಾಗಿಲ್ಲ ಎಂಬ ಕಾರಣಕ್ಕೆ ‘ಸನಾತನ ಧರ್ಮ ತತ್ವದ ನೆಲೆಗಟ್ಟಿನಲ್ಲಿ ಇರುವಂತಹ ಸಂವಿಧಾನ ಬೇಕು’ ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ಸಂವಿಧಾನಕ್ಕಿಂತ ಧರ್ಮಗ್ರಂಥವೇ ಹೆಚ್ಚು ಎಂದು ಪೇಜಾವರ ಶ್ರೀಗಳು ಈ ಹಿಂದೆ ಪ್ರತಿಪಾದಿಸಿದ್ದರು. ಧರ್ಮ ನಿರಪೇಕ್ಷ, ಸಮಾನತೆ, ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸಂವಿಧಾನ ಸಹಿಸಲು ಸನಾತವಾದಿಗಳಿಗೆ ಸಾಧ್ಯವಿಲ್ಲ.

ADVERTISEMENT

*ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚಿಸಿದ್ದಲ್ಲವಂತೆ‌!
ಸಂವಿಧಾನವನ್ನು ಅಂಬೇಡ್ಕರ್‌ ಒಬ್ಬರೆ ರಚಿಸಿಲ್ಲ ಎಂಬ ಮಾತಿನಲ್ಲಿ ಸಂವಿಧಾನದ ಬಗ್ಗೆ ಅವರಿಗೆ ಅಸಹನೆ ಇರುವುದು ಗೋಚರಿಸುತ್ತದೆ. ಸಂವಿಧಾನ ಕರಡು ರಚನಾ ಸಮಿತಿಯಲ್ಲಿದ್ದ ಅನೇಕ ಮೇಧಾವಿಗಳು ಅವರದ್ದೇ ಆದ ಕಾರಣಗಳಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಆಗಲಿಲ್ಲ. ಅಂತಹ ಹೊತ್ತಿನಲ್ಲಿ ಗುರುತರ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಸಂವಿಧಾನ ರಚಿಸಿದ ಶ್ರೇಯ ಅಂಬೇಡ್ಕರ್‌ ಅವರಿಗೇ ಸಲ್ಲಬೇಕು.

*ಅಲ್ಪಸಂಖ್ಯಾತರಿಗೆ ನೀಡುತ್ತಿರುವುದನ್ನು ಬಹುಸಂಖ್ಯಾತರಿಗೂ ನೀಡಬೇಕು ಎಂಬ ವಾದ ಮುಂದಿಟ್ಟಿದ್ದಾರಲ್ಲಾ?
ಭಾರತದಲ್ಲಿ ಅಲ್ಪಸಂಖ್ಯಾತರಾದ ಸನಾತನಿಗಳು ಇತರೆ ಸಮುದಾಯವರಿಗೆ ಸಮಾನ ಅವಕಾಶ ನೀಡಿದ್ದಾರೆಯೇ? ಅಸ್ಪೃಶ್ಯರಿಗೆ ದೇವಾಲಯಗಳಲ್ಲಿ ಪ್ರವೇಶ ನೀಡಬೇಕು, ಕೆರೆ–ಬಾವಿಗಳಲ್ಲಿ ನೀರು ಬಳಸಲು ಅವಕಾಶ ಕೊಡಬೇಕು ಎಂಬ ಆಶಯವನ್ನು ಧರ್ಮಸಂಸತ್ ವ್ಯಕ್ತಪಡಿಸಿರುವುದು ಒಳ್ಳೆಯದು. ಕೇವಲ ಘೋಷಣೆಯಿಂದ ಬದಲಾವಣೆ ತರಲು ಸಾಧ್ಯವಿಲ್ಲ, ಅವೆಲ್ಲ ವಂಚಿಸುವ ಮಾತುಗಳಷ್ಟೆ. ಅಸ್ಪೃಶ್ಯತೆ ನಿವಾರಣೆಗೆ ವಿ.ಹಿಂ.ಪ., ಸಾಧುಸಂತರು ಯಾವ ಕ್ರಿಯಾಯೋಜನೆ ರೂಪಿಸಿದ್ದಾರೆ?

*ಪೇಜಾವರ ಶ್ರೀಗಳು ಹರಿಜನ ಕೇರಿಗೆ ಭೇಟಿ ನೀಡುತ್ತಾರಲ್ಲ?
ಹಿಂದೂಗಳೆಲ್ಲ ಒಂದು, ಹಿಂದೂಗಳೆಲ್ಲ ಬಂಧು ಎಂದೂ ಅವರು ಹೇಳುತ್ತಾರೆ. ಇಂದಿಗೂ ಅವರ ಮಠದಲ್ಲಿ ಬ್ರಾಹ್ಮಣರಿಗೆ ಒಂದು, ಅಬ್ರಾಹ್ಮಣರಿಗೆ ಒಂದು ಎಂಬ ಪಂಕ್ತಿಬೇಧ ಇದೆ. ಹುಟ್ಟಿನಿಂದಲೇ ಮನುಷ್ಯರನ್ನು ಶ್ರೇಷ್ಠ, ಕನಿಷ್ಠ ಎಂದು ವಿಭಜಿಸುವ ತತ್ವವನ್ನು ಪಾಲಿಸುವ ಪೇಜಾವರರಿಂದ ನಿಜವಾದ ಧರ್ಮ ರಕ್ಷಣೆ  ಸಾಧ್ಯವೇ?

*ಧರ್ಮ ಸಂಸತ್‌ನಿಂದ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲವೇ?
ಧರ್ಮಸಂಸತ್‌ನ ಹಿಂದೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕವಾಗಿ ಸರ್ವಾಧಿಕಾರ ಸ್ಥಾಪಿಸುವ ಹಿಂದುತ್ವದ ಗುಪ್ತ ಕಾರ್ಯಸೂಚಿ ಅಡಗಿದೆ. ಹಿಂದುತ್ವ ಎನ್ನುವುದು ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಬಹುತ್ವ, ಬಹುಸಂಸ್ಕೃತಿಯನ್ನು ನಾಶ ಮಾಡುವ ಘಟಸರ್ಪ. ಇಂತಹ ಹಿಂದುತ್ವದ ಪ್ರತಿಪಾದನೆಯಿಂದ ದೇಶದ ಶಾಂತಿ, ನೆಮ್ಮದಿ ಕಳೆದುಹೋಗಿದೆ. ಹಿಂಸೆ ವ್ಯಾಪಿಸುತ್ತಿದ್ದು, ಉಗ್ರವಾದ ಹೆಚ್ಚುತ್ತಿದೆ. ಅಭಿವೃದ್ಧಿ ಕುಂಠಿತವಾಗಿದೆ. ಅಲ್ಪಸಂಖ್ಯಾತರಾದ ಸನಾತನಿಗಳು ಬಹುಸಂಖ್ಯಾತರಾದ ಭಾರತೀಯರನ್ನು ಹಿಂದುತ್ವವಾದಕ್ಕೆ ಬಲಿಕೊಡುತ್ತಿದ್ದಾರೆ.

*92ರಲ್ಲಿ ಬಾಬರಿ ಮಸೀದಿ ಕೆಡವಿದರು. ಈಗ ಮಂದಿರ ಕಟ್ಟುವ ಮಾತನಾಡುತ್ತಿದ್ದಾರಲ್ಲ?
ಇತಿಹಾಸದಲ್ಲಿ ನಡೆದು ಹೋಗಿರುವುದನ್ನು ಈಗ ಸರಿಪಡಿಸುತ್ತೇವೆ ಎನ್ನುವುದೇ ಅನುಚಿತ. ಬಾಬರಿ ಮಸೀದಿ ಕೆಡಹುವ ಮೂಲಕ ದೇಶದ ಭಾವೈಕ್ಯ ಕೇಂದ್ರವನ್ನೇ ಅವರು ನಾಶ ಮಾಡಿದ್ದಾರೆ. 1992 ಡಿಸೆಂಬರ್‌ 6ರವರೆಗೆ ಕಾಶ್ಮೀರಕ್ಕೆ ಸೀಮಿತವಾಗಿದ್ದ ಉಗ್ರವಾದ ದೇಶದಾದ್ಯಂತ ವಿಸ್ತರಿಸಲು ಇದು ಕಾರಣವಾಯಿತು. ಹಿಂದುತ್ವ ಎನ್ನುವುದು ಹಿಂದೂಗಳ ಉದ್ಧಾರಕ್ಕಾಗಿ ಅಲ್ಲ. ಪ್ರತಿ ಚುನಾವಣೆಯ ಹೊತ್ತಿಗೆ ಮತಬ್ಯಾಂಕ್ ಒಗ್ಗೂಡಿಸಲು ರಾಮಮಂದಿರ ವಿಷಯವನ್ನು ರಾಜಕೀಯ ತಂತ್ರದ ಭಾಗವಾಗಿ ಬಳಸಿಕೊಳ್ಳಲಾಗುತ್ತಿದೆ. ಹಿಂದುತ್ವ ಪ್ರತಿಪಾದಕರಿಗೆ ಆದಿವಾಸಿಗಳ ದೈವ ಶಿವ, ಹಿಂದುಳಿದ ಯಾದವರ ನಾಯಕ ಕೃಷ್ಣ ಮುಖ್ಯವಲ್ಲ. ಕ್ಷಾತ್ರವರ್ಗದ ರಾಮ ಮಾತ್ರ ಅವರಿಗೆ ಮುಖ್ಯ. ಹಾಗಾಗಿ ಅವರಿಗೆ ಎಂದೂ  ಶಿವ, ಕೃಷ್ಣ ಮೆರವಣಿಗೆಯ ಮೂರ್ತಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.