ADVERTISEMENT

‘ಹೆಸರು ಹೇಳಿದರೆ ಬಾಯಲ್ಲಿ ಹುಳ ಬೀಳುತ್ತೆ’

ಚಿದಂಬರ ಪ್ರಸಾದ್
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST

ಮಂಗಳೂರು: ‘ಮಕ್ಕಳ ಮಧ್ಯಾಹ್ನದ ಊಟವನ್ನು ಕಸಿದವರ ಹೆಸರು ಹೇಳಿದರೆ, ಬಾಯಲ್ಲಿ ಹುಳ ಬೀಳುತ್ತೆ. ಅದಕ್ಕೆ ನಾನು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವ (ರಮಾನಾಥ ರೈ) ಹೆಸರು ಹೇಳುವುದಿಲ್ಲ.’

ಮಂಗಳೂರು ಚಲೋದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಸಚಿವ ರೈ ವಿರುದ್ಧ ವಾಗ್ದಾಳಿ ನಡೆಸಿದ ಪರಿ ಇದು. ‘ಮಕ್ಕಳ ಊಟದಲ್ಲಿಯೂ ರಾಜಕೀಯ ಮಾಡ್ತಾರೆ. ಇತ್ತ ಹಿಂದೂಗಳ ಹತ್ಯೆ ಮಾಡುವವರನ್ನು ರಕ್ಷಿಸುತ್ತಿದ್ದಾರೆ. ಇಂಥವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅವರು ಅಭಿವೃದ್ಧಿಯನ್ನೂ ಮಾಡಿಲ್ಲ’ ಎಂದು ಟೀಕಾಸ್ತ್ರ ಮುಂದುವರಿಸಿದರು.

ಇತ್ತ ಶಾಸಕ ಆರ್‌. ಅಶೋಕ್‌ ಕೂಡ ಸರ್ಕಾರವನ್ನು ಗೇಲಿ ಮಾಡದೇ ಬಿಡಲಿಲ್ಲ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಗೃಹ ಸಚಿವರಿಲ್ಲ. ಮನೆಯೊಂದು, ಮೂರು ಬಾಗಿಲಿನ ಸರ್ಕಾರ ಇದು. ಸಿದ್ದರಾಮಯ್ಯ, ಕೆಂಪಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರೇ ಈ ಮೂರು ಬಾಗಿಲುಗಳು’ ಎಂದು ವಿಶ್ಲೇಷಣೆ ಮಾಡಿದರು.

ADVERTISEMENT

‘ನಮ್ಮ ಹೋರಾಟ ಪೊಲೀಸರ ವಿರುದ್ಧ ಅಲ್ಲ, ಕೆಂಪಯ್ಯ ಮತ್ತು ಸಿದ್ದರಾಮಯ್ಯ ವಿರುದ್ಧ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾರಿಗೂ ರಕ್ಷಣೆ ಇಲ್ಲವಾಗಿದೆ. ‘ನಿದ್ದೆರಾಮಯ್ಯ, ಎದ್ದೇಳು; ರಾಜ್ಯದ ಜನರು ಕೇಳುತ್ತಿದ್ದಾರೆ’ ಎಂದು ಜ್ಯೋತಿ ವೃತ್ತದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಇನ್ನೊಂದೆಡೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ‘ನಾವು ರಮಾನಾಥ ರೈ ಅವರ ರಾಜೀನಾಮೆಯನ್ನು ಕೇಳುವುದಿಲ್ಲ; ಬದಲಾಗಿ ಅವರನ್ನು ವಜಾ ಮಾಡಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಗ್ರಹಿಸುತ್ತೇವೆ’ ಎಂದರು. ಒಟ್ಟಾರೆಯಾಗಿ ಮಂಗಳೂರು ಚಲೋಕ್ಕೆ ವೇದಿಕೆಯಾದ ಜ್ಯೋತಿ ವೃತ್ತ ಸರ್ಕಾರವನ್ನು ಉಗ್ರವಾಗಿ ಟೀಕಿಸುವ ಬಿಜೆಪಿ ನಾಯಕರ ಮಾತಿನ ವರಸೆಗೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.