ADVERTISEMENT

‘ಬಾಲ ಸನ್ಯಾಸಿ, ಯುವ ಸನ್ಯಾಸಿ ಪದ್ಧತಿಗೆ ಕಟು ವಿರೋಧಿ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:30 IST
Last Updated 25 ಜೂನ್ 2016, 19:30 IST
ವೀರಭದ್ರ ಚನ್ನಮಲ್ಲ ಸ್ವಾಮೀಜಿ  ನಿಡುಮಾಮಿಡಿ ಮಠಾಧೀಶ –ಚಿತ್ರಗಳು: ಆನಂದ ಬಕ್ಷಿ
ವೀರಭದ್ರ ಚನ್ನಮಲ್ಲ ಸ್ವಾಮೀಜಿ ನಿಡುಮಾಮಿಡಿ ಮಠಾಧೀಶ –ಚಿತ್ರಗಳು: ಆನಂದ ಬಕ್ಷಿ   

ಯಾವುದೇ ವಿವಾದಗಳು ನಡೆದಾಗ ಹೆಚ್ಚಿನ ಮಠಾಧೀಶರಿಗಿಂತ ವಿಭಿನ್ನ ನಿಲುವು ತೋರಿ ‘ವಿಭಿನ್ನ ಸ್ವಾಮೀಜಿ’ ಎಂದು ಕರೆಸಿಕೊಂಡು ಸದಾ ಸುದ್ದಿಯಲ್ಲಿರುವವರು ನಿಡುಮಾಮಿಡಿ ಮಠಾಧೀಶ ವೀರಭದ್ರ ಚನ್ನಮಲ್ಲ ಸ್ವಾಮೀಜಿ. ನಿಡುಮಾಮಿಡಿ ಮಠ ಹಾಗೂ ಪ್ರಗತಿಪರ ಮಠಾಧೀಶರ ವೇದಿಕೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಮೂರು ದಿನ ನಡೆದ ಸಮಾವೇಶದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಅವರ ಜೊತೆ ಮಾತಿಗಿಳಿದಾಗ...

* ನಿಡುಮಾಮಿಡಿ ಸ್ವಾಮೀಜಿ ಎಂದಾಕ್ಷಣ ಅವರೊಬ್ಬ ‘ವಿಭಿನ್ನ ಸ್ವಾಮೀಜಿ’ ಎನ್ನುತ್ತಾರಲ್ಲ...?
ನಿಡುಮಾಮಿಡಿ ಪರಂಪರೆ ಸಾವಿರ ವರ್ಷ ಹಿಂದಿನದ್ದು. ರಾಜರ ಆಳ್ವಿಕೆ ಕಾಲದಿಂದಲೂ ಅದು ನಡೆದುಬಂದಿದೆ. ಆಗ ರಾಜರು ಹಾಗೂ ಜನರ ಹಿತದ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬಂದಾಗ ಜನರ ಹಿತವನ್ನೇ ಆಯ್ಕೆ ಮಾಡಿಕೊಂಡ ಪರಂಪರೆ ಇದು. ಆಗಿನ ಸಿದ್ಧಾಂತ, ಮೌಲ್ಯಗಳನ್ನೇ ಈಗಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಅದೇ ದಾರಿಯಲ್ಲಿ ನಡೆಯುವಾಗ, ಅದೇ ಮೌಲ್ಯವನ್ನು ಎತ್ತಿಹಿಡಿಯುತ್ತಿರುವ ನಾನು ಬೇರೆಯವರ ದೃಷ್ಟಿಯಲ್ಲಿ ‘ವಿಭಿನ್ನ’ ಆಗಿ ಕಾಣಿಸುತ್ತಿರಬಹುದು ಅಷ್ಟೆ.

* ಬೆಂಗಳೂರಿನಲ್ಲಿ ಮೂರು ದಿನ ಪ್ರಗತಿಪರ ಮಠಾಧೀಶರ ಸಮ್ಮೇಳನ ನಡೆಸಿದ್ದೀರಿ. ಅದರಲ್ಲಿ ಹೆಚ್ಚಾಗಿ ಲಿಂಗಾಯತ ಸ್ವಾಮೀಜಿಗಳೇ ಇದ್ದರು. ಲಿಂಗಾಯತರು ಮಾತ್ರ ಪ್ರಗತಿಪರರೇ?
ಸಮ್ಮೇಳನದಲ್ಲಿ ಲಿಂಗಾಯತರು ಮಾತ್ರ ಹೆಚ್ಚಿಗೆ ಇದ್ದರು ಎನ್ನುವುದು ಸರಿಯಲ್ಲ. ಯಾವುದೇ ಒಂದು ಧರ್ಮ, ಸಮುದಾಯದ ಆಧಾರದ ಮೇಲೆ ಪ್ರಗತಿಪರ ಮಠಾಧೀಶರ ವೇದಿಕೆ ನಿರ್ಮಾಣವಾಗಿಲ್ಲ. ಜಾತಿವಾದ, ಕೋಮುವಾದ, ಮೌಢ್ಯ ಎಲ್ಲವನ್ನೂ ಹೋಗಲಾಡಿಸುವ ಸದುದ್ದೇಶ ಈ ಸಮ್ಮೇಳನದ್ದು. ಅದರಲ್ಲಿ ಎಲ್ಲ ಸಮುದಾಯದವರೂ ಪಾಲ್ಗೊಂಡಿದ್ದರು. 75 ಮಾತಾಜಿಗಳೂ ಇದ್ದರು.

* ಶಿಕ್ಷಣದ ಹೆಸರಿನಲ್ಲಿ ಮಠಗಳೀಗ ಸುಲಿಗೆ ಕೇಂದ್ರಗಳಾಗುತ್ತಿವೆ. ಮಠಗಳೇಕೆ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳನ್ನಷ್ಟೇ ನಡೆಸುತ್ತಿವೆ?
ಇದೊಂದು ದುರದೃಷ್ಟದ ವಿಷಯ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಮಠಗಳಲ್ಲಿ ಶೈಕ್ಷಣಿಕ ದೃಷ್ಟಿಕೋನ, ಸೇವಾ ಮನೋಭಾವ ಇತ್ತು. ಜೀವನದ ಬುನಾದಿಯೇ ಶಿಕ್ಷಣ ಎನ್ನಲಾಗುತ್ತಿತ್ತು. ಆದ್ದರಿಂದ ಪ್ರಾಥಮಿಕ ಶಾಲೆಗಳನ್ನು ತೆರೆದು ಉಚಿತ ಶಿಕ್ಷಣ ನೀಡಲು ಆರಂಭಿಸಿದ್ದರು. ಸ್ವಾತಂತ್ರ್ಯಾನಂತರ ಮೂರ್ನಾಲ್ಕು ದಶಕ ಇದೇ ಮುಂದುವರಿದಿತ್ತು.

ಆದರೆ ಯಾವಾಗ ವೃತ್ತಿಪರ ಶಿಕ್ಷಣಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಕಾಲಿಟ್ಟಿತೋ ಆಗ ಶಿಕ್ಷಣ ಕ್ಷೇತ್ರ ಸಂಪೂರ್ಣ ಪಕ್ಷಪಾತಗಳ ಬೀಡಾಗಿ ಮಾರ್ಪಟ್ಟಿತು. ಸ್ವಾಮೀಜಿಗಳು ದುರಾಸೆಗೆ ಒಳಗಾದರು. ದುಡ್ಡು ಸಂಪಾದನೆ ಮಾಡುವ ಹಪಾಹಪಿ ಅವರದ್ದಾಯಿತು. ಪ್ರಾಥಮಿಕ ಶಾಲೆ ಸ್ಥಾಪಿಸಿ ಉಚಿತ ವಿದ್ಯಾರ್ಜನೆಯ ಮನೋಭಾವ ಹೋಗಿ ಹೆಚ್ಚು ಹೆಚ್ಚು ದುಡ್ಡು ಸಂಪಾದನೆಗೆ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜು ತೆರೆಯಲು ಶುರು ಮಾಡಿದರು.

ಅದಕ್ಕೆ ತಕ್ಕನಾಗಿ ಈ ಕಾಲೇಜುಗಳಿಗೆ ಸೇರಿಸಲು ಮಠಾಧೀಶರ ಬಳಿ ಸಿರಿವಂತರು ದೌಡಾಯಿಸತೊಡಗಿದರು. ಕೋಟಿಗಟ್ಟಲೆ ಹಣ ಕೊಟ್ಟು, ಅಷ್ಟೇ ಏಕೆ ‘ಬ್ಲ್ಯಾಂಕ್‌ ಚೆಕ್‌’ ಕೂಡ ಕೊಡಲು ಶುರುವಿಟ್ಟುಕೊಂಡಾಗ ಶಿಕ್ಷಣ ವ್ಯಾಪಾರೀಕರಣವಾಯಿತು. ಬಹುತೇಕ ಮಠಗಳು ಸುಲಿಗೆ ಕೇಂದ್ರಗಳಾಗಿ ಶುರುವಾಗುವುದಕ್ಕೂ ಇದೇ ಕಾರಣವಾಯಿತು. ಯಾವ ವಿದ್ಯಾಸಂಸ್ಥೆಗಳಲ್ಲೂ ಬಡವರಿಗೆ ಶಿಕ್ಷಣ ದೊರಕುತ್ತಿಲ್ಲ.

­* ಮನುಸ್ಮೃತಿ ಅಥವಾ ಇನ್ನಿತರ ಸ್ಮೃತಿಗಳು ಈಗಿನ ಕಾಲಕ್ಕೆ ಪ್ರಸ್ತುತ ಅಲ್ಲ ಎಂಬ ಕಾರಣ ನೀಡಿ, ಓದಿದವರು ಓದದೇ ಇದ್ದವರು ಎಲ್ಲರೂ ವಿರೋಧಿಸುತ್ತಾರೆ. ಈಗಿನ ತಲೆಮಾರಿಗೆ ಎಲ್ಲರಿಗೂ ಒಪ್ಪಿಗೆ ಆಗುವ ಒಂದು ಸ್ಮೃತಿ ಬೇಕೆ?
ಮನುಸ್ಮೃತಿ ಎನ್ನುವುದು ವೈದಿಕ ಧರ್ಮದ ಸಾಮಾಜಿಕ ನಿಯಮಗಳನ್ನು ಒಳಗೊಂಡಿರುವ ಗ್ರಂಥವಷ್ಟೆ. ಜನರು ಮತ ಪಂಥಗಳಲ್ಲಿ ಗುರುತಿಸಿಕೊಂಡು ಬದುಕುತ್ತಿದ್ದಾಗ ಇದು ರೂಪು ಪಡೆದದ್ದು. ಆಗ ಸಂವಿಧಾನ ಇನ್ನೂ ರಚನೆಗೊಂಡಿರಲಿಲ್ಲ. ಆದರೆ ವಿಚಿತ್ರ ಎಂದರೆ ಸಂವಿಧಾನ ಬಂದ ಮೇಲೆಯೂ ಹಲವರು  ಸಂವಿಧಾನವನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ.

ಮನುಸ್ಮೃತಿಯ ಮನಸ್ಥಿತಿಯಲ್ಲಿಯೇ ಇರುವುದು ದುರದೃಷ್ಟಕರ. ಈ ದೇಶದ ಬದಲಾವಣೆಗೆ ಅಡ್ಡಿಯಾಗಿರುವುದಕ್ಕೂ ಇದೇ ಕಾರಣ. ಯಾವ ಧರ್ಮಗ್ರಂಥಗಳೂ ಸಂವಿಧಾನಕ್ಕೆ ಸ್ಪರ್ಧಿಯಾಗಲಾರವು. ಹಾಗೆ ನೋಡಿದರೆ ಹಿಂದೂ ಜನಾಂಗದಲ್ಲಿರುವ ಪ್ರತಿಯೊಬ್ಬರೂ ಒಪ್ಪಿಕೊಳ್ಳುವಂಥ ಒಂದು ಧರ್ಮಗ್ರಂಥ ಇನ್ನೂ ಬಂದಿಲ್ಲ ಎಂದೇ ನನ್ನ ನಂಬಿಕೆ. 

* ಸಂವಿಧಾನವೇ ಧರ್ಮಗ್ರಂಥ ಎಂದರೆ, ಈ ಕಾಲಮಾನಕ್ಕೂ ಮಠಮಾನ್ಯಗಳು ಬೇಕೆ?
ವೈದ್ಯರಿಲ್ಲದ, ವಕೀಲರಿಲ್ಲದ ಸಮಾಜ ಬೇಕೆ ಎಂಬಂತಿದೆ ಈ ಪ್ರಶ್ನೆ. ಅದೇ ಬೇರೆ, ಇದೇ ಬೇರೆ. ಸಂವಿಧಾನ ಕೂಡ ಧರ್ಮವನ್ನು ನಿರಾಕರಿಸುವುದಿಲ್ಲ. ಧರ್ಮ ಕೂಡ ಮಾನವನ ಅಗತ್ಯ. ಧರ್ಮ ಅನ್ನುವುದು ಆತ್ಮದ ಹಸಿವು. ಮಠಾಧೀಶರು ಜನರಿಗೆ ಧಾರ್ಮಿಕ ಸಂಸ್ಕಾರವನ್ನು ತೋರಿಸುವ ನಾಯಕರು. ಸಂವಿಧಾನ ಹೇಗೆ ಅಗತ್ಯವೋ, ಮಠ-ಮಾನ್ಯಗಳೂ ಅಷ್ಟೇ ಅಗತ್ಯ.

* ಧಾರ್ಮಿಕ ಸಂಸ್ಕಾರವನ್ನು ತೋರಿಸುವ  ನಾಯಕರೇ ಈಗ ಅಧರ್ಮಿಗಳಾಗಿರುವ ಆರೋಪ ಎದುರಿಸುತ್ತಿದ್ದಾರಲ್ಲ?  
ನೋಡಿ, ಕರ್ನಾಟಕ ಒಂದರಲ್ಲಿಯೇ 1200ಕ್ಕೂ ಹೆಚ್ಚು ಮಠಗಳಿವೆ. ಆದರೆ ಇಂಥ ಆರೋಪಗಳು ಬೆರಳೆಣಿಕೆಯಷ್ಟು ಮಠಗಳಿಂದ ಕೇಳಿಬರುತ್ತಿವೆಯಷ್ಟೆ. ಮಠಾಧೀಶರಿಗೆ ಈ ಹಿಂದೆ ಸಾಕಷ್ಟು ನಿರ್ಬಂಧ, ಕಟ್ಟಳೆಗಳು ಇದ್ದವು. ಬ್ರಹ್ಮಚರ್ಯ ಪಾಲನೆ ಆಗಬೇಕು, ವೈರಾಗ್ಯದ ಸಾಧನೆ ಆಗಬೇಕು ಎಂಬ ನಿಯಮಗಳು ಇದ್ದವು. ಅದಕ್ಕೆ ಒಳ್ಳೆಯ ಮಾರ್ಗದರ್ಶನವೂ ಸಿಗುತ್ತಿತ್ತು.

ಬ್ರಹ್ಮಚರ್ಯ ಪಾಲನೆಗೆ ಪೂರಕ ವಾತಾವರಣವೂ ಇತ್ತು. ಇನ್ನೊಂದೆಡೆ, ಜನರು ಮಠಾಧೀಶರ ಬಳಿ ಆಶೀರ್ವಾದ ಪಡೆಯುವುದಕ್ಕಷ್ಟೇ ಬರುತ್ತಿದ್ದರು. ತಮ್ಮ ಜೀವನ ಸುಖ ಸಂತೋಷಮಯವಾಗಿರಲಿ ಎಂಬುದಾಗಿ ಆಶೀರ್ವದಿಸಿ ಎಂದು ಕೋರುತ್ತಿದ್ದರು. ಆದರೆ ಈಗ ಏನಾಗಿದೆ? ಇಂಥ ಆಶೀರ್ವಾದ ಯಾರಿಗೂ ಬೇಡವಾಗಿದೆ.

ನೌಕರಿ ಕೊಡಿಸಿ, ಪ್ರಮೋಷನ್‌ ಕೊಡಿಸಿ, ಸೀಟ್‌ ಕೊಡಿಸಿ... ಹೀಗೆ ಲೌಕಿಕ ಬೇಡಿಕೆಗಳೇ ಹೆಚ್ಚಾಗಿವೆ. ಇಂಥ ಲೌಖಿಕ ಬೇಡಿಕೆಗಳ ಒತ್ತಡಕ್ಕೆ ಮಣಿಯುತ್ತಿರುವ ಸ್ವಾಮೀಜಿಗಳೂ ಇಂಥದ್ದೆಲ್ಲ ಬೇಡದ ಕೆಲಸಗಳಿಗೆ ಕೈಹಾಕುತ್ತಿದ್ದಾರೆ. ಅಪರಾಧ ಎಸಗುವ ಶಿಷ್ಯರನ್ನು ಮಠಗಳು, ಮಸೀದಿ, ಚರ್ಚ್‌ಗಳು ಇದುವರೆಗೆ ಬಹಿಷ್ಕಾರ ಮಾಡಿರುವ ಉದಾಹರಣೆಗಳು ಎಲ್ಲಿಯಾದರೂ ಉಂಟೇ? ಅಂಥ ನೈತಿಕ ಸ್ಥೈರ್ಯ ಎಷ್ಟು ಮಂದಿಗೆ ಇದೆ?

* ಮಠಾಧೀಶರು ಇತ್ತೀಚಿನ ದಿನಗಳಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುವಲ್ಲಿ ಸೋಲುತ್ತಿರುವುದು ಏಕೆ?
ಬ್ರಹ್ಮಚರ್ಯ ಎನ್ನುವ ಶಬ್ದ ಹಿಂಬಡ್ತಿ ಪಡೆದಿರುವುದೇ ಇದಕ್ಕೆ ಕಾರಣ. ಬಾಲ್ಯ, ಗೃಹಸ್ಥ, ವಾನಪ್ರಸ್ಥದ ನಂತರ ಕೊನೆಯಲ್ಲಿ ಸನ್ಯಾಸ ಎನ್ನುವ ಆಶ್ರಮಗಳನ್ನು ವೈದಿಕ ಸಮಾಜ ಕಲಿಸಿಕೊಟ್ಟಿತ್ತು. ಕಾಲ ಬದಲಾದಂತೆ ಬಾಲ ಸನ್ಯಾಸಿಗಳು, ಯುವ  ಸನ್ಯಾಸಿಗಳು ಎಂಬ ಪದ್ಧತಿ ಶುರುವಾಯಿತು. ಸನ್ಯಾಸವನ್ನು ಸಾಂಸ್ಥೀಕರಣಗೊಳಿಸಿ ಕೊನೆಯ ಕಾಲಘಟ್ಟವನ್ನು ಆರಂಭದ ಘಟ್ಟ ಮಾಡಿ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯರು ನಡೆದುಕೊಳ್ಳಲು ಶುರು ಮಾಡಿದರು.

ಪ್ರಕೃತಿದತ್ತವಾಗಿ ಬರುವ ವೈರಾಗ್ಯವಷ್ಟೇ ಸಹಜ ವೈರಾಗ್ಯ. ಜೀವನದ ಕೊನೆಯ ಅವಧಿಯಲ್ಲಿ ವೈರಾಗ್ಯ ಬರುತ್ತದೆ. ಅದು ಸ್ವೀಕಾರಾರ್ಹ ಹಾಗೂ ಗೌರವಾರ್ಹ ವೈರಾಗ್ಯ.ಆದರೆ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯರು ಯಾವಾಗ ನಡೆದುಕೊಳ್ಳಲು ಶುರುಮಾಡುತ್ತಾರೋ ಆಗ ಇಂಥದ್ದೆಲ್ಲ ಅನ್ಯಾಯಗಳು ನಡೆಯುತ್ತವೆ.

ನಿಜ ಹೇಳಬೇಕೆಂದರೆ ‘ಸನ್ಯಾಸ ಜೀವನ’ಕ್ಕೆ ‘ಶಿಕ್ಷಾರ್ಹ ಜೀವನ’ ಎನ್ನುವ ಮೂಲ ಅರ್ಥವಿದೆ. ಆದರೆ ಈಗ ಈ ಶಿಕ್ಷೆಯೇ ರಕ್ಷೆಯಾಗಿಬಿಟ್ಟಿದೆ. ಹಾಗೆ ನೋಡಿದರೆ ವರ್ಣಾಶ್ರಮ ವ್ಯವಸ್ಥೆಯೇ ಅವೈಜ್ಞಾನಿಕವಾದದ್ದು, ಪ್ರಕೃತಿಗೆ ವಿರುದ್ಧವಾದದ್ದು ಮತ್ತು ತಾರತಮ್ಯದಿಂದ ಕೂಡಿದ್ದು. ಇದು ಕೇವಲ ಸ್ವಾರ್ಥಕ್ಕೆ ಮಾಡಿಕೊಂಡಿರುವ ಕೃತಕ ವ್ಯವಸ್ಥೆ ಅಷ್ಟೆ.

* ಹಾಗಿದ್ದರೆ ತಾವು ಬಾಲಸನ್ಯಾಸ, ಯುವ ಸನ್ಯಾಸಕ್ಕೆ ವಿರೋಧಿಗಳೇ?
ನಾನು ಇದರ ಕಟು ವಿರೋಧಿ. ಸಮಾಜಕ್ಕೆ ತ್ಯಾಗ ಮಾಡುವವರು ಬೇಕು. ಆದರೆ ಅದು ಒಳಮನಸ್ಸಿನಿಂದ ಬರಬೇಕು. ಯಾರಿಗೇ ಆಗಲಿ, ಸಂಸ್ಕಾರ ಕೊಟ್ಟ ತಕ್ಷಣ ವೈರಾಗ್ಯವೂ ಬರುವುದಿಲ್ಲ, ತ್ಯಾಗ ಮನೋಭಾವನೆಯೂ ಬೆಳೆಯುವುದಿಲ್ಲ. ಆದರೆ ಇಂದು ಎಲ್ಲವೂ ಕಲಸುಮೇಲೋಗರ ಆಗಿವೆ. ಈ ಸನ್ಯಾಸ ಜೀವನದ ಬಗ್ಗೆ ಎಲ್ಲ ಮಠಾಧೀಶರೂ ಮರುಚಿಂತನೆ ನಡೆಸಬೇಕಿರುವ ಕಾಲ ಬಂದಿದೆ.

* ನಿಮ್ಮರ್ಥ ಮಠಾಧೀಶರನ್ನು ಕೆಡಿಸುತ್ತಿರುವುದು ಜನಸಾಮಾನ್ಯರೇ?
ಖಂಡಿತ. ಪ್ರಬಲ ಎನಿಸಿಕೊಂಡಿರುವ ಮಠಗಳತ್ತ ಹೋಗಿ ನೋಡಿ. ರಾಜಕಾರಣಿಗಳ ದಂಡೇ ಅಲ್ಲಿರುತ್ತದೆ. ವಿಧಾನಸೌಧವನ್ನು ನಿಯಂತ್ರಿಸುವ ಶಕ್ತಿ ಈ ಮಠಗಳಲ್ಲಿ ಅಡಗಿದೆ. ಯಾವ ಜನರಿಗೂ ಈಗ ಅಧ್ಯಾತ್ಮಕ್ಕೆ ಮಠಗಳು, ಮಠಾಧೀಶರು ಬೇಡ. ರಾಜಕೀಯವಾಗಿ, ಶೈಕ್ಷಣಿಕವಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಮಠಗಳ ಹುಂಡಿಗಳು ಇಂಥ ಶ್ರೀಮಂತರ ಹಣದಿಂದ ತುಂಬಿ ತುಳುಕಾಡುತ್ತಿವೆ.

ಮಠಾಧೀಶರ ಕೈಕಾಲು ಹಿಡಿದರೆ ವೋಟು, ಆ ವೋಟಿನಿಂದಾಗಿ ಸೀಟು ನಂತರ ನೋಟು... ಎಲ್ಲವೂ ಸಿಗುತ್ತವೆ ಎಂದು ಗೊತ್ತಾಗಿಬಿಟ್ಟಿದೆ. ಅದಕ್ಕಾಗಿಯೇ ಕೆಲವು ಶ್ರೀಮಂತರು ಮಠಾಧಿಪತಿಗಳ ಬೆನ್ನ ಹಿಂದೆಯೇ ಸುತ್ತಾಡುತ್ತಿದ್ದಾರೆ. ಬಡ ಮಠಗಳನ್ನು ಬಿಡಿ ಪಾಪ, ಕೇಳುವವರೇ ಇಲ್ಲ. 

* ಕೆಲವು ಮಠಗಳು ಕಪ್ಪುಹಣ ಇಡುವ ಕೇಂದ್ರಗಳಾಗಿವೆ ಎಂದು ಹೇಳಿದ್ದೀರಿ. ಯಾವ ಮಠಗಳು ಎಂದು ಹೇಳಬಹುದೆ?
ಯಾರು ಕಪ್ಪು ಹಣದ ಪೋಷಕರು ಆಗಿದ್ದಾರೆ ಎನ್ನುವುದು ಸರ್ಕಾರ ಸೇರಿದಂತೆ ಎಲ್ಲರಿಗೂ ತಿಳಿದಿರುವ ವಿಷಯ. ಅಂಥ ಮಠಗಳನ್ನು ತಹಬದಿಗೆ ತರುವ ಅಧಿಕಾರ ಸರ್ಕಾರಕ್ಕೆ ಇದೆ. ಅಧಿಕಾರ ಬಳಸಿಕೊಳ್ಳಬೇಕಷ್ಟೆ.

* ಕಾವಿಯ ಮೇಲಿದ್ದ ಜನರ ಭಾವನೆ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಸ್ವಾಮೀಜಿಗಳಲ್ಲೇ ದೊಡ್ಡ ಕ್ರಾಂತಿ ಆಗಬೇಕು ಎಂದು ನಿಮಗೆ ಎನ್ನಿಸುತ್ತದೆಯೇ?
‘ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದೆಡೆ ಕೂಡಲಸಂಗಮದೇವಾ...’ ಎಂದು 12ನೇ ಶತಮಾನದಲ್ಲಿಯೇ ಬಸವಣ್ಣ ಹೇಳಲಿಲ್ಲವೇ? ಅಲ್ಲಲ್ಲಿ ಕೆಲವು ಮಠಾಧೀಶರು ತಪ್ಪು ಎಸಗುತ್ತಿದ್ದಾರೆ ಎಂದರೆ ಅದು ಲಾಂಛನದ ತಪ್ಪಲ್ಲ. ಅದರ ಮೌಲ್ಯವೂ ಕಡಿಮೆ ಆಗುವುದಿಲ್ಲ. ಅದು ವ್ಯಕ್ತಿಗಳ ತಪ್ಪು. ಎಲ್ಲಾ ಕ್ಷೇತ್ರಗಳಲ್ಲೂ ದಾರಿ ಬಿಟ್ಟವರು ಇದ್ದ ಹಾಗೆ ಇಲ್ಲೂ ಇದ್ದಾರೆ. ಆ ತಪ್ಪುಗಳನ್ನು ಅವರೇ ತಿದ್ದಿಕೊಳ್ಳಬೇಕು. 

* ಕಾಗೆ ಕುಳಿತಿದ್ದಕ್ಕೆ ಮುಖ್ಯಮಂತ್ರಿಗಳು ಕಾರು ಮಾರಿರುವ ಆರೋಪ ಇದೆಯಲ್ಲ? ಮೌಢ್ಯ ವಿರೋಧಿ ಕಾನೂನು ಬೇಕು ಎನ್ನುವ ನೀವು ಅವರನ್ನು ತಡೆಯಬಹುದಿತ್ತಲ್ಲವೇ?
ಸುಮ್ಮನೇ ಇದು ಮಾಧ್ಯಮದವರು ಸೃಷ್ಟಿಸಿರುವ ಕಟ್ಟುಕಥೆ. ಅವರ ಹಳೆಯ ಕಾರು ಮೂರು ಲಕ್ಷ ಕಿ.ಮೀ. ಓಡಿದ್ದಕ್ಕೆ ಈ ಘಟನೆ ನಡೆಯುವ ಎರಡು ತಿಂಗಳ ಹಿಂದೆಯೇ ಅವರು ಹೊಸ ಕಾರ್‌ ಬುಕ್ಕಿಂಗ್‌ ಮಾಡಿದ್ದರು. ಅದೇನು ಈ ಕಾಗೆಗೆ ಗೊತ್ತಿತ್ತೇ ಅಥವಾ ಕಾಗೆ ವಾಹನಗಳ ಮೇಲೆ ಕುಳಿತುಕೊಂಡಿರುವುದು ಇದೇ ಮೊದಲೇ? ಸುಮ್ಮನೆ ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿಗಳ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅವರು ಮೌಢ್ಯಕ್ಕಾಗಿ ಹೀಗೆ ಮಾಡಿಲ್ಲದ ಕಾರಣ, ನಾನು ಅದನ್ನು ತಡೆಯುವ ಪ್ರಶ್ನೆಯೇ ಇಲ್ಲ.

* ನಿಮ್ಮ ಮೇಲೆ ಬಹಳ ಹಿಂದಿನಿಂದಲೂ ಬ್ರಾಹ್ಮಣ ವಿರೋಧಿ, ನಾಸ್ತಿಕ ಎಂಬಿತ್ಯಾದಿ ಆರೋಪಗಳು ಪದೇ ಪದೇ ಕೇಳಿಬರುತ್ತಿವೆಯಲ್ಲ. 
ಇವೆರಡೇ ಅಲ್ಲ. ನಾನು ಲಿಂಗಾಯತ ಸಮುದಾಯದ ಸ್ವಾಮೀಜಿ ಆಗಿದ್ದರೂ ಲಿಂಗಾಯತ ವಿರೋಧಿ ಅಂದವರೂ ಇದ್ದಾರೆ, ಅಶುದ್ಧ ರಕ್ತದವನು ಎಂದಿದ್ದಾರೆ. ನಾನು ಯಾವ, ಯಾರ ವಿರೋಧಿಯೂ ಅಲ್ಲ. ಯಾವೊಂದು ಸಮುದಾಯದ ಕುರಿತಾಗಿಯೂ ನಾನು ಪೂರ್ವಗ್ರಹ ಇಟ್ಟುಕೊಂಡಿಲ್ಲ.

ಯಾವುದೇ ಸಮಯದಾಯದಲ್ಲಿ ನಡೆಯುತ್ತಿರುವ ಅಮಾನವೀಯ ಅಂಶಗಳನ್ನು ನೋಡಿದಾಗ ಅದರ ಬಗ್ಗೆ ಮಾತನಾಡುತ್ತೇನೆ. ಸಮುದಾಯ ಯಾವುದೇ ಇರಬಹುದು, ಅಲ್ಲಿ ನಡೆಯುತ್ತಿರುವ ಅನಾಗರಿಕ ಆಚರಣೆ, ಜನರಿಗೆ ಕೆಡುಕು ಉಂಟುಮಾಡುವ ನಿಯಮಗಳನ್ನು ಎತ್ತಿ ತೋರಿಸಿದಾಗ ಹೀಗೆಲ್ಲಾ ಆಡಿಕೊಳ್ಳುವುದು ಸಹಜ. ವರ್ಣವ್ಯವಸ್ಥೆ ಉಳಿಯಬೇಕು.

ಬಡಜನರ ಶೋಷಣೆ ಆಗುತ್ತಲೇ ಇರಬೇಕು, ಅದರ ವಿರುದ್ಧ ಯಾರೂ ದನಿ ಎತ್ತಬಾರದು ಎಂದುಕೊಂಡವರು ಇಂಥ ಆರೋಪ ನನ್ನ ಮೇಲೆ ಮಾಡುತ್ತಲೇ ಬಂದಿದ್ದಾರೆ. ಹಿಂದೆ ಮಾಡಿರುವ ಆರೋಪಗಳು ‘ಕ್ಲಿಕ್‌’ ಆಗದಿದ್ದಕ್ಕೆ ನಂತರ ‘ದಲಿತ ಪರ ಸ್ವಾಮೀಜಿ’ ಎಂದು ಹೇಳಲು ಶುರು ಮಾಡಿದರು. ಅದು ಹೇಗೋ ಕ್ಲಿಕ್‌ ಆಗಿಬಿಟ್ಟಿದೆ.

* ಮಠಾಧೀಶರು ಸಂಘ ಪರಿವಾರದ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಆರೋಪ ಇದೆಯಲ್ಲ?
ಸ್ವಾಮೀಜಿಗಳು ಸಂಘ ಪರಿವಾರದವರು ನಡೆಸುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ಬಂದ ಮಾತ್ರಕ್ಕೆ ಹೀಗೆ ಅರ್ಥೈಸುವುದು ಸರಿಯಲ್ಲ. ಸಂಘ ಪರಿವಾರದ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದಾರೆ ಎಂದೂ ಅಲ್ಲ.  ಅಂಥ ಮನಸ್ಸಿನವರು ಅಲ್ಪ ಪ್ರಮಾಣದಲ್ಲಿ ಇರಬಹುದು. ಆದರೆ ಬಹುಪಾಲು ಮಠಾಧೀಶರು ಸಂಘ ಪರಿವಾರದ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.