ADVERTISEMENT

ಕಾರ್ಯಾಂಗದ ಹಸ್ತಕ್ಷೇಪಕ್ಕೆ ದಾರಿ

ಎನ್‌.ಸಂತೋಷ್‌ ಹೆಗ್ಡೆ
Published 8 ಸೆಪ್ಟೆಂಬರ್ 2014, 14:16 IST
Last Updated 8 ಸೆಪ್ಟೆಂಬರ್ 2014, 14:16 IST

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸ್ವತಂತ್ರ­ವಾಗಿರಬೇಕು ಎಂಬುದು ಸಂವಿ­ಧಾನದ ಮೂಲ ಆಶಯ. ಸಂವಿ­ಧಾನದ ಬಲದಿಂದಲೇ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯ­ಮೂರ್ತಿಗಳನ್ನು ನೇಮಕ ಮಾಡಲು ಕೊಲಿ­ಜಿಯಂ ವ್ಯವಸ್ಥೆ ಜನ್ಮತಾಳಿತ್ತು. ಎರಡು ದಶಕಗಳ ಕಾಲ ದೇಶದ ಉನ್ನತ ನ್ಯಾಯಾ­ಲಯಗಳಿಗೆ ನ್ಯಾಯಮೂರ್ತಿ­ಗಳನ್ನು ನೇಮಕ ಮಾಡುವ ಕೆಲಸವನ್ನು ಅದು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಆದರೆ, ಕೆಲವು ವ್ಯಕ್ತಿಗಳಿಂದ ಆದ ತಪ್ಪನ್ನು ಕೊಲಿಜಿಯಂ ವ್ಯವಸ್ಥೆಯ ಹೆಗಲಿಗೆ ಕಟ್ಟಿ ಅದನ್ನು ಬದಿಗೆ ಸರಿಸುವ ಯತ್ನ ಆರಂಭವಾಯಿತು. ಈಗ ಕೊಲಿ­ಜಿಯಂ ವ್ಯವಸ್ಥೆಯನ್ನು ನೇಪಥ್ಯಕ್ಕೆ ಸರಿ­ಸುವ ಮಸೂದೆಗೆ ಸಂಸತ್ತಿನ ಒಪ್ಪಿಗೆಯ ಮುದ್ರೆ ಬಿದ್ದಿದೆ. ಹೊಸ ಕಾಯ್ದೆಯ ಅಡಿ­ಯಲ್ಲಿ ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬರ­ಲಿದೆ. ಅದರಲ್ಲಿ ಅರ್ಧದಷ್ಟು ಮಂದಿ ನ್ಯಾಯಾಂ­ಗದ ಹೊರಗಿನವರು ಇರಲಿ­ದ್ದಾರೆ. ನ್ಯಾಯಮೂರ್ತಿಗಳ ನೇಮ­ಕಾತಿಯ ಅಧಿಕಾರವನ್ನು ಹೊರ­ಗಿನವರ ಕೈಗಿಡುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯ ಹರಣಕ್ಕೆ ದಾರಿ ಮಾಡಿಕೊ­ಡಲಾಗುತ್ತಿದೆ.

ಆರಂ­ಭದ ಹಲವು ದಶಕಗಳ ಕಾಲ ಹೈಕೋರ್ಟ್‌ ಮತ್ತು ಸುಪ್ರೀಂ­ಕೋರ್ಟ್‌ ನ್ಯಾಯಮೂರ್ತಿ­ಗಳ ನೇಮ­ಕಾತಿಗೆ ಸಂಬಂಧಿಸಿದ ಪ್ರಸ್ತಾವ ಆಯಾ ನ್ಯಾಯಾಲಯಗಳ ಮುಖ್ಯ ನ್ಯಾಯ­­ಮೂರ್ತಿಗಳಿಂದ ರವಾನೆ ಆಗು­ತ್ತಿತ್ತು. ಆಗ, ಮುಖ್ಯ ನ್ಯಾಯಮೂರ್ತಿ ಶಿಫಾ­ರಸು ಮಾಡಿದ ಹೆಸರಿನ ಬಗ್ಗೆ ಕಾರ್ಯಾಂಗ ಪರಿಶೀಲನೆ ನಡೆಸುತ್ತಿತ್ತು. ಸಹ­­­ಮತ ಇಲ್ಲದಿದ್ದರೆ ಅದನ್ನು ನಿರಾ­ಕರಿ­ಸುವ ಅಧಿಕಾರ ಕಾರ್ಯಾಂಗಕ್ಕೆ ಇತ್ತು.
ಮೊದಲು ಇದ್ದ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವಗಳ ಮೇಲಾಟಕ್ಕೆ ಅವ­ಕಾಶ ಹೆಚ್ಚಾಗತೊಡಗಿತು. ನ್ಯಾಯ­ಮೂರ್ತಿ­­ಗಳ ನೇಮಕ ಮತ್ತು ವರ್ಗಾ­ವಣೆಗೆ ಸಂಬಂಧಿಸಿದ ಮೊದಲ ಪ್ರಕರಣ (ಎಸ್‌.ಪಿ.ಗುಪ್ತ ಪ್ರಕರಣ) ಸುಪ್ರೀಂ­ಕೋರ್ಟ್‌ ಮುಂದೆ ಹೋದ ದಿನದಿಂದ ಹೊಸ ವ್ಯವಸ್ಥೆಯ ಅಗತ್ಯ ಕುರಿತ ಚರ್ಚೆ ಆರಂಭವಾಗಿತ್ತು. ಆಮೇಲೆ ಸುಪ್ರೀಂ­ಕೋರ್ಟ್‌ ವಕೀಲರ ಸಂಘದ ಪ್ರಕರಣ­ದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠ, ನ್ಯಾಯಾಂಗ ನೇಮಕಾತಿಯ

ಪ್ರಾಥಮಿಕ ಹಕ್ಕು ನ್ಯಾಯಾಂಗದ ಬಳಿಯೇ ಇರಬೇಕು ಎಂದು ಹೇಳಿತು. ಆ ತೀರ್ಪಿನ ಆಧಾರದಲ್ಲೇ ಕೊಲಿಜಿಯಂ ವ್ಯವಸ್ಥೆ ಬಂತು. ಕೊಲಿ­ಜಿಯಂ ಶಿಫಾರಸು ಮೊದಲನೇ ಬಾರಿ ಹೋದಾಗ ಆ ಹೆಸರಿನ ವಿರುದ್ಧ ಮಾಹಿತಿ ಇದ್ದರೆ ಅದರೊಂದಿಗೆ ವಾಪಸು ಕಳುಹಿಸ­ಬಹುದಿತ್ತು. ಅದನ್ನು ಪರಿಶೀಲಿಸಿ ಕೊಲಿ­ಜಿಯಂ ಮತ್ತೆ ಅದೇ ಹೆಸರನ್ನು ಶಿಫಾರಸು ಮಾಡಿ­ದರೆ ಒಪ್ಪಿಕೊಳ್ಳಲೇಬೇಕಿತ್ತು. ಬಳಿಕ ರಾಷ್ಟ್ರಪತಿಯವರು ನ್ಯಾಯಮೂರ್ತಿಗಳ ನೇಮಕಾತಿ ಆದೇಶ ಹೊರಡಿಸಬೇಕಿತ್ತು. ಸುಪ್ರೀಂಕೋರ್ಟ್‌ ಆದೇಶದಿಂದ ನ್ಯಾಯ­ಮೂರ್ತಿ­ಗಳ ನೇಮಕಾತಿಯಲ್ಲಿ ಕಾರ್ಯಾಂ­ಗದ ಮತ್ತು ರಾಜಕೀಯ ಪ್ರಭಾವ ತಪ್ಪಿ ಹೋಗಿತ್ತು. ಒಂಬತ್ತು ನ್ಯಾಯ­ಮೂರ್ತಿಗಳ ತೀರ್ಪಿನ ನಂತರ ರಾಷ್ಟ್ರ­ಪತಿಯವರ ಮಧ್ಯಪ್ರವೇಶದ ಮೂಲಕ ಅದರ ಜಾರಿ ತಡೆಯುವ ಪ್ರಯ­­ತ್ನವೂ ಆಗಿತ್ತು. ಆಗಲೂ ಕಾರ್ಯಾಂ­ಗದ ಪರವಾದ ತೀರ್ಮಾನ ಬರಲಿಲ್ಲ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಐದು ಜನರ ಕೊಲಿಜಿಯಂ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮ­­ಕಕ್ಕೆ ಮೂರು ಜನರ ಕೊಲಿಜಿಯಂ ಇರು­ತ್ತದೆ. ಅಲ್ಲಿ ಒಬ್ಬರು ಹೇಳಿದ್ದನ್ನು ಎಲ್ಲರೂ ಸಾರಾಸಗಟಾಗಿ ಒಪ್ಪಿಕೊಳ್ಳು­ತ್ತಾರೆ ಎನ್ನಲು ಸಾಧ್ಯವಿಲ್ಲ. ಎರಡು ವರ್ಷಕ್ಕೂ ಹೆಚ್ಚು ಅವಧಿಗೆ ಸುಪ್ರೀಂ­ಕೋರ್ಟ್‌ ಕೊಲಿಜಿಯಂ ಸದಸ್ಯ­ನಾಗಿ ಕೆಲಸ ಮಾಡಿದ್ದೇನೆ. ನನಗೆ ಈ ವಿಷಯದಲ್ಲಿ ನೇರ ಅನುಭವವಿದೆ. ನ್ಯಾಯಮೂರ್ತಿಗಳ ನೇಮಕಾತಿ ಪ್ರಸ್ತಾವ ಬಂದಾಗ ವಿಸ್ತೃತವಾಗಿ ಚರ್ಚೆ ಆಗುತ್ತದೆ. ಆಗ ನೇಮಕಾತಿಗೆ ಪರಿಗಣನೆಗೆ ಒಳಗಾಗುವ ವ್ಯಕ್ತಿಯ ಕುರಿತು ಎಲ್ಲರ ಬಳಿ ಇರುವ ಮಾಹಿತಿ ವಿನಿಮಯ ಆಗುತ್ತದೆ.

ADVERTISEMENT

ಅಲ್ಲದೇ ಕೊಲಿಜಿಯಂ ಅಂದರೆ ಐದು ಜನ ಅಥವಾ ಮೂರು ಜನರ ತಂಡ ಮಾತ್ರವಲ್ಲ. ಇತರೆ ನ್ಯಾಯಮೂರ್ತಿ­ಗಳಿಂ­ದಲೂ ಮಾಹಿತಿ ಪಡೆಯಲು ಅವಕಾಶ ಇರುತ್ತದೆ. ನ್ಯಾಯಮೂರ್ತಿ­ಗಳ ಹುದ್ದೆಗೆ ಪರಿಗಣಿಸುವವರು ಕಾನೂನಿನ ವಿಚಾರದಲ್ಲಿ ಹೊಂದಿರುವ ಅನುಭವ, ಜ್ಞಾನ, ಪರಿಣತಿ, ಅವರ ವೈಯಕ್ತಿಕ ವಿಚಾರಗಳ ಬಗ್ಗೆ ನ್ಯಾಯಾಂಗ­ದಲ್ಲಿ ಇರುವವರಿಗೆ ಮಾತ್ರ ಮಾಹಿತಿ ಇರುತ್ತದೆ. ನ್ಯಾಯಾಂಗದ ಹೊರಗಿನ­ವರಿಗೆ ಈ ವಿಷಯಗಳಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ.

ಹೊಸ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬರಲಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಮೂರ್ತಿಗಳು, ಕಾನೂನು ಸಚಿವರು ಮತ್ತು ಇಬ್ಬರು ಗಣ್ಯ ವ್ಯಕ್ತಿಗಳು ಆಯೋಗದ ಸದಸ್ಯರಾಗಿ­ರುತ್ತಾರೆ. ಗಣ್ಯ ವ್ಯಕ್ತಿಗಳು ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇರುವವರೇ ಆಗಿರ­ಬೇಕಿಲ್ಲ. ಕಾನೂನು ಸಚಿವರು ಕೂಡ. ಅವರು ಹಿಂದೆ ವಕೀಲರಾಗಿರ­ಬಹುದು. ಸಚಿವರಾಗುವ ಸಮಯಕ್ಕೆ ವಕೀಲಿ ವೃತ್ತಿ ಬಿಟ್ಟು ದೀರ್ಘ ಅವಧಿ ಆಗಿರುತ್ತದೆ. ನ್ಯಾಯಾಧೀಶರ ಬಗ್ಗೆ ಅವರಿಗೆ ಮಾಹಿತಿ ಇರಬಹುದು. ಆದರೆ ಅದು ಸ್ವಂತ ಮಾಹಿತಿ ಆಗಿರುವುದಿಲ್ಲ.

ಆಯೋಗದ ಸದಸ್ಯರಾಗುವ ಇಬ್ಬರು ಗಣ್ಯ ವ್ಯಕ್ತಿಗಳಿಗಂತೂ ನ್ಯಾಯಾಧೀಶರ ಬಗ್ಗೆ ಮಾಹಿತಿ ಇರುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಆ ರೀತಿಯ ಮಾಹಿತಿ ತಮಗೆ ಇದೆ ಎಂದು ಅವರು ಹೇಳುವುದೇ ಆದರೆ, ಅದು ಯಾವುದೋ ಪ್ರಭಾವದಿಂದ ಬಂದಿ­ರುವು­­ದಾಗಿರುತ್ತದೆ. ಇಲ್ಲವೇ ನ್ಯಾಯಾ­ಧೀಶರ ಹುದ್ದೆಗೆ ಪರಿಗಣನೆ ಆಗುತ್ತಿರುವ ವ್ಯಕ್ತಿಗಳ ವಿರುದ್ಧವಾದ ಮೂಲದಿಂದ ಬಂದದ್ದಾಗಿರುತ್ತದೆ. ಕಾನೂನಿನ ಭಾಷೆಯಲ್ಲಿ ನಾವು ಇದನ್ನು 'Hearsay' ಎಂದು ಹೇಳುತ್ತೇವೆ. ಅದು ಯಾರೋ ಹೇಳಿದ್ದನ್ನು ಕೇಳಿಪಡೆದ ಮಾಹಿತಿಯೇ ಹೊರತು, ತಾವಾಗಿ ತಿಳಿದದ್ದಲ್ಲ. ಇದರಿಂದಾಗಿ ಅನ್ಯಾಯ ಆಗುವ ಸಂದರ್ಭವೇ ಹೆಚ್ಚು. ಹೊಸ ಕಾನೂನಿನ ಪ್ರಕಾರ ಆರು ಜನರ ಆಯೋಗದಲ್ಲಿ ಇಬ್ಬರು ಒಂದು ಹೆಸರಿಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ. ಈ ‘ವೀಟೊ’ ಅಧಿಕಾರ ನ್ಯಾಯಾಂಗದ ಪಾಲಿಗೆ ದೊಡ್ಡ ಅಪಾಯವಾಗಿ ಕಾಡಲಿದೆ.

ಸರ್ಕಾರವೊಂದು ಅಸ್ತಿತ್ವಕ್ಕೆ ಬರು­ವಾಗ ಪ್ರಧಾನಿ ಅಥವಾ ಮುಖ್ಯಮಂತ್ರಿ ತನ್ನ ಸಂಪುಟದ ಸದಸ್ಯರು ಯಾರು ಇರಬೇಕು ಎಂಬುದನ್ನು ನಿರ್ಧರಿಸು­ತ್ತಾರೆ. ಪ್ರಾಮಾಣಿಕರು, ಜನರ ಸೇವೆ ಮಾಡುವ ಬದ್ಧತೆ ಇರುವವರೇ ಮಂತ್ರಿ­ಗಳಾಗ­ಬೇಕು ಎಂಬುದು ಜನರ ಆಶಯ. ಆದರೆ, ಅಲ್ಲಿ ಸಚಿವರ ಆಯ್ಕೆಗೆ ಯಾವ ಆಯೋಗವೂ ಇರುವುದಿಲ್ಲ.  ಕಾರ್ಯಾಂಗದ ಸಿಬ್ಬಂದಿಯ ನೇಮಕಾತಿ­ಯಲ್ಲೂ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಹೀಗಿರುವಾಗ ನ್ಯಾಯಾಂ­ಗದ ನೇಮಕಾತಿಯಲ್ಲಿ ಏಕೆ ರಾಜಕೀಯ ಮತ್ತು ಕಾರ್ಯಾಂಗದ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಕು?

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠದ ತೀರ್ಪು ಬಂದಾಗಿನಿಂದಲೂ, ‘ನ್ಯಾಯಾಂಗ­­ದವರು ನಮ್ಮ ಅಧಿಕಾರ­­­ವನ್ನು ಕಿತ್ತುಕೊಂಡಿದ್ದಾರೆ’ ಎಂಬ ಭಾವನೆ ಕಾರ್ಯಾಂಗದಲ್ಲಿ ಬೇರೂರಿತ್ತು. ಅದನ್ನು ವಾಪಸು ಪಡೆಯಬೇಕೆಂಬ ಹವಣಿಕೆ ನಿರಂತರವಾಗಿ ಇತ್ತು. ಇತ್ತೀಚೆಗೆ ಹೈಕೋರ್ಟ್‌ ಮತ್ತು ಸುಪ್ರೀಂ­ಕೋರ್ಟ್‌ಗಳ ಕೆಲವು ನ್ಯಾಯಮೂರ್ತಿ­ಗಳ ನೇಮಕಾತಿಯಲ್ಲಿ ತಪ್ಪುಗಳಾಗಿವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನ್ಯಾಯಾಧೀಶರ ನೇಮಕಾತಿಯಲ್ಲೂ ಹೊರಗಿನವರ ಪ್ರವೇಶಕ್ಕೆ ದಾರಿ ಮಾಡಿ­ಕೊಡ­ಲಾಗಿದೆ. ತಪ್ಪುಗಳಾಗಿರು­ವುದು ನಿಜ. ಇದು ಕೊಲಿಜಿಯಂ ಸದಸ್ಯರಾಗಿದ್ದ­ವರು ಮಾಡಿದ ವೈಯಕ್ತಿಕ ತಪ್ಪೇ ಹೊರತು ಕೊಲಿಜಿಯಂ ವ್ಯವಸ್ಥೆಯ ತಪ್ಪಲ್ಲ. ಇಂತಹ ತಪ್ಪುಗಳು ಕೊಲಿ­ಜಿಯಂಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬರುವ ನ್ಯಾಯಾಂಗ ನೇಮಕಾತಿ ಆಯೋಗ­ದಲ್ಲೂ ಆಗುತ್ತವೆ. ಆದ್ದರಿಂದ ಒಳ್ಳೆಯ ವ್ಯಕ್ತಿಗಳನ್ನು ನೇಮಕ ಮಾಡಲು ಕೊಲಿಜಿಯಂ ವ್ಯವಸ್ಥೆ ಉಳಿಯುವುದು ಅಗತ್ಯವಿದೆ.

ಯಾವುದೋ ನೆಪ ಹೇಳಿಕೊಂಡು ನ್ಯಾಯಾಂಗದಲ್ಲಿ ಹೊರಗಿನವರ ಹಸ್ತ­ಕ್ಷೇಪಕ್ಕೆ ಅವಕಾಶ ನೀಡಬಾರದು. ನ್ಯಾಯ­ಮೂರ್ತಿಗಳು ಪೂರ್ವಗ್ರಹ ಪೀಡಿತರಾಗಿ ಇರುತ್ತಾರೆ ಎಂದು ನೀವು ಹೇಳುವುದಾದರೆ ಈ ನ್ಯಾಯಾಂಗ ನೇಮಕಾತಿ ಆಯೋಗದ ಸದಸ್ಯರಾಗುವ ಇತರರು ಅದಕ್ಕಿಂತಲೂ ಹೆಚ್ಚು ಪೂರ್ವಗ್ರಹ ಹೊಂದಿದವ­ರಾಗಿರುತ್ತಾರೆ. ಕೊಲಿಜಿಯಂ ವ್ಯವಸ್ಥೆಯನ್ನು ರದ್ದು­ಮಾಡಿ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಬೇಕೆಂಬ ಶಿಫಾರಸು ಮತ್ತು ಅದಕ್ಕೆ ಪೂರಕವಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಒಪ್ಪಿಗೆ ಪಡೆದಿರುವ ಬೆಳವಣಿಗೆ­ಗಳಿಂದ ನ್ಯಾಯಾಂಗಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ಆಗದು. ದಾರಿಯಲ್ಲಿ ಹೋಗುವವ­ರೆಲ್ಲರೂ ನ್ಯಾಯಾಂಗದ ಬಗ್ಗೆ ಮಾತನಾ­ಡುವುದಕ್ಕೆ ಅವಕಾಶ ದೊರೆತಂತಾಗಿದೆ.

ನ್ಯೂನತೆಗಳಿವೆ, ಪರಿಹಾರವೂ ಇದೆ: ಈಗ ಇರುವ ಕೊಲಿಜಿಯಂ ವ್ಯವಸ್ಥೆ­ಯಲ್ಲಿ ಕೆಲವು ನ್ಯೂನತೆಗಳಿರುವುದು ನಿಜ. ಈ ವ್ಯವಸ್ಥೆಯಲ್ಲಿ ಪಾರ­ದರ್ಶ­ಕತೆ ಇಲ್ಲ. ನ್ಯಾಯಾಂಗದ ಆಡಳಿತ­ದಲ್ಲಿ ರಹಸ್ಯ ಕಾಯ್ದುಕೊಳ್ಳುವುದು ಹಿಂದಿ­ನಿಂದಲೂ ನಡೆದುಬಂದಿದೆ. ನ್ಯಾಯಾ­­­ಲಯ­­­ದಲ್ಲಿ ನಡೆ­ಯುವ ವಿಚಾರಣೆ­ಹೊರತು­ಪಡಿಸಿ ಅಲ್ಲಿನ ಆಡ­ಳಿತಕ್ಕೆ ಸಂಬಂಧಿಸಿದ ಯಾವುದೇ ವಿಷಯ­ವೂ ಹೊರ­ಬರು­ವುದಿಲ್ಲ. ಇದನ್ನು ಕಿತ್ತು ಹಾಕಬೇಕು. ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯ ವಿಚಾರದಲ್ಲಿ ಚರ್ಚೆ ನಡೆ­ಯುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ­ಪಡಿಸಬೇಕು. ನ್ಯಾಯಾಂಗದ ವೆಬ್‌­ಸೈಟ್‌ಗಳು, ಸೂಚನಾ ಫಲಕ­ಗಳಲ್ಲಿ ಅದನ್ನು ಪ್ರಕಟಿಸಬೇಕು. ನೇಮ­ಕಾತಿಗೆ ಪರಿಗಣಿಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಬಳಿ ಮಾಹಿತಿ ಇದ್ದರೆ, ಅದನ್ನು ಸ್ವೀಕರಿಸಿ, ಪರಿಶೀಲಿಸಬೇಕು.

ಒಬ್ಬ ಅನರ್ಹ ಅಥವಾ ತಪ್ಪೆಸಗಿರುವ ನ್ಯಾಯ­­ಮೂರ್ತಿಯನ್ನು ಸುಲಭವಾಗಿ ವಜಾ ಮಾಡು­­ವುದಕ್ಕೆ ನಮ್ಮ ಸಂವಿಧಾನ­ದಲ್ಲಿ  ಸಾಧ್ಯವಿಲ್ಲದಿರುವುದು ಎರಡನೇ ನ್ಯೂನತೆ. ಈ ಕಾರಣದಿಂದಾಗಿಯೇ ನ್ಯಾಯಾಂ­ಗದ ಅತ್ಯುನ್ನತ ಹುದ್ದೆಗಳಿಗೆ ನೇಮಕ ಆಗುವವರೆಗೂ ಶುದ್ಧಹಸ್ತ­ರಾಗಿ­ದ್ದವರು ನಂತರ ದಾರಿ ತಪ್ಪುತ್ತಾರೆ. ನ್ಯಾಯ­ಮೂರ್ತಿಗಳಾಗಿ ನೇಮಕ­­ಗೊ­ಳ್ಳುವ ಬಹುತೇಕರು ವಕಾ­ಲತ್ತು ಮಾಡು­ತ್ತಿ­ರು­ವಾಗ ಒಳ್ಳೆಯವ­ರಾಗಿರು­ತ್ತಾರೆ. ನ್ಯಾಯ­­ಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಆಗ ಅಡ್ಡ­ದಾರಿ ಹಿಡಿಯುತ್ತಾರೆ. ಇವತ್ತು ಬೆರಳು ತೋರಿಸುತ್ತಿರುವವರಲ್ಲಿ ಶೇಕಡ 75ರಷ್ಟು ಮಂದಿ ವಕೀಲರಾಗಿದ್ದ ಅವಧಿಯಲ್ಲಿ ಒಳ್ಳೆಯ ಹೆಸರು ಹೊಂದಿ­ದ­ವ­ರಾಗಿದ್ದರು ಎಂಬುದು ಇದಕ್ಕೆ ನಿದರ್ಶನ.

ಈವರೆಗೆ ಹಲವು ನ್ಯಾಯಮೂರ್ತಿ­ಗಳು ತಪ್ಪು ಮಾಡಿರುವುದು ನ್ಯಾಯ­ಮೂರ್ತಿ­ಗಳೇ ನಡೆಸಿದ ವಿಚಾರಣೆ­ಯಲ್ಲೇ ಸಾಬೀತಾಗಿದ್ದರೂ ತಪ್ಪಿತಸ್ಥರನ್ನು ವಜಾ ಮಾಡಲು ಸಾಧ್ಯವೇ ಆಗಿಲ್ಲ. ಅವರನ್ನು ವಾಗ್ದಂಡನೆಗೆ ಗುರಿಮಾಡಲು ಆಗಿಲ್ಲ. ಕೆಲವರು ವಾಗ್ದಂಡನೆಗೆ ಶಿಫಾ­ರಸು ಆದಾಗ ರಾಜೀನಾಮೆ ಕೊಟ್ಟು ಹೋದರು. ಅವರಿಗೆ ನಿವೃತ್ತಿ ನಂತರದ ಎಲ್ಲ ಸವಲತ್ತುಗಳು ದೊರೆಯುತ್ತಿವೆ. ಈ ವ್ಯವಸ್ಥೆ ಬದ­ಲಾ­ಗಬೇಕು. ನನ್ನ ಅಭಿಪ್ರಾಯದ ಪ್ರಕಾರ ನ್ಯಾಯಾಧೀಶರ ವಿರುದ್ಧದ ಆಪಾದನೆಗಳ ಕುರಿತು ತನಿಖೆ ನಡೆಸಲು ಆಯೋಗವೊಂದನ್ನು ರಚಿಸ­ಬೇಕು. ಈ ಆಯೋಗದಲ್ಲಿ ನ್ಯಾಯಾಧೀಶರು ಇರಬೇಕೆಂ­ದೇನಿಲ್ಲ. ಇದ್ದರೆ ಉತ್ತಮ. ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ದೂರು ಬಂದರೂ ಆಯೋಗ ವಿಚಾರಣೆ ಮಾಡಬೇಕು. ಈ ಆಯೋಗ ಕಳುಹಿಸುವ ವರದಿಗಳನ್ನು ಒಪ್ಪಿಕೊಂಡು ರಾಷ್ಟ್ರಪತಿಗಳು ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ತಪ್ಪು ಸಾಬೀತಾದರೆ ವಜಾ ಮಾಡಲೇಬೇಕು. ವರ್ಗಾವಣೆಯಂಥ ಕಣ್ಣೊರೆಸುವ ಕ್ರಮಗಳಿಗೆ ಅವಕಾಶ ಇರಬಾರದು. ಕಾಲಮಿತಿಯೊಳಗೆ ನ್ಯಾಯ­ಮೂರ್ತಿಗಳ ನೇಮ­ಕಾತಿಗೂ ಕ್ರಮ ಕೈಗೊಳ್ಳಬೇಕು.

(ಲೇಖಕರು ರಾಜ್ಯ ನಿವೃತ್ತ ಲೋಕಾಯುಕ್ತರು ಹಾಗೂಸುಪ್ರೀಂ­ಕೋರ್ಟ್‌ ನಿವೃತ್ತ ನ್ಯಾಯ­ಮೂರ್ತಿ)
ನಿರೂಪಣೆ: ವಿ.ಎಸ್‌.ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.