ADVERTISEMENT

ನೊಣದ ಮೀಸೆ ಎಣಿಸದಿರಿ

ನಾಡಗೀತೆ ಪರಿಷ್ಕರಣ ವಿವಾದ

ಕೆ.ಎಸ್‌.ನಿಸಾರ್ ಅಹಮದ್
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST
ನೊಣದ ಮೀಸೆ ಎಣಿಸದಿರಿ
ನೊಣದ ಮೀಸೆ ಎಣಿಸದಿರಿ   

ನಾಡಗೀತೆ ವಿಷಯದಲ್ಲಿ ಉದ್ಭವಿ­ಸುವುದು ಎರಡೇ ಪ್ರಶ್ನೆಗಳು. ಒಂದೋ ಅದನ್ನು ಇಡಿಯಾಗಿ ಒಪ್ಪಿ­ಕೊಳ್ಳ­ಬೇಕು ಇಲ್ಲವೇ ಅದನ್ನು ಅಂಗೀಕ­ರಿ­ಸ­ಬಾರದು. ಒಮ್ಮೆ ನಾಡ­ಗೀತೆಯನ್ನು ಅಂಗೀಕರಿಸಿ ಅದು ಸಾರ್ವಜನಿಕವಾಗಿ  ಚಾಲ್ತಿಗೆ ಬಂದ ಮೇಲೆ ಮುಗಿಯಿತು. ಪರ್ಯಾಯವಾಗಿ ಇನ್ನೊಂದನ್ನು ಹಾಡಲೂ ಆಗದು, ಅಂಗ­ಚ್ಛೇದ ಮಾಡುವು­ದಾಗಲೀ ಕತ್ತರಿ ಹಾಕುವುದಾಗಲೀ ಸಲ್ಲದು.

‘ಜಯ ಭಾರತ ಜನನಿಯ ತನುಜಾತೆ’ ಗೀತೆಯಲ್ಲಿರುವ ಎಷ್ಟೋ ಹೆಸರುಗಳು ಬರೀ ಕರ್ನಾಟಕಕ್ಕಷ್ಟೇ ಅನ್ವಯಿಸು­ವುದಿಲ್ಲ. ಇಡೀ ಭಾರತವನ್ನು ಪ್ರತಿನಿಧಿಸುತ್ತವೆ. ‘ತೈಲಪ, ಹೊಯ್ಸಳ­ರಾಳಿದ ನಾಡೇ’ ಎಂಬ ಸಾಲಿನಲ್ಲಿ ಕೆಲವರು ಪುಲಿಕೇಶಿ, ವಿಷ್ಣುವರ್ಧನನ ಹೆಸರಿಲ್ಲ ಎನ್ನುತ್ತಾರೆ. ಒಂದು ಗೀತೆಯಲ್ಲಿ ರಾಜ್ಯ, ರಾಷ್ಟ್ರದ ಒಬ್ಬೊಬ್ಬರನ್ನೂ ಪಟ್ಟಿ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಅಥವಾ ಜನರಿಗೆ ವರದಿ ಸಲ್ಲಿಸುವ ಸಲುವಾಗಿ ಕವಿ ಇಲ್ಲಿ ಯಾವುದೇ ಪಟ್ಟಿ ತಯಾರಿಸಿಲ್ಲ.

ದಶಕಗಳ ಹಿಂದೆ ಅದನ್ನು ರಚಿಸಿದ ಆ ಹೊತ್ತಿನಲ್ಲಿ ಅವರು ತಮಗೆ ಹೊಳೆದಿದ್ದನ್ನು ಬರೆದಿದ್ದಾರೆ. ತೈಲಪ ಎಂದಾಕ್ಷಣ ಅಲ್ಲಿ ಅವನೊಬ್ಬನೇ ಬರುವುದಿಲ್ಲ, ಕೃಷ್ಣದೇವರಾಯನಂಥ ಅನೇಕ ಅರಸರು ಕಣ್ಮುಂದೆ ಸುಳಿಯುತ್ತಾರೆ. ಬಸವಣ್ಣ ಎಂದಾಗ ಇಡೀ ಶರಣ ಶರಣೆಯರು ಸ್ಮೃತಿಪಟಲದಲ್ಲಿ ಹಾದು ಹೋಗುತ್ತಾರೆ. ಸೂಚ್ಯವಾಗಿ ಒಂದು ಹೆಸರು ಹೇಳಿದರೆ ಅದರ ಹಿಂದೆ ಅನೇಕರಿದ್ದಾರೆ ಎಂದು ಕಲ್ಪಿಸಿಕೊಳ್ಳಬೇಕು. ಹೀಗಾಗಿ ನಾಡಗೀತೆ ಸಾಂಕೇತಿಕವಾಗಿ ಅನೇಕ ಅರ್ಥಗಳನ್ನು ಧ್ವನಿಸುತ್ತದೆ.

ಮೊದಲಿಗೆ, ಪದ್ಯವನ್ನು ಗದ್ಯದ ರೀತಿ ವಿಶ್ಲೇಷಿಸುವುದೇ ತಪ್ಪು. ವಾಚ್ಯ ಮತ್ತು ವ್ಯಂಗ್ಯ (ಸೂಕ್ಷ್ಮತೆ, ಮರ್ಮಜ್ಞ) ಗದ್ಯದಲ್ಲಿ ಸಾಧ್ಯ. ಆದರೆ ಪದ್ಯದಲ್ಲಿ ಎಲ್ಲವನ್ನೂ ಇಡಿಯಾಗಿ ಹೇಳ­ಲಾ­ಗದು. ಕಾವ್ಯ ಸಂಕ್ಷಿಪ್ತ ಅನುಭವ ನೀಡುತ್ತದೆ. ಇಲ್ಲಿ ಕಾವ್ಯಾ­ನು­ಭೂತಿ ಮುಖ್ಯ. ಅನ್ವೇಷಣೆ, ವಿವರಣಾತ್ಮಕ ಮಾರ್ಗ ಏನಿದ್ದರೂ ಗದ್ಯಕ್ಕೆ ಸರಿ. ಕಾವ್ಯ­ದಲ್ಲಿ ಇರುವ, ವಾಸ್ತವಕ್ಕೆ ವಿರುದ್ಧ­ವಾದ ಉತ್ಪ್ರೇಕ್ಷಾ­ಲಂಕಾರವನ್ನು ನಾವು ಅರ್ಥ ಮಾಡಿ­ಕೊಳ್ಳ­ಬೇಕು. ಅದು ಬಿಟ್ಟು ತೀರಾ ವಿಸ್ತರಿಸುತ್ತಾ ಲೋಪ ಹುಡುಕಬಾರದು.

ಸ್ವಾತಂತ್ರ್ಯ ಆಂದೋಲನ, ನಾಡಿನ ಏಕೀಕರಣದ ಕನಸು ಎರಡೂ ಜೊತೆಗೂಡಿದ್ದಾಗ, ಹರೆಯದಲ್ಲಿದ್ದ ಕುವೆಂಪು ಸಹಜವಾಗಿಯೇ ಇದ್ದ

ಉತ್ಸಾಹ, ಆವೇಶದ ಭರದಲ್ಲಿ ಈ ಗೀತೆಯನ್ನು ರಚಿಸಿರಬಹುದು. ಗೀತೆಯಲ್ಲಿ ವೈಚಾರಿಕವಾಗಿ ಕೆಲವು ವಿಷಯ­ಗಳಿದ್ದರೂ ಭಾವನಾತ್ಮಕತೆಗೇ ಹೆಚ್ಚು ಒತ್ತು ನೀಡ­ಲಾಗಿದೆ. ಕೇವಲ ಬೌದ್ಧಿಕವಾಗಿ ಆಲೋಚಿಸುವ ಹೊತ್ತಲ್ಲ ಅದು. ಜನರಲ್ಲಿ ನಾಡಿನ ಬಗ್ಗೆ ಅಭಿಮಾನ ಮೂಡಿಸಬೇಕಾದ ಜರೂರಿದ್ದಾಗ ಎಲ್ಲವನ್ನೂ ತರ್ಕಬದ್ಧವಾಗಿಯೇ ಹೇಳಲಾಗದು.

ಇಂತಹ ಗೀತೆಯನ್ನು ನಾವಿಂದು ಬಹಳ ಅಗೌರವವಾದ ರೀತಿಯಲ್ಲಿ ಹಾಡು­ತ್ತಿದ್ದೇವೆ. ತುಂಬಾ ಉದ್ದವಾಯಿತು, ಹಾಡು ಮುಗಿ­ಯು­ವ­ವರೆಗೂ ನಿಲ್ಲಲಾಗದು ಎನ್ನುವವರಿದ್ದಾರೆ. ದರ್ಶಿನಿ­ಗಳಲ್ಲಿ ಗಂಟೆ­ಗಟ್ಟಲೆ ತಿಂಡಿಗಾಗಿ ಕಾದು ನಿಲ್ಲಲಾಗುತ್ತದೆ, ನಾಡಗೀತೆ­ಗಾಗಿ ಎರಡು ಮೂರು ನಿಮಿಷ ನಿಲ್ಲಲಾಗದು ಎಂದರೆ ಹೇಗೆ? ತೀರಾ ಕಷ್ಟವಾದರೆ ಅಸಹಾಯಕರು, ವೃದ್ಧರು, ಮಕ್ಕಳು ಕೂತರೆ ಅಕ್ಷಮ್ಯವೇನಲ್ಲ. ಮನಸೋಇಚ್ಛೆ ಸಂಗೀತ ಅಳವಡಿಸಿ­ಕೊಂಡು, ಆಹಾ ಓಹೋ ಎಂದೆಲ್ಲ ಕೂಗಾಡಿಕೊಂಡು ಹಾಡಿದರೆ ಐದಾರು ನಿಮಿಷ ಆಗುತ್ತದೆ. ಇಲ್ಲದಿದ್ದರೆ ಅಬ್ಬಬ್ಬಾ ಎಂದರೆ ಎರಡೂವರೆಯಿಂದ ಮೂರೂವರೆ ನಿಮಿಷ ಸಾಕಷ್ಟೆ.

ನಾಡಗೀತೆಯನ್ನು ವಿಭಿನ್ನ ರಾಗದಲ್ಲಿ ಹಾಡುವುದೂ ಕೂಡದು. ಮೈಸೂರು ಅನಂತಸ್ವಾಮಿ ಮೊದಲು ಈ ಗೀತೆಗೆ ರಾಗ ಸಂಯೋಜಿಸಿದ್ದರು. ಬಳಿಕ ಬೇರೆಬೇರೆಯವರು ರಾಗ ಹಾಕಿ­ದ್ದನ್ನು ಸರ್ಕಾರ ಮತ್ತು ಸಾರ್ವಜನಿಕರು ಅಂಗೀಕರಿಸಿ ಹಾಡ­ತೊಡಗಿದರು. ಪ್ರತಿ ಚರಣಕ್ಕೂ ಆಲಾಪ ಯಾಕೆ ಬೇಕು? ಆರಂಭ, ಅಂತ್ಯದಲ್ಲಿ ಇದ್ದರಷ್ಟೇ ಸಾಲದೇ? ಕೀಬೋರ್ಡ್‌, ರಿದಂಪ್ಯಾಡ್‌ ಎಲ್ಲವನ್ನೂ ಬಳಸಿದರೆ ಅದು ಸಿನಿಮಾ ಸಂಗೀತ ಆಗುತ್ತದೆ ಅಷ್ಟೆ. ನಾಡಗೀತೆ ಸಂಗೀತ ವಿಹಿತವಾಗಿ ಇರ­ಬೇಕೇ ಹೊರತು ಪಂಕ್ತಿಗಳ ಭಾವಾರ್ಥವನ್ನೇ ನುಂಗುವಂತೆ ಅಲ್ಲ.

ನಾಡಗೀತೆಗೆ ರಾಷ್ಟ್ರಗೀತೆಯಂತೆಯೇ ಒಂದು ಪಾವಿತ್ರ್ಯ, ಗೌರವ, ಗಾಂಭೀರ್ಯ ಇದೆ. ಅದನ್ನು ಹಾಡುವಾಗ ಕೆಲವರು ಕ್ಯಾಮೆರಾದತ್ತ ನೋಡುವುದು, ಗಣ್ಯರೆಡೆ ಗಮನ ಕೇಂದ್ರೀಕರಿ­ಸುವುದನ್ನು ಕಂಡಿದ್ದೇನೆ. ದುಃಖದ ಸಂಗತಿ ಎಂದರೆ, ನಾಡಗೀತೆ ಮುಗಿದ ಕೂಡಲೇ ಕೆಲವರು ಚಪ್ಪಾಳೆ ತಟ್ಟುತ್ತಾರೆ, ಸಿಳ್ಳು ಹಾಕುತ್ತಾರೆ. ಇದು ಸಹ ಕೂಡದು. ಆರಂಭದಲ್ಲಿ ಗೌರವ ಸೂಚಕವಾಗಿ ಎದ್ದುನಿಂತು ಬಳಿಕ ಮೌನವಾಗಿ ಕೂರಬೇಕು.

‘ಆಹಾ ಕನ್ನಡ ನಾಡೇ, ಓಹೋ ಕನ್ನಡ ನಾಡೇ’ ಎಂದೆಲ್ಲ ಕರ್ನಾಟಕಕ್ಕಷ್ಟೇ ಸೀಮಿತವಾಗಿ ಬರೆಯುತ್ತಿದ್ದ ಕಾಲಘಟ್ಟದಲ್ಲಿ ಕುವೆಂಪು ‘ಜಯ ಭಾರತ ಜನನಿಯ ತನುಜಾತೆ’ ಎಂದು ವಿಶಾಲಾರ್ಥದಲ್ಲಿ ಬರೆದಿದ್ದಾರೆ. 10ನೇ ಶತಮಾನದ ಲಕ್ಷಣ ಗ್ರಂಥದಲ್ಲಿರುವ ‘ಕವಿರಾಜಮಾರ್ಗ’ದಲ್ಲಿ ‘ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ’ ಎಂಬ ಸಾಲಿದೆ. ಕರ್ನಾ­ಟಕವು ಭಾರತದ ಭಾಗವಾಗಿದ್ದರೂ ಕನ್ನಡದ ಜನರಿಗೆ ತಮ್ಮದೇ ಆದ ವೈಶಿಷ್ಟ್ಯ ಇದೆ; ಜಗತ್ತಿನ ಒಂದು ಭಾಗವಾಗಿ ವಸುಧಾ ವಲಯ ವಿಲೀನವಾಗಿರುವ ಪ್ರದೇಶವಾದರೂ ತನ್ನತನ ಕಾಯ್ದು­ಕೊಳ್ಳುವ ವಿಶೇಷತೆ, ಸ್ವೋಪಜ್ಞತೆ ಕರ್ನಾಟಕಕ್ಕಿದೆ ಎಂಬುದನ್ನು ಅದು ಪ್ರತಿಪಾದಿಸುತ್ತದೆ.

ಇಂತಹದ್ದೊಂದು ಕಲ್ಪನೆ ಮೊದಲಿಗೆ ಆವಿರ್ಭವಿಸಿದ್ದೇ ಕುವೆಂಪು ಅವರಲ್ಲಿ. ಬರೀ ಕನ್ನಡ ನಾಡೊಂದನ್ನೇ ಅವರು ವರ್ಣಿಸಿದ್ದರೆ ಕಬೀರ, ರಾಮಾನುಜ ಅವರನ್ನೆಲ್ಲ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಹೀಗಾಗಿ ನಾಡಗೀತೆಯಲ್ಲಿರುವ ಸಹಜ ಸೂಕ್ಷ್ಮವನ್ನು, ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ನಾಡಗೀತೆಯನ್ನು ತಲ್ಲೀನರಾಗಿ ತಾದಾತ್ಮ್ಯ­ದಿಂದ ಕೇಳಿದರೆ ಮೈ ಜುಂ ಎನ್ನುತ್ತದೆ. ಕವಿಭಾವ ಅಂತಃ­ಸ್ಫೂರ್ತಿ­ಯಾಗಿ ಸ್ಫುರಿಸುತ್ತದೆ. ಕಾವೇರಿ, ತುಂಗೆ ಎಂದ ಕೂಡಲೇ  ಇಡೀ ಮಲೆನಾಡಿನ ನೈಸರ್ಗಿಕ ಸೊಬಗು ಕಣ್ತುಂಬಿ­ಕೊಳ್ಳು­ತ್ತದೆ. ಅದನ್ನೆಲ್ಲ  ಅನುಭವಿಸಿ ಸಂತೋಷ ಪಡಬೇಕು.

ದುರದೃಷ್ಟ­ವೆಂದರೆ ಇಡೀ ಪದ್ಯದ ಅಂತರಾರ್ಥ­ವನ್ನು ವಿದ್ಯಾವಂತರು ಸಹ ಸರಿಯಾಗಿ ಗ್ರಹಿಸಿಲ್ಲ. ಕವಿ ಮನಸ್ಸುಳ್ಳವರು, ಸೂಕ್ಷ್ಮವೇದಿಗಳು, ವಿಮರ್ಶಾತ್ಮಕ ಗುಣದವರ  ಗ್ರಹಿಕೆಗೆ ಮಾತ್ರ ಅದು ನಿಲುಕುತ್ತದೆ. ಉಳಿದವರಿಗೆ ಅರ್ಥವಾಗುತ್ತದೋ ಬಿಡುತ್ತದೋ ‘ವಂದೇಮಾತರಂ’ ಮತ್ತು ‘ಜನಗಣಮನ’ಕ್ಕೆ ನೀಡುವ ರೀತಿಯಲ್ಲೇ ಇದಕ್ಕೂ ಗೌರವ  ನೀಡಬೇಕು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸಾಲು ಎಷ್ಟು ಚೆನ್ನಾಗಿದೆ, ಏನೆಲ್ಲವನ್ನೂ ಅದು ಧ್ವನಿಸುತ್ತದೆ.

ಪ್ರಜಾಪ್ರಭುತ್ವದ ಮೌಲ್ಯವೇ ಕೇಂದ್ರೀಕೃತವಾಗಿರುವ ಈ ಸಾಲನ್ನು ಯಾಕಾಗಿ  ತೆಗೆಯಬೇಕು? ಸರ್‌ ಮಹಮದ್‌ ಇಕ್ಬಾಲ್‌ ಅವರು ‘ಸಾರೇ ಜಹಾಂ ಸೆ ಅಚ್ಛಾ’ ಗೀತೆಯಲ್ಲಿ ‘ಈ ನಾಡು ಒಂದು ಸುಂದರ­ವಾದ ತೋಟ; ಅದರಲ್ಲಿರುವ ಹಕ್ಕಿಗಳು ನಾವೆಲ್ಲ’ ಎಂದಿದ್ದಾರೆ. ಕುವೆಂಪು ಕೂಡ ಇಲ್ಲಿ ಅದನ್ನೇ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಕನ್ನಡಿಗರು ಸ್ವಭಾವತಃ ಆಕ್ರಮಣ­ಶೀಲರಲ್ಲ. ಅವರು ವಿವೇಕಿ­ಗಳು, ವಿವೇಚನೆಯುಳ್ಳವರು. ಧರ್ಮದ ತಿಕ್ಕಾಟ ಇಲ್ಲದೆ ಎಲ್ಲರನ್ನೂ ಒಪ್ಪಿ­ಕೊಳ್ಳುವ ದೊಡ್ಡ ಗುಣ, ಸಂಸ್ಕೃತಿ ಅವ­ರಿ­ಗಿದೆ. ಸೌಹಾರ್ದ, ಸಮ­ನ್ವಯ, ಸಹಬಾಳ್ವೆ ಅವರ ರಕ್ತ­ದಲ್ಲಿ ಹರಿಯು­ತ್ತಿದೆ.

ಕೇರಳದ ಶಂಕರಾ­­ಚಾರ್ಯರು, ತಮಿಳು­ನಾಡಿನಿಂದ ಬಂದ ರಾಮಾ­ನುಜಾ­ಚಾರ್ಯರಿಗೆ ನೆಲೆ ಕಲ್ಪಿಸಿದ ನಾಡು ನಮ್ಮದು. ಸ್ಥಳೀಯ­ವಾಗಿ ಸಣ್ಣಪುಟ್ಟ ಘರ್ಷಣೆ ಹೊರತು­­­ಪಡಿಸಿದರೆ  ರಕ್ತಪಾತಕ್ಕೆ ಇಲ್ಲಿ ಆಸ್ಪದವಿಲ್ಲ. ಒಟ್ಟಾರೆ­ಯಾಗಿ ನಿಜಕ್ಕೂ ಇದೊಂದು ಶಾಂತಿಯ ತೋಟ. ಅಂತಹ ಮಹಾನ್‌ ತತ್ವವನ್ನು ಧ್ವನಿಸುವ ಸಾಲನ್ನು ತೆಗೆಯು­ವುದಕ್ಕೆ ನನ್ನ ವಿರೋಧವಿದೆ. ಕೆಲವರಿಗೆ ವಿವಾದದ ಚಟ. ಎಲ್ಲದಕ್ಕೂ ಏನಾದರೂ ಕೊಂಕು ತೆಗೆದು ವಿವಾದ ಸೃಷ್ಟಿಸುವುದು ಅವರ ಸ್ವಾಭಾವಿಕ ಗುಣ.

ಪತ್ರಿಕೆ­ಯಲ್ಲಿ ಹೆಸರು ಬರುವುದಾದರೆ ಒಂದು ವರ್ಷ ಬೇಕಾ­ದರೂ ವಿವಾದವನ್ನು ಬೆಳೆಸುವವ­ರಿದ್ದಾರೆ. ನೊಣದ ಮೀಸೆ ಎಣಿಸುವ ವಿಶ್ಲೇಷಣೆ ಸಲ್ಲದು. ಕುವೆಂಪು ಬಂದು ತಮ್ಮ ಹಾಡನ್ನು ನಾಡ­ಗೀತೆ ಮಾಡಿ ಎಂದು ಯಾರಲ್ಲೂ ವಿನಂತಿ­ಸಿರ­ಲಿಲ್ಲ. ಆ ಗೀತೆ ಕನ್ನಡಿಗರ ಸ್ವಭಾವ, ಜೀವನ ಸಂಸ್ಕೃತಿ­ಯನ್ನು ಬಿಂಬಿಸು­ವುದರಿಂದ ನಾವೆಲ್ಲರೂ ಅದನ್ನು ನಾಡ­ಗೀತೆ­­ಯೆಂದು ಪ್ರೀತಿಪೂರ್ವಕ­ವಾಗಿ ಒಪ್ಪಿ­ಕೊಂಡಿ­­ದ್ದೇವೆ. ಹೀಗಾಗಿ ಅದರ ಪರಿ­ಷ್ಕರಣೆಗೆ ಸಮಿತಿ ರಚಿಸಬೇಕಾದ ಅಗತ್ಯ ಇರಲಿಲ್ಲ. ಅದು ಹೇಗಿ­ದೆಯೋ ಹಾಗೇ, ಕವಿ­ಚೇತನಕ್ಕೆ ಎಲ್ಲೂ ಅಪ­ಚಾರ ಆಗದಂತೆ ಅದನ್ನು ಬಳಸ­ಬೇಕು. ಯಾವುದೇ ಆಗಲಿ ಮೊದ­ಲಿಗೆ ಜನ ಒಂದಷ್ಟು ಗೊಣಗುತ್ತಾರೆ. ಪೆಟ್ರೋಲ್‌ ಬೆಲೆ ಏರಿ­ದಾಗಲೆಲ್ಲ ಆರಂಭ­ದಲ್ಲಿ  ತಿಣು­­ಕಾಡಿ, ನಂತರ ‘ಹೌದಪ್ಪ ದೇಶಕ್ಕೆ ಕಷ್ಟ ಇದೆ’ ಎಂದು ಏರಿದ ದರ­ವನ್ನು ಒಪ್ಪಿ­ಕೊಳ್ಳು­ವು­ದಿಲ್ಲವೇ ಹಾಗೆ.

ಬಹುಶಃ ಇದ­ಕ್ಕಿಂತ ಒಳ್ಳೆ ನಾಡ­­ಗೀತೆ ಮತ್ತೊಂ­­ದಿಲ್ಲ. ಎಲ್ಲೂ ಏಕ­ಪಕ್ಷೀಯ­ವಾಗಿ­ಲ್ಲದೆ  ಎಲ್ಲರಿಗೂ ಇದು ಅನ್ವ­ಯಿ­ಸು­­ತ್ತದೆ. ಅರಸರ ಆಳ್ವಿಕೆ ಕಾಲ­­ದಲ್ಲೂ ಪ್ರಜಾ­ಪ್ರಭು­ತ್ವದ ಮೌಲ್ಯ­ಗ­ಳನ್ನು ಕುವೆಂಪು ಸ್ಮರಿಸಿ­ದ್ದಾರೆ. ಪ್ರಮುಖ ಹಿಂದೂ ಸಮಾಜ­ವನ್ನು ಗುರು­ತಿ­ಸಿ­ದ್ದಾರೆ. ಅಖಂಡ ಕರ್ನಾ­­ಟಕವನ್ನು ಭಾರತ-­­­­­ದಿಂದ ಬೇರ್ಪ­ಡಿಸ­ಲಾ­ಗದ ಭಾಗವಾಗಿ ಚಿತ್ರಿಸಿದ್ದಾರೆ. ಹೀಗಾಗಿ ಅನೇಕ ಕನ್ನ­ಡೇತರ ಮಹಾ­ನುಭಾವರ ಆಶೀ­ರ್ವಾ­ದವೂ ನಮಗಿದೆ. ಇಂತಹ ಕೃತಜ್ಞತಾ ಭಾವ­ವನ್ನು ಬೇರೆಲ್ಲೂ ನಾನು ಕಾಣೆ.

ಕೆಲವು ರಾಜ್ಯಗಳು ತಮ್ಮ ಗಡಿ ಮೀರಿದ್ದನ್ನು ಹಾಡುವುದಿಲ್ಲ. ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನೇ ಅವು ಮಂಡಿಸುತ್ತವೆ. ಅಲ್ಲೆಲ್ಲ ಭಾರತ ಗೌಣವಾಗುತ್ತದೆ. ನಮ್ಮಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮಡಿಕೇರಿ ಭಾಗವನ್ನು ಅಲಕ್ಷ್ಯ ಮಾಡಿರುವುದರಿಂದ ಅವರು ಸುಮ್ಮನೆ ಪ್ರತ್ಯೇಕ ರಾಜ್ಯದ ಧಮಕಿ ಹಾಕುತ್ತಾರಷ್ಟೆ. ಹೀಗೆ ಪರಸ್ಪರ ಒಳಜಗಳ ಇದ್ದರೂ  ಒಟ್ಟಾರೆ­ಯಾಗಿ ನಾವೆಲ್ಲರೂ ಭಾರತ ತಾಯಿಯ ಮಕ್ಕಳಾಗೇ ಉಳಿಯುತ್ತೇವೆ ಎಂಬ ಬಹು ದೊಡ್ಡ ತತ್ವ ನಾಡಗೀತೆಯಲ್ಲಿದೆ. ಇಂತಹ ವಿಸ್ತೃತವಾದ ದರ್ಶನವನ್ನು ಸರಿಯಾಗಿ ಅರ್ಥೈಸದೆ ಮನಸ್ಸಿಗೆ ತೋಚಿದಂತೆ ವಿಶ್ಲೇಷಿಸುವುದು  ಸರಿಯಲ್ಲ.
(ಲೇಖಕರು ಹಿರಿಯ ಕವಿ)
ನಿರೂಪಣೆ: ನೀಳಾ ಎಂ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT