ADVERTISEMENT

ಮಕ್ಕಳು ಸದ್ಯ ಸುರಕ್ಷಿತ, ಆದರೆ...

ವಾಯು ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2016, 19:30 IST
Last Updated 11 ನವೆಂಬರ್ 2016, 19:30 IST
ಡಾ. ಎನ್.ಎಂ.ಅಂಗಡಿ, ಮಕ್ಕಳ ತಜ್ಞ
ಡಾ. ಎನ್.ಎಂ.ಅಂಗಡಿ, ಮಕ್ಕಳ ತಜ್ಞ   

ದೆಹಲಿಯಂಥ ಬೃಹತ್‌ ನಗರಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ನಗರ ಮತ್ತು ಪಟ್ಟಣಗಳಲ್ಲಿ ವಾಯು ಮಾಲಿನ್ಯದಿಂದ ಮಕ್ಕಳು ಸದ್ಯ ಸುರಕ್ಷಿತ. ಹಾಗೆಂದು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಈಗಿನ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಸಂಕಷ್ಟ ತಪ್ಪಿದ್ದಲ್ಲ.

ವಾಯು ಮಾಲಿನ್ಯ ಹೆಚ್ಚಾದರೆ ಮಕ್ಕಳಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಜ್ವರ ಮತ್ತಿತರ ಸಮಸ್ಯೆಗಳು ಕಾಣಬಹುದು.  ದೀರ್ಘಕಾಲ ಆರೋಗ್ಯದಲ್ಲಿ ಏರುಪೇರಾದರೆ ಮಕ್ಕಳ ಒಟ್ಟಾರೆ ಬೆಳವಣಿಗೆ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. ಅದು ದೇಶದ ಅಭಿವೃದ್ಧಿಗೂ ಮಾರಕ ಎಂಬುದನ್ನು ಮರೆಯಬಾರದು. ಆದ್ದರಿಂದ ವಾಯು ಮಾಲಿನ್ಯ ನಿಯಂತ್ರಿಸುವುದು ಸಮಾಜದ ಆದ್ಯತೆಯಾಗಬೇಕು.
-ಡಾ. ಎನ್.ಎಂ.ಅಂಗಡಿ, ಮಕ್ಕಳ ತಜ್ಞ

*
ಮಾತು ಪಡೆಯಲು ವೇದಿಕೆ
ವಾಯು ಮಾಲಿನ್ಯ ಸೇರಿದಂತೆ ಎಲ್ಲ ಬಗೆಯ ಮಾಲಿನ್ಯ ತಡೆಗೆ ಸಮಾಜವನ್ನು ಸಜ್ಜುಗೊಳಿಸುವುದಕ್ಕಾಗಿ ಉತ್ತರ ಕರ್ನಾಟಕದಲ್ಲಿ ಸುಸ್ಥಿರ ಅಭಿವೃದ್ಧಿ ವೇದಿಕೆ ರೂಪುಗೊಂಡಿದೆ. ಜನಪ್ರತಿನಿಧಿಗಳನ್ನು ಜನರ ಮುಂದೆ ಕೂರಿಸಿ ‘ಅಭಿವೃದ್ಧಿಗಾಗಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ’ ಎಂದು ಮಾತು ಕೊಡಿಸುವುದು ವೇದಿಕೆಯ ಮುಖ್ಯ ಕಾರ್ಯ. ಈಗಾಗಲೇ ಮೊದಲ ಕಾರ್ಯಕ್ರಮ ಮುಗಿದಿದೆ. ಶಾಸಕರೊಬ್ಬರನ್ನು ಕರೆಸಿ, ತಮ್ಮ ಉದ್ಯಮದ ವಿಸ್ತರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮರ ಕಡಿಯುವುದಿಲ್ಲ ಎಂದು ಭಾಷೆ ಕೊಡಿಸಿದ್ದೇವೆ. ರಾಜಕಾರಣಿಗಳ ಸರದಿ ಮುಗಿದ ನಂತರ ಅಧಿಕಾರಿಗಳನ್ನು ಕರೆಸಲಾಗುವುದು. ನೀತಿ ನಿಯಮ ರೂಪಿಸುವ ಪ್ರತಿಯೊಬ್ಬರಿಂದಲೂ ಪ್ರಮಾಣ ಮಾಡಿಸಲಾಗುವುದು.
-ಪ್ರಕಾಶ ಭಟ್, ಮುಖ್ಯಸ್ಥ, ಸುಸ್ಥಿರ ಅಭಿವೃದ್ಧಿ ವೇದಿಕೆ

*
ಮರುಭೂಮಿ ಆಗುತ್ತಿದೆ
ಅಂತರ್ಜಲ ಕುಸಿತ, ನಿರಂತರ ಕಾಮಗಾರಿಗಳು, ಕಸಕ್ಕೆ ಬೆಂಕಿ ಹಾಕುವುದು, ವಿಷಕಾರಿ ಪ್ಲಾಸ್ಟಿಕ್ ಸುಡುವಂಥ ಕ್ರಿಯೆಗಳಿಂದಾಗಿ ಉತ್ತರ ಕರ್ನಾಟಕ ಮರುಭೂಮಿಯಾಗುವತ್ತ ಹೆಜ್ಜೆ ಹಾಕಿದೆ. ಹಳ್ಳಿಗಳಲ್ಲಿ ದೂಳು ಅಧಿಕವಾಗುತ್ತಿದೆ. ಅಂತರ್ಜಲದ ಕುಸಿತದಿಂದಾಗಿ ಹಸಿರು ಪ್ರದೇಶಗಳು ಕೂಡ ಈಗ ಒಣಗಿವೆ. ಇದು ಅಪಾಯದ ಸೂಚನೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.
-ಸಂಜೀವ ಕುಲಕರ್ಣಿ, ಪರಿಸರವಾದಿ

*

ಆಂದೋಲನಕ್ಕೆ  ನಾಂದಿಯಾಗಲಿ
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಬಾರದು ಎಂದು ಮಕ್ಕಳಿಗೆ ‘ಪಾಠ’ ಮಾಡಿದ್ದರಿಂದ ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಪಟಾಕಿ ಸಿಡಿಸುವ ಪ್ರಮಾಣ ತುಂಬ ಕಡಿಮೆಯಾಗಿತ್ತು. ಮಕ್ಕಳು ಮನೆಯವರಿಗೆ ತಿಳಿ ಹೇಳಿದ್ದೇ ಇದಕ್ಕೆ ಕಾರಣ. ಕಸ ಸುಡುವುದು, ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚುವುದು ಮುಂತಾದ ಕೃತ್ಯಗಳಿಂದ ಜನರನ್ನು ವಿಮುಖಗೊಳಿಸಲು ಮಕ್ಕಳಿಗೆ ಸಾಧ್ಯವಿದೆ.
-ಮುಕುಂದ ಮೈಗೂರ, ಸಾಮಾಜಿಕ ಕಾರ್ಯಕರ್ತ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.