ADVERTISEMENT

ಸಂಕಟದ ಯಾತ್ರೆ; ಜಾಗೃತಿ ಜಾತ್ರೆ

ಸಾಂಕ್ರಾಮಿಕ ರೋಗಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST
ಸಂಕಟದ ಯಾತ್ರೆ; ಜಾಗೃತಿ ಜಾತ್ರೆ
ಸಂಕಟದ ಯಾತ್ರೆ; ಜಾಗೃತಿ ಜಾತ್ರೆ   

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಗ್ರಾಮದ ನಿವಾಸಿ ಜಗದೀಶ್‌ ಅವರಿಗೆ ಕೆಲಸದ ಪ್ರಯುಕ್ತ ಏಪ್ರಿಲ್‌ನಲ್ಲಿ ದಾವಣಗೆರೆಗೆ ಹೋಗಿ ಬಂದ ಎರಡನೇ ದಿನಕ್ಕೆ ಜ್ವರ ಬಂದು ಕೂಡಲೇ ತಾಲ್ಲೂಕು ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯರು ‘ಇದು ಮಾಮೂಲಿ ಜ್ವರ’ ಎಂದು ಚುಚ್ಚುಮದ್ದು, ಮಾತ್ರೆ ನೀಡಿ ಕಳಿಸಿದರು. ‘ರಕ್ತ ಪರೀಕ್ಷೆ ಮಾಡುತ್ತೀರಾ?’ ಎಂಬ ಮಾತಿಗೆ ಗಮನ ಕೊಡಲಿಲ್ಲ.

ಜ್ವರ ನಿಯಂತ್ರಣಕ್ಕೆ ಬಾರದೆ ಅವರು ಬಂಡ್ರಿ ಮಿಷನ್‌ ಆಸ್ಪತ್ರೆಗೆ ದಾಖಲಾದರು. ಮೂರನೇ ದಿನ ಡೆಂಗಿ ಜ್ವರವಿರುವುದು ಖಾತ್ರಿಯಾಯಿತು. ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಿತ್ತು. ಅವು ಹೆಚ್ಚಾಗಬಹುದು ಎಂಬ ವೈದ್ಯರ ಭರವಸೆ ಮೇಲೆ ನಂಬಿಕೆ ಬಾರದೆ, ಕುಟುಂಬದವರು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನಾಲ್ಕು ದಿನ ಇದ್ದ ಬಳಿಕ ಜ್ವರ ನಿಯಂತ್ರಣಕ್ಕೆ ಬಂತು. 14 ದಿನಗಳ ಅವಧಿಯಲ್ಲಿ ಸುಮಾರು 20 ಸಾವಿರ ರೂಪಾಯಿ ಖರ್ಚಾಗಿತ್ತು. ವಿಪರ್ಯಾಸವೆಂದರೆ, ಅವರು ಗುಣಮುಖರಾಗಿ ಮನೆಗೆ ವಾಪಸಾದ ಬಳಿಕ ಸರ್ಕಾರಿ ವೈದ್ಯರು, ಆಶಾ ಕಾರ್ಯಕರ್ತೆಯರು ಬಂದು ಡೆಂಗಿ ಜ್ವರದ ಕುರಿತು ಅವರಿಂದ ಮಾಹಿತಿ ಪಡೆದರು!

‘ನಮ್ಮ ಊರಿನಲ್ಲೇ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಇಷ್ಟು ಖರ್ಚಾಗುತ್ತಿರಲಿಲ್ಲ. ಊರಿಂದೂರಿಗೆ ಅಲೆಯುವ ಹಿಂಸೆಯೂ ಇರುತ್ತಿರಲಿಲ್ಲ’ ಎನ್ನುತ್ತಾರೆ ಜಗದೀಶ್‌.
ಇದೇ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಜನವರಿಯಿಂದ ಮೇವರೆಗೆ ಅತಿ ಹೆಚ್ಚು (8) ಡೆಂಗಿ ಪ್ರಕರಣಗಳನ್ನು ಕಂಡಿದೆ. ತಾಲ್ಲೂಕಿನ ಜಾರ್ಮಲಿ ಪಂಚಾಯ್ತಿಯ  ಕಾಮಯ್ಯನಹಟ್ಟಿಯ ಲಿಂಗಪ್ಪನವರ ಪತ್ನಿ 38ರ ಹರೆಯದ ತಿಪ್ಪಮ್ಮನವರಿಗೂ ಜ್ವರ ಬಂದಾಗ ಅವರು ಮೊದಲು ಕೂಡ್ಲಿಗಿಯ ಖಾಸಗಿ ಆಸ್ಪತ್ರೆಗೆ ಹೋದರು. ಅಲ್ಲಿಂದ ನೂರು ಕಿ.ಮೀ. ದೂರದ ಬಳ್ಳಾರಿಯ ವಿಮ್ಸ್‌ (ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಗೆ ದಾಖಲಾದರು. ಗುಣಮುಖರಾಗುವ ವೇಳೆಗೆ ಸುಮಾರು 10 ಸಾವಿರ ರೂಪಾಯಿ ಕೈ ಬಿಟ್ಟಿತ್ತು.

ಕೂಡ್ಲಿಗಿ ಪಟ್ಟಣದ ಮಹ್ಮದ್‌ ಖಾಸಿಂ ಅವರ ಮೂವರು ಮೊಮ್ಮಕ್ಕಳಿಗೂ ಜ್ವರ ಬಂದು ಮೊದಲು 45 ಕಿ.ಮೀ. ದೂರದ ಹೊಸಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ರಕ್ತ ತಪಾಸಣೆಯಾದ ಬಳಿಕ 60 ಕಿ.ಮೀ. ದೂರದ ಬಳ್ಳಾರಿಯ ವಿಮ್ಸ್‌ಗೆ ಬಂದರು. ಅಲ್ಲಿ ಮಕ್ಕಳಿಗೆ ಚಿಕಿತ್ಸೆ ನಡೆಯುತ್ತಿದೆ.
‘ಕೂಡ್ಲಿಗಿ ಅಥವಾ ಹೊಸಪೇಟೆ ತಾಲ್ಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರಕಿದ್ದರೆ ನಾವು ಅಲೆದಾಡಬೇಕಾಗಿರಲಿಲ್ಲ. ಊಟ, ತಿಂಡಿ ಎಲ್ಲವೂ ಹೋಟೆಲಿನಲ್ಲೇ ನಡೆಯುತ್ತಿದೆ. ಮನೆಗೆ ಹೋಗಿ ಬರುವುದು ಕಷ್ಟ. ನಮ್ಮಲ್ಲಿ ಅಷ್ಟು ಕಾಸು, ಶಕ್ತಿ ಇಲ್ಲ’ ಎಂಬುದು ಖಾಸಿಂ ಅವರ ನೋವು.

ಜಿಲ್ಲೆಯನ್ನು ಚಿಕೂನ್‌ಗುನ್ಯ ಮತ್ತು ಮಲೇರಿಯಾಗಿಂತಲೂ ಡೆಂಗಿ ಹೆಚ್ಚು ಕಾಡುತ್ತಿದೆ. ಅದರ ಲಾಭ ಮಾತ್ರ ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳಿಗೆ ಚೆನ್ನಾಗಿ ಆಗುತ್ತಿದೆ.

‘ಜ್ವರವೆಂದು ನಮ್ಮಲ್ಲಿಗೆ ಬರುವ ಎಲ್ಲರಿಗೂ ಕಡ್ಡಾಯವಾಗಿ ಡೆಂಗಿ ರಕ್ತ ತಪಾಸಣೆ  ಮಾಡುತ್ತೇವೆ. ಡೆಂಗಿ ಖಚಿತವಾಗಿ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇದ್ದರೆ, ರೋಗಿಯ ಕುಟುಂಬದವರು ಶ್ರೀಮಂತರಾಗಿದ್ದರೆ ನಮ್ಮಲ್ಲಿಯೇ ಚಿಕಿತ್ಸೆ ಮುಂದುವರಿಸುತ್ತೇವೆ. ಇಲ್ಲವಾದರೆ ವಿಮ್ಸ್‌ಗೆ ಕಳಿಸಿಬಿಡುತ್ತೇವೆ’ ಎನ್ನುತ್ತಾರೆ ಬಳ್ಳಾರಿಯ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿ.

ಅವರ ಆಸ್ಪತ್ರೆಯಲ್ಲಿ ಒಮ್ಮೆ ರಕ್ತ ತಪಾಸಣೆ ಮಾಡಲು ₹ 600 ಶುಲ್ಕ ನಿಗದಿಯಾಗಿದೆ. ರೋಗಿಗೆ ಡೆಂಗಿ ಎಂದು ಗೊತ್ತಾಗುವ ವೇಳೆಗೆ ಹಲವು ಬಾರಿ, ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ರಕ್ತ ತಪಾಸಣೆಯಾಗಿರುತ್ತದೆ. ಬಿಪಿಎಲ್‌ ಕಾರ್ಡ್‌ ಉಳ್ಳವರಿಗೆ ಆರೋಗ್ಯ ಇಲಾಖೆಯು ಎಲ್ಲ ಸೇವೆಯನ್ನು ಉಚಿತವಾಗಿ ನೀಡುತ್ತದೆ. ಆದರೆ ಆ ಕಾರ್ಡ್‌ ಉಳ್ಳ ಬಹುತೇಕರು ಮೊದಲು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಬದಲಿಗೆ, ತಮಗೆ ಗೊತ್ತಿರುವ ವೈದ್ಯರ ಕ್ಲಿನಿಕ್‌, ನರ್ಸಿಂಗ್‌ ಹೋಂಗೆ ಧಾವಿಸುತ್ತಾರೆ. ಅವರಿಗೆ ಸರ್ಕಾರಿ ಆರೋಗ್ಯ ಸೇವೆಯ ಮೇಲೆ ನಂಬಿಕೆ ಹೋಗಿದೆ. ಉಳ್ಳವರು ಸರ್ಕಾರಿ ಆಸ್ಪತ್ರೆಯ ಯೋಚನೆಯನ್ನೇ ಮಾಡುವುದಿಲ್ಲ.

ಆಮ್‌ ಆದ್ಮಿ ಪಕ್ಷದ ಮುಖಂಡ ಮಲ್ಲಪ್ಪ ಅವರ ಅನುಭವವನ್ನೇ ಕೇಳಿದರೆ ಪರಿಸ್ಥಿತಿಯ ಅರಿವಾಗುತ್ತದೆ.
ಸಿಇಟಿ ಕೌನ್ಸಿಲಿಂಗ್‌ಗೆಂದು ಹುಬ್ಬಳ್ಳಿಗೆ ಹೋಗಲು ಸಿದ್ಧವಾಗುತ್ತಿದ್ದ ಅವರ ಮಗಳಿಗೆ ಡೆಂಗಿ ಜ್ವರ ಬಂದ ಕೂಡಲೇ ಅವರು ಮನೆ ಸಮೀಪದ ಪರಿಚಯಸ್ಥ ವೈದ್ಯರ ಕ್ಲಿನಿಕ್ಕಿಗೆ ಹೋದರು. ಖಾಸಗಿ ಲ್ಯಾಬೊರೇಟರಿಯಲ್ಲಿ ಪ್ರತಿ ಬಾರಿ ರಕ್ತ ತಪಾಸಣೆ ಮಾಡಿಸುವಾಗಲೂ ಅವರು 600 ರೂಪಾಯಿ ಕೊಡಬೇಕಾಗುತ್ತಿತ್ತು.

ಸರ್ಕಾರಿ ಆಸ್ಪತ್ರೆಗೆ ನೀವು ಏಕೆ ಹೋಗಲಿಲ್ಲ ಎಂದು ಕೇಳಿದರೆ, ಅವರು ನಂಬಿಕೆಯ ಪ್ರಶ್ನೆಯನ್ನು ಮುಂದಿಟ್ಟರು: ಸರ್ಕಾರಿ ಆಸ್ಪತ್ರೆಗೆ ಹೋದರೂ ಲಂಚ ಕೊಡಬೇಕು, ಕೊಟ್ಟರೂ ಉತ್ತಮ ಸೇವೆ ಸಿಗುವುದಿಲ್ಲ. ಅದರ ಬದಲಿಗೆ ಖಾಸಗಿ ಆಸ್ಪತ್ರೆಗೆ ಹೋಗಿ, ಅಲ್ಲಿಯೇ ಹಣ ಕೊಟ್ಟು ಚಿಕಿತ್ಸೆ ಪಡೆಯುವುದು ಮೇಲಲ್ಲವೇ? ಆದರೆ ಖಾಸಗಿ ಆಸ್ಪತ್ರೆಗೆ ಹೋಗಲಾರದ ಬಡವರ ಗತಿ ಏನು? ಉತ್ತರ ಮೌನ. ಅದರಲ್ಲೂ ಸಂತ್ರಸ್ತ ಕೃಷಿ ಕೂಲಿಕಾರರು ಮತ್ತು ರೈತರ ಸ್ಥಿತಿಯನ್ನು ಈ ರೋಗಗಳ ಹಿನ್ನೆಲೆಯಲ್ಲಿ ಅವಲೋಕಿಸುವ ಪ್ರಯತ್ನ ನಡೆದಿಲ್ಲ.

ಡೆಂಗಿ ಮಾರಣಾಂತಿಕವಾದರೂ ಎಚ್ಚರಿಕೆ ವಹಿಸಿ ಚಿಕಿತ್ಸೆ ಪಡೆದರೆ 15–20 ದಿನದೊಳಗೆ ಗುಣಮುಖವಾಗಬಹುದು. ಆದರೆ ಚಿಕೂನ್‌ಗುನ್ಯಕ್ಕೆ ಈಡಾದವರ ಸ್ಥಿತಿ ಹಾಗಲ್ಲ. ಅವರನ್ನು ಕೀಲು ನೋವು ತಿಂಗಳುಗಟ್ಟಲೆ ಬಾಧಿಸುತ್ತದೆ, ದುಡಿದು ತಿನ್ನುವ ಮಂದಿಗೆ ಚಿಕೂನ್‌ಗುನ್ಯ ಬರಬಾರದು ಎನ್ನುತ್ತಾರೆ ಹಳ್ಳಿಯ ಜನ.
ಇದು ವ್ಯಕ್ತಿಗತ ಸಮಸ್ಯೆಯಾಗಿ ಅಷ್ಟೇ ಅಲ್ಲ, ಕೃಷಿ ಉತ್ಪನ್ನಗಳ ಪ್ರಮಾಣದ ಮೇಲೂ ಪರಿಣಾಮ ಬೀರುತ್ತದೆ. ಆದರೆ ಉತ್ಪಾದನೆ ಮೇಲಿನ ಪರಿಣಾಮದ ಕುರಿತು ಸಂಶೋಧನೆ, ವಿಶ್ಲೇಷಣೆಗಳು ಇದುವರೆಗೆ ನಡೆದಿಲ್ಲ. ರೋಗಿ ಹಾಗೂ ಕುಟುಂಬದವರು ಆಸ್ಪತ್ರೆಯಿಂದ ಆಸ್ಪತ್ರೆಗೆ ನೂರಾರು ಕಿ.ಮೀ. ಪ್ರಯಾಣಿಸಿ ಕಷ್ಟದಲ್ಲಿರುವ ವೇಳೆಯಲ್ಲೇ ಜಾಗೃತಿ ಮೆರವಣಿಗೆ–ಕಾರ್ಯಕ್ರಮಗಳು, ಲಾರ್ವಾ ಸಮೀಕ್ಷೆಗಳು, ಅಧಿಕಾರಿ ಸಭೆಗಳು ‘ಪ್ರೋಟೊಕಾಲ್‌’ ಪ್ರಕಾರ ಜಿಲ್ಲೆಯಲ್ಲಿ ನಡೆಯುತ್ತಿವೆ.

ರೋಗ ಕಾಣಿಸಿಕೊಂಡಾಗ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಯ ನಿಖರ ಮಾಹಿತಿಯ ಪ್ರಸಾರದಲ್ಲಿ ಆರೋಗ್ಯ ಇಲಾಖೆಯು ಸೋತಿದೆ. ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ವಿಷಯದಲ್ಲಿ ತಳಹಂತದ ಸಮಸ್ಯೆ, ಅದಕ್ಕೆ ಕೊಡಬೇಕಾದ ಸರಳ ಪರಿಹಾರ ಕುರಿತ ಒಳನೋಟಗಳು ವೈದ್ಯಾಧಿಕಾರಿಗಳಲ್ಲಿ, ಆಡಳಿತಾಧಿಕಾರಿಗಳಲ್ಲಿ ಇಲ್ಲ. ಹೀಗಾಗಿ ಎಲ್ಲೆಡೆ ಸೊಳ್ಳೆಗಳು ವಿಜೃಂಭಿಸುತ್ತಿವೆ.

ಜಿಲ್ಲೆಯ ಬಹುತೇಕ ಆರೋಗ್ಯ ಸಿಬ್ಬಂದಿ ಚಿಕೂನ್‌ಗುನ್ಯ ಮತ್ತು ಮಲೇರಿಯಾಗಿಂತಲೂ ಡೆಂಗಿ ಕಡೆಗೇ ಹೆಚ್ಚು ಗಮನ ಹರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ರಾತ್ರಿ ಕಚ್ಚುವ ಸೊಳ್ಳೆಗಿಂತಲೂ, ಹಗಲಿನಲ್ಲಿ ಕಚ್ಚುವ ಸೊಳ್ಳೆ ಮೇಲೇ ಎಲ್ಲರ ಕಣ್ಣಿದೆ!

‘ಶುದ್ಧ ನೀರಿನಲ್ಲಿ ಡೆಂಗಿ ಸೊಳ್ಳೆ ಇಡುವ ಮೊಟ್ಟೆಗಳು ಒಂದು ವರ್ಷ ಕಾಲ ನೀರೇ ಇರದ ಜಾಗದಲ್ಲೂ ಉಳಿಯುತ್ತವೆ. ಡೆಂಗಿ ವೈರಸ್‌ ಉಳ್ಳ ಸೊಳ್ಳೆಯ ಮೊಟ್ಟೆಗಳಾದರೆ, ಅವುಗಳಿಂದ ಹೊರಬರುವ ಪ್ರತಿ ಸೊಳ್ಳೆಯೂ ವೈರಸ್‌ ಅನ್ನು ಹೊತ್ತು ತಿರುಗುತ್ತದೆ. ಹೀಗಾಗಿಯೇ ಡೆಂಗಿ ವಾಹಕ ಸೊಳ್ಳೆ ಎಲ್ಲಿಂದ ಬಂತು ಎಂದು ಕಂಡು ಹಿಡಿಯೋದು ಕಷ್ಟ. ಕೆಟ್ಟ ನೀರಿನಲ್ಲಿ ಇರುವ, ಮಲೇರಿಯಾವನ್ನು ಹರಡುವ ಸೊಳ್ಳೆ ಹಾಗಲ್ಲ. ಸೊಳ್ಳೆ ಸತ್ತರೆ ಅದರೊಂದಿಗೆ ಮಲೇರಿಯಾ ವೈರಸ್‌ ಕೂಡ ಸಾಯುತ್ತದೆ. ಹೀಗಾಗಿ ನಮಗೆ ಡೆಂಗಿ ನಿಯಂತ್ರಣವೇ ದೊಡ್ಡದು’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯ ಕೀಟಶಾಸ್ತ್ರಜ್ಞೆ ನಂದಾ ಬಿ. ಕಡಿ.

‘ಜನರೇಕೆ ಮೊದಲು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ’? ಎಂಬ ಪ್ರಶ್ನೆಗೆ, ‘ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ನಾವೇನೂ ಹೇಳಿಲ್ಲ. ಅವರನ್ನು ತಡೆಯುವುದು ಸಾಧ್ಯವಿಲ್ಲ. ನಮ್ಮ ವೈದ್ಯರು, ಸಿಬ್ಬಂದಿಯನ್ನು ಬಿಟ್ಟು, ಅಂತಿಮ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವವರೇ ಹೆಚ್ಚು’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೆ.ಅನಿಲ ಕುಮಾರ್‌.

ಡೆಂಗಿಗೆ ನಿರ್ದಿಷ್ಟ ಔಷಧಿಯೂ ಇಲ್ಲ. ಇದು ಸಮಸ್ಯೆಯ ಇನ್ನೊಂದು ಮುಖ. ಜ್ವರವಿದ್ದರೆ ಪ್ಯಾರಸಿಟಮಾಲ್‌, ಪ್ಲೇಟ್‌ಲೆಟ್‌ಗಳ ಕೊರತೆ ಇದ್ದರೆ ಅವುಗಳನ್ನು ನೀಡಲಾಗುವುದು, ತಲೆನೋವಿಗೆ ಅಗತ್ಯವಿರುವ ಮಾತ್ರೆ– ಹೀಗೆ ಔಷಧಿಗಳು ನಿರ್ಧಾರವಾಗುತ್ತವೆ.
ಡೆಂಗಿ ಲಕ್ಷಣಗಳನ್ನು ಗುರುತಿಸುವ ಸಲುವಾಗಿ ಡೆಂಗಿ ರ್‌್ಯಾಪಿಡ್‌ ಡಯಗ್ನಾಸ್ಟಿಕ್‌ ಕಿಟ್‌ ಬಳಸಿ ಮಾಡುವ ಪ್ರಾಥಮಿಕ ತಪಾಸಣೆಯಲ್ಲಿ ಸ್ಪಷ್ಟವಾಗಿ ಏನೂ ಗೊತ್ತಾಗುವುದಿಲ್ಲ. ಆದರೂ ರೋಗಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತದೆ. ಡೆಂಗಿ ಖಚಿತಪಡಿಸಿಕೊಳ್ಳಲು ಎಲಿಸಾ ಟೆಸ್ಟ್ ಮಾಡಲೇಬೇಕು. ಅದಕ್ಕೆ 90 ಮಂದಿಯ ರಕ್ತದ ಮಾದರಿಗಳು ಏಕಕಾಲಕ್ಕೆ ಇರಬೇಕು. ಹೀಗಾಗಿ ಅಷ್ಟು ಸಂಖ್ಯೆಯ ಮಾದರಿಗಳು, ಅಂದರೆ ಅಷ್ಟು ಮಂದಿ ಶಂಕಿತ ಡೆಂಗಿಪೀಡಿತರು ದೊರಕುವವರೆಗೂ, ರೋಗಿಗೆ ಡೆಂಗಿ ಇರುವುದೇ ಇಲ್ಲವೇ ಎಂಬುದು ಖಚಿತವಾಗುವುದೇ ಇಲ್ಲ.

ಡೆಂಗಿ ಹೆಚ್ಚಿರುವ ಕಾಲದಲ್ಲಿ 90 ಮಂದಿಯ ರಕ್ತದ ಮಾದರಿ ಸುಲಭವಾಗಿ ಸಿಗುವುದರಿಂದ ಮೂರ್ನಾಲ್ಕು ದಿನಗಳಲ್ಲಿ ವರದಿ ಸಿಗುತ್ತದೆ. ಇಲ್ಲವಾದರೆ 15 ದಿನಗಳಾದರೂ ಬೇಕು. ಅಲ್ಲಿಯವರೆಗೂ ರೋಗಿ ಮತ್ತು ಅವರ ಕುಟುಂಬದ ಸದಸ್ಯರ ಸಂಕಟಕ್ಕೆ ಉತ್ತರವೇ ಇರುವುದಿಲ್ಲ.
ತಮ್ಮ ಪತ್ನಿ ಕಳೆದ ವರ್ಷ ಡೆಂಗಿ ಪೀಡಿತರಾದಾಗ ಅದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪ್ಲೇಟ್‌ಲೆಟ್‌ಗಳನ್ನು ಸಂಗ್ರಹಿಸಲು ಸುಮಾರು 12 ಸಾವಿರ ರೂಪಾಯಿ ಖರ್ಚಾದ ಬಗ್ಗೆ ಬಳ್ಳಾರಿಯ ರೇಡಿಯೊಪಾರ್ಕ್‌ ಪ್ರದೇಶದ ರಾಜಣ್ಣ ಈಗಲೂ ಸಂಕಟ ಪಡುತ್ತಾರೆ.
ಡೆಂಗಿ ವೈರಸ್‌ ಇದೆ ಎಂದು ತ್ವರಿತಗತಿಯಲ್ಲಿ ಖಚಿತಪಡಿಸುವ ವ್ಯವಸ್ಥೆಯೇ ಇನ್ನೂ ಇಲ್ಲದ ಸನ್ನಿವೇಶದಲ್ಲಿ ರೋಗಿಗಳು ಜೀವ ಹಿಡಿದುಕೊಂಡಿದ್ದಾರೆ. ಜಾಗೃತಿ ಯಾತ್ರೆ ನಡೆದಿದೆ. ಚಿಕಿತ್ಸೆ ಮಾತ್ರ ಹಿಂದುಳಿದಿದೆ.
*
ಡ್ಯಾಂನಲ್ಲೇ ಲಾರ್ವ ಐತೆ!
‘10–15 ದಿನಕ್ಕಿಂತ ಹೆಚ್ಚು ಕಾಲ ನೀರನ್ನು ತೊಟ್ಟಿಯಲ್ಲಿ ಶೇಖರಿಸಿಟ್ಟರೆ ರೋಗವಾಹಕ ಲಾರ್ವಾ ಹುಟ್ಟಿಗೆ ದಾರಿಯಾಗುತ್ತದೆ ಎಂಬುದನ್ನು ಜನ ನಂಬುವುದೇ ಇಲ್ಲ. ತುಂಗಭದ್ರಾ ಡ್ಯಾಂನಲ್ಲೇ ಲಾರ್ವಾ ಐತೆ. ನಾವೇಕೆ ತೊಟ್ಟಿ ಖಾಲಿ ಮಾಡಬೇಕು ಎಂದು ವಾದಿಸುತ್ತಾರೆ’ ಎಂಬುದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೆ.ಅನಿಲ ಕುಮಾರ್‌ ಅವರ ಅಸಹಾಯಕತೆ.

ಇಡೀ ಜಿಲ್ಲೆಯ ಪೈಕಿ ಬಳ್ಳಾರಿ ನಗರದಲ್ಲೇ ಡೆಂಗಿ ಪ್ರಕರಣಗಳು ಹೆಚ್ಚು. ನೀರು ಪೂರೈಕೆ ನೀತಿ ಬದಲಾಗದಿರುವುದೇ ಅದಕ್ಕೆ ಕಾರಣ. 10–15 ದಿನಕ್ಕೊಮ್ಮೆ ನೀರು ಪೂರೈಸುವ ಬದಲು, ಮೂರ್ನಾಲ್ಕು ದಿನಕ್ಕೊಮ್ಮೆ ಪೂರೈಸಿದರೆ, ಜನ ನಿಯಮಿತವಾಗಿ ತೊಟ್ಟಿ ತೊಳೆಯುತ್ತಾರೆ. ಆಗ ಕಾಯಿಲೆಗಳು ಬರುವುದಿಲ್ಲ ಎಂಬ ಅವರ ಮಾತನ್ನು ಪಾಲಿಕೆಯು ಇನ್ನೂ ಕಿವಿಗೆ ಹಾಕಿಕೊಂಡಿಲ್ಲ.
*
ಡೆಂಗಿ ವಿಶೇಷ ವಾರ್ಡ್
ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಡೆಂಗಿ ವಿಶೇಷ ವಾರ್ಡ್‌ ಇದೆ. ಅಲ್ಲಿಗೆ ಚಿತ್ರದುರ್ಗ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯವರು, ಆಂಧ್ರ ಪ್ರದೇಶದ ಹತ್ತಾರು ಊರುಗಳ ಜನರೂ ದಾಖಲಾಗುತ್ತಾರೆ.

‘ಜ್ವರ ತೀವ್ರಗೊಂಡ ಬಳಿಕವೇ ಜನ ಇಲ್ಲಿಗೆ ಬರುತ್ತಾರೆ. ಅದಕ್ಕೂ ಮೊದಲು ಅವರು ಇರುವ ಊರುಗಳಲ್ಲೇ ಜ್ವರ ಹತೋಟಿಗೆ ತರುವ, ಮಾರ್ಗದರ್ಶನ ನೀಡುವ ವ್ಯವಸ್ಥೆ ಚುರುಕಾಗಬೇಕು. ಆದರೆ ಹಾಗೆ ಆಗುತ್ತಿಲ್ಲ’ ಎನ್ನುತ್ತಾರೆ ವಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಿ.ಶ್ರೀನಿವಾಸಲು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.