ADVERTISEMENT

ಅವನಿಗೆ ಪಾಪ ಪ್ರಜ್ಞೆ ಕಾಡುವಂತೆ ಸುರಿ...

​ಪ್ರಜಾವಾಣಿ ವಾರ್ತೆ
Published 9 ಮೇ 2017, 19:30 IST
Last Updated 9 ಮೇ 2017, 19:30 IST
ಕಲೆ:ಶ್ರೀಕಂಠಮೂರ್ತಿ
ಕಲೆ:ಶ್ರೀಕಂಠಮೂರ್ತಿ   

ಪ್ರೀತಿಯ ಮಳೆ ಹನಿಯೇ,
ಇನ್ನೂ ತೀರಲಿಲ್ಲವೇ ನಿನ್ನ ಕೋಪ? ಹಕ್ಕಿಗಳು ನೀರಿಲ್ಲದೇ ಮೊರೆಯಿಡುವ ಕೂಗು ಕೇಳಿಸಲಿಲ್ಲವೇ? ಹನಿ ಹನಿ ನೀರು ಅರಸಿ ಬಂದ ಪ್ರಾಣಿಗಳು ಸಾವು ತಂದುಕೊಂಡಿದ್ದು ಕಾಣಿಸಲಿಲ್ಲವೇ? ಮನ ಕರಗಲಿಲ್ಲವಾ? ಯಾಕಿಷ್ಟು ಹಠ ಹಿಡಿದು ಕೂತಿದ್ದೀಯಾ?

ಮನುಷ್ಯನೊಬ್ಬನ ಮೇಲಿನ ದ್ವೇಷವನ್ನು, ಕೋಪವನ್ನು ಕೆರೆಯ ಆಳದ ಜೀವಿಯಿಂದ ಆಕಾಶಕ್ಕೆ ಹಾರುವ ಗಿಡುಗನವರೆಗೂ ಏಕೆ ತೋರಿಸುವೆ? ಕಲಿಸುವುದಿದ್ದರೆ ಬುದ್ದಿಯನ್ನು ಅವನೊಬ್ಬನಿಗೆ ಕಲಿಸು.

ಅದು ಹೇಗೆ ಎಂದು ಸೃಷ್ಟಿಯೇ ಕಟ್ಟಿದ ನಿನಗೆ ನಾನು ಹೇಳಿಕೊಡಬೇಕಾಗಿಲ್ಲ. ನಿನ್ನ ಮಕ್ಕಳಲ್ಲವೇ ಎಲ್ಲರೂ. ಇದೊಮ್ಮೆ ಕ್ಷಮಿಸಲಾರೆಯಾ? ಕ್ಷಮಿಸಿಬಿಡು ಮೇಘರಾಜ. ಅದೆಷ್ಟು ಬೀಜಗಳು ನಿನಗಾಗಿ ಕಾದಿವೆ. ಪ್ರಾಣಿ ಪಕ್ಷಿಗಳು ಜೀವದ ಕೊನೆಯ ಉಸಿರು ಹಿಡಿದು ನಿಂತಿವೆ.

ADVERTISEMENT

ರೈತ ಎಲ್ಲವನ್ನೂ ಕಳೆದುಕೊಂಡು ಆಕಾಶಕ್ಕೆ ದೃಷ್ಟಿನೆಟ್ಟು ನಿನ್ನ ಬರುವಿಕೆಗಾಗಿ ಕಣ್ಮುಚ್ಚದೇ ಕಾದಿದ್ದಾನೆ. ಒಲವುಗಳು ನಿನ್ನೊಂದಿಗೆ ಸೇರಿ ಚಿಗುರಲು ಹಪಹಪಿಸಿವೆ. ಕಾಡು ಜೀವಿಗಳು ತುಂಬಿದ ಕೊಳದಲ್ಲಿ ಈಜಿ ಮೈಮರೆಯಲು ಹವಣಿಸಿವೆ.

ನಿನಗೆ ಗೊತ್ತು ಈ ಭೂಮಿಯ ಚಂದವೆಲ್ಲಾ ನೀನೇ. ಈ ಹಸಿರೆಲ್ಲಾ ನಿನ್ನದೇ, ಈ ಉಸಿರು ಕೂಡಾ. ಇಲ್ಲಿಯ ಖುಷಿ, ನಗು, ಆನಂದದ ಕೇಕೆ, ನೆಮ್ಮದಿಯ ಕ್ಷಣ, ಬದುಕಿನ ಭರವಸೆ ಹುಟ್ಟಿಸುವ ಗುಣ ಎಲ್ಲವೂ ನೀನೇ ಆಗಿರುವೆ.

ನೀ ಎಂದೋ ಸುರಿಸಿದ ನೀರಲ್ಲಿ ಕೂಡಿಟ್ಟ ಹನಿಹನಿಯಲ್ಲೇ ಒಂಚೂರು ಜೀವ ಉಳಿಸಿಕೊಂಡಿದ್ದೇವೆ. ಇನ್ನೂ ನೀನು ಬರದಿದ್ದರೆ ನಾಳೆಗಳು ಎನ್ನುವುದೇ ಇರುವುದಿಲ್ಲ. ಬದುಕು ಮುಗಿದಂತೆ.

ಇಂದೊಮ್ಮೆ ಬಾ, ಸುರಿ. ಮತ್ತೆ ಸುರಿ. ಹದವಾಗಿ ಸುರಿ. ಮುದವಾಗಿ ಸುರಿ. ಸುಂದರವಾಗಿ ಸುರಿ. ಅವನಿಗೆ ಪಾಪ ಪ್ರಜ್ಞೆ ಕಾಡುವಂತೆ ಸುರಿ. ಅವನ ಮನದ ಗಲೀಜು ಕಿತ್ತು ಹೋಗುವಂತೆ ಸುರಿ. ಆತ ತನ್ನನ್ನು ತಾನು ಅರಿಯುವಂತೆ ಸುರಿ.

ಹಸಿರು ಉಸಿರೆತ್ತಿ ನಿಲ್ಲುವುದು. ಪ್ರೀತಿಗಳು ಬೆಸೆದುಕೊಳ್ಳುವವು, ಬೀಜಗಳು ಹಸಿರು ಚೆಲ್ಲಿ ನಗುವುವು, ರೈತನ ಮುಖದಲ್ಲಿ ಖುಷಿ, ವನಜೀವಿಯ ಮೊಗದಲ್ಲಿ ಸೊಬಗು, ಬೆಳೆಯುವ ಪೈರು, ಬೊಗಸೆಯಷ್ಟು ನಿಂತ ನೀರಿನಲ್ಲಿ ಮುಳುಗಿ ಮುಳುಗಿ ಎದ್ದು ನಿಲ್ಲುವ ಗುಬ್ಬಿಯ ಸುಖವನ್ನೊಮ್ಮೆ ನೋಡು. ಎಲ್ಲವೂ ನಿನ್ನಿಂದಲೇ ಸಾಧ್ಯ. ಇದೊಮ್ಮೆ ಕ್ಷಮಿಸಿ, ಬಂದು ಬಿಡು. ಹಗಲು ರಾತ್ರಿಯನ್ನದೇ ಆಚೆ ಕೂತು ಕಾದಿರುತ್ತೇನೆ.ನಿನ್ನವ ಹನಿಪ್ರೇಮಿ                                 

ಸದಾಶಿವ್ ಸೊರಟೂರು, ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.