ADVERTISEMENT

ಇದು ‘ಹಲೋಕಿಟ್ಟಿ’ ಮನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST
ಇದು ‘ಹಲೋಕಿಟ್ಟಿ’ ಮನೆ
ಇದು ‘ಹಲೋಕಿಟ್ಟಿ’ ಮನೆ   

ಈ ಮನೆ ಪ್ರವೇಶಿಸುತ್ತಿದ್ದಂತೆ ಸಾವಿರಾರು ‘ಹಲೋ ಕಿಟ್ಟಿ’ ಗೊಂಬೆಗಳು ಆಕರ್ಷಿಸುತ್ತವೆ. ಗೋಡೆ, ಚಾವಣಿ, ಬಾಗಿಲು... ಹೀಗೆ ಕಣ್ಣೂ ಹಾಯಿಸಿದಲ್ಲೆಲ್ಲ ಗೊಂಬೆಗಳದ್ದೇ ಕಾರುಕಾರು.

ಇದು ಸಿಂಗಪುರದ ಕೋನಿಸಿಮ್‌ ಅವರ ಮನೆ. ಮನೆಯ ಒಳಾಂಗಣ ವಿನ್ಯಾಸವನ್ನು ‘ಹಲೋ ಕಿಟ್ಟಿ’ ಗೊಂಬೆಯ ಪರಿಕಲ್ಪನೆಯಲ್ಲೇ ಮಾಡಲಾಗಿದೆ. ಹೀಗಾಗಿ ಇದು ಮಕ್ಕಳ ಮೆಚ್ಚಿನ ಮನೆ.

ಬಿಳಿ, ತಿಳಿ ಗುಲಾಬಿ ಬಣ್ಣದ ಈ ಗೊಂಬೆಗಳ ಚಿತ್ರಗಳು ಅಡುಗೆ ಕೋಣೆಯ ಗೋಡೆ, ಮಿಕ್ಸಿ, ಜ್ಯೂಸ್‌ ಮೇಕರ್‌, ಸಿಲಿಂಡರ್‌, ಕುಕ್ಕರ್‌ಗಳಲ್ಲಿಯೂ ಇವೆ. ಜೊತೆಗೆ ಬಾತ್‌ರೂಂ, ಮಲಗುವ ಕೋಣೆ...  ಹೀಗೆ ಎಲ್ಲೆಲ್ಲೂ ಹಲೋ ಕಿಟ್ಟಿ ಛಾಯೆಯಿದೆ. ಮನೆಯ ಒಡತಿ ಕೋನಿ ಅವರಿಗೆ ಬಿಳಿ ಮತ್ತು ಗುಲಾಬಿ ಬಣ್ಣವೆಂದರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಈ ಬಣ್ಣದ ಹಲೋ ಕಿಟ್ಟಿಯನ್ನು ಇವರು ಇಷ್ಟಪಡುತ್ತಾರೆ.

‘ನನ್ನ ಸ್ನೇಹಿತರಿಗೆ ಹಲೋ ಕಿಟ್ಟಿಯೆಂದರೆ ವಿಪರೀತ ಇಷ್ಟ. ಅದಕ್ಕಾಗಿಯೇ ನಾನು ಅದನ್ನು ಇಷ್ಟಪಡಲು ಪ್ರಾರಂಭಿಸಿದೆ. ವಿಶಿಷ್ಟ ರೀತಿಯ ಒಳಾಂಗಣ ವಿನ್ಯಾಸದಿಂದಾಗಿ ನನ್ನ ಮನೆ ಮೊದಲಿಗಿಂತಲೂ ಸುಂದರವಾಗಿ ಕಾಣುತ್ತಿದೆ’ ಎನ್ನುತ್ತಾರೆ ಅವರು.

ಶಾಪಿಂಗ್‌ ಹೋದಲ್ಲೆಲ್ಲ ಎಷ್ಟೇ ದುಬಾರಿಯಾದರೂ ಈ ರೀತಿಯ ಗೊಂಬೆಗಳನ್ನು ಕೊಂಡುಕೊಳ್ಳುವುದು ಇವರ ಅಭ್ಯಾಸ. ವರ್ಷಕ್ಕೆ ಆರು ಲಕ್ಷ ರೂಪಾಯಿಯನ್ನು ಇವರು ಈ ಹವ್ಯಾಸಕ್ಕಾಗಿಯೇ ಮೀಸಲಿಟ್ಟಿದ್ದಾರೆ.

‘ನನಗೆ ಮೂವರು ಮಕ್ಕಳು. ನನ್ನ ಈ ಹವ್ಯಾಸಕ್ಕೆ ಎಷ್ಟು ದುಡ್ಡನ್ನು ಖರ್ಚು ಮಾಡಿದರೂ, ಅವರು ಮರು ಮಾತನಾಡುವುದಿಲ್ಲ’ ಎಂದು ಮಕ್ಕಳ ಪ್ರೋತ್ಸಾಹವನ್ನು ನೆನೆಯುತ್ತಾರೆ ಕೋನಿ.  ಒಳಾಂಗಣ ವಿನ್ಯಾಸ ಮಾತ್ರವಲ್ಲದೆ, ಇವರು ದಿನನಿತ್ಯ ಬಳಸುವ ವಸ್ತುಗಳಲ್ಲಿಯೂ ಈ ಗೊಂಬೆಗಳ ಪ್ರಭಾವ ಕಾಣಬಹುದು. ‘ಹಲೋಕಿಟ್ಟಿ’ ಚಿತ್ತಾರವಿರುವ 100 ಟೀ ಶರ್ಟ್‌, 30 ಪೈಜಾಮ, ಮತ್ತು ಹಲವು ಬೆಡ್‌ಕವರ್‌ಗಳು ಇವರ ಬಳಿಯಿವೆ. ಅಂದಹಾಗೆ ಈ ಹವ್ಯಾಸಕ್ಕೆ ಗಿನ್ನಿಸ್‌ ಮನ್ನಣೆಯೂ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.