ADVERTISEMENT

‘ಇಬ್ಬರು ಹೆಂಡ್ತೀರ ಸಾವಾಸ ಬೇಡಪ್ಪ’

ಕಿರುತೆರೆ

ವಿದ್ಯಾಶ್ರೀ ಎಸ್.
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಶೈನ್ ಶೆಟ್ಟಿ
ಶೈನ್ ಶೆಟ್ಟಿ   

ಆಕಸ್ಮಿಕವಾಗಿ ಒಬ್ಬಳನ್ನು ಮದುವೆಯಾಗುವ ಅನಿವಾರ್ಯ, ಜೊತೆಗೆ ಪ್ರೀತಿಸಿದವಳನ್ನು ಬಿಡಲಾಗದ ಬಿಕ್ಕಟ್ಟು. ಮುಂದೆ ಇವೆರಡೂ ಸನ್ನಿವೇಶಗಳನ್ನು ನಿಭಾಯಿಸಲೇಬೇಕಾದ ಸಂದಿಗ್ಧತೆ. ಇದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಕಥೆಯ ತಿರುಳು.

ಇದರಲ್ಲಿ ಇಬ್ಬರು ಮಡದಿಯರ ಮುದ್ದಿನ ಪತಿಯಾಗಿ ಮಿಂಚುತ್ತಿರುವವರು ಶೈನ್ ಶೆಟ್ಟಿ. ಧಾರಾವಾಹಿಯ ಕಥೆಯಿಂದಾಗಿ ನಿಜ ಜೀವನದಲ್ಲಿ ಇವರು ಹಲವು ತಮಾಷೆ ಎನಿಸುವಂತಹ ಸನ್ನಿವೇಶಗಳನ್ನು ಎದುರಿಸಿದ್ದೂ ಇದೆ. ಅವುಗಳನ್ನು ಅಷ್ಟೇ ತಮಾಷೆಯಾಗಿ ಅವರು ವಿವರಿಸುತ್ತಾರೆ.

* ನಟ ಆಗುತ್ತೀರಿ ಎಂದುಕೊಂಡಿದ್ರಾ?
ನಟನಾಗಬೇಕೆಂಬ ಆಸೆಯೆನೋ ಇತ್ತು. ಆದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದುಕೊಂಡು ಪ್ರಯತ್ನಪಟ್ಟಿರಲಿಲ್ಲ. ಆದರೆ ಪೋಷಕರು ತುಂಬಾ ಬೆಂಬಲ ನೀಡಿದರು. ಹಾಗಾಗಿ ಮುಂಬೈನಲ್ಲಿ ಆ್ಯಕ್ಟಿಂಗ್‌ನಲ್ಲಿ ಡಿಪ್ಲೊಮಾ ಮಾಡಿದೆ. ನಂತರ ನಟಿ ಸುಕೃತಾ ಶೆಟ್ಟಿಯವರ ಮೂಲಕ ಕಿರುತೆರೆಯಲ್ಲಿ ಅವಕಾಶ ದೊರಕಿತು.

ADVERTISEMENT

* ಇಬ್ಬರು ಹೆಂಡತಿಯರನ್ನು ಹೇಗೆ ಸಂಭಾಳಿಸುತ್ತಿದ್ದೀರಿ?
ಎಲ್ಲಾ ಜವಾಬ್ದಾರಿಯನ್ನು ನಿರ್ದೇಶಕರಿಗೆ ಬಿಟ್ಟಿದ್ದೇನೆ. ಅವರ ಅಣತಿಯಂತೆ ನಾನು ನಡೆಯುತ್ತಿದ್ದೇನೆ. ಅವರ ನಿರ್ದೇಶನಕ್ಕೆ ನನ್ನ ಸಮ್ಮತಿಯಷ್ಟೇ.

* ಎಷ್ಟೋ ಜನರಿಗೆ ನೀವು ಪ್ರೇರಣೆ ಆಗಿದ್ದೀರಿ ಅನಿಸುತ್ತದೆ?
ಇಬ್ಬರು ಹೆಂಡತಿ ಇಟ್ಟುಕೊಳ್ಳಲಿಕ್ಕಾ? ನಿಜ ಹೇಳಬೇಕೆಂದರೆ ಕೆಲವರಿಗೆ ಧಾರಾವಾಹಿಯ ಪರಿಕಲ್ಪನೆ ಅರ್ಥವಾಗಿಲ್ಲ. ಎರಡು ಹೆಂಡತಿಯರು ಇದ್ದರೆ ಎಷ್ಟು ಕಷ್ಟ ಎಂಬುದನ್ನು ನಾವು ಧಾರಾವಾಹಿಯ ಮೂಲಕ ತೋರಿಸುತ್ತಿದ್ದೇವೆ.

* ನಿಮ್ಮ ಪತ್ನಿಯರಿಗೆ ಸತ್ಯ ತಿಳಿಯುವುದು ಯಾವಾಗ?
ಯಾವಾಗ ತಿಳಿಯುತ್ತದೆ ಎಂದು ನಾನೂ ಕಾತರದಿಂದ ಕಾಯುತ್ತಿದ್ದೇನೆ. ಬೇಗ ಗೊತ್ತಾದರೆ ಸಾಕು ಎಂದು  ದೇವರ ಬಳಿ ಕೇಳಿಕೊಳ್ಳುತ್ತಿದ್ದೇನೆ. ಒಮ್ಮೆ ಗೊತ್ತಾದರೆ ಟೆನ್ಷನ್‌ ಆದರೂ ಕಡಿಮೆಯಾಗುತ್ತದೆ.

* ನಿಜ ಜೀವನದ ಹೆಂಡತಿಯಾಗಿ ಚಿನ್ನು ಅಂಥವರು ಬೇಕಾ, ಗೊಂಬೆಯಂತವರಾ?
ಯಪ್ಪಾ, ಇಬ್ಬರೂ ಬೇಡ. ಧಾರಾವಾಹಿಯಲ್ಲಿಯೇ ಇಬ್ಬರನ್ನೂ ನೋಡಿ ಸಾಕಾಗಿದೆ. ನಿಜ ಜೀವನದಲ್ಲಿಯೂ ಇಂಥದ್ದೇ ಪಾತ್ರಗಳು ಬಂದುಬಿಟ್ಟರೇ ಅಷ್ಟೇ ನನ್ನ ಗತಿ!.

* ಜನರಿಂದ ತಮಾಷೆ ಎನಿಸುವಂತಹ ಪ್ರತಿಕ್ರಿಯೆ ಬಂದಿದ್ದು ಇದೆಯಾ?
ಸಿಕ್ಕಾಪಟ್ಟೆ ಬರುತ್ತಿರುತ್ತದೆ. ಸಾಕಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಇಬ್ಬರನ್ನೂ ಬಿಡಬೇಡಿ ಎಂದು ಮೆಸೇಜ್‌ ಮಾಡುತ್ತಾರೆ. ನಮ್ಮ ಮನೆಯ ಹತ್ತಿರ ಹೂವು ಮಾರುವ ಮಹಿಳೆಯೊಬ್ಬರು ಇದ್ದಾರೆ. ನಾನು ಹೋದಾಗಲೆಲ್ಲ ‘ಲಕ್ಷ್ಮಿ, ಗೊಂಬೆ ಇಬ್ಬರಿಗೂ ಮೋಸ ಮಾಡಬೇಡಪ್ಪ. ವಿಷಯ ಗೊತ್ತಾದರೂ, ಚಿನ್ನುವನ್ನು ಬೇರೆ ಮನೆ ಮಾಡಿ ನೋಡಿಕೊ’ ಎನ್ನುತ್ತಿರುತ್ತಾರೆ. ಜನ ಹೀಗೆ ಕಥೆಯೊಳಗೆ ಬೆರೆತಿರುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ.

* ತುಂಬಾ ಸಪೂರ ಆಗಿದ್ದೀರಿ. ಏನಾದರೂ ಚಿಂತೆನಾ?
ಇಬ್ಬರು ಹೆಂಡತಿಯರನ್ನು ಸಂಬಾಳಿಸುವುದಕ್ಕಿಂತ ದೊಡ್ಡ ಚಿಂತೆ ಇದೆಯಾ?

* ಮತ್ತೆ, ಫಿಟ್‌ನೆಸ್‌ ಗುಟ್ಟೇನು?
ಜಿಮ್‌ಗೆ ಹೋಗುತ್ತೇನೆ. ಆದರೆ ಧಾರಾವಾಹಿಯಲ್ಲಿಯೇ ಬ್ಯುಸಿಯಾಗಿರುವುದರಿಂದ ಸಮಯ ಹೊಂದಿಸಿಕೊಂಡು ಹೋಗಬೇಕು. ದಿನಾ ಒಂದೂವರೆ ಗಂಟೆ ದೇಹ ದಂಡಿಸುತ್ತೇನೆ.  ಚಪಾತಿ, ಮೊಟ್ಟೆ, ಕೋಳಿ, ತರಕಾರಿ ಹೆಚ್ಚು ಸೇವಿಸುತ್ತೇನೆ. ಸಿಹಿ ತಿನಿಸು ಮತ್ತು ಅನ್ನ ಸೇವಿಸುವುದು ಕಡಿಮೆ.

* ಸಿನಿಮಾದಲ್ಲಿ ನಟಿಸುವ ಯೋಜನೆ ಇದೆಯೇ?
‘ಕುಡ್ಲ ಕೆಫೆ’ ಎಂಬ ತುಳು ಸಿನಿಮಾ ಮತ್ತು ‘ಅಸ್ತಿತ್ವ’ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ.  ಸದ್ಯ ‘ಚೇಸ್‌’ ಎಂಬ ಸಿನಿಮಾ ಮಾಡುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.