ADVERTISEMENT

ಇವರ ಡಾನ್ಸು... ಟಾಲಿವುಡ್‌ಗೆ ಫೇಮಸ್ಸು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ಚಿರಂಜೀವಿ
ಚಿರಂಜೀವಿ   

ಟಾಪ್ - 1: ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಎಂದಿಗೂ ಟಾಪ್ ಒನ್, ಎನ್ನುವುದು ಅಭಿಮಾನಿಗಳ ಮಾತು. ಕೇವಲ ಟಾಲಿವುಡ್‌ನಲ್ಲಷ್ಟೇ ಅಲ್ಲದೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೊದಲ ಬಾರಿ ಬ್ರೇಕ್ ಡಾನ್ಸ್ ಮಾದರಿ ನೃತ್ಯ ಮಾಡಿದ ನಟ ಚಿರಂಜೀವಿ. ಅಲೆಯಂತೆ ದೇಹವನ್ನು ಕುಣಿಸಬಲ್ಲ ಸಾಮರ್ಥ್ಯ ಅವರಿಗಿದೆ. ಪ್ರತಿ ಹಾಡಿಗೂ ಭಿನ್ನ ಮೂವ್‌ಮೆಂಟ್‌ಗಳಲ್ಲಿ ದೇಹವನ್ನು ಕುಣಿಸಬಲ್ಲರು.

ನೃತ್ಯವಷ್ಟೇ ಅಲ್ಲದೆ, ಹಾಡಿಗೆ ತಕ್ಕಂತೆ ಮುಖದಲ್ಲೂ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಚಿರಂಜೀವಿ. ‘ಅಂದಂ ಇಂದೋಳಂ’, ‘ಬಂಗಾರು ಕೋಡಿ ಪೆಟ್ಟ’, ‘ಪಾಪಾ ರೀಟಾ’ದಂತಹ ಹಾಡುಗಳು ಅವರ ನೃತ್ಯ ಪ್ರೌಢಿಮೆಗೆ ಹಿಡಿದ ಕನ್ನಡಿ.  ಇನ್ನು ‘ಅಪದ್ಭಾಂಧವುಡು’ ಚಿತ್ರದಲ್ಲಿ ಭರತನಾಟ್ಯ ಪ್ರಕಾರದಂತಹ ನೃತ್ಯವನ್ನೂ ಮಾಡಿ ಚಿರಂಜೀವಿ ಸೈ ಎನಿಸಿಕೊಂಡವರು. ಹೀಗಾಗಿ ಅವರು ಟಾಲಿವುಡ್‌ನ ಅಗ್ರ ಡಾನ್ಸರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

ಟಾಪ್ - 2: ಜೂನಿಯರ್‌ ಎನ್‌ಟಿಆರ್
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಪ್ರಭಾವ ಸಾಕಷ್ಟಿದೆ. ಈ ಕುಟುಂಬದಿಂದ ಟಾಲಿವುಡ್‌ಗೆ ಹಲವು ನಟರ ಪ್ರವೇಶವಾಗಿದೆ. ಈ ಎಲ್ಲ ನಟರ ಪೈಕಿ ಜೂನಿಯರ್‌ ಎನ್‌ಟಿಆರ್ ಸ್ವಲ್ಪ ಭಿನ್ನ. ಸಿನಿಮಾ ರಂಗ ಪ್ರವೇಶಿಸುವ ಮುನ್ನವೇ ಕೂಚಿಪುಡಿ ನೃತ್ಯ ಕಲಿತಿದ್ದರು. ಅವರ ನಾಟ್ಯ ಕೌಶಲ ಕೇವಲ ತೆಲುಗು ಚಿತ್ರರಂಗವಷ್ಟೇ ಅಲ್ಲ, ಭಾರತದ ಉತ್ತಮ ನೃತ್ಯಗಾರರಲ್ಲಿ ಒಬ್ಬರಾಗಿ  ಗುರುತಿಸಿಕೊಳ್ಳುವಂತೆ ಮಾಡಿದೆ. ‘ಯಮದೊಂಗ’ ಚಿತ್ರದಲ್ಲಿ  ತಮ್ಮ ನೃತ್ಯ ಚಾತುರ್ಯದಿಂದಲೇ ಹಲವರನ್ನು ಆಶ್ಚರ್ಯಕ್ಕೆ ಗುರಿಮಾಡಿದ್ದರು.  ಎಂತಹ ಕ್ಲಿಷ್ಟಕರ ಮೂವ್‌ಮೆಂಟ್‌ ಆದರೂ ಆಯಾಸವಿಲ್ಲದ ಮಾಡಿ ತೋರಿಸಬಲ್ಲರು ಎನ್‌ಟಿಆರ್.

ADVERTISEMENT

ಟಾಪ್ – 3: ಅಲ್ಲು ಅರ್ಜುನ್ಟಾ
ಲಿವುಡ್‌ನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ ಅವರು ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅಭಿಮಾನಿಗಳು ಪ್ರೀತಿಯಿಂದ ‘ಬನ್ನಿ’ ಎಂದು ಕರೆಯುವ ಅರ್ಜುನ್‌ಗೆ ನೃತ್ಯವನ್ನು ಪರಿಚಯಿಸುವ ಅಗತ್ಯವಿಲ್ಲ. ‘ಆರ್ಯ–2’ ಮತ್ತು ‘ಬದ್ರಿನಾಥ್’ ಚಿತ್ರಗಳಲ್ಲಿ ಇವರ ನೃತ್ಯ ಕೌಶಲವನ್ನು ಕಂಡು ಹಲವರು ಬೆರಗಾಗಿದ್ದರು. ಕೆಲವು ಚಿತ್ರಗಳಲ್ಲಿ ಅವರೇ ಸ್ವತಃ ಕೆಲವು ಸ್ಟೆಪ್‌ಗಳನ್ನು ಕಂಪೋಸ್‌ ಮಾಡಿರುವುದು ವಿಶೇಷ.
ಅವರ ಈ ಸಾಮರ್ಥ್ಯವೇ ಅವರನ್ನೂ ಉತ್ತಮ ಡಾನ್ಸರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ.

ಟಾಪ್ – 4: ರಾಮ್‌ಚರಣ್ ತೇಜ
ನಟ ರಾಮ್‌ಚರಣ್‌ ತೇಜ ಅವರಿಗೆ ನೃತ್ಯ ಹೊಸತೇನಲ್ಲ. ಟಾಲಿವುಡ್‌ಗೆ ಅಗ್ರ ನಾಯಕ ನಟರನ್ನು ಪರಿಚಯಿಸಿರುವ ಮೆಗಾ ಫ್ಯಾಮಿಲಿಯಿಂದ ಬಂದಿರುವ ‘ಚೆರ್ರಿ’, ಮೆಗಾ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಟಿಸುವುದಷ್ಟೇ ಅಲ್ಲ, ಉತ್ತಮವಾಗಿ ನೃತ್ಯವನ್ನೂ ಮಾಡಬಲ್ಲರು.  ನೃತ್ಯದಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿರುವ ರಾಮ್‌ಚರಣ್‌ ಸ್ವಿಫ್ಟ್ ಲೆಗ್‌ ಮೂವ್‌ಮೆಂಟ್‌ ಮಾಡುವುದರಲ್ಲಿ ನಿಸ್ಸೀಮರು.  ಚಿರಂಜೀವಿ ನಟಿಸಿದ್ದ ‘ಬಂಗಾರು ಕೋಡಿ ಪೆಟ್ಟ’, ‘ವಾನ ವಾನ ವೆಲ್ಲುವಾಯೆ’  ಯಂತಹ ರಿಮಿಕ್ಸ್ ಹಾಡುಗಳಲ್ಲಿ  ಈ ಪೀಳಿಗೆಯ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಕುಣಿದು ಸೈ ಎನಿಸಿಕೊಂಡಿದ್ದಾರೆ.

ಟಾಪ್ – 5: ನಿತಿನ್‌
ಚಿತ್ರರಂಗದ ಹಿನ್ನೆಲೆಯ ಕುಟುಂಬದಿಂದ ಬಂದ ನಿತಿನ್‌, ತೆಲುಗು ಚಿತ್ರರಂಗದಲ್ಲಿ ಉತ್ತಮ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ.

‘ನೃತ್ಯ ಮಾಡುವುದೆಂದರೆ ನನಗೆ ಬಹಳ ಇಷ್ಟ’ ಎಂದು ಹೇಳುವ ನಿತಿನ್‌, ತಮ್ಮ ನೆಚ್ಚಿನ ನಟ ಪವನ್‌ ಕಲ್ಯಾಣ್‌ ಅವರ ಚಿತ್ರಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಗಳಲ್ಲೂ ಹೆಜ್ಜೆಹಾಕಿ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ.
ಪವನ್‌ ಕಲ್ಯಾಣ್‌ ಅವರ ಚಿತ್ರಗಳಲ್ಲಿನ ನೃತ್ಯವನ್ನು ನೋಡಿಯೇ ಕುಣಿಯುವುದನ್ನು  ಕಲಿತೆ ಎಂದು ಹೇಳುವ ನಿತಿನ್‌, ಎಂತಹ ಮೂವ್‌ಮೆಂಟ್‌ ಆದರೂ ಚೆನ್ನಾಗಿ ಮಾಡಿ ತೋರಿಸಬಲ್ಲರು.  ಅವರ ಈ ಸಾಮರ್ಥ್ಯವೇ ಟಾಲಿವುಡ್‌ನ ಉತ್ತಮ ಡಾನ್ಸರ್‌ಗಳಲ್ಲಿ ಒಬ್ಬರಾಗಿ ಗುರುತಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.