ADVERTISEMENT

ಈ ಬಾವಿಗೆ ಎಷ್ಟು ಕಿಟಕಿ ಇದೆ ಗೊತ್ತೇ?

ವಿದ್ಯಾ ವಿ.ಹಾಲಭಾವಿ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಈ ಬಾವಿಗೆ ಎಷ್ಟು ಕಿಟಕಿ ಇದೆ ಗೊತ್ತೇ?
ಈ ಬಾವಿಗೆ ಎಷ್ಟು ಕಿಟಕಿ ಇದೆ ಗೊತ್ತೇ?   

ಮಧ್ಯ ಇಟಲಿಯ ಉಂಬ್ರಿಯಾದ ಆರ್ವಿಟೊ ಎಂಬಲ್ಲಿ ಐತಿಹಾಸಿಕ ಪ್ರಸಿದ್ಧ  ಬಾವಿಯೊಂದಿದೆ. ಪೋಜೊ ಡಿ ಎಸ್ ಪ್ಯಾಟ್ರಿಜಿಯೊ ಅಥವಾ ಸೇಂಟ್ ಪ್ಯಾಟ್ರಿಕ್ ಬಾವಿ  ಎಂದು ಕರೆಯಲಾಗುವ ಈ ಬಾವಿಯನ್ನು 1527 ಹಾಗೂ 1537ರ ನಡುವೆ ಕಟ್ಟಲಾಗಿದೆ. ರೋಮ್ ಆಕ್ರಮಣದ ಸಮಯದಲ್ಲಿ ಆರ್ವಿಟೊದಲ್ಲಿ ಆಶ್ರಯ ಪಡೆದುಕೊಂಡಿದ್ದ ಏಳನೆಯ ಪೋಪ್ ಕ್ಲೆಮೆಂಟ್‌ನ ಅನುಜ್ಞೆಯಂತೆ ಇದನ್ನು ನಿರ್ಮಿಸಲಾಗಿದೆ. ರೋಮ್ ನವೋದಯ ಕಾಲದಲ್ಲಿದ್ದ  ಆಂಟೋನಿಯೊ ಡ ಸಂಗಾಲ್ಲೊ ಎಂಬಾತನೇ ಈ ಬಾವಿಯ ವಾಸ್ತುಶಿಲ್ಪಿ.

ಹೈಡ್ರಾಲಿಕ್ ಎಂಜಿನಿಯರಿಂಗ್‌ನ  ಉತ್ಕೃಷ್ಟತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬಾವಿಯು ಡಬಲ್ ಹೆಲಿಕ್ಸ್ ಆಕೃತಿಯಲ್ಲಿದ್ದು, 53 ಮೀಟರ್ (174ಅಡಿ) ಆಳವಿದೆ ಹಾಗೂ 13 ಮೀಟರ್ (43 ಅಡಿ) ಸುತ್ತಳತೆ ಹೊಂದಿದೆ. ಬಾವಿಯೊಳಗೆ ಇಳಿಯಲು ಹಾಗೂ ಹತ್ತಲು ಪ್ರತ್ಯೇಕವಾಗಿ ಎರಡು ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.   ಎರಡೂ ಕಡೆ 248 ಮೆಟ್ಟಿಲುಗಳಿವೆ. ಕೆಳಭಾಗದಲ್ಲಿ ಕಟ್ಟಲಾದ ಸೇತುವೆಯ ಮೇಲೆ ಜನರು ಓಡಾಡುತ್ತಾ ನೀರನ್ನು ಎತ್ತಬಹುದು. 70 ದೊಡ್ಡ  ಕಿಟಕಿಗಳನ್ನು ನೇರವಾಗಿ ಹಾಗೂ ಒಂದಕ್ಕೊಂದು ವಿರುದ್ಧವಾಗಿ ಇರಿಸಿರುವುದರಿಂದ ನೀವು ಕಿಟಿಕಿಯಲ್ಲಿ ನಿಂತು ಇನ್ನೊಂದು  ಕಿಟಕಿಯಲ್ಲಿರುವವರತ್ತ ಕೈ ಬೀಸಿ ಹಲೋ ಹೇಳಬಹುದಾಗಿದೆ. ಬೆಳಕು ಸ್ವಾಭಾವಿಕವಾಗಿ ಮೆಟ್ಟಿಲುಗಳ ಮೇಲೆ ಬೀಳುವಂತೆ ಮಾಡಲಾಗಿದೆ. ಇದು ಆ ಕಾಲದಲ್ಲಿನ ಅತ್ಯಂತ ವಿಶಿಷ್ಟ ರಚನೆಯಾಗಿದ್ದು ಯೂರೋಪ್‌ನ ಬೇರೆ ಯಾವ ಬಾವಿಯೂ ಇದರಂತೆ ಇಲ್ಲ. ಈ ಬಾವಿಯು ಆಲ್ಬೋರ್ಮೋಜ್ ಕೋಟೆಯ ಹತ್ತಿರವಿದ್ದುದರಿಂದ ಇದನ್ನು ಪೋಜೊ ಡೆಲ್ಲಾ ರೋಕಾ ಅಥವಾ ಕೋಟೆ ಬಾವಿ ಎಂದೇ ಕರೆಯಲಾಗುತ್ತಿತ್ತು. ನಂತರ ಮಧ್ಯಕಾಲೀನದ ದಂತಕಥೆಯಾಗಿದ್ದ ಸಂತ ಪ್ಯಾಟ್ರಿಕ್‌ನಿಂದ ಪ್ರೇರೇಪಿತವಾಗಿ ಸೇಂಟ್ ಪ್ಯಾಟ್ರಿಕ್ ಬಾವಿ ಎಂದು ನಾಮಕರಣ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT