ADVERTISEMENT

ಉದ್ಯೋಗಿಗಳಿಗೆ ಫೇಸ್‌ಪ್ಯಾಕ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST

ಉದ್ಯೋಗಸ್ಥ ಮಹಿಳೆಯರು ಕಚೇರಿ, ಮನೆ ಎಂದೆಲ್ಲಾ ಹೆಚ್ಚಿಗೆ ಓಡಾಡುವ ಕಾರಣ ದೂಳು, ಬಿಸಿಲು ಇತ್ಯಾದಿಗಳಿಂದ ಚರ್ಮದ ಕಾಂತಿಯನ್ನು ಕಳೆದುಕೊಳ್ಳುತ್ತಾರೆ. ಇದನ್ನು ಸರಿದೂಗಿಸಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಲೇಪನ ಹಚ್ಚುವ ಬದಲು ಕೊನೆಯ ಪಕ್ಷ ವಾರಕ್ಕೊಮ್ಮೆ ಇಂಥ ಫೇಸ್‌ಪ್ಯಾಕ್‌ಗಳನ್ನು ಹಚ್ಚಿನೋಡಿ..

ಹಸಿ ಹಾಲಿಗೆ ಸ್ವಲ್ಪ ಲಿಂಬೆ ರಸ ಮತ್ತು ಚಿಟಕೆ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.  ಅದರಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಮುಖದ ಮೇಲೆ ವರ್ತುಲಾಕಾರವಾಗಿ ಹಚ್ಚಿಕೊಳ್ಳಿ. ಹಾಗೆಯೇ ಸ್ವಲ್ಪ ಒಣಗಲು ಬಿಡಿ. 10–15 ನಿಮಿಷಗಳ ನಂತರ ಇನ್ನೊಂದು ಹತ್ತಿಯುಂಡೆಯಿಂದ ಈ ದ್ರವವನ್ನು ಒರೆಸಿ ತೆಗೆದು ತಣ್ಣೀರಿನಿಂದ ಮುಖ ತೊಳೆಯಿರಿ.

ಇದು ಮುಖಕ್ಕೆ ಮಾತ್ರವಾದರೆ ಇಡೀ ಶರೀರ ತಾಜಾ ಆಗಿರಲು ಹೀಗೆ ಮಾಡಿ: ಹಸಿ ಹಾಲಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ದೇಹಕ್ಕೆ ಹಚ್ಚಿಕೊಳ್ಳಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದರಿಂದ ದೇಹಕ್ಕೆ ಅಗತ್ಯವಿರುವ ತೇವಾಂಶ ಸಿಗುತ್ತದೆ ಮತ್ತು ಚರ್ಮ ನಯವಾಗುತ್ತದೆ. ಪ್ರತಿದಿನ ಸ್ನಾನ ಮಾಡುವಾಗಲೂ ಹೀಗೆಯೇ ಮಾಡಿ.

ಇಡೀ ದಿನ ಕೆಲಸ ಮಾಡಿ ಮುಖ ಮಂಕಾಗಿ ಹೋಗಿದೆಯಾ? ಹಾಗಿದ್ದರೆ ಇದನ್ನು ಟ್ರೈ ಮಾಡಿ: ದಾಸವಾಳ ಹೂವಿನ ನಾಲ್ಕೈದು ಎಸಳುಗಳನ್ನು ಕಿತ್ತಿ ಅದಕ್ಕೆ  ನಾಲ್ಕೈದು ಚಮಚ ಮೊಸರು ಸೇರಿಸಿ. ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅರ್ಧ ಕಡಿ ನಿಂಬೆ ರಸ ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿರಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ದಾಸವಾಳದ ಬದಲು ಗುಲಾಬಿ ಹೂವಿನಿಂದಲೂ ಮಾಡಬಹುದು. ಗುಲಾಬಿ ಹೂವಾದರೆ ಹೂವಿನ ದಳಗಳನ್ನು ಅರ್ಧ ಗಂಟೆ ಕಾಲ ನೆನೆಸಿಡಬೇಕು. ಅದಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ರುಬ್ಬಬೇಕು. ನಂತರ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಮುಖ ತೊಳೆದುಕೊಳ್ಳಬೇಕು.

ಸೌತೆಕಾಯಿ ರಸ, ರೋಸ್ ವಾಟರ್ ಮತ್ತು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ. ಕಚೇರಿಯಿಂದ ಮನೆಗೆ ಬಂದ ಮೇಲೆ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ತಾಜಾ ಆಗುತ್ತದೆ. 

ನಿಂಬೆರಸ, ಜೇನುತುಪ್ಪ ಮತ್ತು ಶ್ರೀಗಂಧದ ಪುಡಿಯ ಮಿಶ್ರಣವನ್ನು ತಯಾರಿಸಿ ಮುಖಕ್ಕೆ ಲೇಪಿಸಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.