ADVERTISEMENT

ಕಚ್ಚಾ ಸಾಹಿತಿಯ ರ್ಯಾಂಪ್ ರಂಗು

ವಿಶಾಖ ಎನ್.
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಕಚ್ಚಾ ಸಾಹಿತಿಯ ರ್ಯಾಂಪ್ ರಂಗು
ಕಚ್ಚಾ ಸಾಹಿತಿಯ ರ್ಯಾಂಪ್ ರಂಗು   
ಟ್ರಿನಿಟಿ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಕಲಿತು ಭಾರತದಲ್ಲಿ ದೊಡ್ಡ ಹೆಸರು ಮಾಡಿದವರಲ್ಲಿ ಮುಖ್ಯರಾದವರು ಇಳಯರಾಜ, ಎ.ಆರ್. ರೆಹಮಾನ್, ಹ್ಯಾರಿಸ್ ಜಯರಾಜ್. ಈ ಮೂವರೂ ಸಂಗೀತ ಸಂಯೋಜಕರು. ಅದೇ ಶಾಲೆಯಲ್ಲಿ ಕಲಿತ ಯೋ ಯೋ ಹನಿ ಸಿಂಗ್ ಸಂಯೋಜಕರಾಗಿ ಅಷ್ಟೇ ಅಲ್ಲ, ಗಾಯಕರಾಗಿ ಬಲು ಬೇಗ ಜನಪ್ರಿಯತೆಯ ತುತ್ತತುದಿ ಏರಿದವರು. 
 
ಪಂಜಾಬ್‌ನ ಹೋಷಿಯಾರ್‌ಪುರದ ಹಿರ್ದೇಶ್ ಸಿಂಗ್‌ಗೆ ಬಾಲ್ಯದಿಂದಲೂ ಹಾಡಿನಲ್ಲಿ ಒಲವು. ಯುನೈಟೆಡ್ ಕಿಂಗ್‌ಡಮ್‌ನ ಟ್ರಿನಿಟಿ ಮ್ಯೂಸಿಕ್ ಸ್ಕೂಲ್‌ನಲ್ಲಿ ಕಲಿಯುವವರೆಗೆ ಅವರಲ್ಲಿ ಶಾಸ್ತ್ರೀಯ ಶಿಸ್ತು ಇತ್ತು. ಅಲ್ಲಿ ಕಲಿತದ್ದೇ ಅವರ ಬದುಕಿನ ದಿಕ್ಕು ಬದಲಾಯಿತು. ರ್‍ಯಾಪ್ ಹಾಡುಗಳ ಮೂಲಕವೇ ಜನಮನ ಗೆಲ್ಲಲು ಸಾಧ್ಯ ಎಂದು ನಿರ್ಧರಿಸಿದರು.
 
ಯುರೋಪ್ ಹಾಗೂ ಅಮೆರಿಕ ಪಾಪ್‌ ಗಾಯಕ- ಗಾಯಕಿಯರು ಭಾರತೀಯ ಚೌಕಟ್ಟಿನ ನೈತಿಕತೆಯನ್ನೆಲ್ಲ ಮುರಿಯುವವರಂತೆ ಸಾಹಿತ್ಯ ಬರೆದು, ಹಾಡುಗಳನ್ನು ಸಂಯೋಜಿಸುತ್ತಿದ್ದುದನ್ನು ಕಂಡರು. ಪ್ರೇಮ- ಪ್ರಣಯಕ್ಕಿಂತ ಹೆಚ್ಚಾಗಿ ಕಾಮ, ಚೋದ್ಯದ ಸರಕು ಜನಪ್ರಿಯ ಎಂದು ಅವರಿಗೆ ಅನ್ನಿಸತೊಡಗಿತು. 
 
ಮೊದಲು ಇಂಗ್ಲಿಷ್ ಗೀತೆಗಳನ್ನು ಹಾಡುತ್ತಾ ಪಳಗಿದ ಹಿರ್ದೇಶ್ ಸಿಂಗ್ ಬೇಗ ‘ಹನಿ ಸಿಂಗ್’ ಆದರು. ಅದಕ್ಕೆ ‘ಯೋ ಯೋ’ ಎಂ ರ್‍ಯಾಪರ್ ಗುಣವಿಶೇಷಣ ಅಂಟಿಕೊಂಡಿತು. ಪಂಜಾಬಿ ಯುವಕ ಎಂದು ಗೊತ್ತಾದದ್ದೇ ವಿದೇಶಗಳಲ್ಲೂ ಆ ಭಾಷೆಯ ರ್‍ಯಾಪ್ ಗೀತೆಗಳನ್ನು ಹಾಡುವಂತೆ ಜನ ದುಂಬಾಲುಬಿದ್ದರು. ಹನಿ ಪಂಜಾಬಿ ಹಾಡುಗಳನ್ನು ಕಟ್ಟಿದರು. ಏಕತಾನವೆನ್ನಿಸುವ ಗಪದ್ಯ ಶೈಲಿಯ ರ್‌್ಯಾಪ್‌ ಗೀತೆಗಳು ಯುವಜನರನ್ನು ನಿಂತಲ್ಲೇ ಕುಣಿಯುವಂತೆ ಮಾಡಿದವು.  
 
2005ರಿಂದ ಹನಿ ಸಿಂಗ್ ಸಂಗೀತ ನಿರ್ಮಾಪಕರಾದರು. 2006ರಲ್ಲಿ ಅವರ ಸಂಯೋಜನೆಯ ಹಾಡೊಂದು ‘ಬಿಬಿಸಿ ವರ್ಲ್ಡ್ ಚಾರ್ಟ್’ನಲ್ಲಿ ನಂಬರ್ ಒನ್ ಎನಿಸಿಕೊಂಡಿತು. ನಾಸಿರುದ್ದೀನ್ ಷಾ ಹಾಗೂ ವಿವಾನ್ ಅಭಿನಯದ ‘ಮಸ್ತಾನ್’ ಎಂಬ ಗ್ಯಾಂಗ್‌ಸ್ಟರ್ ಹಿಂದಿ ಚಿತ್ರದಲ್ಲಿ ಹನಿ ಸಿಂಗ್ ಹಾಡನ್ನು ಮೊದಲು ಬಳಸಿಕೊಳ್ಳಲಾಯಿತು.
 
ಅದು ಬಾಲಿವುಡ್‌ಗೆ ಅವರ ಪ್ರವೇಶ. ‘ಮುಝೆ ನೀಟ್ ಪಿಲಾದೆ ಸಜ್ನಾ’ ಎಂಬ ಆ ಹಾಡು ಅಷ್ಟೇನೂ ಜನಪ್ರಿಯವಾಗಲಿಲ್ಲ. ಆ ಅವಕಾಶ ಒಲಿದು ಬಂದಾಗ ಹನಿ ಸಿಂಗ್ ಅವರಿಗಿನ್ನೂ ಇಪ್ಪತ್ತೈದು ವರ್ಷ. 
 
‘ಕಾಕ್‌ಟೇಲ್’ ಸಿನಿಮಾ  ಜನಪ್ರಿಯವಾದ ನಂತರ ಅವರಿಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಯಿತು. ‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರದ ‘ಲುಂಗಿ ಡಾನ್ಸ್’ ಹಾಗೂ ‘ಬಾಸ್’ ಸಿನಿಮಾದ ‘ಪಾರ್ಟಿ ಆಲ್ ನೈಟ್’ ಹಾಡುಗಳ ದೊಡ್ಡ ಜನಪ್ರಿಯತೆ ಅವರ ತಾರಾಮೌಲ್ಯ ಹೆಚ್ಚಿಸಿತು. 
 
ತುಂಟತನಕ್ಕೂ, ಪೋಲಿತನಕ್ಕೂ ವ್ಯತ್ಯಾಸವಿದೆ. ಹನಿ ಸಿಂಗ್ ಸಾಹಿತ್ಯ ಪರಮ ಪೋಲಿ ಎಂದು ಅನೇಕರು ಪುರಾವೆಗಳ ಸಮೇತ ಲೇಖನಗಳನ್ನು ಬರೆದರು. ದೆಹಲಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ಹನಿ ಸಿಂಗ್ ಸಾಹಿತ್ಯದ ಹಾಡೊಂದನ್ನು ನಿಷೇಧಿಸಬೇಕು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ದಾಖಲಾಯಿತು. ಆ ಪ್ರಕರಣದಲ್ಲಿ ಹನಿ ಸಿಂಗ್ ನಿರ್ದೋಷಿ ಎನಿಸಿಕೊಂಡರು. ‘ಪಾರ್ಟಿ ಆಲ್ ನೈಟ್’ ಹಾಡಿನಲ್ಲೂ ಒಂದು ಅಶ್ಲೀಲ ಪದವನ್ನು ‘ಮ್ಯೂಟ್’ ಮಾಡುವ ಅನಿವಾರ್ಯ ಸೃಷ್ಟಿಯಾಗಿತ್ತು. 
 
ಜನಪ್ರಿಯತೆ ನಿಭಾಯಿಸುವಲ್ಲಿ ಆಗೀಗ ಎಡವಿದ ಹನಿ ಸಿಂಗ್, ಕಿರಿಕಿರಿಗಳನ್ನು ಸದಾ ಬೆನ್ನಿಗಿಕ್ಕಿಕೊಂಡರು. ಶಾರುಖ್ ಖಾನ್ ಜೊತೆ ಜಗಳವಾಡಿಕೊಂಡು, ಒದೆ ತಿಂದರು ಎಂಬ ವದಂತಿ ಕೂಡ ಹಬ್ಬಿತ್ತು. ಅದಾದ ಮೇಲೆ ಹನಿ ಸಿಂಗ್ ಬಾಲಿವುಡ್ ಗಾನಲೋಕದಿಂದ ನಾಪತ್ತೆಯಾದರು. ಮತ್ತೆ ಕಾಣಿಸಿಕೊಂಡಾಗ, ‘ವಿಪರೀತ ಬೆನ್ನುನೋವಿತ್ತು. ಅದಕ್ಕೇ ಬ್ರೇಕ್ ತೆಗೆದುಕೊಂಡಿದ್ದೆ’ ಎಂದರು. 
 
ನೈತಿಕತೆಯನ್ನು ಒಪ್ಪದ ಹನಿ ಸಿಂಗ್ ಕಚ್ಚಾ ಸಾಲುಗಳನ್ನು ಬರೆದು ಜೀರ್ಣಿಸಿಕೊಂಡಿರುವುದು ಒಂದು ಕಡೆ. ಮಹಿಳೆಯರನ್ನು ಹೀನವಾಗಿ ನೋಡುವ ಈ ವ್ಯಕ್ತಿಯ ಮನಸ್ಥಿತಿ ಎಷ್ಟು ಕೆಟ್ಟದ್ದೆಂಬ ಟೀಕೆ ಇನ್ನೊಂದು ಕಡೆ. 
 
ಇಷ್ಟದ ಮಡದಿಯೊಟ್ಟಿಗೆ ಇರುವ ಹನಿ ಸಿಂಗ್ ಐದು ವರ್ಷಗಳ ಹಿಂದೆಯೇ ಒಂದು ಹಾಡಿಗೆ ₹ 80 ಲಕ್ಷ  ಸಂಭಾವನೆ ಪಡೆದಿದ್ದರು ಎಂಬ ಮಾತಿತ್ತು. ಇಷ್ಟಕ್ಕೂ ಜನಪ್ರಿಯತೆಯ ಭಾರಕ್ಕೆ ನಲುಗಿ, ಮತ್ತೆ ಎದ್ದು ನಿಂತ ಹನಿ ಸಿಂಗ್ ಮುಂದೆ ಯಾವ ರಾಗ ಕೊಡುವರೋ ಎಂಬ ಪ್ರಶ್ನೆ ಅನೇಕರಲ್ಲಿ ಇದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.