ADVERTISEMENT

ಕಡೂರಿನಿಂದ ಕೊಲಂಬೊವರೆಗೆ...

ವಿಶಾಖ ಎನ್.
Published 8 ಜನವರಿ 2017, 19:30 IST
Last Updated 8 ಜನವರಿ 2017, 19:30 IST
ವೇದಾ ಕೃಷ್ಣಮೂರ್ತಿ
ವೇದಾ ಕೃಷ್ಣಮೂರ್ತಿ   

ಚಿಕ್ಕಮಗಳೂರಿನ ಕಡೂರು. ಸಂಜೆ ಆಯಿತೆಂದರೆ ಹುಡುಗರ ಹಿಂಡು ಟೆನಿಸ್ ಬಾಲ್ ಕ್ರಿಕೆಟ್ ಆಡುವುದು ಮಾಮೂಲು. ಹುಡುಗರ ಗುಂಪಿನಲ್ಲಿ ಒಬ್ಬಳೇ ಹುಡುಗಿ. ಅವಳಿಗೆ ಚೆಂಡು ಕೊಡಲು ಕೂಡ ಹುಡುಗರು ಪೀಡಿಸುತ್ತಿದ್ದರು. ಆ ತಂಡದಲ್ಲಿ ಅವಳ ಅಣ್ಣ ಇದ್ದ. ಇಬ್ಬರಿಗೂ 14 ವರ್ಷಗಳ ಅಂತರ. ನಡುವೆ ಇದ್ದ ಇಬ್ಬರು ಅಕ್ಕಂದಿರು ಎಲ್ಲರಂತಿದ್ದರು.

ಹೀಗೆ ಆಟ ಆಡುತ್ತಿದ್ದ ಹುಡುಗಿ ಅಪ್ಪ ಎಸ್.ಜಿ. ಕೃಷ್ಣಮೂರ್ತಿ ಅವರಲ್ಲಿ ತಾನು ಕ್ರಿಕೆಟಿಗಳೇ ಆಗಬೇಕೆಂಬ ತುಡಿತ ಹೇಳಿ ಕೊಂಡಳು. ‘ಅವಕಾಶ ಸಿಕ್ಕರೆ ಆಗುವೆಯಂತೆ’ ಎಂದುಬಿಟ್ಟರು ಅಪ್ಪ. 2005. ಹುಡುಗಿಗಿನ್ನೂ 13 ವಯಸ್ಸು. ಪತ್ರಿಕೆಯಲ್ಲಿ ಜಾಹೀರಾತೊಂದು ಬಂದಿತ್ತು. ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್ ಕ್ರಿಕೆಟ್‌ನಲ್ಲಿ ಪ್ರತಿಭೆಗಳಿಗೆ ತರಬೇತಿ ಅವಕಾಶದ ಜಾಹೀರಾತು ಅದು. ಬೆಂಗಳೂರಿನಲ್ಲಿದ್ದ ಆ ಸಂಸ್ಥೆಗೆ ಮಗಳನ್ನು ಅಪ್ಪ ಕರೆದುಕೊಂಡು ಹೋದರು.

ಅದುವರೆಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದ ಹುಡುಗಿಗೆ ಲೆದರ್ ಬಾಲ್ ಹಿಡಿಯುವುದು ಕೂಡ ಕಷ್ಟವಿತ್ತು. ತರಬೇತಿಗೆ ಸೇರಲೆಂದು ಬಂದವರೆಲ್ಲ ಅತಿ ಕಿರಿಯಳಾಗಿದ್ದ ಹುಡುಗಿಯನ್ನು ನೋಡಿ ಕೋಚ್ ಇರ್ಫಾನ್ ಸೇಠ್‌ಗೆ ಸೋಜಿಗ. ಒಂದು ತಿಂಗಳ ತರಬೇತಿ ಪಡೆಯಬೇಕು. ಇನ್ನಷ್ಟು ಬೆಳೆಯಬೇಕಾದರೆ ಅದನ್ನು ಮುಂದುವರಿಸಬೇಕು.

ಅವೆಲ್ಲಕ್ಕೆ ಸಮಯ, ಹಣ, ನೆಲೆ ಯಾವುದನ್ನೂ ದಕ್ಕಿಸಿಕೊಡುವ ಸ್ಥಿತಿಯಲ್ಲಿ ಕೃಷ್ಣಮೂರ್ತಿ ಅವರು ಇರಲಿಲ್ಲ. ಮಗಳ ಆಸೆ ಈಡೇರೀತೆ ಎಂದು ಅವರು ಚಿಂತಾಕ್ರಾಂತರಾದರು.ಕಲಿಯಲೇಬೇಕು ಎಂದು ಹುಡುಗಿಯ ಮಹತ್ವಾಕಾಂಕ್ಷೆ ಕಂಡು ಇರ್ಫಾನ್ ಕರಗಿದರು. ಕರ್ನಾಟಕ ತಂಡದ ಮಾಜಿ ಆಟಗಾರ್ತಿ ಸ್ಫೂರ್ತಿ ರಮೇಶ್ ಅವರನ್ನು ಕರೆದರು. ಆ ಹುಡುಗಿಗೆ ತಂಗಲು ಮನೆಯಲ್ಲಿ ಅವಕಾಶ ಕೊಡುವಂತೆ ತಾಕೀತು ಮಾಡಿದರು. ಸ್ಫೂರ್ತಿ ಪಾಲಿಗೆ ಅಂದಿನಿಂದ ಈ ಹುಡುಗಿ ತಂಗಿಯಂತೆ ಆದಳು.

ಸ್ಫೂರ್ತಿ ಅವರ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಹೊತ್ತು ಹೊತ್ತಿಗೆ ಊಟ. ತರಬೇತಿಗೆ ಮೋಸವಿಲ್ಲ. ತಿಂಗಳ ತರಬೇತಿ ಮುಗಿದದ್ದೇ ಗೊತ್ತಾಗಲಿಲ್ಲ. ಅವರ ಮನೆಯಲ್ಲಿ ನೆಲೆ ಸಿಗದೇಹೋಗಿದ್ದರೆ ಬಹುಶಃ ಕೃಷ್ಣಮೂರ್ತಿ ತಮ್ಮ ಮಗಳನ್ನು ಕಡೂರಿಗೆ ವಾಪಸ್ ಕರೆದುಕೊಂಡು ಹೋಗಿರುತ್ತಿದ್ದರು.

ತರಬೇತಿ ಮುಗಿಯುವಷ್ಟರಲ್ಲಿ ಅಕ್ಕ ವತ್ಸಲಾ ಶಿವಕುಮಾರ್ ಬೆಂಗಳೂರಿನಲ್ಲಿ ಒಂದು ಪುಟ್ಟ ಮನೆ ಮಾಡಿದರು. ತಂಗಿಯ ನೆಲೆ ಅಲ್ಲಿಗೆ ಬದಲಾಯಿತು. ಕ್ರಿಕೆಟ್ ಕಲಿಯುತ್ತಿದ್ದ ಹುಡುಗಿಯ ಪಾಲಿಗೆ ವತ್ಸಲ ಎರಡನೇ ಅಮ್ಮನಂತೆ. ಕ್ರಿಕೆಟ್ ತರಬೇತಿಯ ಜತೆಗೆ ಕರಾಟೆಯನ್ನೂ ಕಲಿತ ಹುಡುಗಿ ಕ್ಷೇತ್ರರಕ್ಷಣೆಯಲ್ಲಿ ಚುರುಕಾಗಿದ್ದಳು.

ತರಬೇತಿ ಶುರುವಾದಾಗ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಕ್ಷೇತ್ರರಕ್ಷಣೆಯಲ್ಲೇ ಪಳಗಿದ್ದು. 30 ಯಾರ್ಡ್‌ನಲ್ಲಿ ಚುರುಕಾಗಿ ಓಡಾಡುತ್ತಿದ್ದ ಹುಡುಗಿ ಆಮೇಲೆ ಬ್ಯಾಟಿಂಗ್ ಪಾಠಗಳನ್ನೂ ಕಲಿತಳು. ಕರ್ನಾಟಕದ 17 ವರ್ಷದೊಳಗಿನವರ ಕ್ರಿಕೆಟ್ ತಂಡದ ನಾಯಕಿ ಆದದ್ದು ಮೊದಲ ಬೆಳವಣಿಗೆ. 2011ರಲ್ಲಿ ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿ, ಚೊಚ್ಚಲ ಪಂದ್ಯದಲ್ಲೇ ಇಂಗ್ಲೆಂಡ್ ಎದುರು ಅರ್ಧ ಶತಕ ಗಳಿಸಿದ್ದು ಎರಡನೇ ಮೆಟ್ಟಿಲು.

‘ನನಗೆ ತಲೆತಿರುಕತನ ಬಂತು. ಮೊದಲ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಮೇಲೆ ಎಲ್ಲ ಸುಲಭ ಎಂದು ತಪ್ಪಾಗಿ ಭಾವಿಸಿದೆ. ಆಮೇಲೆ ವೆಸ್ಟ್್ಇಂಡೀಸ್ ಹಾಗೂ ಇಂಗ್ಲೆಂಡ್ ಎದುರು ಕೆಟ್ಟದಾಗಿ ಆಡಿದೆ. ಮತ್ತೆ ನನ್ನ ಆಯ್ಕೆ ಆಗಲಿಲ್ಲ. ಈ ಕಹಿ ಅನುಭವ ಪಾಠ ಕಲಿಸಿತು’ ಎಂದು ಈ ಹುಡುಗಿ ಇತ್ತೀಚೆಗೆ ಕೂಡ ಭಾವುಕಳಾಗಿದ್ದರು.

ಹದಿನೆಂಟು ಮಾಗಿದ ವಯಸ್ಸಲ್ಲ. ಮೂರು ವರ್ಷಗಳ ನಂತರ ನ್ಯೂಜಿಲೆಂಡ್ ಎದುರು ಮತ್ತೆ ಆಡುವ ಅವಕಾಶ ಸಿಕ್ಕಾಗ ಗಳಿಸಿದ 63 ರನ್ ಕಲಿತ ಪಾಠಗಳನ್ನು ಬಿಂಬಿಸಿತು.ಅದೇ ಹುಡುಗಿ ಫೆಬ್ರುವರಿ 3ರಿಂದ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ಮಹಿಳೆಯರ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಅವಕಾಶ ಗಳಿಸಿದ್ದಾರೆ. ಕ್ರಿಕೆಟ್ ಪ್ರೀತಿಯಿಂದ ಇಷ್ಟೆಲ್ಲ ಕಷ್ಟಪಟ್ಟ ಹುಡುಗಿಯ ಹೆಸರು ವೇದಾ ಕೃಷ್ಣಮೂರ್ತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.