ADVERTISEMENT

ಕುತೂಹಲ ಕೆರಳಿಸುವ ‘ಸಾಕ್ಷ್ಯಂ’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 21:01 IST
Last Updated 22 ಏಪ್ರಿಲ್ 2018, 21:01 IST
ಕುತೂಹಲ ಕೆರಳಿಸುವ ‘ಸಾಕ್ಷ್ಯಂ’
ಕುತೂಹಲ ಕೆರಳಿಸುವ ‘ಸಾಕ್ಷ್ಯಂ’   

‘ಡಿಜೆ’ ಸುಂದರಿ ಪೂಜಾ ಹೆಗ್ಡೆ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ ಅಭಿನಯದ ‘ಸಾಕ್ಷ್ಯಂ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಮೊದಲ ನೋಟಕ್ಕೆ ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಈ ಹಿಂದೆ ‘ಸಾಕ್ಷ್ಯಂ’ ಪೋಸ್ಟರ್‌ಗಳಿಂದಲೇ ಸುದ್ದಿ ಮಾಡಿತ್ತು. ಪೂಜಾ ಮತ್ತು ಶ್ರೀನಿವಾಸ್ ಪ್ರೇಮಿಗಳಾಗಿ ನಟಿಸಿರುವ ಈ ಚಿತ್ರ ವರ್ತಮಾನದೊಂದಿಗೆ ಭೂತಕಾಲವನ್ನೂ ಬೆಸೆಯುವಂತಿದೆ. ಶ್ರೀವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಚಿತ್ರದ ಮೇಕಿಂಗ್‌ನ ಶ್ರೀಮಂತಿಕೆಯನ್ನು ತೋರುವಂತಿದೆ. ಆಕಾಶ, ಭೂಮಿಯ ವಿಶಾಲ ದೃಶ್ಯಾವಳಿಗಳ ಮೂಲಕ ಆರಂಭವಾಗುವ ಟ್ರೇಲರ್, ದುಷ್ಟಶಕ್ತಿಗಳು ವಿಜೃಂಭಿಸಿದಾಗ ಕರ್ಮಸಾಕ್ಷ್ಯ ಅನ್ನುವಂಥದ್ದು ಅವರನ್ನು ಬೆಂಬಿಡದೇ ಕಾಡುತ್ತದೆ. ಅದು ಬರೀ ಕರ್ಮವಲ್ಲ ‘ಸಾಕ್ಷ್ಯಂ’ ಎನ್ನುವ ಹಿನ್ನೆಲೆ ಧ್ವನಿ ಚಿತ್ರದ ಕಥೆಯ ಎಳೆಯನ್ನು ಬಿಟ್ಟು ಕೊಂಡುವಂತಿದೆ.

ಕಾರು, ಸೈಕಲ್, ಜೀಪ್, ದೋಣಿಗಳು... ಹೀಗೆ ವಿವಿಧ ವಾಹನಗಳಲ್ಲಿ ನಾಯಕನ ಆಗಮನದ ದೃಶ್ಯಗಳು ಯುವತಿಯರ ಮನ ಕದಿಯುವಂತಿವೆ. ನಾಯಕ ಬೆಲ್ಲಂಕೊಡ ಶ್ರೀನಿವಾಸ ಅವರ ಮೈಕಟ್ಟು, ಮುದ್ದು ಮುಖ ನಾಯಕನ ಇಮೇಜಿಗೆ ಪೂರಕವಾಗಿದೆ. ಅಂತೆಯೇ ನಾಯಕಿ ಪೂಜಾ ಹೆಗ್ಡೆ ಲಂಗ ದಾವಣಿಯಲ್ಲಿ ತೆಲುಗು ಅಮ್ಮಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಪೂಜಾ ಹೆಗ್ಡೆ

ಕಪ್ಪು ಲುಂಗಿ ತೊಟ್ಟು, ಮೋಟು ಬೀಡಿ ಹಿಡಿದು ಸ್ಟೈಲ್‌ ಆಗಿ ನಡೆದುಕೊಂಡು ಬರುತ್ತಿರುವ ನಟ ಜಗಪತಿ ಬಾಬು ಅವರ ಹಾವಭಾವ ಅವರೇ ಈ ಸಿನಿಮಾದ ಖಳನಾಯಕನಿರಬಹುದೇ ಎಂಬ ಕುತೂಹಲ ಹುಟ್ಟುಹಾಕುತ್ತದೆ. ವ್ಯಕ್ತಿಯೊಬ್ಬನನ್ನು ಮಣ್ಣಿನಲ್ಲಿ ಜೀವಂತ ಸಮಾಧಿ ಮಾಡುವ, ಚಿತಾಭಸ್ಮವೊಂದು ಗಂಗಾನದಿಯಲ್ಲಿ ಬೀಳುವ ದೃಶ್ಯ ಮತ್ತು ದೊಡ್ಡ ಬಂಗಲೆಯೊಂದರಲ್ಲಿ ಖಾಲಿ ತೊಟ್ಟಿಲು ತೂಗುವ ದೃಶ್ಯಗಳು ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತವೆ.

ಬಿಡಿಬಿಡಿ ಭಾಗಗಳ ಟ್ರೇಲರ್‌ನಲ್ಲಿ ಅಘೋರಿಯೊಬ್ಬ ನಾಯಕನ ಹಣೆಗೆ ವಿಭೂತಿ ಭಸ್ಮವನ್ನು ಬಳಿದು ಹೋಗುವ ದೃಶ್ಯ ನಾಯಕನಿಗೆ ಹಿಂದಿನ ಘಟನೆಯನ್ನು ನೆನಪಿಸುವ ಮೂಲಕ ವರ್ತಮಾನದಿಂದ ಭೂತಕಾಲಕ್ಕೆ ಜಿಗಿತ ಕಾಣುವಂತಿದೆ. ‘ಸಾಕ್ಷ್ಯಂ’ ಹೆಸರಿಗೆ ತಕ್ಕಂತೆ ಭೂತಕಾಲದ ಯಾವುದೋ ಒಂದು ಸಾಕ್ಷಿ ದುಷ್ಟಶಕ್ತಿಯ ನಿಗ್ರಹಕ್ಕಾಗಿ ಕಾದಿರುವಂತಿದೆ. ‘ಸಾಕ್ಷ್ಯಂ’ ಟ್ರೇಲರ್ ಇದುವರೆಗೂ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.