ADVERTISEMENT

ಕೃತಕ ಚರ್ಮ ಮತ್ತು ಮಾಂಸ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಸ್ತ್ರ ಚಿಕಿತ್ಸಾ ಕೌಶಲವನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ ಪ್ರಾಯೋಗಿಕ ತರಬೇತಿಯನ್ನು ಪಡೆಯಬೇಕಾಗುತ್ತದೆ. ಅಂದರೆ ಚರ್ಮವನ್ನು ಭೇದಿಸುವುದು, ಅದರೊಳಗಿನ ಮಾಂಸಲ ಅಂಶವನ್ನು ನಿಧಾನವಾಗಿ ಬಿಡಿಸಿ ನಿರ್ದಿಷ್ಟ ಅಂಗವನ್ನು ತಲುಪುವುದು ಇತ್ಯಾದಿಗಳೆಲ್ಲಾ ಸಾಮಾನ್ಯ ವಿಚಾರಗಳಲ್ಲ. ಒಮ್ಮೆ ಅವರು ಕಲಿತ ನಂತರ ಅವರು ಜೀವಂತ ಮನುಷ್ಯರ ಮೇಲೆ ಈ ಕೆಲಸವನ್ನೂ ಮಾಡಬೇಕಾಗುತ್ತದೆ.

ಸದ್ಯ ಇಂಥ ತರಬೇತಿಗೆ ಪ್ರಾಣಿಗಳು, ಪ್ರಾಣಿಗಳ ಚರ್ಮ, ಬಾಳೆ ಹಣ್ಣಿನ ಸಿಪ್ಪೆ, ಕಿತ್ತಳೆ ಸಿಪ್ಪೆ ಇತ್ಯಾದಿಗಳ ಮೇಲೆಲ್ಲಾ ವೈದ್ಯರ ಕತ್ತಿ ಓಡಾಡುತ್ತದೆ. ಆದರೆ ಇವುಗಳ್ಯಾವುವೂ ಮನುಷ್ಯನ ಚರ್ಮಕ್ಕೆ ಸಮಾನವಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅಣಕು ಶಸ್ತ್ರಕ್ರಿಯೆಯಲ್ಲಿ ರಕ್ತವೇ ಇರುವುದಿಲ್ಲ. ಇದನ್ನು ಪರಿಹರಿಸುವುದಕ್ಕಾಗಿ ಕೊಲರಾಡೊ ವಿಶ್ವವಿದ್ಯಾಲಯದ ಡಾ.ಡೀನ್ ಹೆನ್ರಿಕ್‌ಸನ್ ಮತ್ತು ಡಾ. ಫೌಸ್ಟೊ ಬೆಲೆಝೋ ಕೃತಕ ಚರ್ಮ ಮತ್ತು ರಕ್ತವನ್ನು ಅಭಿವೃದ್ಧಿ ಪಡಿಸಿದ್ದಾರೆ. ಸರ್ಜಿರಿಯಲ್ ಉತ್ಪನ್ನಗಳು ಎಂದು ಕರೆಯುವ ಇವುಗಳನ್ನು ಬಳಸಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಸ್ತ್ರ ಚಿಕಿತ್ಸಾ ಕೌಶಲಗಳನ್ನು ಹೆಚ್ಚಿಸಿಕೊಳ್ಳಬಹುದು.

ಮನುಷ್ಯ ಚರ್ಮವನ್ನು ಭೇದಿಸಲು ಬೇಕಾಗುವ ಕೌಶಲ ಎಂಥದ್ದು ಎಂಬುದನ್ನು ಈ ಉತ್ಪನ್ನಗಳನ್ನು ಕೊಯ್ಯುವ ಮೂಲಕ ಕಲಿಯಬಹುದು. ಜೊತೆಗೆ ರಕ್ತ ಸ್ರವಿಸುವಾಗ ಇದನ್ನು ಹೇಗೆ ಮಾಡಬೇಕೆಂಬುದನ್ನೂ ವಿದ್ಯಾರ್ಥಿಗಳು ಕಲಿಯಬಹುದಂತೆ. ಈ ಉತ್ಪನ್ನಗಳನ್ನು ಶೋಧಿಸಿ ಆಗಲೇ ಮೂರು ವರ್ಷ ಕಳೆಯುತ್ತಾ ಬಂತು. ಈ ಅವಧಿಯಲ್ಲಿ ಇವುಗಳನ್ನು ವಾಣಿಜ್ಯಿಕವಾಗಿ ಉತ್ಪಾದಿಸಿ ಒದಗಿಸುವುದಕ್ಕೆ ಬೇಕಾದ ಕಂಪೆನಿಯನ್ನೂ ಈ ಇಬ್ಬರು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ ಈ ಕೃತಕ ಮಾಂಸ ಮತ್ತು ಚರ್ಮದ ಮಾದರಿಗಳ ಮರು ಬಳಕೆಯೂ ಸಾಧ್ಯವಂತೆ. ಈಗಾಗಲೇ ಇದರ ಬಳಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ತರಬೇತಿಗೆ ಇವೇ ಪ್ರಮಾಣೀಕೃತ ಉತ್ಪನ್ನಗಳಾಗಬಹುದು ಎಂಬ ನಿರೀಕ್ಷೆ ಸಂಶೋಧಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.