ADVERTISEMENT

ಗುರುತು ಬದಲಿಸಿಕೊಳ್ಳುವ ಮರಿ ಮುಂಗುಸಿ

​ಪ್ರಜಾವಾಣಿ ವಾರ್ತೆ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಗುರುತು ಬದಲಿಸಿಕೊಳ್ಳುವ ಮರಿ ಮುಂಗುಸಿ
ಗುರುತು ಬದಲಿಸಿಕೊಳ್ಳುವ ಮರಿ ಮುಂಗುಸಿ   

ಹಾವನ್ನು ಸಾಯಿಸಿ ಮಗುವನ್ನು ರಕ್ಷಿಸಿದ  ಮುಂಗುಸಿ ಕಥೆ ಜನಜನಿತ. ಆದರೆ ಈ ಮುಂಗುಸಿಗಳ ಸಾಮಾಜಿಕ ಪ್ರಪಂಚ  ಹೇಗಿದೆ ಗೊತ್ತೆ?

ಮುಂಗುಸಿಗಳಲ್ಲಿಯೂ ಗುಂಪುಗಾರಿಕೆ ಇದೆ. ತಮ್ಮೊಳಗಿನ ಸ್ಪರ್ಧೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮರಿ ಮುಂಗುಸಿಗಳನ್ನು ಕೊಲ್ಲುವುದು ಸಾಮಾನ್ಯ ಸಂಗತಿ. ಸಾವಿನ ಭಯದಿಂದ ತಪ್ಪಿಸಿಕೊಳ್ಳಲು ಮರಿ ಮುಂಗುಸಿಗಳು ತಮ್ಮ ಅಸ್ತಿತ್ವವನ್ನು ಮರೆಮಾಚಿಕೊಳ್ಳುತ್ತವೆ.

ದೊಡ್ಡ ಮುಂಗುಸಿಗಳು ಬೇರೆ ಗುಂಪಿನ ಮರಿ ಮುಂಗುಸಿಗಳ ಮೇಲೆ ದಾಳಿ ನಡೆಸುತ್ತವೆ. ಹೀಗಾಗಿ ಮರಿಗಳು ತಮ್ಮ ಗುಂಪಿನ ಗುರುತನ್ನೇ ಕಾಲಕಾಲಕ್ಕೆ ಬದಲಿಸಿಕೊಳ್ಳುತ್ತವೆ. ಕೆಲವು ಬಾರಿ ತನ್ನ ಮರಿಯನ್ನು ಗುರುತಿಸಲು ತಾಯಿಗೂ ಸಾಧ್ಯವಾಗದಂತೆ ಅವುಗಳ ಚಹರೆ ಬದಲಾಗುತ್ತದೆ.

ಇದೇ ಕಾರಣದಿಂದಾಗಿ ತಾಯಿ ಮುಂಗುಸಿಗೆ ಮರಿ ಮುಂಗುಸಿಯ ಮೇಲೆ ವಿಶೇಷ ಕಾಳಜಿ ವಹಿಸಲು ಸಾಧ್ಯವೇ ಆಗುವುದಿಲ್ಲ. ಈ ಬಗ್ಗೆ ಎಕ್ಸ್‌ಟರ್‌ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಹಾಗೂ ಸಂರಕ್ಷಣಾ ಕೇಂದ್ರ ಅಧ್ಯಯನ ನಡೆಸಿ, ವರದಿ ಪ್ರಕಟಿಸಿದೆ.

‘ಹೆಚ್ಚಿನ ಜೀವ ಸಂಕುಲಗಳಲ್ಲಿ ತಾಯಿಯೇ ಮರಿಯ ಪಾಲನೆ ಮಾಡುತ್ತದೆ. ಆದರೆ ಮುಂಗುಸಿಗಳ ವಿಷಯದಲ್ಲಿ ಈ ಮಾತು ಹೇಳಲು ಆಗುವುದಿಲ್ಲ’ ಎಂದಿದ್ದಾರೆ ಅಧ್ಯಯನ ನಡೆಸಿದ ಡಾ.ಎಮ್ಮಾ ವಿಟಿಕೆನಿನ್‌.

ದೊಡ್ಡ ಮುಂಗುಸಿಗಳು ಮರಿಗಳ ಪೋಷಣೆಯ ಭಾರ ಹೊರುತ್ತವೆ. ಹೆಣ್ಣು ಮುಂಗುಸಿಗಳು ಹೆಣ್ಣು ಮರಿಗಳನ್ನು ಮತ್ತು ಗಂಡು ಮುಂಗುಸಿಗಳು ಗಂಡು ಮರಿಗಳನ್ನು ಪೋಷಿಸುತ್ತವೆ. ಮರಿಗಳು ಚಹರೆಯ ಜೊತೆಗೆ ಗುಂಪನ್ನೂ ಬದಲಿಸುವುದು ಸಾಮಾನ್ಯ ಸಂಗತಿ. ಒರಟು ಮನೋಭಾವದ ಹೆಣ್ಣು ಮುಂಗುಸಿಗಳು ಮರಿಯೊಂದಕ್ಕೆ ಜನ್ಮ ನೀಡಿದ ನಂತರ ಸಹಾಯ ಮನೋಭಾವ ಬೆಳೆಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.