ADVERTISEMENT

ಚಿಲ್ಲರೆ ಬೇಕು ಸ್ವಾಮಿ

ಹರವು ಸ್ಫೂರ್ತಿ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
‘ದುರ್ಗಾ’ ಧಾರಾವಾಹಿ ಚಿತ್ರೀಕರಣ ದೃಶ್ಯ
‘ದುರ್ಗಾ’ ಧಾರಾವಾಹಿ ಚಿತ್ರೀಕರಣ ದೃಶ್ಯ   

1000 ಮತ್ತು ₹500ರ ನೋಟುಗಳಿಗೆ ಬೆಲೆ ಇಲ್ಲ ಎಂದು ಭಾರತ ಸರ್ಕಾರ ಘೋಷಿಸಿ ತಿಂಗಳಾಗುತ್ತಿದೆ. ಈ ನಿರ್ಧಾರದ ಬಿಸಿ ಕನ್ನಡ ಧಾರಾವಾಹಿ ಲೋಕಕ್ಕೂ ಚುರುಕಾಗಿಯೇ ತಟ್ಟಿದೆ. ನಗದು ವ್ಯವಹಾರಕ್ಕೆ ಕುದುರಿಕೊಂಡಿದ್ದ ಧಾರಾವಾಹಿ ಲೋಕ ಇದೀಗ ಚೆಕ್‌ಬುಕ್‌ ಮಂತ್ರ ಪಠಿಸುತ್ತಿದೆ.

ಪಕೋಡ ತರಲೂ ದುಡ್ಡಿಲ್ಲ
‘ಧಾರಾವಾಹಿ ಚಿತ್ರೀಕರಣಕ್ಕೂ– ಸಿನಿಮಾ ಚಿತ್ರೀಕರಣಕ್ಕೂ ಹಲವು ವ್ಯತ್ಯಾಸಗಳಿವೆ. ಸಿನಿಮಾಗೆ ಹೋಲಿಸಿದರೆ ಧಾರಾವಾಹಿಯ ಚಿತ್ರೀಕರಣದ ಅವಧಿ ತುಸು ಹೆಚ್ಚು’ ಎನ್ನುತ್ತಾರೆ ‘ಗೀತಾಂಜಲಿ’ ಧಾರಾವಾಹಿಯ ನಿರ್ದೇಶಕ ಸಂಜೀವ್ ತಗಡೂರ್.

‘ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಕಾರಣ ₹100 ಮತ್ತು ₹50ರ ನೋಟುಗಳನ್ನು ಹೆಚ್ಚು ಇರಿಸಿಕೊಂಡಿರಲಿಲ್ಲ. ನೋಟ್‌ ಬ್ಯಾನ್‌ ಸುದ್ದಿ ಕೇಳಿದ ತಕ್ಷಣ ಏನು ಮಾಡಬೇಕು ಎಂಬುದು ತೋಚಲಿಲ್ಲ. ಈಗ ನಮ್ಮ ಬಳಿ ಇದ್ದ ₹1000, ₹500 ನೋಟುಗಳನ್ನು ಬ್ಯಾಂಕ್‌ಗೆ ಕಟ್ಟಿ, ಚೆಕ್‌ ಮೂಲಕವೇ ದೈನಂದಿನ ವ್ಯವಹಾರ ನಿಭಾಯಿಸುತ್ತಿದ್ದೇವೆ’ ಎಂದು ಅವರು ಹೊಸ ಮಾರ್ಗ ವಿವರಿಸಿದರು.

‘ಕಲಾವಿದರು ಮತ್ತು ತಂತ್ರಜ್ಞರದು ವೇಗದ ಜೀವನ ಶೈಲಿ. ಅವರು ಸೆಟ್‌ಗಳಲ್ಲಿಯೇ ಹೆಚ್ಚು ಕಾಲ ಕಳೆಯಬೇಕಾಗುತ್ತದೆ. ಹಣ ಪಡೆಯಲು ಬ್ಯಾಂಕ್‌ನಲ್ಲಿ ಗಂಟೆಗಟ್ಟಲೆ ನಿಲ್ಲುವುದು ಕಷ್ಟ. ಅವರಿಗೆ ತೊಂದರೆಯಾಗಿರುವುದು ಸತ್ಯ’ ಎನ್ನುತ್ತಾರೆ ಅವರು.

ನಮ್ಮ ದಿನನಿತ್ಯ ಖರ್ಚಿಗೆ ಹಣ ಹೊಂದಿಸಿಕೊಳ್ಳುವುದೇ ಸಮಸ್ಯೆಯಾಗಿದೆ. ಸಣ್ಣ ಪ್ರಾಪರ್ಟಿ ಬೇಕು ಎಂದರೂ ₹2000 ನೋಟಿನೊಂದಿಗೆ ಅಂಗಡಿಗೆ ಹೋಗಬೇಕು. ಐವತ್ತು ರೂಪಾಯಿ ಸಾಮಾನಿಗೆ ₹1,950 ಚಿಲ್ಲರೆ  ಕೊಡಲು ಅಂಗಡಿಯವರು ಕಿರಿಕಿರಿ ಮಾಡುತ್ತಾರೆ. ಜೇಬಿನಲ್ಲಿ ₹2000ದ ಎರಡು ನೋಟ್ ಇದ್ದರೂ, ಪಕೋಡ ತರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂಬುದು ಅವರ ನೋವು.

‘ಪ್ಲಾನ್ ಮಾಡಿದ್ವಿ’
ಚಿಲ್ಲರೆ ಇಲ್ಲದೆ ಪರದಾಡುವರು ಮಾತ್ರವಲ್ಲ, ವಿಷಯ ತಿಳಿದ ತಕ್ಷಣ ಪಕ್ಕಾ ಪ್ಲಾನ್ ಮಾಡಿ ಎಲ್ಲವನ್ನೂ ಸರಿದೂಗಿಸಿಕೊಂಡ ಉದಾಹರಣೆಗಳೂ ಧಾರಾವಾಹಿ ಲೋಕದಲ್ಲಿದೆ. ‘ನೀಲಿ’ ತಂಡ ಈ ಬೆಳವಣಿಗೆಗೆ ಉತ್ತಮ ಉದಾಹರಣೆ.

‘ನಮ್ಮ ಪ್ರೊಡಕ್ಷನ್ ತಂಡಕ್ಕೆ ತಿಂಗಳಿಗೆ ಒಮ್ಮೆ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಚಿತ್ರೀಕರಣ ನಿರ್ವಹಿಸಲು ಪ್ರತಿದಿನ ಕನಿಷ್ಠ ₹30,000 ನಗದು ಬೇಕಾಗುತ್ತದೆ. ಸೆಟ್‌ನಲ್ಲಿ ತೊಂದರೆಯಾಗದಂತೆ ಮ್ಯಾನೇಜ್ ಮಾಡುತ್ತಿದ್ದೇವೆ. ನಮ್ಮ ಪ್ರೊಡಕ್ಷನ್‌ನ ಮೊದಲ ಧಾರಾವಾಹಿ   ಇದು. ಗುಣಮಟ್ಟದಲ್ಲಿ ರಾಜಿಯಾಗದಂತೆ, ಎಲ್ಲೂ ಅಭಾಸವಾಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ‘ನೀಲಿ’ ಧಾರಾವಾಹಿಯ ನಿರ್ದೇಶಕ ಸತೀಶ್‌ ಕೃಷ್ಣ,

ಆನ್‌ಲೈನ್‌ ಪೇಮೆಂಟ್‌
ಊಟ, ವಸತಿ, ಕಲಾವಿದರ ಸಂಭಾವನೆಗೆ ತೊಂದರೆಯಾಗದಂತೆ ಆನ್‌ಲೈನ್ ಪೇಮೆಂಟ್, ಖಾತೆಗೆ ಹಣ ಜಮೆ ಮಾಡುವ ಮೂಲಕ ಧಾರಾವಾಹಿಗೆ ಕುಂದು ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ ‘ದುರ್ಗಾ’ ಧಾರಾವಾಹಿಯ ನಿರ್ಮಾಪಕ ರಮೇಶ್‌ ರಾವ್.

‘ದುರ್ಗಾ’ ಪೌರಾಣಿಕ ಕಥೆಯುಳ್ಳ ಧಾರಾವಾಹಿ. ಪ್ರಾಪರ್ಟಿ, ಮೇಕಪ್ ಹೀಗೆ ಎಲ್ಲ ವಿಚಾರದಲ್ಲೂ ಖರ್ಚಿಗೆ ಹಣ ಸ್ವಲ್ಪ ಹೆಚ್ಚು ಬೇಕು.
‘ಕಲಾವಿದರು ಮತ್ತು ಪ್ರೊಡಕ್ಷನ್ ತಂಡಕ್ಕೆ ಸಂಭಾವನೆಯನ್ನು ಅವರವರ ಖಾತೆಗೆ ಜಮೆ ಮಾಡುತ್ತಿದ್ದೇವೆ. ದಿನಗೂಲಿಯಾಗಿ ಕೆಲಸ ಮಾಡುವ ಲೈಟ್ ಹುಡುಗರಿಗೆ ನಗದು ಕೊಡಲು ಕಷ್ಟವಾಗುತ್ತಿದೆ. ತಕ್ಷಣ ಡ್ರಾ ಮಾಡಿಕೊಳ್ಳುವ ಸಾಧ್ಯತೆ ಇರುವ ಒಬ್ಬರ ಖಾತೆಗೆ ನಾಲ್ಕೈದು ಜನರ ಸಂಭಾವನೆ ಪಾವತಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ನಾವೂ ಅರ್ಥ ಮಾಡ್ಕೊತೀವಿ

ತೊಂದರೆ ಆಗುತ್ತೆ ಏನ್‌ ಮಾಡೋದು. ಕಲಾವಿದರಾಗಿ ನಾವೂ ಅರ್ಥ ಮಾಡಿಕೊಳ್ಳಬೇಕು. ಪ್ರೊಡಕ್ಷನ್ ಹೌಸ್‌ಗೆ ತೊಂದರೆ ಆಗದಂತೆ ಸಹಕರಿಸಬೇಕು. ದಿನದ ಸಂಭಾವನೆ ಬೇಕು ಎಂದು ಈ ಪರಿಸ್ಥಿತಿಯಲ್ಲೂ ಕೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿಗೆ ಚೆಕ್‌ ಕೊಡುತ್ತಿದ್ದಾರೆ. ಪರವಾಗಿಲ್ಲ ಆದರೆ ಕ್ಯೂನಲ್ಲಿ ನಿಲ್ಲೋದು ಕಷ್ಟದ ಕೆಲಸ. 

ನಾವು ಕೂಡ ಜನಸಾಮಾನ್ಯರು. ಸಾಲಿನಲ್ಲಿ ನಿಲ್ಲುತ್ತೇವೆ. ನಾವೇನು ಸ್ಪೆಷಲ್‌ ಅಲ್ಲ. ಹೆಚ್ಚು ಸಮಯ ಶೂಟಿಂಗ್‌ನಲ್ಲೇ ಕಳೆಯುವುದರಿಂದ ಹಣದ ಅವಶ್ಯಕತೆ ಹೆಚ್ಚಿಲ್ಲ ಹಾಗೂ ಖರ್ಚು ಮಾಡುವಷ್ಟು ಸಮಯವೂ ಇಲ್ಲ.

ADVERTISEMENT

–ಅಶಿತಾ ಚಂದ್ರಪ್ಪ (‘ನೀಲಿ’ ಧಾರಾವಾಹಿಯ ರೇಖಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.