ADVERTISEMENT

‘ಚೆನ್ನಾಗಿ ತಿಂದ ಮೇಲೆ ಪಥ್ಯ ನೆನಪಾಗ್ತದೆ’

ಸುಮನಾ ಕೆ
Published 19 ಜೂನ್ 2017, 19:30 IST
Last Updated 19 ಜೂನ್ 2017, 19:30 IST
‘ಚೆನ್ನಾಗಿ ತಿಂದ ಮೇಲೆ ಪಥ್ಯ ನೆನಪಾಗ್ತದೆ’
‘ಚೆನ್ನಾಗಿ ತಿಂದ ಮೇಲೆ ಪಥ್ಯ ನೆನಪಾಗ್ತದೆ’   

ಮಂಗಳೂರಿನ ಅಮಿತಾ ಸದಾಶಿವ ಕುಲಾಲ್‌ ಮಾಡೆಲಿಂಗ್‌ಗಾಗಿ  ಮುಂಬೈನಲ್ಲಿ ನೆಲೆಸಿದ್ದಾರೆ. ಗುಜರಾತ್‌, ಮುಂಬೈ, ಬೆಂಗಳೂರಿನಲ್ಲಿ ಅನೇಕ ರ್‍ಯಾಂಪ್‌ ಷೋಗಳಲ್ಲಿ ಅಮಿತಾ ಹೆಸರು ಮುಂಚೂಣಿಯಲ್ಲಿ ಬಂದದ್ದುಂಟು. ನಾಲ್ಕಾರು ಕಂಪೆನಿಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ಕನ್ನಡದ ‘ಹ್ಯಾಪಿ ಜರ್ನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅವರು, ‘ಗುಲ್‌ಮೊಹರ್‌’ ಜತೆ ಮಾತನಾಡಿದ್ದಾರೆ.

*ಮಾಡೆಲಿಂಗ್‌ಗೆ ಹೋಗದಂತೆ ಅಮ್ಮ ಬ್ಲ್ಯಾಕ್‌ಮೇಲ್‌ ಮಾಡ್ತಿದ್ರಂತೆ?
ಅಪ್ಪ– ಅಮ್ಮ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರಿಂದ, ಸರ್ಕಾರಿ ಕೆಲಸದವರ ಮಕ್ಕಳು ಮಾಡೆಲಿಂಗ್‌, ಸಿನಿಮಾದಲ್ಲಿ ಅಭಿನಯಿಸಿದರೆ ಕೇಸ್‌ ಆಗುತ್ತದೆ ಎಂದು ಹೆದರಿಸುತ್ತಿದ್ದರು. ಡಿಗ್ರಿ ಮುಗಿದ ಬಳಿಕ ನಾನು ನನ್ನ ಹತ್ತಿರ ಇದ್ದ ದುಡ್ಡು ಹಾಗೂ ಅಪ್ಪನಿಂದ ಹಣ ಪಡೆದು ಮುಂಬೈಗೆ ಹೋಗಿ ಮಾಡೆಲಿಂಗ್‌ ಕ್ಷೇತ್ರದಲ್ಲಿ ಮುಂದುವರಿದೆ.

*ರೂಪದರ್ಶಿಯಾಗಲು ಭಾರೀ ಸರ್ಕಸ್‌ ಮಾಡಿದ್ದೀರಂತೆ. ಹೌದಾ?
ಅಯ್ಯೋ... ಪಿಯುಸಿ ಓದುತ್ತಿದ್ದಾಗಲೇ ಸಿನಿಮಾ, ಫ್ಯಾಷನ್‌ ಜಗತ್ತಿನ ಕಡೆಗೆ ಸೆಳೆತ ಇತ್ತು. ಆದರೆ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ. ಆಗ ಇಂಟರ್‌ನೆಟ್‌ನಲ್ಲಿ ಮಾಡೆಲಿಂಗ್‌ ಏಜೆನ್ಸಿಗಳ ದೂರವಾಣಿ ಸಂಖ್ಯೆ ಹುಡುಕಿ,  ಅದಕ್ಕೆ ಕರೆ ಮಾಡಿ, ಫೋಟೊಗಳನ್ನು ಕಳುಹಿಸುತ್ತೇನೆ ಎಂದು ಅವರಿಗೆ ದುಂಬಾಲು ಬೀಳುತ್ತಿದ್ದೆ. ಬಳಿಕ ಒಂದೊಂದಾಗಿ ಅವಕಾಶಗಳು ಅರಸಿ ಬಂದವು.

ADVERTISEMENT

*‘ಹ್ಯಾಪಿ ಜರ್ನಿ’ ಚಿತ್ರಕ್ಕೆ ಆಯ್ಕೆಯಾಯಾಗಿದ್ದು ಹೇಗೆ?
ನಾನು ಫ್ಯಾಷನ್‌ ಷೋಗಾಗಿ ಆಗಾಗ ಬೆಂಗಳೂರಿಗೆ ಬರುತ್ತಿದ್ದೆ. ನಿರ್ದೇಶಕ ಶ್ಯಾಮ್ ಶಿವಮೊಗ್ಗ ಅವರ ಗೆಳೆಯರೊಬ್ಬರು ನನಗೆ ಸಿನಿಮಾದಲ್ಲಿ ನಟಿಸುವಂತೆ ಹೇಳಿದರು. ನನ್ನ ಫೋಟೊಗಳನ್ನು ಅವರು ನಿರ್ದೇಶಕ ಶ್ಯಾಮ್ ಹಾಗೂ ಸಿನಿಮಾಟೊಗ್ರಾಫರ್‌ ಸೀನು ಅವರಿಗೆ ಕಳುಹಿಸಿದರು. ನನಗೆ ಕನ್ನಡ ಬರುವುದಿಲ್ಲ ಎಂಬ ಅನುಮಾನ  ಅವರಿಗೆ ಇತ್ತೇನೋ. ಸ್ವಲ್ಪಕನ್ನಡ ಸಂಭಾಷಣೆಯನ್ನು ಕಳುಹಿಸಿದರು. ನಾನು ಅದನ್ನು ನಟಿಸಿ, ವಿಡಿಯೊ ಮಾಡಿ ಕಳುಹಿಸಿದೆ.

*ಬೆಂಗಳೂರು ಕನ್ನಡ ಕಲಿಯುವುದು ಕಷ್ಟ ಆಯ್ತಾ?
ಚಿತ್ರೀಕರಣದ ಸಮಯದಲ್ಲಿ ನನಗೆ ಬೆಂಗಳೂರು ಕನ್ನಡ ಕಲಿಸಲು ಸೆಟ್‌ನವರೆಲ್ಲಾ ಹರಸಾಹಸ ಮಾಡಿದ್ದಾರೆ. ನನ್ನದು ಮಂಗಳೂರು ಕನ್ನಡ, ನಾನು ಬಿಡಿಸಿ ಬಿಡಿಸಿ ನಿಧಾನವಾಗಿ ಕನ್ನಡ ಮಾತನಾಡುತ್ತಿದ್ದೆ. ಎರಡು– ಮೂರು ದಿನ ಅಭ್ಯಾಸ ಮಾಡಿದ ಮೇಲೆ ಸರಿಹೋಯಿತು. ಸೃಜನ್‌ ಲೋಕೇಶ್‌,   ಕುರಿ ಪ್ರತಾಪ್‌, ನವೀನ್‌ ಪಡೀಲ್‌ ಮಾತ್ರವಲ್ಲ, ಹಿರಿಯ ನಟ ರಮೇಶ್‌ ಭಟ್‌ ಅವರೂ ನಟನೆ ಬಗ್ಗೆ ಮಾರ್ಗದರ್ಶನ ಕೊಟ್ಟಿದ್ದಾರೆ.

*ಬೇರೆ ಸಿನಿಮಾದಲ್ಲಿ ನಟಿಸಿದ್ದೀರಾ?
ಮುಂಬೈನಲ್ಲಿ ಗಣೇಶಾಚಾರ್ಯ ನಿರ್ದೇಶನದ ‘ಝನ್‌ಕರ್‌’ ಎಂಬ ಕಿರು ಚಿತ್ರದಲ್ಲಿ  ನಟಿಸಿದ್ದೇನೆ. ‘ಪ್ಲೇ ಅಂಡ್‌ ಡ್ರಾಮಾ’ ಹಾಗೂ ‘ಕಬಿಲಿಯಾ’ ಎಂಬ ಎರಡು ರಂಗತಂಡಗಳ ನಾಟಕಗಳಲ್ಲಿ ಪಾತ್ರ ಮಾಡಿದ್ದೇನೆ. ಹಿಂದಿ ಕಿರುತೆರೆಯ ‘ಸಾವ್‌ಧಾನ್‌ ಇಂಡಿಯಾ’ ಹಾಗೂ ‘ಕ್ರೈಂ ಪೆಟ್ರೊಲ್‌’ಗಳಲ್ಲಿ ನಟಿಸಿದ್ದೇನೆ.

*ಮುಂದಿನ ಯೋಜನೆ?
ಕನ್ನಡದಲ್ಲೇ ‘ಪಲ್ಲವಿ, ಅನುಪಲ್ಲವಿ’ ಧಾರಾವಾಹಿಯ ನಿರ್ದೇಶಕ ಮಧುಸೂದನ್‌ ಅವರ ‘ಆ ಎರಡು ವರ್ಷಗಳು’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದೂ ಸದ್ಯದಲ್ಲೇ ಬಿಡುಗಡೆಯಾಗಲಿದೆ.

*ಫಿಟ್‌ನೆಸ್‌ಗೆ ಏನು ಮಾಡ್ತೀರಿ?
‘ಹ್ಯಾಪಿ ಜರ್ನಿ’ ಚಿತ್ರಕ್ಕಾಗಿ ಕೊಂಚ ದಪ್ಪಗಾಗಿದ್ದೇನೆ. ಮಾಡೆಲಿಂಗ್‌ನಲ್ಲಿ ಫಿಟ್‌ನೆಸ್‌ ಮುಖ್ಯ. ಬೆಳಿಗ್ಗೆ ಓಟ್ಸ್್‌ ತಿನ್ನುತ್ತೇನೆ. ಎರಡು ದಿನಕ್ಕೊಮ್ಮೆ ಬೆಳಿಗ್ಗೆ ಬಿಸಿನೀರಿಗೆ ನಿಂಬೆರಸ ಹಾಕಿಕೊಂಡು ಕುಡಿಯುತ್ತೇನೆ. ಆಹಾರವನ್ನು ಎಷ್ಟು ಬೇಕೋ ಅಷ್ಟೇ ತಿನ್ನುತ್ತೇನೆ. ನಂಗೆ ದಕ್ಷಿಣ ಭಾರತದ ಎಲ್ಲಾ ಅಡುಗೆಗಳು ಇಷ್ಟ. ಚಿತ್ರೀಕರಣಕ್ಕಾಗಿ ಈಗ ಬೆಂಗಳೂರಿನಲ್ಲಿ ಉಳಿದುಕೊಂಡಿರುವುದರಿಂದ ಅವಕಾಶ ಸಿಕ್ಕಾಗ ಇಡ್ಲಿ ಸಾಂಬಾರ್‌, ಪಡ್ಡು , ದೋಸೆ ತಿನ್ನುತ್ತೇನೆ. ಆಗ ಡಯಟ್‌ ನೆನಪು ಆಗುವುದಿಲ್ಲ.  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.