ADVERTISEMENT

ಜಾಕಿ ಚಾನ್‌ ಕುಂಗ್‌ ಫು ಯೋಗ ಟ್ರೇಲರ್‌ ಕಂಡಿರಾ?

ಸಿನಿ ಟ್ರೇಲರ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಜಾಕಿ ಚಾನ್‌ ಕುಂಗ್‌ ಫು ಯೋಗ ಟ್ರೇಲರ್‌ ಕಂಡಿರಾ?
ಜಾಕಿ ಚಾನ್‌ ಕುಂಗ್‌ ಫು ಯೋಗ ಟ್ರೇಲರ್‌ ಕಂಡಿರಾ?   
ಮಾರ್ಷಲ್ ಆರ್ಟ್ ಪ್ರವೀಣ ಜಾಕಿಚಾನ್ ಅಭಿನಯದ ಹೊಸ ಚಿತ್ರ ‘ಕುಂಗ್‌ ಫು ಯೋಗ’ದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
 
ಭಾರತ ಮತ್ತು ಚೀನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಚೀನಾ ಮತ್ತು ಭಾರತೀಯ ಕಲಾವಿದರ ದಂಡೇ ಇದೆ.
ಮಗಧ ರಾಜ್ಯದ ಸಂಪತ್ತನ್ನು ಹುಡುಕಲು ಹೊರಡುವ ಚೀನಾ, ಭಾರತ ಪ್ರೊಫೆಸರ್‌ಗಳು ಎದುರಿಸುವ ಕಷ್ಟಕರ ಸನ್ನಿವೇಶಗಳು ಚಿತ್ರದ ಹೂರಣ.
 
ಹಾಂಕಾಂಗ್ ಮೂಲದ ನಿರ್ದೇಶಕ ಸ್ಟಾನ್ಲೇ ಟಾಂಗ್ ‘ಕುಂಗ್ ಫು ಯೋಗ’ವನ್ನು ನಿರ್ದೇಶಿಸಿದ್ದು, ಪ್ರಾಣಿಗಳೊಂದಿಗೆ ಜಾಕಿ ಚಾನ್‌ ನಡೆಸುವ ಸಾಹಸಮಯ ದೃಶ್ಯಾವಳಿಗಳು ಈ ಚಿತ್ರದ ಹೈಲೈಟ್‌. 
 
ಕಾರಿನೊಳಗೆ ಸಿಂಹದೊಂದಿಗೆ ಕುಳಿತು ಜಾಕಿ ನಡೆಸುವ ಸಾಹಸ ಈಗಾಗಲೇ ಸಿನಿಪ್ರಿಯರ ಬಾಯಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಜಾಕಿ ಭಾರತೀಯ ಶೈಲಿಯ ನೃತ್ಯವೊಂದಕ್ಕೆ ಹೆಜ್ಜೆ ಹಾಕಿರುವುದು ವಿಶೇಷ.
 
ಬಾಲಿವುಡ್‌ ನಟ ಸೋನು ಸೂದ್ ಈ ಚಿತ್ರದಲ್ಲಿ ಖಳನಟನ ಪಾತ್ರ ನಿರ್ವಹಿಸಿದ್ದು, ಬಾಲಿವುಡ್‌ ಬೆಡಗಿ ದಿಶಾ ಪಟಾನಿ ಭಾರತದ ರಾಜಕುಮಾರಿಯಾಗಿ ನಟಿಸಿದ್ದಾರೆ.
 
2013 ಫೆಮಿನಾ ಮಿಸ್‌ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದ ದಿಶಾ, ಕ್ಯಾಡ್‌ಬರಿ ಡೈರಿ ಮಿಲ್ಕ್ ಜಾಹೀರಾತಿನ ಮೂಲಕ ಮನೆ ಮಾತಾದವರು. ‘ಲೋಫರ್ ’ ಚಿತ್ರದ  ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ದಿಶಾ, ಎಂ.ಎಸ್. ಧೋನಿ ಬಯೋಪಿಕ್, ಬೆಫ್ರಿಕೆ ಚಿತ್ರದಲ್ಲೂ ನಟಿಸಿದ್ದಾರೆ. ಇದೀಗ ಜಾಕಿ ಜಾನ್‌ ಜತೆ ನಟಿಸುತ್ತಿರುವುದು ದಿಶಾ ಪಾಲಿಗೆ  ಮಹತ್ವದ್ದಾಗಿದೆ. 
 
‘ಕುಂಗ್ ಫು ಯೋಗ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಸಲ್ಮಾನ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ಥ್ಯಾಂಕ್ಯೂ ಜಾಕಿಚಾನ್‌, ಚೇಡಿಸಿಂಗ್ @ಸೋನ್ ಸೂದ್‌ಗೆ ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕಾಗಿ. ದಿಸ್ ಈಸ್ ಕೂಲೆಸ್ಟ್’ ಎಂದು ಟ್ವೀಟ್ ಮಾಡಿದ್ದಾರೆ. 
 
ಸುಮಾರು ₹ 440 ಕೋಟಿ ವೆಚ್ಚದಲ್ಲಿ ಹಿಂದಿ, ಇಂಗ್ಲಿಷ್‌ ಹಾಗೂ ಮ್ಯಾಂಡರಿನ್‌ ಭಾಷೆಗಳಲ್ಲಿ ತಯಾರಾಗಿರುವ ‘ಕುಂಗ್‌ ಫು ಯೋಗ’ ಮೊದಲು ಸಿಂಗಪುರದಲ್ಲಿ ಜ.26ರಂದು ತೆರೆ ಕಾಣಲಿದೆ.  ಚೀನಾದಲ್ಲಿ ಜ.28ರಂದು ಹಾಗೂ ಭಾರತದಲ್ಲಿ ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.