ADVERTISEMENT

ಜೇಬಿಗೆ ಬಿತ್ತು ಫ್ಯಾಷನ್ ಕತ್ತರಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಜೇಬಿಗೆ ಬಿತ್ತು ಫ್ಯಾಷನ್ ಕತ್ತರಿ
ಜೇಬಿಗೆ ಬಿತ್ತು ಫ್ಯಾಷನ್ ಕತ್ತರಿ   

ಕಾಲಕ್ಕೆ ತಕ್ಕಂತೆ ಜೀನ್ಸ್‌ ಕೂಡ ಬಣ್ಣ ಬದಲಾಯಿಸಿದೆ. ಕೇಪ್ರೀ, ಬೂಟ್‌ ಕಟ್, ಮಾಮ್ ಜೀನ್ಸ್, ಬಾಯ್‌ಫ್ರೆಂಡ್ ಜೀನ್ಸ್, ಹೈ ರೈಸ್, ಮಿಡ್ ರೈಸ್, ಲೋ ರೈಸ್ ಇವೆಲ್ಲಾ ಬಂದು ಹೋದವು. ಮಂಡಿ ಭಾಗ, ತೊಡೆ ಭಾಗದಲ್ಲಿ ಹರಿದ ರಿಪ್ಡ್ ಜೀನ್ಸ್‌ಗಳೇ ದೊಡ್ಡ ಟ್ರೆಂಡ್ ಎನಿಸಿದ್ದ ಕಾಲವೂ ನೆನ್ನೆ ಮೊನ್ನೆಗೇ ಮುಗಿಯಿತು. ಈಗ ಅದೂ ಔಟ್‌ಡೇಟೆಡ್.

ಈಗೇನಿದ್ದರೂ ಜೇಬು ಹರಿದ ಜೀನ್ಸ್‌ ಜಮಾನ. ಅರೆ ಇದೇನಿದು, ಜೇಬು ಹರಿದರೆ ಜೀನ್ಸ್ ಹಾಕೋದಾದ್ರೂ ಹೇಗೆ ಅಂತ ಯೋಚಿಸಬೇಕಿಲ್ಲ. ಅದೇ ಈಗಿನ ಹೊಸ ಫ್ಯಾಷನ್ನು.

ಜೀನ್ಸ್‌ನ ಮುಂದಿನ ಪುಟ್ಟ ಜೇಬು ನಿರುಪಯೋಗಿ ಎನಿಸಿ ಅದನ್ನು ಕತ್ತರಿಸುವ ಟ್ರೆಂಡ್ ಹುಟ್ಟಿಕೊಂಡಿದೆ. ಇದು ಜೀನ್ಸ್ ಸಮಕಾಲೀನವಾಗುತ್ತಿರುವ ಸೂಚನೆಯಂತೆ. ಜೇಬಿಲ್ಲದ ಈ ಜೀನ್ಸ್‌ಗೆ ಒಂದು ಹೆಸರೂ ಇದೆ. ಪೀಕ್ ಎ ಬೂ ಪಾಕೆಟ್ (ಕಣ್ಣಾ ಮುಚ್ಚಾಲೆ), ಬೇರ್ ಸ್ಕಿನ್ ಪಾಕೆಟ್ ಅಥವಾ ಕಟ್‌ಔಟ್ ಜೀನ್ಸ್.

ADVERTISEMENT

ಜೀನ್ಸ್‌ಗೆ ಈ ಪುಟ್ಟ ಪಾಕೆಟ್‌ ಸೇರಿದ್ದಾದರೂ ಹೇಗೆ? ಇದರ ಇತಿಹಾಸ 1800 ಇಸವಿಯಲ್ಲಿದೆ. ವಾಚ್‌ನಂಥ ಕೆಲವು ಚಿಕ್ಕಪುಟ್ಟ ವಸ್ತುಗಳಿಗೆಂದೇ ಈ ಜೇಬುಗಳಿದ್ದವು. ಆದರೆ ಈಗ ಆ ಉದ್ದೇಶ ಪ್ರಸ್ತುತವಲ್ಲ. ಆದರೂ ಜೇಬು ಮಾತ್ರ ಹಾಗೇ ಉಳಿದುಕೊಂಡಿತು.

ಸದ್ಯಕ್ಕೆ ಆ ಜೇಬುಗಳನ್ನೇ ಖಾಲಿ ಮಾಡಿಸುವ ಟ್ರೆಂಡ್‌ ಈ ರೀತಿ ಚಾಲ್ತಿಯಲ್ಲಿದೆ. ತಮ್ಮ ಚರ್ಮವನ್ನು ಇನ್ನಷ್ಟು ತೋರಲು ಇಷ್ಟಪಡುವ ಹುಡುಗಿಯರಿಗೆ ಇದು ಹೇಳಿಮಾಡಿಸಿದ್ದಂತೆ. ಇದೇ ಬಯಕೆಯನ್ನೇ ಕೆಲವು ಕಂಪೆನಿಗಳು ಲಾಭಕ್ಕೆ ಬದಲಾಯಿಸಿಕೊಂಡು ಹತ್ತು ಹಲವು ರೂಪಗಳಲ್ಲಿ ಜೀನ್ಸ್ ಪರಿಚಯಿಸುತ್ತಿವೆ.

ಕೆಲವು ಹುಡುಗಿಯರಂತೂ ತಮ್ಮ ಹಳೇ ಜೀನ್ಸ್‌ಗಳನ್ನೆಲ್ಲಾ ಒಟ್ಟು ಹಾಕಿ ಜೇಬು ಕತ್ತರಿಸಿ ಹೊಸ ಸ್ಟೈಲ್‌ ತೋರುತ್ತಿದ್ದಾರೆ.

ಆದರೆ ಜೇಬನ್ನು ಹೇಗೇಗೋ ಕತ್ತರಿಸದೆ ಸರಿಯಾಗಿ ಕತ್ತರಿಸಿದರೆ ಮಾತ್ರ ಎಲ್ಲರೂ ತಿರುಗಿನೋಡುತ್ತಾರೆ ಎಂದು ಕಿವಿ ಮಾತನ್ನೂ ಹೇಳುತ್ತಿದ್ದಾರೆ ವಸ್ತ್ರವಿನ್ಯಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.