ADVERTISEMENT

ತಂತ್ರಜ್ಞಾನ ಕಸಿದುಕೊಂಡಿದ್ದೇನು?

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ತಂತ್ರಜ್ಞಾನ ಕಸಿದುಕೊಂಡಿದ್ದೇನು?
ತಂತ್ರಜ್ಞಾನ ಕಸಿದುಕೊಂಡಿದ್ದೇನು?   
ತಂತ್ರಜ್ಞಾನ ನಮಗೆ ಎಷ್ಟೆಲ್ಲಾ ನೀಡಿದ್ದರೂ ಕೆಲವು ಖುಷಿಗಳನ್ನಂತೂ ಕಸಿದುಕೊಂಡಿದೆ. ಗ್ಯಾಜೆಟ್‌ಗಳ ಭರಾಟೆಯಲ್ಲಿ ಸಾಗುತ್ತಿರುವ ನಮಗೆ ಅದು ಲಕ್ಷ್ಯಕ್ಕೆ ಬರದೇ ಇರಬಹುದು. ಆದರೆ ಗ್ಯಾಜೆಟ್‌ಗಳು ಇಲ್ಲದಿದ್ದ ಕಾಲದಲ್ಲಿ ನಮ್ಮ ಕೌಶಲವೇ ನಮಗೆ ಪ್ಲಸ್‌ಪಾಯಿಂಟ್‌ಗಳಾಗಿದ್ದವು. ಅವುಗಳನ್ನು ಮೆಲುಕು ಹಾಕೋಣ...
 
ಫೋನ್ ನಂಬರ್: ಯಾವುದಾದರೂ ನಂಬರ್ ಕೇಳಿದರೆ ಸಾಕು ಪಟ್ ಎಂದು ಉತ್ತರಿಸುತ್ತಿದ್ದ ನಮಗೆ ಈಗ ಅದು ಸಾಧ್ಯವೇ? ನಂಬರ್ ಕೇಳಿದರೆ ಫೋನನ್ನೇ ತೆಗೆದು ನೋಡುವಂಥ ಪರಿಸ್ಥಿತಿ ಈಗಿನದ್ದು. ಯೆಲ್ಲೋ ಪೇಜಸ್ ಪುಸ್ತಕದಲ್ಲಿ ನಂಬರ್‌ಗಳನ್ನು ಹುಡುಕುತ್ತಿದ್ದುದು ನೆನಪಿದೆಯಾ? ನಮ್ಮ ತಲೆಯಲ್ಲೂ ಸಾಕಷ್ಟು ನಂಬರ್‌ಗಳು ಇರುತ್ತಿದ್ದವು. ಈಗ ಅವುಗಳನ್ನು ನೆನೆಸಿಕೊಳ್ಳುವ ಕಲೆಯನ್ನು ಕಳೆದುಕೊಂಡಿದ್ದೇವೆ.
 
ನೋಟು ಎಣಿಸುವ ಕಲೆ: ಮೊಬೈಲ್, ಕ್ಯಾಶ್‌ಲೆಸ್‌ ವ್ಯವಹಾರ ಬಂದಾಗಿಂದಂತೂ ಪರ್ಸ್‌ನಲ್ಲೇ ಹಣ ಇಟ್ಟುಕೊಳ್ಳುವವರು ಕಡಿಮೆ. ಎಣಿಸುವುದೂ ಮರೆತೇ ಹೋಗಿದೆ ಎನ್ನಿ. ಯುವ ಮಂದಿಗಂತೂ ಅದು ದೂರದ ಮಾತೇ. ನೋಟನ್ನು ಚಕ ಚಕ ಎಣಿಸುವ ಕಲೆ ಈಗ ಕೆಲವರಲ್ಲಷ್ಟೇ ಉಳಿದಿದೆ.
 
ಮೆಂಟಲ್ ಮ್ಯಾತ್ಸ್‌: ಏನೇ ಲೆಕ್ಕ ಕೇಳಿದರೂ ಕ್ಷಣ ಮಾತ್ರದಲ್ಲಿ ತಲೆಯಲ್ಲೇ ಲೆಕ್ಕಾಚಾರ ಹಾಕಿ ಹೇಳುತ್ತಿದ್ದ ನಮಗೆ ಈಗ ಆ ವ್ಯವಧಾನವಾದರೂ ಎಲ್ಲಿ? ಲೆಕ್ಕ ಕೇಳಿದರೆ ಸಾಕು ಮತ್ತೆ ಹಿಡಿಯುವುದು ಮೊಬೈಲನ್ನೇ. ಕ್ಯಾಲ್ಕುಲೇಟರ್‌ಗಳೂ ಈಗ ಮೂಲೆ ಸೇರಿವೆ ಬಿಡಿ. 
 
ಫೋಟೊಗಾಗಿ ಕಾಯುವುದು: ಕಾಯುವ ಸುಖವೇ ಬೇರೆ. ಕಾರ್ಯಕ್ರಮ, ಸಣ್ಣ ಪ್ರವಾಸ ಹೀಗೆ ಕೆಲ ಸಂದರ್ಭಗಳಲ್ಲಿ  ಫೋಟೊ ಕ್ಲಿಕ್ಕಿಸಿ, ಅದು ಫ್ರೇಮ್ ಆಗಿ ಬರುವವರೆಗೂ ಇರುತ್ತಿದ್ದ ಕುತೂಹಲ ಈಗೆಲ್ಲಿದೆ? ಸ್ಮಾರ್ಟ್‌ಫೋನ್, ಸೆಲ್ಫಿ, ಅದಕ್ಕೆ ತಕ್ಕ ಆಯ್ಕೆಗಳು, ಇನ್ಸ್ಟಂಟ್‌ ಫೋಟೊಗಳು  ಹೀಗೆ ನೂರೆಂಟಿರುವಾಗ ಫೋಟೊಗಾಗಿ ಕಾಯುವ ಸುಖ ಮರೆಯಾಗದೇ ಹೋದೀತೇ?
 
ಮ್ಯಾಪ್‌ ಹುಡುಕಿ: ಮ್ಯಾಪ್‌ಗಳು, ನೇವಿಗೇಷನ್‌ಗಳು ಈಗ ಬೆರಳು ತುದಿಯಲ್ಲೇ ಇವೆ. ಹೀಗಿರುವಾಗ ಕಾಗದದ ಮ್ಯಾಪ್ ಹಿಡಿದು ಹುಡುಕುವ, ದಿಕ್ಕುಗಳನ್ನು ಕಂಡುಹಿಡಿದು ಬೆರಗುಗಣ್ಣಾಗುವವರೇ ಇಲ್ಲದಾಗಿದೆ. ಗೂಗಲ್, ವಿಕಿಪಿಡಿಯಾಗಳು ಬಂದ ಮೇಲೆ ಎನ್‌ಸೈಕ್ಲೋಪಿಡಿಯಾಗಳೂ ಮೂಲೆ ಗುಂಪಾಗಿರುವುದು ಹೌದೆಂದು ನೀವು ಒಪ್ಪಿಕೊಳ್ಳಲೇಬೇಕು.
 
ಸಮಯ ಹೇಳಿಕೊಡುವುದು: ಚಿಕ್ಕ ಮಕ್ಕಳಿದ್ದಾಗ ದೊಡ್ಡ ಮುಳ್ಳು, ಚಿಕ್ಕ ಮುಳ್ಳು ಎಂದು ಗಡಿಯಾರದಲ್ಲಿ ಸಮಯ ಹೇಳಿಕೊಡುತ್ತಿದ್ದುದು ನೆನಪಿದೆಯೇ. ಮೊಬೈಲ್‌ಗಳು ಬಂದ ಮೇಲೆ ಅದರ ಅಗತ್ಯವೂ ಇಲ್ಲವಾಗಿದೆಯಲ್ಲ? ಸಮಯದ ಪಾಠವನ್ನು ಮೊಬೈಲೇ ಹೇಳಿಕೊಡುತ್ತಿದೆ.
 
ಪತ್ರಗಳು: ಇರುವ ಇಷ್ಟು ಜಾಗದಲ್ಲಿ ಏನೆಲ್ಲಾ ಬರೆಯಬೇಕು, ಯಾವ ಎನ್‌ವಲಪ್ ಹಾಕಬೇಕು, ಯಾವ ಸ್ಟಾಂಪ್ ಹಾಕಬೇಕು, ಹೀಗೆ ಸಾಕಷ್ಟು ಯೋಚನೆಗಳೊಂದಿಗೆ ಪತ್ರ ಬರೆಯುತ್ತಿದ್ದೆವು. ಅದರ ಖುಷಿಯೇ ಬೇರೆ. ಸಾಮಾಜಿಕ ಜಾಲತಾಣಗಳ ಆಶ್ರಯದಲ್ಲೇ ಬೆಳೆಯುತ್ತಿರುವ ಈಗಿನ ಪೀಳಿಗೆಗೆ ಟೆಕ್ಸ್ಟಿಂಗ್, ಇಮೇಲೆ, ಕಾಲಿಂಗ್, ಆನ್‌ಲೈನ್‌ಗಳೇ ವಾಹಕಗಳಾಗಿರುವಾಗ ಪತ್ರಗಳ ಹಂಗೆಲ್ಲಿ? ಅವುಗಳ ಖುಷಿಯೆಲ್ಲಿ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.